ದೇವರ ರಿಲೀಸ್ ದಿನವೇ ಒಟಿಟಿಯಲ್ಲಿ ಸ್ಟ್ರೀಮ್ ಆಗ್ತಿದೆ ಜಾಹ್ನವಿ ಕಪೂರ್ ಅಭಿನಯದ ಸ್ಪೈ ಥ್ರಿಲ್ಲರ್ ಸಿನಿಮಾ ಉಲ್ಜಾ ಸಿನಿಮಾ
Sep 27, 2024 02:07 PM IST
ದೇವರ ರಿಲೀಸ್ ದಿನವೇ ಒಟಿಟಿಯಲ್ಲಿ ಸ್ಟ್ರೀಮ್ ಆಗ್ತಿದೆ ಜಾಹ್ನವಿ ಕಪೂರ್ ಅಭಿನಯದ ಸ್ಪೈ ಥ್ರಿಲ್ಲರ್ ಸಿನಿಮಾ ಉಲ್ಜಾ ಸಿನಿಮಾ
ಜಾಹ್ನವಿ ಕಪೂರ್ ನಾಯಕಿಯಾಗಿ ನಟಿಸಿರುವ ಬಾಲಿವುಡ್ ಸ್ಪೈ ಥ್ರಿಲ್ಲರ್ ಚಿತ್ರ ಉಲ್ಜಾ ಶುಕ್ರವಾರ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಉಲ್ಜಾ ಚಿತ್ರದಲ್ಲಿ ಗುಲ್ಶನ್ ದೇವಯ್ಯ ಮತ್ತು ರೋಷನ್ ಮ್ಯಾಥ್ಯೂ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಚಿತ್ರ ಥಿಯೇಟರ್‌ಗಳಲ್ಲಿ ಫ್ಲಾಪ್ ಆಗಿತ್ತು.
ಜ್ಯೂನಿಯರ್ ಎನ್‌ಟಿಆರ್‌ಗೆ ಜಾಹ್ನವಿ ಕಪೂರ್ ನಾಯಕಿಯಾಗಿ ನಟಿಸಿರುವ ದೇವರ ಸಿನಿಮಾ ಚಿತ್ರಮಂದಿರಗಳಲ್ಲಿ ಸದ್ದು ಮಾಡುತ್ತಿದೆ. ಇಂದೇ ಜಾಹ್ನವಿ ಕಪೂರ್ ಅಭಿನಯದ ಬಾಲಿವುಡ್ ಸಿನಿಮಾ ಉಲ್ಜಾ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಈ ಸ್ಪೈ ಥ್ರಿಲ್ಲರ್ ಸಿನಿಮಾದ ಹಿಂದಿ ವರ್ಷನ್ ಮಾತ್ರ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ. ಉಲ್ಜಾ ಚಿತ್ರವನ್ನು ಸುದಾಂಶು ಸರಿಯಾ ನಿರ್ದೇಶಿಸಿದ್ದಾರೆ.
ಚಿತ್ರರಂಗದಲ್ಲಿ ಫ್ಲಾಪ್ ಆಗಿದ್ದ ಉಲ್ಜಾ
ಉಲ್ಜಾ ಚಿತ್ರದಲ್ಲಿ ಜಾಹ್ನವಿ ಕಪೂರ್ ಜೊತೆಗೆ ಗುಲ್ಶನ್ ದೇವಯ್ಯ, ರೋಷನ್ ಮ್ಯಾಥ್ಯೂ ಮತ್ತು ಆದಿಲ್ ಹುಸೇನ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇದೇ ವರ್ಷ ಆಗಸ್ಟ್ 2 ರಂದು ಸಿನಿಮಾ ರಿಲೀಸ್ ಆಗಿತ್ತು. ಬಿಡುಗಡೆಗೂ ಮುನ್ನವೇ ಟೀಸರ್ ಹಾಗೂ ಟ್ರೇಲರ್‌ಗಳ ಮೂಲಕ ಬಾಲಿವುಡ್ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದ ಸಿನಿಮಾ ಚಿತ್ರಮಂದಿರದಲ್ಲಿ ಫ್ಲಾಪ್ ಆಗಿತ್ತು.
ಉಲ್ಜಾ, ಚಿತ್ರಮಂದಿರದಲ್ಲಿ ರಿಲೀಸ್ ಆದ ನಂತರ ತನ್ನ ಬಜೆಟ್‌ನ ಅರ್ಧದಷ್ಟು ಗಳಿಸಲು ಕೂಡಾ ವಿಫಲವಾಯಿತು. ಸುಮಾರು 35 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾ 10 ಕೋಟಿಯವರೆಗೂ ಕಲೆಕ್ಷನ್ ಮಾಡಿದೆ. ಇದರಿಂದ ನಿರ್ಮಾಪಕರಿಗೆ ಇಪ್ಪತ್ತೈದು ಕೋಟಿಗೂ ಹೆಚ್ಚು ನಷ್ಟವಾಗಿದೆ. ಉಲ್ಜಾ ಚಿತ್ರದ ಪರಿಕಲ್ಪನೆ ಮತ್ತು ನಿರ್ದೇಶಕ ಸುಧಾಂಶು ಅವರ ಮೇಕಿಂಗ್ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿತ್ತು. ಪತ್ತೇದಾರಿ ಕಥೆಯನ್ನು ತೆರೆ ಮೇಲೆ ರೋಮಾಂಚನಕಾರಿಯಾಗಿ ತೋರಿಸುವಲ್ಲಿ ನಿರ್ದೇಶಕರು ವಿಫಲರಾಗಿದ್ದಾರೆ. ತೆರೆ ಮೇಲೆ ಯಾವಾಗ ಯಾವ ಪಾತ್ರ ಕಾಣಿಸಿಕೊಳ್ಳುತ್ತದೆ, ಏನು ನಡೆಯುತ್ತಿದೆ ಎಂದು ಅರ್ಥವಾಗದೆ ಇರುವ ಸಿನಿಮಾ ಇದು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಉಲ್ಜಾ ಕಥೆ ಏನು?
ವನರಾಜ್ (ಆದಿಲ್ ಹುಸೇನ್) ವಿಶ್ವಸಂಸ್ಥೆಯ ಖಾಯಂ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಅವರು ವಿದೇಶಾಂಗ ವ್ಯವಹಾರಗಳಲ್ಲಿ ಬಹಳ ಖ್ಯಾತಿ ಪಡೆದಿರುತ್ತಾರೆ. ವನರಾಜ್ ಅವರ ಮಗಳು ಸುಹಾನಾ (ಜಾಹ್ನವಿ ಕಪೂರ್) ಭಾರತೀಯ ವಿದೇಶಾಂಗ ಸೇವೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಯುಕೆಯಲ್ಲಿ ಭಾರತೀಯ ಹೈಕಮಿಷನರ್ ಆಗಿ ಕೆಲಸಕ್ಕೆ ಸೇರುತ್ತಾಳೆ. ಆಕೆಯ ತಂಡದಲ್ಲಿ ಕೆಲಸ ಮಾಡುವ ಸೆಬೀನ್ ಕುಟ್ಟಿ (ರೋಶನ್ ಮ್ಯಾಥ್ಯೂ) ಮತ್ತು ಜಾಕೋಬ್ ತಮಾಂಗ್, ಸುಹಾನಾ ತನ್ನ ತಂದೆಯ ಹೆಸರು ಬಳಸಿಕೊಂಡು ಕೆಲಸ ಪಡೆದಿದ್ದಾಳೆ ಎಂದು ತಪ್ಪು ತಿಳಿಯುತ್ತಾರೆ.
ಸುಹಾನಾಗೆ ನಕುಲ್ (ಗುಲ್ಶನ್ ದೇವಯ್ಯ) ದೇಶದ ರಹಸ್ಯಗಳನ್ನು ಹಸ್ತಾಂತರಿಸುವಂತೆ ಕೇಳುವ ವೀಡಿಯೊವನ್ನು ತೋರಿಸಿ ಅವಳನ್ನು ಬ್ಲಾಕ್ ಮೇಲ್ ಮಾಡಲು ಪ್ರಾರಂಭಿಸುತ್ತಾನೆ. ಹಾಗಾದರೆ ಆ ವಿಡಿಯೋದಲ್ಲಿ ಏನಿದೆ? ಸುಹಾನಾ ತಂದೆಯ ಪ್ರತಿಷ್ಠೆಗೆ ಧಕ್ಕೆಯಾಗುವುದು ಏನು? ನಕುಲ್ ವಿರುದ್ಧ ಸುಹಾನಾ ಹೇಗೆ ಹೋರಾಡುತ್ತಾಳೆ ಎಂಬುದು ಈ ಸಿನಿಮಾ ಕಥೆ.
ಮೊದಲ ಟಾಲಿವುಡ್ ಸಿನಿಮಾ
ಜಾಹ್ನವಿ ಕಪೂರ್ ದೇವರ ಚಿತ್ರದ ಮೂಲಕ ಮೊದಲ ಬಾರಿ ಟಾಲಿವುಡ್ ಎಂಟ್ರಿ ಕೊಟಿದ್ದಾರೆ. ಈ ಸಿನಿಮಾ ನಂತರ ರಾಮ್ ಚರಣ್ ಜೊತೆ ಮತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರಕ್ಕೆ ಮುಹೂರ್ತ ಕೂಡಾ ನೆರವೇರಿದೆ. ಅಮ್ಮ ಶ್ರೀದೇವಿಯಂತೆ ಜಾನ್ವಿ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಾರಾ ಕಾದು ನೋಡಬೇಕು.