Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ರಜತ್ ರಂಪಾಟ; ಗೋಲ್ಡ್ ಸುರೇಶ್‌ಗೆ ಬೈದು ಬೀಪ್ ಹಾಕಿಸಿಕೊಂಡ ಹೊಸ ಸ್ಪರ್ಧಿ
Nov 21, 2024 07:17 AM IST
ಬಿಗ್ ಬಾಸ್ ಮನೆಯಲ್ಲಿ ರಜತ್ ರಂಪಾಟ
- Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ಬೀಪ್ ಮಾತುಗಳು ಮತ್ತೆ ರಿಂಗಣಿಸುತ್ತಿವೆ. ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಆಗಮಿಸಿದ್ದ ರಜತ್ ಕಿಶನ್, ಟಾಸ್ಕ್ ವೇಳೆ ಗೋಲ್ಡ್ ಸುರೇಶ್ ವಿರುದ್ಧ ಕೆಟ್ಟ ಪದ ಬಳಕೆ ಮಾಡಿದ್ದಾರೆ. ರಜತ್ ಮಾತಿಗೆ ಬೇಸರ ಹೊರಹಾಕಿದ ಸುರೇಶ್, ಮನೆಯಿಂದ ಹೊರ ನಡೆವ ನಿರ್ಧಾರ ಮಾಡಿದ್ದಾರೆ.
Bigg Boss Kannada 11: ಬಿಗ್ ಬಾಸ್ ಕನ್ನಡ ಸೀಸನ್ 11 ಶುರುವಾಗುತ್ತಿದ್ದಂತೆ, ಲಾಯರ್ ಜಗದೀಶ್ ಮಾತಿನ ಮೂಲಕವೇ ಮನೆ ಮಂದಿಗೆ ತಿವಿದಿದ್ದರು. ಕೊನೆಗೆ ಅದೇ ಮಾತಿನಿಂದಲೇ ಅದೇ ಮನೆಯಿಂದ ಎಕ್ಸಿಟ್ ಆಗಿದ್ದರು. ಈಗ ಬಿಗ್ ಬಾಸ್ ಮನೆಯಲ್ಲಿ ಬೀಪ್ ಮಾತುಗಳು ಮತ್ತೆ ರಿಂಗಣಿಸುತ್ತಿವೆ. ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಆಗಮಿಸಿದ್ದ ರಜತ್ ಕಿಶನ್, ಟಾಸ್ಕ್ ವೇಳೆ ಗೋಲ್ಡ್ ಸುರೇಶ್ ವಿರುದ್ಧ ಕೆಟ್ಟ ಪದ ಬಳಕೆ ಮಾಡಿದ್ದಾರೆ. ಈ ಮೂಲಕ ಬಹಳ ದಿನಗಳ ಬಳಿಕ ಬಿಗ್ ಮನೆಯಲ್ಲಿ ಅವಾಚ್ಯ ಶಬ್ದಗಳು ಮತ್ತೆ ಕೇಳಿಬಂದಿವೆ.
ಬಿಗ್ ಬಾಸ್ ಮನೆಯಲ್ಲಿ ಈ ವಾರದ ಟಾಸ್ಕ್ ಶುರು ಆಗಿವೆ. ಅದರಂತೆ ಮನೆಯಲ್ಲಿ ಎರಡು ತಂಡಗಳೂ ನಿರ್ಮಾಣವಾಗಿವೆ. ಆ ಎರಡು ತಂಡಗಳಿಗೆ ಕ್ಯಾಪ್ಟನ್ ಆಗಿ ಭವ್ಯಾ ಗೌಡ ಮತ್ತು ಶೋಭಾ ಶೆಟ್ಟಿ ಮುನ್ನಡೆಸುತ್ತಿದ್ದಾರೆ. ಶೋಭಾ ಅವರ ಟೀಮ್‌ನಲ್ಲಿ ರಜತ್ ಕಿಶನ್, ಉಗ್ರಂ ಮಂಜು, ಧನರಾಜ್ ಆಚಾರ್, ಹನುಮಂತ, ಗೌತಮಿ ಜಾಧವ್, ಚೈತ್ರಾ ಕುಂದಾಪುರ ಇದ್ದರೆ, ಭವ್ಯಾ ಗೌಡ ಟೀಮ್‌ನಲ್ಲಿ ತ್ರಿವಿಕ್ರಮ್, ಮೋಕ್ಷಿತಾ ಪೈ, ಐಶ್ವರ್ಯಾ ಶಿಂಧೋಗಿ, ಶಿಶಿರ್, ಗೋಲ್ಡ್ ಸುರೇಶ್ ಈ ತಂಡದಲ್ಲಿದ್ದಾರೆ. ಈ ಎರಡು ತಂಡಗಳ ಪೈಕಿ, ನೀಲಿ ಟೀಮ್ ಶೋಭಾ ಅವರದ್ದಾದರೆ, ಕೆಂಪು ಟೀಮ್ ಭವ್ಯಾ ಅವರದ್ದು.
ಚೆಂಡು ನಾ ನಿನ್ನ ಬಿಡಲಾರೆ ಆಟ
ದೊಡ್ಡ ಗಾತ್ರದ ಬಾಲ್ ಅನ್ನು ಮತ್ತೊಂದು ಬದಿಗೆ ತಂದಿಡುವ "ಚೆಂಡು ನಾ ನಿನ್ನ ಬಿಡಲಾರೆ" ಆಟದಲ್ಲಿ ಸುರೇಶ್ ಮತ್ತು ರಜತ್ ನಡುವೆ ಗಲಾಟೆ ಶುರುವಾಗಿದೆ. ಎರಡೂ ತಂಡಗಳಿಂದ ತಲಾ ಇಬ್ಬಿಬ್ಬರು ಈ ಆಟ ಆಡಬೇಕಿತ್ತು. ಭವ್ಯಾ ತಂಡದಿಂದ ಸುರೇಶ್ ಮತ್ತು ತ್ರಿವಿಕ್ರಮ್, ಶೋಭಾ ತಂಡದಿಂದ ರಜತ್ ಮತ್ತು ಮಂಜು ಅಖಾಡಕ್ಕೆ ಆಗಮಿಸಿದರು. ಬಿಗ್ ಬಾಸ್ ಸೂಷಿಸುವ ಸ್ಥಳಕ್ಕೆ ಆ ಚೆಂಡನ್ನು ತಂಡು ಇಡಬೇಕಿತ್ತು. ಈ ವೇಳೆ ಗೋಲ್ಡ್ ಸುರೇಶ್ ಮತ್ತು ರಜತ್ ನಡುವೆ ಗಲಾಟೆ ಶುರುವಾಗಿದೆ. ಮನಸ್ಸಿಗೆ ಬಂದಂತೆ ಮಾತನಾಡಲು ಶುರುಮಾಡಿದ್ದಾರೆ ರಜತ್.
ಸೆಡೆ ಪದ ಪ್ರಯೋಗಿಸಿದ ರಜತ್
ಆಟದ ನಡುವೆಯೇ "ಹೇ... ಬಾರಲೇ, ಆಡಲೇ, ಮಾಡಲೇ, ತಾಕತ್ತಿದ್ದರೆ ಮಾಡಿ ತೋರ್ಸಲೇ, ವೇಸ್ಟ್ ನನ್ ಮಗನೇ" ಎಂದು ಸುರೇಶ್‌ಗೆ ಏಕವಚನದಲ್ಲಿಯೇ ರಜತ್ ಮಾತನಾಡಿದ್ದಾರೆ. ಈ ಮಾತುಗಳು ಸುರೇಶ್ ಅವರನ್ನು ಕೆಣಕಿವೆ. "ಮಗನೇ ಗಿಗನೇ ಅನ್ನಬೇಡ ಏನೋ ಮಾತಾಡ್ತೀಯಾ? ಚೆನ್ನಾಗಿರಲ್ಲ" ಎಂದಿದ್ದಾರೆ. "ಏನ್ ಗುಗ್ಗು ನನ್ ಮಗನ್ ಥರ ಮಾತಾಡ್ತಿಯಾ..? ಸ್ವಲ್ಪ ಅದುಮಿಕ್ಕೊಂಡಿರು. ಏಯ್ ಹೋಗಲೇ, ಏನೋ ಮಾತಾಡ್ತಿಯಾ? ಈ ಸೆಡೆ ಮಾತುಗಳೆಲ್ಲ ನನ್ನ ಹತ್ರ ಬೇಡ" ಎಂದು ಮತ್ತೆ ರಜತ್ ಮಾತು ಮುಂದುವರಿದಿವೆ. ಮಗನೇ ಗಿಗನೇ ಅನ್ನಬೇಡ ಎಂದು ಪ್ರತಿರೋಧವೊಡ್ಡಿದರೂ, ಹೇ, ಏನೋ ಮಾತಾಡ್ತಿಯಾ? ಸೆಡೆ ನನ್ನ ಮಗನೇ ಬಳೆ ತೊಟ್ಕೊ ಎನ್ನುತ್ತಲೇ ಕೆಟ್ಟ ಪದಗಳ ಬಳಕೆ ಮಾಡಿದ್ದಾರೆ. ಅದಾದ ಬಳಿಕ ಬಂದ ಮಾತುಗಳಿಗೆ ಬಿಗ್ ಬಾಸ್ ಬೀಪ್ ಹಾಕಿದ್ದಾರೆ.
ಮನೆ ಬಿಡುವ ನಿರ್ಧಾರಕ್ಕೆ ಮುಂದಾದ ಸುರೇಶ್
ರಜತ್ ಪದಗಳು ಮಿತಿ ಮೀರಿದಾಗ, ಗೋಲ್ಡ್ ಸುರೇಶ್ ತಾಳ್ಮೆ ಕಳೆದುಕೊಂಡರು. ನನ್ನ ಮಗನೇ ಅಂತ ನಮ್ಮಪ್ಪನೇ ಅನ್ನಲ್ಲ, ಇವನ್ಯಾವನು ನನಗೆ ಎಂದರು. ಬಳಿಕ ಬಾಗಿಲ ಬಳಿ ಬಂದು, ಬಿಗ್ ಬಾಸ್ ಬಾಗಿಲು ತೆರೆಗಿರಿ, ನಾನು ಈ ಕೂಡಲೇ ಹೊರಗೆ ಹೋಗಬೇಕು ಎಂದು ಪಟ್ಟು ಹಿಡಿದಿದ್ದಾರೆ. ಏನಿದು ಬಿಗ್ ಬಾಸ್, ನ್ಯಾಯ ಕೊಡಿಸ್ತಿನಿ ಅಂದ್ರಿ, ಎಲ್ಲಿದೆ ನ್ಯಾಯ? ನಾವು ಇಂಥವರ ಕಡೆಯಿಂದ ಸೆಡೆ ನನ್ನ ಮಕ್ಕಳು ಅನಿಸಿಕೊಳ್ಳಬೇಕಾ? ರೂಲ್ ಬುಕ್‌ನಲ್ಲಿ ಏನಿದೆ? ಎಂದು ಬೇಸರದಿಂದಲೇ ಅಳುತ್ತ ಕೂತರು.