Kishkindha Kaandam Review: ಮೈನವಿರೇಳಿಸುವ ಮರೆವಿನ ಆಟ ಬಲು ಮನಮೋಹಕ! ಮಲಯಾಳಂನ ‘ಕಿಷ್ಕಿಂಧಾ ಕಾಂಡಾಂ’ ಒಟಿಟಿ ವಿಮರ್ಶೆ
Nov 21, 2024 01:20 PM IST
ಮಲಯಾಳಂನ ‘ಕಿಷ್ಕಿಂಧಾ ಕಾಂಡಾಂ’ ಒಟಿಟಿ ವಿಮರ್ಶೆ
- Kishkindha Kaandam OTT Review: ‘ಕಿಷ್ಕಿಂಧಾ ಕಾಂಡಾಂ’ ಸಿನಿಮಾ ಶುರುವಾಗಿ ಮೊದಲಾರ್ಧ ಯಾವುದೇ ಸುಳಿವೂ ವೀಕ್ಷಕನಿಗೆ ದಕ್ಕುವುದಿಲ್ಲ. ಕಥೆ ಲಯದಲ್ಲಿದ್ದರೂ ಚಿತ್ರದಲ್ಲಿನ ಪಾತ್ರಧಾರಿಗಳಿಗಾಗುವ ಭಯ, ಆತಂಕ, ವೀಕ್ಷಕನಿಗೂ ಆಗುತ್ತ ಹೋಗುತ್ತದೆ. ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ನಿವೃತ್ತ ಸೈನಿಕರು, ನಕ್ಸಲ್ ಚಟುವಟಿಕೆಗಳು ಕಥೆಯ ಜತೆಗೆ ಬೆರೆತುಕೊಂಡಿವೆ
Kishkindha Kaandam OTT Review: ಮಲಯಾಳಂ ಸಿನಿಮಾಗಳಲ್ಲಿ ಕಮರ್ಷಿಯಲ್ ಪ್ರಯೋಗಗಳಿಗಿಂತ ಮಿಸ್ಟರಿ ಕ್ರೈಂ ಥ್ರಿಲ್ಲರ್ ಎನಿಸುವ ಸಾಕಷ್ಟು ಕಥೆಗಳನ್ನು ರೋಚಕವಾಗಿ ಕಟ್ಟಿಕೊಡುತ್ತಿದ್ದಾರೆ ಅಲ್ಲಿನ ನಿರ್ದೇಶಕರು. ನೋಡುಗನನ್ನು ತನಿಖೆಯೊಳಗೆ ಕರೆದೊಯ್ದು, ಆ ಪಾತ್ರವೇ ನಾವು ಎನಿಸುವಂತೆ ಮಾಡಿದ ಎಷ್ಟೋ ಸಿನಿಮಾಗಳಿವೆ. ಆ ಪೈಕಿ ಇತ್ತೀಚೆಗಷ್ಟೇ ತೆರೆಕಂಡು, ಕೇವಲ 7 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿ, ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 75 ಕೋಟಿಯ ಬಂಗಾರದ ಬೆಳೆಯನ್ನೇ ತೆಗೆದಿದೆ ಕಿಷ್ಕಿಂಧಾ ಕಾಂಡಾಂ ಸಿನಿಮಾ. ಈಗ ಇದೇ ಸಿನಿಮಾ ಒಟಿಟಿಯಲ್ಲಿಯೂ ಅದೇ ಓಟವನ್ನು ಮುಂದುವರಿಸಿದೆ. ಆ ಚಿತ್ರದ ವಿಮರ್ಶೆ ಇಲ್ಲಿದೆ.
ಕುಟುಂಬದ ಮೂರು ಜೀವಗಳ ಸುತ್ತ ಕಿಷ್ಕಿಂಧಾ ಕಾಂಡಾಂ ಕಥೆ ಸುತ್ತುತ್ತದೆ. ಮಾಜಿ ಸೇನಾಧಿಕಾರಿ ಅಪ್ಪು ಪಿಳ್ಳೈ, ಪುತ್ರ ಅಜಯ ಚಂದ್ರನ್ ಮತ್ತು ಆತನ ಪತ್ನಿ ಅಪರ್ಣಾ. ಹೊಸದಾಗಿ ಮದುವೆಯಾದ ಅಪರ್ಣಾ, ಗಂಡನ ಮನೆಗೆ ಆಗಮಿಸಿದಾಗ, ಹಲವು ಸಮಸ್ಯೆಗಳು ಮತ್ತು ಸಂಘರ್ಷಗಳನ್ನು ಎದುರಿಸುತ್ತಾಳೆ. ಹೀಗಿರುವಾಗಲೇ ಅಪ್ಪು ಪಿಳ್ಳೈ ಅವರ ಗನ್ ಕಣ್ಮರೆಯಾಗುವುದರೊಂದಿಗೆ ಕಥೆ ಮಗ್ಗಲು ಬದಲಿಸುತ್ತದೆ. ಪ್ಲಾಷ್‌ಬ್ಯಾಕ್‌ನಲ್ಲಿ ಅಜಯ್ ಚಂದ್ರನ್ ಮೊದಲ ಪತ್ನಿ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ ನಂತರ, ಏಳು ವರ್ಷದ ಮಗ ಚಚ್ಚು ಕೂಡ ನಿಗೂಢವಾಗಿ ಕಣ್ಮರೆಯಾಗುತ್ತಾನೆ. ಆತ ತನ್ನ ಮಗನನ್ನು ಹುಡುಕಿಕೊಂಡು ಹೋಗದೇ ಇರುವ ಸ್ಥಳಗಳಿಲ್ಲ. ತನ್ನ ಎರಡನೇ ಪತ್ನಿ ಜತೆಗೂ ಮಗನ ಹುಡುಕಾಟದಲ್ಲಿರುತ್ತಾನೆ. ಈ ಹುಡುಕಾಟದ ಮಿಸ್ಟರಿಯ ಅಸಲಿಯತ್ತೇ ಕ್ಲೈಮ್ಯಾಕ್ಸ್.
ಮರೆವಿನ ಆಟ ಮನಮೋಹಕ
ಅಪ್ಪು ಪಿಳ್ಳ ಓರ್ವ ನಿವೃತ್ತ ಸೈನಿಕ. ಸೈನ್ಯ ಬಿಡುವುದಕ್ಕೂ ಆತನಿಗಿದ್ದ ಒಂದು ಕಾಯಿಲೆ ಕಾರಣವಾಗಿರುತ್ತದೆ. ನೆನಪು ಮತ್ತು ಮರೆವು ಇವೆರಡರ ನಡುವೆ ಆತನ ನಿತ್ಯ ಜೀವನ. ಆ ಕ್ಷಣದ ನೆನಪು ಆತನಿಗಿರುವುದಿಲ್ಲ. ಎಲ್ಲದಕ್ಕೂ ನಿತ್ಯದ ಟು ಡು ಲಿಸ್ಟ್ ಅವನ ಕೈಯಲ್ಲಿ ಇರಲೇಬೇಕು. ಹೀಗಿರುವಾಗಲೇ ಚುನಾವಣೆ ಹಿನ್ನೆಲೆಯಲ್ಲಿ ಪರವಾನಗಿ ಪಡೆದ ಗನ್‌ಗಳನ್ನು ಪೊಲೀಸ್‌ಗೆ ಒಪ್ಪಿಸಬೇಕಾಗುತ್ತದೆ. ಆ ಸಮಯದಲ್ಲಿ ಗನ್ ಮಾಯವಾಗುತ್ತದೆ. ಆ ಗನ್ ಹುಡುಕಾಟದ ರೋಚಕತೆಯೂ ನೋಡುಗನನ್ನು ಬಿಗ್ ಟ್ವಿಸ್ಟ್‌ಗೆ ತಂದು ನಿಲ್ಲಿಸುತ್ತದೆ.
ಕಿಷ್ಕಿಂಧಾ ಕಾಂಡಾಂ ವಯನಾಡು- ಕಣ್ಣೂರು ಜಿಲ್ಲೆಯ ಗಡಿಗ್ರಾಮದಲ್ಲಿ ನಡೆಯುವ ಕಥೆ. ಹಾಗಾಗಿ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ನಿವೃತ್ತ ಸೈನಿಕರು, ನಕ್ಸಲ್ ಚಟುವಟಿಕೆಗಳು ಕಥೆಯ ಜತೆಗೆ ಬೆರೆತುಕೊಂಡಿವೆ. ಒಂದು ದೊಡ್ಡ ಮನೆ, ಅದರ ಆವರಣ ಮತ್ತು ಅಲ್ಲಿನ ಕಥೆ ಆ ಮೂರು ಜೀವಗಳ ಸುತ್ತ ಗಿರಕಿ ಹೊಡೆಯುತ್ತದೆ. ಕಿಷ್ಕಿಂಧಾ ಕಾಂಡಾಂ ತನ್ನ ಥೀಮ್, ನಿರೂಪಣೆ ಮತ್ತು ದೃಷ್ಟಿಕೋನದಿಂದಲೇ ನೋಡುಗನನ್ನು ಆಶ್ಚರ್ಯದ ಜತೆಗೆ ಮತ್ತೊಂದು ಎತ್ತರಕ್ಕೆ ಕೊಂಡೊಯ್ಯುತ್ತದೆ. ಏನಾಗ್ತಿದೆ ಎಂಬ ಅಚ್ಚರಿಯೂ ನಿಧಾನಕ್ಕೆ ತೆರೆದುಕೊಳ್ಳುತ್ತದೆ. ಸಿನಿಮಾ ಶುರುವಾಗಿ ಮೊದಲಾರ್ಧ ಯಾವುದೇ ಸುಳಿವೂ ವೀಕ್ಷಕನಿಗೆ ದಕ್ಕುವುದಿಲ್ಲ. ಕಥೆ ಲಯದಲ್ಲಿದ್ದರೂ ಚಿತ್ರದ ಪಾತ್ರಧಾರಿಗಳಿಗಾಗುವ ಭಯ, ಆತಂಕ, ವೀಕ್ಷಕನಿಗೂ ಆಗುತ್ತ ಹೋಗುತ್ತದೆ.
ನಿರ್ದೇಶಕ ದಿಂಜಿತ್ ಅಯ್ಯಥಾನ್ ಕಮಾಲ್
ಸರಳ ಕಥೆಯೊಂದು ನಮ್ಮನ್ನು ಈ ಮಟ್ಟಿಗೂ ಗಾಢವಾಗಿ ನೋಡಿಸಿಕೊಂಡು ಹೋಗಬಹುದು ಎಂಬುದಕ್ಕೆ ಸಾಕ್ಷಿಯಂತಿದೆ ಕಿಷ್ಕಿಂಧಾ ಕಾಂಡಾಂ ಸಿನಿಮಾ. ಉಸಿರುಗಟ್ಟಿಸುವ ದ್ವಿತೀಯಾರ್ಧದ ಕೊನೆಯಲ್ಲಿ ಎಂಡಿಂಗ್ ಕ್ರೆಡಿಟ್ ತೆರೆಮೇಲೆ ಕಾಣಿಸುತ್ತಿದ್ದಂತೆ, ನೋಡುಗ ತನಗರಿವಿಲ್ಲದಂತೆ ಚಪ್ಪಾಳೆ ತಟ್ಟುತ್ತಾನೆ. ಅಲ್ಲಿಗೆ ಅದು ಆ ಮೇಕಿಂಗ್‌ನ ಶ್ರೇಷ್ಠತೆಗೆ ದಕ್ಕುವ ಕಾಂಪ್ಲಿಮೆಂಟ್. ಸಿನಿಮಾ ನೋಡಿದಾತ ನೆಮ್ಮದಿಯ ನಿಟ್ಟುಸಿರು ಬಿಟ್ಟೇ, ಒಂದೊಳ್ಳೆ ಚಿತ್ರ ನೋಡಿದ ಫೀಲ್ ಎದೆಗಿಳಿಸಿಕೊಳ್ಳುತ್ತಾನೆ. ಆ ಮಟ್ಟಿಗೆ ಬರಸೆಳೆಯುವ ಗಟ್ಟಿ ಕಥೆಯೊಂದಿಗೆ ನಿರ್ದೇಶಕ ದಿಂಜಿತ್ ಅಯ್ಯಥಾನ್ ಕಿಷ್ಕಿಂಧಾ ಕಾಂಡಾಂ ಸಿನಿಮಾ ಮೂಲಕ ವಿಶೇಷ ಕಥೆ ಹಿಡಿದು ಬಂದಿದ್ದಾರೆ.
ನೆನಪು ಮತ್ತು ಮರೆವಿನ ನಡುವೆ ನಿವೃತ್ತ ಸೈನಿಕನಾಗಿ ವಿಜಯ ರಾಘವನ್ ಅಭಿನಯವು ಚಿತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತದೆ. ತನಗೆ ಬೇಕಾದುದನ್ನು ನೆನಪಿಟ್ಟುಕೊಳ್ಳುವ, ಬೇಡದ್ದನ್ನು ಸುಟ್ಟು ಬಿಸಾಕುವ ಪಾತ್ರದಲ್ಲಿ ದಿ ಬೆಸ್ಟ್ ನಟನೆ ಅವರಿಂದ ಸಂದಾಯವಾಗಿದೆ. ವಿಧೇಯ ಮಗನಾಗಿ ಪ್ರೇಕ್ಷಕರ ಮನ ಗೆಲ್ಲುತ್ತಾರೆ ಆಸಿಫ್ ಅಲಿ. ಇತ್ತೀಚಿನ ಅಡಿಗೋಸ್ ಅಮಿಗೋ ಸಿನಿಮಾದಲ್ಲಿನ ನಟನೆಯನ್ನು ದಾಟಿ, ನಟನಾ ವೃತ್ತಿಜೀವನದಲ್ಲಿ ಮತ್ತೊಂದು ಹೊಸ ತಿರುವಿಗೆ ಹೊರಳಿದಂತೆ ಕಾಣಿಸುತ್ತಾರೆ ಆಸಿಫ್.
ಕಥೆಗಾರ, ಕ್ಯಾಮರಾಮನ್ ಒಬ್ಬರೆ..
ಮುಜೀಬ್ ಮಜೀದ್ ಅವರ ಸಂಗೀತ ಚಿತ್ರದೊಂದಿಗೆ ಸಾಗುತ್ತದೆ. ಸಂಕಲನಕಾರ ಸೂರಜ್ ದೃಶ್ಯಗಳನ್ನು ಜೋಡಿಸುವಿಕೆ ಅಚ್ಚುಕಟ್ಟಾಗಿದೆ. ಕಥೆಗಾರ ಮತ್ತು ಕ್ಯಾಮೆರಾಮನ್ ಬಹುಲ್ ರಮೇಶ್ ಒಬ್ಬರೇ ಆಗಿರುವುದು ಚಿತ್ರಕ್ಕೆ ಪ್ಲಸ್ ಆಗಿದೆ. ಈ ಕಾರಣದಿಂದಲೇ ಕ್ಯಾಮರಾಮನ್ ಮತ್ತು ನಿರ್ದೇಶಕರು ತಮ್ಮ ಮನಸ್ಸಿನಲ್ಲಿರುವ ವಿಚಾರಗಳನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯಾವ ಒಟಿಟಿಯಲ್ಲಿ ವೀಕ್ಷಣೆ?
ಕಿಷ್ಕಿಂಧಾ ಕಾಂಡಾಂ ಸಿನಿಮಾವನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದು.
ಕಿಷ್ಕಿಂಧಾ ಕಾಂಡಂ ಸಿನಿಮಾ ವಿವರ
ಜಾನರ್: ಥ್ರಿಲ್ಲರ್, ಮಿಸ್ಟರಿ
ತಾರಾಗಣ: ಆಸಿಫ್ ಅಲಿ, ವಿಜಯ ರಾಘವನ್, ಅಪರ್ಣಾ ಬಾಲಮುರಳಿ, ಅಶೋಕನ್ ಇತರರು
ನಿರ್ದೇಶನ: ದಿಂಜಿತ್ ಅಯ್ಯಥಾನ್
ಕಥೆ, ಚಿತ್ರಕಥೆ, ಸಂಭಾಷಣೆ: ಬಹುಲ್ ರಮೇಶ್
ನಿರ್ಮಾಣ: ಜೊಬಿ ಜಾರ್ಜ್ ತಡತಿಲ್
ಛಾಯಾಗ್ರಹಣ: ಬಹುಲ್ ರಮೇಶ್