‘5 ಕೋಟಿ ಕೊಟ್ಟರೆ ಜೀವಂತವಾಗಿರ್ತೀಯಾ, ಇಲ್ಲದಿದ್ದರೆ ಬಾಬಾ ಸಿದ್ಧಿಕಿಗಿಂತ ಕೆಟ್ಟದಾಗಿ ಸಾಯ್ತಿಯಾ!’ ಸಲ್ಮಾನ್ ಖಾನ್‌ಗೆ ಮತ್ತೆ ಜೀವ ಬೆದರಿಕೆ
Oct 18, 2024 10:37 AM IST
ಸಲ್ಮಾನ್ ಖಾನ್‌ಗೆ ಮತ್ತೆ ಜೀವ ಬೆದರಿಕೆ
- Salman Khan Gets Death Threat: ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಮತ್ತೊಂದು ಜೀವ ಬೆದರಿಕೆ ಸಂದೇಶ ಬಂದಿದೆ. ನೇರವಾಗಿ 5 ಕೋಟಿ ಹಣಕ್ಕೆ ಡಿಮಾಂಡ್ ಮಾಡಿರುವ ಆಗಂತುಕರು, ಈ ಬೆದರಿಕೆಯನ್ನು ಅಷ್ಟು ಲಘುವಾಗಿ ಪರಿಗಣಿಸಬೇಡಿ ಎಂದೂ ಹೇಳಿದ್ದಾರೆ.
Salman Khan Gets Death Threat: ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗುತ್ತಿದೆ. ಆಪ್ತ ಬಾಬಾ ಸಿದ್ಧಿಕಿಯನ್ನು ಕಳೆದುಕೊಂಡು ನೋವಿನಲ್ಲಿರುವ ಸಲ್ಮಾನ್ ಖಾನ್‌ಗೆ ಇದೀಗ ಮತ್ತೊಂದು ಜೀವ ಬೆದರಿಕೆ ಕರೆ ಬಂದಿದೆ. ಮುಂಬೈ ಟ್ರಾಫಿಕ್ ಪೊಲೀಸರ ವಾಟ್ಸಾಪ್ ಸಂಖ್ಯೆಗೆ ಬೆದರಿಕೆ ಸಂದೇಶ ಬಂದಿದೆ. ಅದರಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಹಂತಕರು ₹5 ಕೋಟಿಗೆ ಬೇಡಿಕೆಯಿಟ್ಟಿದ್ದಾರೆ ಎಂದು ಮುಂಬೈ ಪೊಲೀಸರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
“ಈ ಬೆದರಿಕೆಯನ್ನು ಅಷ್ಟು ಲಘುವಾಗಿ ಪರಿಗಣಿಸಬೇಡಿ. ಸಲ್ಮಾನ್ ಖಾನ್ ಜೀವಂತವಾಗಿರಲು ಬಯಸಿದರೆ ಮತ್ತು ಲಾರೆನ್ಸ್ ಬಿಷ್ಣೋಯ್ ಅವರೊಂದಿಗಿನ ದ್ವೇಷವನ್ನು ಕೊನೆಗೊಳಿಸಲು ಬಯಸಿದರೆ, ಸಲ್ಮಾನ್ ಖಾನ್ ಈ ಕೂಡಲೇ 5 ಕೋಟಿ ರೂಪಾಯಿ ಪಾವತಿಸಬೇಕಾಗುತ್ತದೆ. ಹಣ ನೀಡದಿದ್ದರೆ ಸಲ್ಮಾನ್ ಖಾನ್ ಸ್ಥಿತಿ ಬಾಬಾ ಸಿದ್ದಿಕ್ ಗಿಂತ ಕೆಟ್ಟದಾಗಿರುತ್ತದೆ ಎಂದು ಬೆದರಿಕೆವೊಡಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ. ಈ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ (66) ಅವರನ್ನು ಅಕ್ಟೋಬರ್ 12 ರಂದು ಮುಂಬೈನ ಬಾಂದ್ರಾದಲ್ಲಿರುವ ಅವರ ಪುತ್ರ ಶಾಸಕ ಜೀಶನ್ ಸಿದ್ದಿಕ್ ಅವರ ಕಚೇರಿಯ ಹೊರಗೆ ಗುಂಡಿಕ್ಕಿ ಕೊಲ್ಲಲಾಯಿತು. ಈ ಹತ್ಯೆ ರಾಷ್ಟ್ರವ್ಯಾಪಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುವುದರ ಜತೆಗೆ ಭಯದ ವಾತಾವರಣ ಸೃಷ್ಟಿಸಿತು. ಇಲ್ಲಿಯವರೆಗೂ ಬಾಬಾ ಸಿದ್ಧೀಕಿ ಹತ್ಯೆಗೆ ಸಂಬಂಧಿಸಿದಂತೆ, ಹರ್ಯಾಣ ನಿವಾಸಿ ಗುರ್ಮೈಲ್ ಬಲ್ಜಿತ್ ಸಿಂಗ್ (23), ಉತ್ತರ ಪ್ರದೇಶ ಮೂಲದ ಧರ್ಮರಾಜ್ ರಾಜೇಶ್ ಕಶ್ಯಪ್ (19) ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಯೋಜಿತ ದಾಳಿಯನ್ನು ಸಂಘಟಿಸಲು ಬಂಧಿತ ಗುರ್ಮೈಲ್ ಬಲ್ಜಿತ್ ಸಿಂಗ್ ಪಾಕಿಸ್ತಾನಿ ಮೂಲದ ವ್ಯಕ್ತಿ ಜತೆಗೆ ನೇರ ಸಂಪರ್ಕದಲ್ಲಿದ್ದರು ಎಂದೂ ತಿಳಿದುಬಂದಿದೆ. ಸಂಚು ರೂಪಿಸಲು ಪಾಕಿಸ್ತಾನದಿಂದ ಕಳ್ಳಸಾಗಣೆಯಾದ AK-47, M16 ಮತ್ತು AK-92 ಸೇರಿದಂತೆ ಇನ್ನೂ ಹಲವು ಗನ್‌ಗಳನ್ನು ಬಳಸಲು ಗ್ಯಾಂಗ್ ಉದ್ದೇಶಿಸಿತ್ತು ಎಂಬ ವಿಚಾರ ಪೊಲೀಸ್ ತನಿಖೆಯಿಂದ ಹೊರಬಿದ್ದಿದೆ.
ಬಿಷ್ಣೋಯಿ ಗ್ಯಾಂಗ್‌ಗೆ ಸಲ್ಮಾನ್ ಮಾಜಿ ಪ್ರೇಯಸಿ ಸೋಮಿ ಮನವಿ
"ಯಾರೊಬ್ಬರನ್ನೂ ಕೊಲ್ಲುವುದು ಸರಿಯಲ್ಲ. ಅದು ಸಲ್ಮಾನ್ ಖಾನ್ ಆಗಿರಲಿ, ಸಾಮಾನ್ಯ ವ್ಯಕ್ತಿಯಾಗಿರಲಿ. ನ್ಯಾಯ ಬೇಕಾದರೆ ನ್ಯಾಯಾಲಯದ ಮೊರೆ ಹೋಗಬೇಕು. ನನಗೆ ಅಮೆರಿಕದಂತೆ ಭಾರತದ ನ್ಯಾಯಾಂಗ ವ್ಯವಸ್ಥೆ ಮತ್ತು ವಕೀಲರ ಮೇಲೆ ಸಂಪೂರ್ಣ ನಂಬಿಕೆ ಇದೆ. ಸಲ್ಮಾನ್ ಖಾನ್‌ಗೆ ಹಾನಿ ಮಾಡುವುದರಿಂದ ಮೃತಪಟ್ಟ ಕೃಷ್ಣ ಮೃಗ ಮರಳಿ ಬರುವುದಿಲ್ಲ. ದಯವಿಟ್ಟು ಕ್ಷಮಿಸಿ. ಆಗಿರುವುದು ಆಗಿದೆ, ಎಂದು ಬಿಷ್ಣೋಯ್ ಸಮುದಾಯಕ್ಕೆ ನಾನು ಮನವಿ ಮಾಡಲು ಬಯಸುವೆ" ಎಂದು ಸೋಮಿ ಅಲಿ ಹೇಳಿದ್ದರು.