ಸಂಗೀತ ಮಾಂತ್ರಿಕ ಎ ಆರ್‌ ರೆಹಮಾನ್‌ ಡೈವೋರ್ಸ್‌ ಕೇಸ್‌: ಅವರ ಪತ್ನಿ ಸಾಯಿರಾ ಬಾನು ಯಾರು? ಹಿನ್ನೆಲೆ, ಕುಟುಂಬ, ಮಕ್ಕಳ ವಿವರ
ಕನ್ನಡ ಸುದ್ದಿ  /  ಮನರಂಜನೆ  /  ಸಂಗೀತ ಮಾಂತ್ರಿಕ ಎ ಆರ್‌ ರೆಹಮಾನ್‌ ಡೈವೋರ್ಸ್‌ ಕೇಸ್‌: ಅವರ ಪತ್ನಿ ಸಾಯಿರಾ ಬಾನು ಯಾರು? ಹಿನ್ನೆಲೆ, ಕುಟುಂಬ, ಮಕ್ಕಳ ವಿವರ

ಸಂಗೀತ ಮಾಂತ್ರಿಕ ಎ ಆರ್‌ ರೆಹಮಾನ್‌ ಡೈವೋರ್ಸ್‌ ಕೇಸ್‌: ಅವರ ಪತ್ನಿ ಸಾಯಿರಾ ಬಾನು ಯಾರು? ಹಿನ್ನೆಲೆ, ಕುಟುಂಬ, ಮಕ್ಕಳ ವಿವರ

ಸಂಗೀತ ಮಾಂತ್ರಿಕ ಎ ಆರ್‌ ರೆಹಮಾನ್‌ ಡೈವೋರ್ಸ್‌ ಕೇಸ್‌ ಸದ್ಯ ವ್ಯಾಪಕ ಗಮನಸೆಳೆದಿರುವ ವಿಚಾರ. ಎ ಆರ್ ರೆಹಮಾನ್ ಜೊತೆಗೆ 29 ವರ್ಷ ದಾಂಪತ್ಯದ ಬಳಿಕ ವಿಚ್ಛೇದನಕ್ಕೆ ತೀರ್ಮಾನಿಸಿರುವ ಅವರ ಪತ್ನಿ ಸಾಯಿರಾ ಬಾನು ಯಾರು, ಕುಟುಂಬದ ಹಿನ್ನೆಲೆ, ಮಕ್ಕಳು ಮತ್ತು ಇತರೆ ವಿವರ ಇಲ್ಲಿದೆ.

ಸಿನಿಮಾ ರಂಗದ ಸಂಗೀತ ಮಾಂತ್ರಿಕ ಎ ಆರ್‌ ರೆಹಮಾನ್‌ ಡೈವೋರ್ಸ್‌ ಕೇಸ್‌ ಗಮನಸೆಳೆದಿದ್ದು, ಅವರ ಪತ್ನಿ ಸಾಯಿರಾ ಬಾನು ಯಾರು? ಹಿನ್ನೆಲೆ, ಕುಟುಂಬ, ಮಕ್ಕಳ ವಿವರ ಇಲ್ಲಿದೆ.
ಸಿನಿಮಾ ರಂಗದ ಸಂಗೀತ ಮಾಂತ್ರಿಕ ಎ ಆರ್‌ ರೆಹಮಾನ್‌ ಡೈವೋರ್ಸ್‌ ಕೇಸ್‌ ಗಮನಸೆಳೆದಿದ್ದು, ಅವರ ಪತ್ನಿ ಸಾಯಿರಾ ಬಾನು ಯಾರು? ಹಿನ್ನೆಲೆ, ಕುಟುಂಬ, ಮಕ್ಕಳ ವಿವರ ಇಲ್ಲಿದೆ.

ಮುಂಬಯಿ: ಸಿನಿಮಾ ಲೋಕದ ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್‌ ಡೈವೋರ್ಸ್‌ ಕೇಸ್‌ ಸದ್ಯ ಬಾಲಿವುಡ್ ಅಂಗಳದಲ್ಲಿ ಹೆಚ್ಚು ಚರ್ಚೆಗೆ ಒಳಗಾಗಿರುವ ವಿಚಾರ. ಎ ಆರ್ ರೆಹಮಾನ್ ಮತ್ತು ಅವರ ಪತ್ನಿ ಸಾಯಿರಾ ಬಾನು ಅವರು ತಮ್ಮ ವಿಚ್ಛೇದನವನ್ನು ಪ್ರಕಟಿಸುವುದಕ್ಕೆ ಸೋಷಿಯಲ್ ಮೀಡಿಯಾ ತಾಣಗಳನ್ನು ಬಳಸಿಕೊಂಡು ಅಚ್ಚರಿ ಮೂಡಿಸಿದರು. 29 ವರ್ಷಗಳ ದಾಂಪತ್ಯ ಜೀವನದ ಬಳಿಕ ಈ ದಂಪತಿ ಪರಸ್ಪರ ದೂರಾಗುತ್ತಿದ್ಧಾರೆ. ಈ ದುರದೃಷ್ಟಕರ ಸುದ್ದಿಯ ಹೊರತಾಗಿಯೂ ಅವರ ದಾಂಪತ್ಯ ಬದುಕಿನಲ್ಲಿ ಪ್ರೇಮಕಥೆ ಇದೆ. ಎಆರ್ ರೆಹಮಾನ್ - ಸಾಯಿರಾ ಬಾನು ಪ್ರೇಮಕಥೆಯ ಕಡೆಗೊಂದು ಇಣುಕುನೋಟ.

ಎಆರ್ ರೆಹಮಾನ್‌- ಸಾಯಿರಾ ಬಾನು ಮೊದಲ ಭೇಟಿ

ತಾಯಿ ನಿಶ್ಚಯಿಸಿದ ಹುಡುಗಿಯನ್ನೇ ತಾನು ವಿವಾಹವಾದುದಾಗಿ ಎಆರ್ ರೆಹಮಾನ್‌ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದು, ಮೊದಲ ಭೇಟಿಯನ್ನೂ ನೆನಪಿಸಿಕೊಂಡಿದ್ದರು. ಚೆನ್ನೈನ ಸೂಫಿ ಸಂತ ಮೋತಿ ಬಾಬಾ ಗುಡಿಯಲ್ಲಿ ಸಾಯಿರಾ ಅವರನ್ನು ತನ್ನ ತಾಯಿ ಮತ್ತು ಸಹೋದರಿ ಮೊದಲ ಬಾರಿ ಸಾಯಿರಾ ಬಾನುವನ್ನು ನೋಡಿದ್ದರು. ಅವರಿಗೆ ಸಾಯಿರಾ ಅಥವಾ ಆಕೆಯ ಕುಟುಂಬದ ಬಗ್ಗೆ ಗೊತ್ತಿರಲಿಲ್ಲ. ಈ ಗುಡಿಯಿಂದ ಐದಾರು ಮನೆ ಆಚೆಗೆ ಸಾಯಿರಾ ಕುಟುಂಬ ಇತ್ತು. ಅವರು ಸೀದಾ ಸಾಯಿರಾ ಬಾನು ಬಳಿ ಹೋಗಿ ಮಾತನಾಡಿದರು. ಅದು ಅವರಿಗೆ ಬಹಳ ಸುಲಭವಾಗಿತ್ತು" ಎಂದು ಹೇಳಿದ್ದರು.

“ಅವಳು ಸುಂದರಿ. ಸೌಮ್ಯ ಭಾವದವಳು. ನಾವು ಮೊದಲ ಸಲ 1995ರ ಜನವರಿ 6 ರಂದು ನನ್ನ 28ನೇ ಹುಟ್ಟುಹಬ್ಬದಂದು ಭೇಟಿಯಾದೆವು. ಅದು ಕಿರು ಭೇಟಿಯಾಗಿತ್ತು. ನಂತರ, ನಾವು ಹೆಚ್ಚಾಗಿ ಫೋನ್‌ನಲ್ಲೇ ಮಾತನಾಡುತ್ತಿದ್ದೆವು. ಸಾಯಿರಾ ಕಚ್ಚಿ ಮತ್ತು ಇಂಗ್ಲಿಷ್ ಮಾತನಾಡುತ್ತಾರೆ ಮತ್ತು ನಾನು ಇಂಗ್ಲಿಷ್‌ನಲ್ಲಿ ನನ್ನನ್ನು ಮದುವೆಯಾಗಲು ಬಯಸುವಿರಾ ಎಂದು ಆಕೆಯನ್ನು ಕೇಳಿದ್ದೆ. ಅಂದು ಬಹಳ ಶಾಂತವಾಗಿ ಒಪ್ಪಿಕೊಂಡಿದ್ದರು. ಈಗಲೂ ಅದೇ ಶಾಂತ ಭಾವ ಇದೆ” ಎಂದು ಎಆರ್ ರೆಹಮಾನ್ ಹೇಳಿದ್ದರು.

ಸಾಯಿರಾ ಬಾನು ಯಾರು? ಹಿನ್ನೆಲೆ ಮತ್ತು ಕುಟುಂಬ ವಿವರ

ಸಾಯಿರಾ ಬಾನು ಗುಜರಾತ್‌ನ ಕಛ್‌ ಮೂಲದವರು, 1973ರ ಡಿಸೆಂಬರ್ 20 ರಂದು ಜನಿಸಿದರು. ಮೇಲ್ಮಧ್ಯಮ ವರ್ಗದ ಸುಸಂಸ್ಕೃತ ಮನೆತನದವರು. ಬಾಲ್ಯದ ಆಕೆಯ ಪಾಲನೆಯು ಸಂಪ್ರದಾಯ ಮತ್ತು ಮೌಲ್ಯಗಳಲ್ಲಿ ಆಳವಾಗಿ ಬೇರೂರಿದೆ. ಇದು ಜೀವನದ ಮೇಲಿನ ಆಕೆಯ ದೃಷ್ಟಿಕೋನವನ್ನು ರೂಪಿಸಿದ್ದಾಗಿ ಆಕೆ ಹಿಂದೊಮ್ಮೆ ಹೇಳಿಕೊಂಡಿದ್ದರು. 1995ರಲ್ಲಿ ಸಾಯಿರಾ ಬಾನು ಮತ್ತು ಎಆರ್ ರೆಹಮಾನ್ ವಿವಾಹವಾಗಿದ್ದು, 29 ವರ್ಷಗಳ ದಾಂಪತ್ಯದಲ್ಲಿ ಅವರಿಗೆ ಮೂವರು ಮಕ್ಕಳು. ಖತೀಜಾ, ರಹೀಮಾ ಮತ್ತು ಮಗ ಅಮೀನ್‌.

ಸಾಯಿರಾ ಬಾನು ಅವರು ಸಾಮಾಜಿಕ ಮತ್ತು ದತ್ತಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಪತಿ ಎಆರ್ ರೆಹಮಾನ್ ಅವರ ಲೋಕೋಪಕಾರಿ ಪ್ರಯತ್ನಗಳಿಗೆ ಬೆನ್ನೆಲುಬಾಗಿ ನಿಂತವರು. ಶಿಕ್ಷಣ, ಆರೋಗ್ಯ ಮತ್ತು ಸಮುದಾಯ ಅಭಿವೃದ್ಧಿಯ ಮೇಲೆ ಕೇಂದ್ರೀಕೃತ ಉಪಕ್ರಮಗಳಿಗೆ ಆಗಾಗ್ಗೆ ಕೊಡುಗೆ ನೀಡುತ್ತ ಬಂದಿದ್ದಾರೆ.

ಸಾರ್ವಜನಿಕ ಬದುಕಿನಲ್ಲಿದ್ದರೂ ಸಾಯಿರಾ ಬಾನು ಮತ್ತು ಎಆರ್ ರೆಹಮಾನ್‌ ತಮ್ಮ ವೈಯಕ್ತಿಕ ಬದುಕಿನ ವಿಚಾರಗಳನ್ನು ಗೌಪ್ಯವಾಗಿಟ್ಟುಕೊಂಡಿದ್ದರು. ಸಾರ್ವಜನಿಕರು ತಮ್ಮ ಕುಟುಂಬದ ಮೇಲೆ ಇರಿಸಬಹುದಾದ ಗಮನವನ್ನು ಅವರು ತಮ್ಮ ಕೆಲಸ ಮತ್ತು ಸಾಧನೆಗಳ ಮೇಲೆ ಕೇಂದ್ರೀಕರಿಸುವಂತೆ ಮಾಡಿದ್ದರು.

ಸಾಯಿರಾ ಬಾನು ಮತ್ತು ಎಆರ್‌ ರೆಹಮಾನ್ ಡೈವೋರ್ಸ್‌ ವಿಚಾರ ನಿನ್ನೆ ಬಹಿರಂಗವಾಗಿದೆ. ಸಾಯಿರಾ ಬಾನು ಅವರ ವಕೀಲರಾದ ವಂದನಾ ಶಾ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿ, ಈ ಜೋಡಿಯ ವೈಯಕ್ತಿಕ ಬದುಕಿನ ಖಾಸಗಿತನವನ್ನು ಗೌರವಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Whats_app_banner