ಕೈಯಲ್ಲಿ ಕರ್ಪೂರ ಬೆಳಗಿ ತನಗಾದ ಅನ್ಯಾಯಕ್ಕೆ ಉತ್ತರ ಕೊಡುವಂತೆ ದೇವರ ಮುಂದೆ ಗೋಳಾಡಿದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ
Nov 20, 2024 09:42 AM IST
Bhagyalakshmi Serial: ಕೈಯಲ್ಲಿ ಕರ್ಪೂರ ಬೆಳಗಿ ತನಗೆ ನ್ಯಾಯ ಕೊಡು ಎಂದು ದೇವರ ಮುಂದೆ ಪ್ರಾರ್ಥಿಸುತ್ತಿರುವ ಭಾಗ್ಯಾ
ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್ 19ರ ಎಪಿಸೋಡ್‌ನಲ್ಲಿ, ಭಾಗ್ಯಾಗೆ ತಾಂಡವ್-ಶ್ರೇಷ್ಠಾ ವಿಚಾರ ಅರಗಿಸಿಕೊಳ್ಳಲು ಆಗುತ್ತಿಲ್ಲ. ತನಗಾದ ಅನ್ಯಾಯ ನೆನಪಿಸಿಕೊಂಡು ಗೋಳಾಡುತ್ತಿದ್ದಾಳೆ. ದೇವರ ಮುಂದೆ ಕರ್ಪೂರ ಹಚ್ಚಿ ನೋವು ಹೊರ ಹಾಕುತ್ತಾಳೆ. ಮತ್ತೊಂದೆಡೆ ತಾಂಡವ್-ಶ್ರೇಷ್ಠಾ ಗಂಡ ಹೆಂಡತಿ ಅಲ್ಲ ಎಂಬ ಸತ್ಯ ಹೋಟೆಲ್‌ನವರಿಗೆ ತಿಳಿದುಹೋಗಿದೆ.
Bhagyalakshmi Kannada Serial: ಫಕೀರ ಹೇಳಿದಂತೆ ಕುಸುಮಾ ವ್ರತ ಅರ್ಧದಲ್ಲೇ ನಿಂತಿದೆ. ಇಷ್ಟು ದಿನ ಮುಚ್ಚಿಟ್ಟಿದ್ದ ಸತ್ಯ ಭಾಗ್ಯಾಗೆ ತಿಳಿದುಹೋಗಿದೆ. ಗಂಡ ಮತ್ತೊಬ್ಬಳೊಂದಿಗೆ ವಿವಾಹೇತರ ಸಂಬಂಧ ಹೊಂದಿರುವುದನ್ನು ನೆನಪಿಸಿಕೊಂಡು ಭಾಗ್ಯಾಗೆ ತಾಂಡವ್ ಮೇಲೆ ಅಸಹ್ಯ ಹುಟ್ಟಿದೆ. ಎಷ್ಟೋ ದಿನಗಳಿಂದ ನನ್ನ ಕಣ್ಮುಂದೆ ಇದೆಲ್ಲಾ ನಡೆಯುತ್ತಿದ್ದರೂ ನನಗೆ ಗೊತ್ತಾಗಲೇ ಇಲ್ಲ ಎಂದು ಭಾಗ್ಯಾ ಬೇಸರ ವ್ಯಕ್ತಪಡಿಸುತ್ತಾಳೆ.
ಭಾಗ್ಯಾ ವರ್ತನೆ ಕಂಡು ಗಾಬರಿಯಾದ ಅರ್ಚಕರು
ಮನೆಯಲ್ಲೇ ನೆನೆಯುತ್ತಾ, ತನ್ನ ಮನದ ನೋವನ್ನೆಲ್ಲಾ ಹೊರ ಹಾಕುತ್ತಾಳೆ. ಹತ್ತಿರದಲ್ಲೇ ಇದ್ದ ದೇವಸ್ಥಾನಕ್ಕೆ ಹೋಗುತ್ತಾಳೆ. ದೇವರ ಮುಂದೆ ಇರುವ ಕುಂಕುಮ ಹಚ್ಚಿಕೊಳ್ಳುತ್ತಾಳೆ. ಆದರೆ ಅದು ಮಳೆನೀರಿಗೆ ತೊಯ್ದು ಹೋಗುತ್ತದೆ. ಮತ್ತೆ ಭಾಗ್ಯಾ ಕುಂಕುಮ ಹಚ್ಚಿಕೊಳ್ಳುತ್ತಾಳೆ. ಆದರೆ ಅದೂ ಕೂಡಾ ಅಳಿಸಿಹೋಗುತ್ತದೆ. ಭಾಗ್ಯಾ ವರ್ತನೆ ನೋಡಿ ದೇವಸ್ಥಾನದ ಅರ್ಚಕರು ಗಾಬರಿ ಆಗುತ್ತಾರೆ. ನನಗೆ ಕುಂಕುಮ ಬೇಕು ಎಂದು ಭಾಗ್ಯಾ ಅರಚುತ್ತಾಳೆ. ಅವಳು ಕೇಳುತ್ತಿದ್ದಂತೆ ಅರ್ಚಕರು ಮತ್ತೆ ಮತ್ತೆ ಕುಂಕುಮ ತಂದುಕೊಡುತ್ತಾರೆ. ಆದರೆ ಹಣೆಯಲ್ಲಿ ಕುಂಕುಮ ಅಳಿಸಿ ಹೋಗುವುದನ್ನು ನೋಡಿ ಭಾಗ್ಯಾ ಇನ್ನಷ್ಟು ಅಳುತ್ತಾಳೆ. ನನ್ನ ಹಣೆಯಲ್ಲಿ ಏಕೆ ಕುಂಕುಮ ನಿಲ್ಲುತ್ತಿಲ್ಲ ಎಂದು ಕೇಳುತ್ತಾಳೆ.
ಹೀಗೆ ಮಳೆ ಸುರಿಯುವಾಗ ನೀನು ಕುಂಕುಮ ಹಚ್ಚಿಕೊಂಡರೆ ಹೇಗೆ ನಿಲ್ಲುತ್ತದೆ? ಒಳಗೆ ಬಾ ಎಂದು ಅರ್ಚಕರು ಕರೆಯುತ್ತಾರೆ. ಹೌದಲ್ವಾ ನನಗೆ ಅದು ಗೊತ್ತೇ ಇರಲಿಲ್ಲ, ಮಳೆ ನೀರು ಬಂದು ನನ್ನ ಕುಂಕುಮವನ್ನು ಅಳಿಸುತ್ತಿದೆ. ನನ್ನ ಜೀವನದಲ್ಲಿ ಕೂಡಾ ಹೀಗೆ ಆಗುತ್ತಿದೆ. ಇದಕ್ಕೆಲ್ಲಾ ಏನು ಪರಿಹಾರ? ಯಾರು ಉತ್ತರ ಕೊಡುತ್ತಾರೆ? ಎಂದು ಗೋಳಾಡುತ್ತಾಳೆ. ಪ್ರತಿಯೊಂದಕ್ಕೂ ಒಂದು ಪರಿಹಾರ ಇದ್ದೇ ಇರುತ್ತದೆ. ದೇವರೇ ನಿನ್ನ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡುತ್ತಾನೆ. ಅವನೇ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ನೀಡುತ್ತಾನೆ ಎಂದು ಅರ್ಚಕರು ಭಾಗ್ಯಾಗೆ ಸಮಾಧಾನ ಮಾಡುತ್ತಾರೆ. ಹೌದು, ದೇವರು ನನ್ನ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾನೆ ಎಂದು ಕೈಯ್ಯಲ್ಲಿ ಕರ್ಪೂರ ಹಚ್ಚಿ ದೇವರಿಗೆ ಬೆಳಗುತ್ತಾಳೆ.
ಮಗ-ಸೊಸೆ ಯೋಚನೆಯಲ್ಲಿ ಪ್ರಜ್ಜೆ ಕಳೆದುಕೊಂಡ ಕುಸುಮಾ
ಇತ್ತ ಕುಸುಮಾಗೆ ಮಗನ ಮುಂದಿನ ಜೀವನದ ಬಗ್ಗೆ ಯೋಚನೆ ಶುರುವಾಗಿದೆ. ಅವಳು ಮನೆಗೆ ಬರುತ್ತಿದ್ದಂತೆ ಸುಂದ್ರಿ , ಕುಸುಮಾಗೆ ಊಟ ತಂದುಕೊಡುತ್ತಾಳೆ. ಆದರೆ ಕುಸುಮಾ ಊಟ ಮಾಡಲು ನಿರಾಕರಿಸುತ್ತಾಳೆ. ಭಾಗ್ಯಾ ಮನೆ ಬಿಟ್ಟು ಹೋದರೆ ನನ್ನ ಮಗನ ಜೀವನ ಹಾಳಾಗುತ್ತದೆ ಎಂದು ಅಳುತ್ತಾಳೆ. ನಿಮ್ಮ ಮಗ ಅವನ ಕೈಯಾರೆ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾನೆ. ಅದರ ಬಗ್ಗೆ ಗೊತ್ತಿದ್ದರೂ ಅವನು ಯಾವುದನ್ನೂ ಅರ್ಥ ಮಾಡಿಕೊಳ್ಳುತ್ತಿಲ್ಲ. ನೀವು ನಿಮ್ಮ ಸೊಸೆಯ ಬಗ್ಗೆ ಮಾತ್ರ ಯೋಚನೆಯೇ ಮಾಡುತ್ತಿಲ್ಲ ಎಂದು ಸುಂದ್ರಿ ಹೇಳುತ್ತಾಳೆ. ದೇವರ ಮುಂದೆ ಕುಸುಮಾ ಗೋಳು ಹೇಳಿಕೊಳ್ಳುತ್ತಾಳೆ. ಮಾನಸಿಕ ಯಾತನೆ ಅನುಭವಿಸುತ್ತಿರುವ ಜೊತೆಗೆ ಬೆಳಗಿನಿಂದ ಉಪವಾಸವಿರುವ ಕಾರಣಕ್ಕೆ ಕುಸುಮಾ ತಲೆ ಸುತ್ತಿ ಬೀಳುತ್ತಾಳೆ. ಮತ್ತೊಂದೆಡೆ ತಾಂಡವ್ ಹಾಗೂ ಶ್ರೇಷ್ಠಾ ಗಂಡ ಹೆಂಡತಿ ಅಲ್ಲ ಎಂಬ ಸತ್ಯ ಸಹನಾಗೆ ಗೊತ್ತಾಗುತ್ತದೆ.
ಭಾಗ್ಯಾ ಮುಂದಿನ ನಡೆ ಏನು? ಕುಸುಮಾ ಗುಣಮುಖಳಾಗುತ್ತಾಳಾ? ತಾಂಡವ್-ಶ್ರೇಷ್ಠಾ ಶಿಕ್ಷೆ ಅನುಭವಿಸುತ್ತಾರಾ? ಮುಂದಿನ ಎಪಿಸೋಡ್‌ಗಳಲ್ಲಿ ಉತ್ತರ ಸಿಗಲಿದೆ.
ಇದನ್ನೂ ಓದಿ: ಫುಟ್ಪಾತ್ ಮೇಲೆ ಡ್ರೋನ್ ಪ್ರತಾಪ್ ಫೋಟೋಶೂಟ್
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್