ಹೊತ್ತಿ ಉರಿದ ದೇವರ ಸಿನಿಮಾ ಜ್ಯೂನಿಯರ್ ಎನ್‌ಟಿಆರ್ ಕಟೌಟ್; ಪಟಾಕಿ ಸಿಡಿಸುವಾಗ ಅಭಿಮಾನಿಗಳಿಂದ ಆದ ಎಡವಟ್ಟೇ ಕಾರಣ - ವಿಡಿಯೋ
ಕೊರಟಾಲ ಶಿವ-ಜ್ಯೂ ಎನ್‌ಟಿಆರ್ ಕಾಂಬಿನೇಶನ್, ದೇವರ ಸಿನಿಮಾ ಇಂದು ತೆರೆ ಕಂಡಿದೆ. ಹೈದಾರಾಬಾದ್ ಸುದರ್ಶನ್ ಚಿತ್ರಮಂದಿರದ ಬಳಿ ಪಟಾಕಿ ಸಿಡಿಸುವಾಗ ಎನ್‌ಟಿಆರ್ ಕಟೌಟ್‌ಗೆ ಬೆಂಕಿ ಹೊತ್ತಿಕೊಂಡಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದು ಸಂಭ್ರಮಿಸುವಾಗ ಎಚ್ಚರದಿಂದ ಇರಿ ಎಂದು ನೆಟಿಜನ್ಸ್ ತಿಳಿ ಹೇಳುತ್ತಿದ್ದಾರೆ.
ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದ ದಿನ ಬಂದಿದೆ. ಜ್ಯೂನಿಯರ್ ಎನ್‌ಟಿಆರ್ ಅಭಿನಯದ ದೇವರ ಸಿನಿಮಾ ಇಂದು ತೆರೆ ಕಂಡಿದೆ. ಸಿನಿಮಾಗಳಲ್ಲಿ ಕೆಲವೊಂದು ನೆಗೆಟಿವ್ ಅಂಶಗಳಿದ್ದರೂ ಸಿನಿಮಾ ಮಾತ್ರ ಬ್ಲಾಕ್ ಬಸ್ಟರ್, ಮೊದಲ ದಿನವೇ 100 ಕೋಟಿ ಕಲೆಕ್ಷನ್ ಮಾಡಲಿದೆ ಎನ್ನಲಾಗುತ್ತಿದೆ. ತಾರಕ್ ನಟನೆಯೇ ಸಿನಿಮಾದ ಹೈಲೈಟ್ ಎಂದು ಅಭಿಮಾನಿಗಳು ಖುಷಿಯಾಗಿದ್ದಾರೆ.
ಹೈದಾರಾಬಾದ್ ಸುದರ್ಶನ ಚಿತ್ರಮಂದಿರದ ಬಳಿ ನಡೆದ ಘಟನೆ
ಸಿನಿಮಾ ರಿಲೀಸ್ ದಿನಾಂಕ ಅನೌನ್ಸ್ ಆದಾಗಿನಿಂದ ದೇವರ ಸಿನಿಮಾ ಸಾಕಷ್ಟು ಕ್ರೇಜ್ ಸೃಷ್ಟಿಸಿದೆ. ಅಭಿಮಾನಿಗಳು ಪಟಾಕಿ ಸಿಡಿಸಿ ಮೆಚ್ಚಿನ ನಟನ ಸಿನಿಮಾವನ್ನು ಬರ ಮಾಡಿಕೊಂಡಿದ್ದಾರೆ. ಆದರೆ ಪಟಾಕಿ ಸಿಡಿಸುವ ಬರದಲ್ಲಿ ಜ್ಯೂ ಎನ್‌ಟಿಆರ್ ಬೃಹತ್ ಕಟೌಟ್ ಹೊತ್ತಿ ಉರಿದಿದೆ. ಹೈದರಾಬಾದ್‌ನಲ್ಲಿ ಈ ಘಟನೆ ನಡೆದಿದೆ. ನಗರದ ಸುದರ್ಶನ್ ಚಿತ್ರಮಂದಿರದ ಬಳಿ ಎನ್‌ಟಿಆರ್ ದೊಡ್ಡ ಕಟೌಟ್ ಅಳವಡಿಸಲಾಗಿತ್ತು. ದೇವರ ಚಿತ್ರದ ಜ್ಯೂನಿಯರ್ ಎನ್‌ಟಿಆರ್ ಕಟೌಟ್‌ಗೆ ಹೂವಿನ ಹಾರಗಳನ್ನು ಹಾಕಲಾಗಿತ್ತು. ಸಿನಿಮಾ ಬಿಡುಗಡೆ ಆಗುತ್ತಿರುವ ಖುಷಿಗೆ ಇಂದು ಬೆಳಗ್ಗೆ ಅಭಿಮಾನಿಗಳು ಉದ್ದದ ಪಟಾಕಿ ಸರ ಸಿಡಿಸಿದ್ದಾರೆ. ಈ ಸಮಯದಲ್ಲಿ ಬೆಂಕಿ, ಹತ್ತಿರದಲ್ಲೇ ಇದ್ದ ಎನ್‌ಟಿಆರ್ ಕಟೌಟ್‌ಗೆ ತಗುಲಿದೆ.
ನೋಡ ನೋಡುತ್ತಿದ್ದಂತೆ ಎನ್‌ಟಿಆರ್ ಕಟೌಟ್ ಹೊತ್ತಿ ಉರಿದಿದೆ. ಅಭಿಮಾನಿಗಳು ಬೆಂಕಿಯನ್ನು ನಿಯಂತ್ರಿಸಲಾಗದೆ ಶಾಕ್‌ನಲ್ಲಿದ್ದರು. ಕೊನೆಗೆ ಥಿಯೇಟ್ ಸಿಬ್ಬಂದಿ ಹಾಗೂ ಸ್ಥಳೀಯರು ದೌಡಾಯಿಸಿ ಬಂದು ನೀರು ಹಾಕಿ ಬೆಂಕಿಯನ್ನು ನಂದಿಸಿ ಮುಂದಾಗಬಹುದಾದ ಅನಾಹುತ ತಪ್ಪಿಸಿದ್ದಾರೆ. ಎನ್‌ಟಿಆರ್ ಕಟೌಟ್ ಹೊತ್ತಿ ಉರಿಯುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಇದು ಕೆಲವರಿಗೆ ಬೇಸರ ಉಂಟು ಮಾಡಿದೆ. ಥಿಯೇಟರ್ ಮುಂದೆ ಈ ರೀತಿ ಪಟಾಕಿ ಸಿಡಿಸುವಾಗ ಬಹಳ ಎಚ್ಚರಿಕೆಯಿಂದ ಇರಿ ಎಂದು ತಿಳಿ ಹೇಳುತ್ತಿದ್ದಾರೆ.
ಎನ್‌ಟಿಆರ್ ಕಟೌಟ್‌ಗೆ ರಕ್ತದ ಅಭಿಷೇಕ
ದೇವರ, ಆರ್‌ಆರ್‌ಆರ್ ಸಿನಿಮಾ ನಂತರ ಬಿಡುಗಡೆ ಆಗುತ್ತಿರುವ ಜ್ಯೂನಿಯರ್ ಎನ್‌ಟಿಆರ್ ಸಿನಿಮಾ. ಆ ಸಿನಿಮಾ ನಂತರ ತಾರಕ್‌ಗೆ ಅಭಿಮಾನಿ ಬಳಗ ಇನ್ನಷ್ಟು ಹೆಚ್ಚಾಗಿದೆ. ಸಿನಿಮಾವನ್ನು ಅದ್ದೂರಿಯಾಗಿ ಸ್ವಾಗತಿಸಲು ಕೆಲವೆಡೆ ಬೃಹತ್ ಕಟೌಟ್‌ಗಳನ್ನು ನಿಲ್ಲಿಸಿ, ಸಿಹಿ ಹಂಚಿ, ಇನ್ನೂ ಕೆಲವೆಡೆ ಊಟದ ವ್ಯವಸ್ಥೆ ಮಾಡಿ ಸಂಭ್ರಮಿಸಿದ್ದಾರೆ. ಅನಂತಪುರ ಥಿಯೇಟರ್ ಒಂದರಲ್ಲಿ 50 ಅಡಿ ಎತ್ತರದ ಎನ್‌ಟಿಆರ್ ಬೃಹತ್ ದೇವರ ಸಿನಿಮಾ ಎನ್‌ಟಿಆರ್ ಲುಕ್ ಕಟ್ ಔಟ್ ಅಳವಡಿಸಲಾಗಿತ್ತು. ಕಟೌಟ್‌ಗೆ ತಾರಕ್ ಅಭಿಮಾನಿಗಳು ಹಾಲಿನ ಅಭಿಷೇಕ ಮಾತ್ರವಲ್ಲದೆ ರಕ್ತಾಭಿಷೇಕ ಕೂಡಾ ಮಾಡಿದ್ದಾರೆ. ದೇವರ ಸಿನಿಮಾ ಸೂಪರ್ ಹಿಟ್ ಆಗಬೇಕೆಂದು ಪ್ರಾರ್ಥಿಸಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳನ್ನು ಮಾಡುತ್ತಿದ್ದಾರೆ. ಅಭಿಮಾನಿಗಳು ಕಟೌಟ್ ಮೇಲೆ ಹತ್ತಿ ರಕ್ತದ ಅಭಿಷೇಕ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.