ಅಕ್ರಮ ಹಣ ವರ್ಗಾವಣೆ ಕೇಸ್‌ನಲ್ಲಿ ಸಿಲುಕಿದ್ರಾ ತಮನ್ನಾ ಭಾಟಿಯಾ? ಸುದೀರ್ಘ 8 ಗಂಟೆಗಳ ಕಾಲ ವಿಚಾರಣೆ ನಡೆಸಿದ ಜಾರಿ ನಿರ್ದೇಶನಾಲಯ
ಅಕ್ರಮ ಹಣ ವರ್ಗಾವಣೆ ಪ್ರಕರಣದ ವಿಚಾರಣೆಗೆ ನಟಿ ತಮನ್ನಾ ಭಾಟಿಯಾ ಗುರುವಾರ ಹಾಜರಾಗಿದ್ದರು. ಎಚ್‌ಪಿಝೆಡ್ ಟೋಕನ್ ಮೊಬೈಲ್ ಅಪ್ಲಿಕೇಶನ್‌ಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನಟಿ ತಮನ್ನಾಗೆ ಸಮನ್ ನೀಡಿತ್ತು.
Tamannaah Bhatia questioned by ED: ಬಹುಭಾಷಾ ನಟಿ ತಮನ್ನಾ ಭಾಟಿಯಾ ಇದೀಗ ಜಾರಿ ನಿರ್ದೇಶನಾಲಯದ ವಿಚಾರಣೆಯಲ್ಲಿ ಭಾಗವಹಿಸಿದ್ದಾರೆ. HPZ ಟೋಕನ್ ಮೊಬೈಲ್ ಅಪ್ಲಿಕೇಶನ್‌ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ತನಿಖಾ ಸಂಸ್ಥೆ ನಟಿ ತಮನ್ನಾಗೆ ವಿಚಾರಣೆಗೆ ಆಗಮಿಸುವಂತೆ ಸಮನ್ಸ್ ನೀಡಿತ್ತು. ಅದರಂತೆ ಗುರುವಾರ (ಅ. 17) ಗುವಾಹಟಿಯ ಇಡಿ ಕಚೇರಿಗೆ ತಾಯಿಯ ಜತೆಗೆ ಆಗಮಿಸಿದ್ದರು. ಸುದೀರ್ಘ 8 ಗಂಟೆಗಳ ಕಾಲ ನಟಿಯನ್ನು ಇಡಿ ಪ್ರಶ್ನೆ ಮಾಡಿದೆ.
ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ನಟಿ ತಮನ್ನಾ ಭಾಟಿಯಾ ಅವರನ್ನು ಆರೋಪಿಯಾಗಿ ವಿಚಾರಣೆ ಮಾಡಲಾಗುತ್ತಿಲ್ಲ. ಬದಲಿಗೆ ಈ ಅಪ್ಲಿಕೇಶನ್ ಅನ್ನು ಪ್ರಚಾರ ಮಾಡಿದ್ದಕ್ಕಾಗಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಇಡಿ ಮೂಲಗಳು ತಿಳಿಸಿವೆ. ಈ ಆ್ಯಪ್ ಮೂಲಕ ಜನರಿಗೆ 57 ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ದಿನಕ್ಕೆ 4 ಸಾವಿರ ರೂಪಾಯಿ ನೀಡುವುದಾಗಿ ಹೇಳಿ ಕೋಟ್ಯಂತರ ರೂಪಾಯಿ ವಂಚನೆ ಮಾಡಲಾಗಿತ್ತು ಎಂಬ ಆರೋಪ ಇದೆ.
ಈ ರೀತಿ ಜನರಿಗೆ ವಂಚಿಸಲು, ಶೆಲ್ ಕಂಪನಿಗಳ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ನಕಲಿ ಖಾತೆಗಳನ್ನು ತೆರೆಯಲಾಗಿದ್ದು, ಅದರಲ್ಲಿ ಹೂಡಿಕೆದಾರರಿಂದ ಹಣವನ್ನು ವರ್ಗಾಯಿಸಲಾಗಿದೆ. ಆರೋಪಿಗಳು ಈ ಹಣವನ್ನು ಕ್ರಿಪ್ಟೋ ಮತ್ತು ಬಿಟ್‌ಕಾಯಿನ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದೂ ಇಡಿ ಮಾಹಿತಿ ನೀಡಿದೆ. ಈ ಪ್ರಕರಣದಲ್ಲಿ ಇಡಿ ಇದುವರೆಗೆ 497.20 ಕೋಟಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಯನ್ನು ಜಪ್ತಿ ಮಾಡಿದೆ. ಮಹದೇವ್ ಆ್ಯಪ್ ಹಗರಣಕ್ಕೂ ಈ ಕೇಸ್ ತಳುಕು ಹಾಕಿಕೊಂಡಿದೆ.
'ತಮನ್ನಾ ವಿರುದ್ಧ ಕ್ರಿಮಿನಲ್ ಅಪರಾಧವಿಲ್ಲ'
ಇಲ್ಲಿನ ಪ್ರಾದೇಶಿಕ ಕಚೇರಿಯಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ನಟಿ ತಮನ್ನಾ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ಆ್ಯಪ್ ಕಂಪನಿಯ ಕಾರ್ಯಕ್ರಮವೊಂದರಲ್ಲಿ ಸೆಲೆಬ್ರಿಟಿಯಾಗಿ ಭಾಗವಹಿಸಿದ್ದಕ್ಕಾಗಿ ತಮನ್ನಾ ಭಾಟಿಯಾ ಸಂಭಾವನೆ ರೂಪದಲ್ಲಿ ಸ್ವಲ್ಪ ಹಣವನ್ನು ಪಡೆದಿದ್ದಾರೆ ಮತ್ತು ಅವರ ವಿರುದ್ಧ ಯಾವುದೇ ಕ್ರಿಮಿನಲ್ ಆರೋಪಗಳಿಲ್ಲ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆಯೂ ವಿಚಾರಣೆಗೆ ಹಾಜರ್
ಏಪ್ರಿಲ್‌ನಲ್ಲಿ ತಮನ್ನಾ ಭಾಟಿಯಾ ಇಂಥಹದ್ದೇ ಪ್ರಕರಣದಲ್ಲಿ ಸಿಲುಕಿದ್ದರು. ಅದು ಕೂಡ ಬೆಟ್ಟಿಂಗ್ ಆಪ್‌ಗೆ ಸಂಬಂಧಿಸಿದ ವಿಷಯವಾಗಿತ್ತು. ಆ ಸಂದರ್ಭದಲ್ಲೂ ತಮನ್ನಾ ಮಹಾದೇವ್ ಬೆಟ್ಟಿಂಗ್ ಆ್ಯಪ್ ಅಂಗ ಸಂಸ್ಥೆ ಫೇರ್‌ಪ್ಲೇ ಪ್ರಚಾರ ಮಾಡುತ್ತಿದ್ದರಂತೆ. ಈ ಫೇರ್‌ಪ್ಲೇ ಅಪ್ಲಿಕೇಶನ್ ಯಾವುದೇ ಪೂರ್ವಾನುಮತಿ ಇಲ್ಲದೆ ಐಪಿಎಲ್ ಪಂದ್ಯಗಳನ್ನು ನೇರವಾಗಿ ತನ್ನ ಆ್ಯಪ್‌ನಲ್ಲಿ ಪ್ಲೇ ಮಾಡಿತ್ತು. ಇದರಿಂದ ಅಧಿಕೃತ ಪ್ರಸಾರಕ ಸಂಸ್ಥೆ ವಯಾಕಾಮ್ 18 ಕೋಟ್ಯಂತರ ನಷ್ಟ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಈ ಆ್ಯಪ್ ಪ್ರಚಾರ ಮಾಡಿದ ಆರೋಪದ ಮೇಲೆ ನಟಿಗೆ ಮಹಾರಾಷ್ಟ್ರ ಸೈಬರ್ ಸೆಲ್ ಸಮನ್ಸ್ ನೀಡಿ ವಿಚಾರಣೆ ನಡೆಸಿತ್ತು.