Tishaa Kumar Death: ಅನಿಮಲ್ ಸಿನಿಮಾ ನಿರ್ಮಾಪಕ ಕೃಷ್ಣಕುಮಾರ್ ಪುತ್ರಿ ತಿಶಾ ಕ್ಯಾನ್ಸರ್ ಕಾಯಿಲೆಯಿಂದ ನಿಧನ
Jul 19, 2024 06:18 PM IST
Tishaa Kumar Death: ಅನಿಮಲ್ ಸಿನಿಮಾ ನಿರ್ಮಾಪಕ ಕೃಷ್ಣಕುಮಾರ್ ಪುತ್ರಿ ತಿಶಾ ಕ್ಯಾನ್ಸರ್ ಕಾಯಿಲೆಯಿಂದ ನಿಧನ
- ಟಿ ಸಿರೀಸ್‌ನ ಸಹ ಮಾಲೀಕ ಕೃಷ್ಣ ಕುಮಾರ್ ಅವರ 20 ವರ್ಷದ ಪುತ್ರಿ ತಿಶಾ ಸಾವನ್ನಪ್ಪಿದ್ದಾರೆ. ದೀರ್ಘಕಾಲದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಿಷಾ, ಹೆಚ್ಚಿನ ಚಿಕಿತ್ಸೆಗೆ ಜರ್ಮನಿಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ವೇಳೆಯೇ ಅವರು ನಿಧನರಾಗಿದ್ದಾರೆ.
Tishaa Kumar Death: ಮಾರಕ ಕ್ಯಾನ್ಸರ್ ಮತ್ತೊಂದು ಜೀವವನ್ನು ಕಿತ್ತುಕೊಂಡಿದೆ. ಸ್ಯಾಂಡಲ್‌ವುಡ್‌ನಲ್ಲಿ ನಟಿ ಅಪರ್ಣಾ ಸಾವಿನ ನೋವು ಮಾಸುವ ಮುನ್ನವೇ, ಅಂಥ ಮತ್ತೊಂದು ಸುದ್ದಿ ಬಾಲಿವುಡ್ ಅಂಗಳದಿಂದ ಬಂದಿದೆ. ಟಿ-ಸೀರೀಸ್ ಸಹ ಮಾಲೀಕ ಕೃಷ್ಣ ಕುಮಾರ್ ಅವರ 20 ವರ್ಷದ ಪುತ್ರಿ ತಿಶಾ ಕುಮಾರ್, ಕ್ಯಾನ್ಸರ್‌ನಿಂದಾಗಿ ಸಾವನ್ನಪ್ಪಿದ್ದಾರೆ. ಈ ಸುದ್ದಿ ಇದೀಗ ಬಾಲಿವುಡ್ ಇಂಡಸ್ಟ್ರಿಯನ್ನು ಶಾಕ್‌ಗೆ ದೂಡಿದ್ದು, ಚಿಕ್ಕ ವಯಸ್ಸಿನಲ್ಲೇ ಮಗಳನ್ನು ಕಳೆದುಕೊಂಡ ಕೃಷ್ಣ ಕುಮಾರ್ ಕಣ್ಣೀರಾಗಿದ್ದಾರೆ. ಆಪ್ತಬಳಗದಿಂದ ಮತ್ತು ಸೋಷಿಯಲ್ ಮೀಡಿಯಾದಲ್ಲಿಯೂ ತಿಶಾ ಅವರ ಸಾವಿಗೆ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.
ಟಿ-ಸೀರಿಸ್ ಸಂಸ್ಥೆ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ತಾಣದಲ್ಲಿ ತಿಶಾ ಸಾವಿನ ಸುದ್ದಿಯನ್ನು ಹಂಚಿಕೊಂಡಿದೆ. ಅಧಿಕೃತ ಹೇಳಿಕೆಯನ್ನೂ ಬಿಡುಗಡೆ ಮಾಡಿದೆ. ದೀರ್ಘಕಾಲದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕೃಷ್ಣ ಕುಮಾರ್ ಅವರ ಪುತ್ರಿ ತಿಶಾ ಕುಮಾರ್ ನಿನ್ನೆ ನಿಧನರಾದರು. ಇಡೀ ಕುಟುಂಬಕ್ಕೆ ಇದು ತುಂಬಾ ಕಷ್ಟದ ಸಮಯ. ಈ ಸಮಯದಲ್ಲಿ ನೀವು ಕುಟುಂಬದ ಖಾಸಗಿತನವನ್ನು ಗೌರವಿಸುತ್ತೀರಿ ಎಂದು ನಾವು ಭಾವಿಸುತ್ತೇವೆ" ಎಂದು ಪೋಸ್ಟ್ ಮಾಡಲಾಗಿದೆ.
ತಿಶಾಗೆ ಜರ್ಮನಿಯಲ್ಲಿ ಚಿಕಿತ್ಸೆ
ಕಳೆದ ಕೆಲ ವರ್ಷಗಳಿಂದ ತಿಶಾ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ಮುಂಬೈನಲ್ಲಿ ಚಿಕಿತ್ಸೆ ನೀಡಿದ ನಂತರ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜರ್ಮನಿಗೆ ಕರೆದೊಯ್ಯಲಾಯಿತು. ಆದರೆ ಅಂತಿಮವಾಗಿ ಅವರನ್ನು ಉಳಿಸಲಾಗಲಿಲ್ಲ. ಕೃಷ್ಣ ಕುಮಾರ್ ಅವರ ಪುತ್ರಿ ತಿಶಾ ಗುರುವಾರ ಜರ್ಮನಿಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ತಿಶಾ ಸಾವನ್ನಪ್ಪಿರುವುದು ಆಪ್ತ ಬಳಗದಲ್ಲಿ ದುಃಖದ ಛಾಯೆ ಮೂಡಿದೆ.
ಅನಿಮಲ್ ಸ್ಕ್ರೀನಿಂಗ್‌ನಲ್ಲಿ ತಿಶಾ ಹಾಜರಿ
ಮುಂಬೈನಲ್ಲಿ ರಣಬೀರ್ ಕಪೂರ್, ಅನಿಲ್ ಕಪೂರ್ ಮತ್ತು ರಶ್ಮಿಕಾ ಅಭಿನಯದ 'ಅನಿಮಲ್' ಚಿತ್ರದ ವಿಶೇಷ ಪ್ರದರ್ಶನದಲ್ಲಿ ತಿಶಾ ಕೊನೆಯ ಬಾರಿಗೆ ಕಾಣಿಸಿಕೊಂಡರು. 2023ರ ನವೆಂಬರ್ 30ರಂದು, ತಿಶಾ ತನ್ನ ತಂದೆಯೊಂದಿಗೆ ಸಿನಿಮಾ ಪ್ರದರ್ಶನದ ವೇಳೆ ಹಾಜರಿದ್ದರು. ಅದಾದ ಮೇಲೆ ಮತ್ಯಾವತ್ತೂ ಸಾರ್ವಜನಿಕವಾಗಿ ಅವರು ಕಾಣಿಸಿಕೊಂಡಿರಲಿಲ್ಲ.
ಕೃಷ್ಣ ಕುಮಾರ್ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ
ಬಾಲಿವುಡ್‌ನ ಮ್ಯೂಸಿಕ್ ಕಂಪನಿಗಳಲ್ಲಿ ಟಿ-ಸಿರೀಸ್ ಸಹ ಒಂದು. ದಿವಂಗತ ಸಂಸ್ಥಾಪಕ ಮತ್ತು ಸಿನಿಮಾ ನಿರ್ಮಾಪಕ ಗುಲ್ಶನ್ ಕುಮಾರ್ ಅವರ ಕಿರಿಯ ಸಹೋದರ ಈ ಕೃಷ್ಣಕುಮಾರ್. 90ರ ದಶಕದಲ್ಲಿ ಕೃಷ್ಣಕುಮಾರ್ ಸಿನಿಮಾಗಳಲ್ಲಿ ನಟನೆಯ ಮೂಲಕವೂ ತಮ್ಮ ಪ್ರತಿಭೆ ತೋರಿಸಿದ್ದರು. 1995ರಲ್ಲಿ 'ಬೇವಾಫಾ ಸನಮ್' ಸಿನಿಮಾದಲ್ಲಿ ಶಿಲ್ಪಾ ಶಿರೋಡ್ಕರ್, ಅರುಣಾ ಇರಾನಿ ಮತ್ತು ಶಕ್ತಿ ಕಪೂರ್ ಅವರಂತಹ ತಾರೆಗಳೊಂದಿಗೆ ಕೃಷ್ಣ ಕುಮಾರ್ ಅವರು ನಟಿಸಿದ್ದರು. ಹಲವು ಚಿತ್ರಗಳಲ್ಲಿ ಕೆಲಸ ಮಾಡಿದರೂ ವಿಶೇಷ ಮನ್ನಣೆ ಸಿಕ್ಕಿರಲಿಲ್ಲ. ನಟನೆಯಲ್ಲಿ ಯಶಸ್ಸಿನ ಮುಖ ನೋಡದೇ ಇದ್ದಾಗ ಅದರಿಂದ ದೂರವಾದರು. ಸದ್ಯ ಕೃಷ್ಣ ಕುಮಾರ್ ಟಿ ಸಿರೀಸ್ ಕಂಪನಿಯ ಸಹ-ಮಾಲೀಕರಾಗಿದ್ದಾರೆ.