ಗರ್ಲ್ಸ್ ವಿಲ್ ಬಿ ಗರ್ಲ್ಸ್ ಪ್ರತಿಯೊಬ್ಬ ಹೆಣ್ಣು ಮಗಳು ನೋಡಲೇಬೇಕಾದ ಸಿನಿಮಾ; ಯಾಕೆ ಅನ್ನೋದಿಕ್ಕೆ ಕಾರಣಗಳಿವು
Dec 20, 2024 09:48 AM IST
ಗರ್ಲ್ಸ್ ವಿಲ್ ಬಿ ಗರ್ಲ್ಸ್ ಸಿನಿಮಾವನ್ನು ಪ್ರತಿಯೊಬ್ಬ ಹೆಣ್ಣು ಮಗಳ ನೋಡಲೇಬೇಕಾದ ಸಿನಿಮಾ. ಯಾಕೆ ಅನ್ನೋದನ್ನು ಹೇಳ್ತೀವಿ ನೋಡಿ.
- ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ 2024ರ ಡಿಸೆಂಬರ್ 18 ರಂದು ಗರ್ಲ್ಸ್ ವಿಲ್ ಬಿ ಗರ್ಲ್ಸ್ ಸಿನಿಮಾ ಬಿಡುಗಡೆಯಾಗಿದೆ. ತನ್ನ ಐಡೆಂಟಿಟಿ, ಲಿಂಗ ನಿರೀಕ್ಷೆಗಳು, ಹದಿಹರೆಯದ ಸಂಕೀರ್ಣತೆಯನ್ನು ಹೆಣ್ಣು ಮಗಳು ಹೇಗೆ ಎದುರಿಸುತ್ತಾಳೆ ಎಂಬುದನ್ನು ಸೂಕ್ಷ್ಮವಾಗಿ ಬಿಂಬಿಸಲಾಗಿದೆ. ಪ್ರತಿಯೊಬ್ಬ ಹೆಣ್ಣು ಮಗಳು ನೋಡಲೇಬೇಕಾದ ಸಿನಿಮಾ ಇದಾಗಿದೆ.
2024 ರಲ್ಲಿ ಸನ್‌ಡಾನ್ಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡ ಏಕೈಕ ಭಾರತೀಯ ಚಲನಚಿತ್ರವೆಂದರೆ ಚೊಚ್ಚಲ ನಿರ್ದೇಶಕಿ ಶುಚಿ ತಲಾಟಿ ಅವರ ಗರ್ಲ್ಸ್ ವಿಲ್ ಬಿ ಗರ್ಲ್ಸ್. ಇದು ತಾಯಿ-ಮಗಳ ಕಥೆಯಾಗಿದ್ದು, ವಿಶ್ವ ಸಿನೆಮಾ ಡ್ರಾಮಾಟಿಕ್ ಸ್ಪರ್ಧೆಯಲ್ಲಿ ಪ್ರಥಮ ಪ್ರದರ್ಶನ ಕಂಡಿತ್ತು. ಹದಿಹರೆಯದ ಹುಡುಗಿ ಮೀರಾ (ಪ್ರೀತಿ ಪಾಣಿಗ್ರಾಹಿ) ಬಗ್ಗೆ ಲೈಂಗಿಕ ಜಾಗೃತಿಯ ಸುಳಿಯಲ್ಲಿದ್ದಾಗ ಕೋಮಲ ಭಾವನೆಗಳು ಹೇಗೆ ಹೊರಹೊಮ್ಮುತ್ತವೆ ಎಂಬುದನ್ನು ಅಚ್ಚುಕಟ್ಟಾಗಿ ಹೇಳಲಾಗಿದೆ. ಆದರೆ ಬೆಳೆಯಲು ಖಚಿತವಾದ ಮಾರ್ಗವಿದೆಯೇ? ಇದಕ್ಕೆ ಸುಲಭವಾದ ಉತ್ತರಗಳಿಲ್ಲ. ಆತ್ಮವಿಶ್ವಾಸ ಮತ್ತು ಆಳವಾದ ಸಹಾನುಭೂತಿ ಹೊಂದಿರುವ ಗರ್ಲ್ಸ್ ವಿಲ್ ಬಿ ಗರ್ಲ್ಸ್ ಒಂದು ಉತ್ತಮವಾದ ಚಿತ್ರವಾಗಿದೆ. 2024ರ ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗಿದೆ. ಜೊತೆಗೆ ಪ್ರತಿಯೊಬ್ಬ ಹೆಣ್ಣು ಮಗಳು ಈ ಸಿನಿಮಾ ಏಕೆ ನೋಡಬೇಕು ಎಂಬುದಕ್ಕೆ ಕಾರಣಗಳನ್ನು ಇಲ್ಲಿ ನೀಡಲಾಗಿದೆ.
ನಟ ಅಲಿ ಫಜಲ್ ಮತ್ತು ರಿಚಾ ಚಡ್ಡಾ ಅವರ ಚೊಚ್ಚಲ ನಿರ್ಮಾಣ ಹಾಗೂ ಶುಚಿ ತಲಾಟಿ ಅವರ ಚೊಚ್ಚಲ ನಿರ್ದೇಶನದ ಗರ್ಲ್ಸ್ ವಿಲ್ ಬಿ ಗರ್ಲ್ಸ್ ಸಿನಿಮಾ 2024ರ ಡಿಸೆಂಬರ್ 18ರ ಬುಧವಾರ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಬಿಡುಗಡೆಯಾಗಿದೆ. ಪ್ರೀತಿ ಪಾಣಿಗ್ರಾಹಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಗರ್ಲ್ಸ್ ವಿಲ್ ಬಿ ಗರ್ಲ್ಸ್ ಸಿನಿಮಾದಲ್ಲಿ ಮೀರಾ (ಪ್ರೀತಿ ಪಾಣಿಗ್ರಾಹಿ) ಎಂಬ ಹೆಣ್ಣು ಮಗಳು ತನ್ನ ಐಡೆಂಟಿಟಿ, ಸ್ವಯಂ ಶೋಧನೆ ಹಾಗೂ ಲಿಂಗ ನಿರೀಕ್ಷೆಗಳ ಸಂಕೀರ್ಣತೆಗಳನ್ನು ಹೇಗೆ ಎದುರಿಸುತ್ತಾಳೆ, ಭಾವನಾತ್ಮಕ ಬೆಳವಣಿಗೆ ಹಾಗೂ ಸಾಮಾಜಿಕ ಒತ್ತಡಗಳೊಂದಿಗೆ ಹೇಗೆ ಸಾಗುತ್ತಾಳೆ ಎಂಬುದನ್ನು ತುಂಬಾ ಸೂಕ್ಷ್ಮವಾಗಿ ವಿವರಿಸಲಾಗಿದೆ.
ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಅಸೀಮ್ ಛಬ್ರಾ ಎಂಬುವರು ಸಿನಿಮಾ ಬಗ್ಗೆ ಪ್ರತಿಕ್ರಿಯಿಸಿ, ಗರ್ಲ್ಸ್ ವಿಲ್ ಬಿ ಗರ್ಲ್ಸ್ ಸಿನಿಮಾವನ್ನು 3 ಬಾರಿ ನೋಡಿದ್ದೇನೆ. ಶುಚಿ ತಲಾಟಿ ಅವರು ಸಿನಿಮಾವನ್ನು ಮುಕ್ತಾಯಗೊಳಿಸಿರುವ ರೀತಿ ತುಂಬಾ ಇಷ್ಟವಾಯಿತು. ಅಂತಿಮವಾಗಿ ಭಾರತೀಯ ಮನೆಗಳಲ್ಲಿ ಮಹಿಳೆಯರ ನಡುವಿನ ಸಂಬಂಧಗಳನ್ನು ತೋರಿಸುತ್ತೆ. ನಮ್ಮ ತಾಯಿ ಮತ್ತು ಆಕೆಯ ಅತ್ತಿಗೆ ನಡುವಿನ ಸಂಬಂಧ, ತಾಯಿ ಆಕೆಯ ಅತ್ತೆಯ ನಡುವಿನ ಸಂಬಂಧವನ್ನು ನೋಡಿದ್ದೇನೆ. ಇದು ತುಂಬಾ ಕಾಳಜಿ ಹಾಗೂ ಅತ್ಯಗತ್ಯಗಳನ್ನು ಕಂಡಿದ್ದೇವೆ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಬಹು ನಿರೀಕ್ಷಿತ ಗರ್ಲ್ಸ್ ವಿಲ್ ಬಿ ಗರ್ಲ್ಸ್ ಸಿನಿಮಾ ಬಿಡುಗಡೆಯಾಗಿದೆ. ಈ ಸಿನಿಮಾ ಕೊಟ್ಟ ಕಾಸಿಗೆ ಮೋಸವಿಲ್ಲ. ಹದಿಹರೆಯದ ಹೋರಾಟಗಳು, ಹದಿಹರೆಯದ ಜೀವನ ಹಾಗೂ ಸಂಕೀರ್ಣ ಸಂಬಂಧಗಳು ಹಾಗೂ ಮಾತನಾಡದ ಕನಸುಗಳ ಬಗ್ಗೆ ಅಚ್ಚುಕಟ್ಟಾಗಿ ವಿವರಿಸಲಾಗಿದೆ. ಸಿನಿಮಾ ಕಥೆ ನಿಮ್ಮಲ್ಲಿ ಎಂದಿಗೂ ಉಳಿಯುತ್ತದೆ ಎಂದು ಅಭಿ ಎಂಬ ನೆಟ್ಟಿಗರು ಸಿನಿಮಾ ಬಗ್ಗೆ ಕಾಮೆಂಟ್ ಮಾಡಿದ್ದಾರೆ.
ನಿರ್ದೇಶಕಿ ಶುಚಿ ತಲಾಟಿ ಅವರು ಗರ್ಲ್ಸ್ ವಿಲ್ ಬಿ ಗರ್ಲ್ಸ್ ಸಿನಿಮಾದಲ್ಲಿ ವೀಕ್ಷಕರು ಭಾವನಾತ್ಮಕವಾಗಿ ಪಾತ್ರಗಳೊಳಗೆ ಸೇರಿಕೊಳ್ಳುವಂತಹ ವಾತಾವರಣವನ್ನು ಸೃಷ್ಟಿಸಿದ್ದಾರೆ. ಜಿಹ್-ಇ ಪೆಂಗ್ ಅವರ ಛಾಯಾಗ್ರಹಣ, ವಿಶೇಷವಾಗಿ ಹಿಮಾಲಯದ ಹಿನ್ನೆಲೆ, ಸ್ವಾತಂತ್ರ್ಯ ಮತ್ತು ಬಂಧನ ಎರಡನ್ನೂ ಇದು ಪ್ರತಿಬಿಂಬಿಸುತ್ತದೆ. ಮೀರಾ ಅವರ ಭಾವನಾತ್ಮಕ ಪ್ರಯಾಣ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡಿದೆ. ಭಾರತ ಮಾತ್ರವಲ್ಲದೆ, ಜಗತ್ತಿನ ಎಲ್ಲೆಡೆ ಸಿನಿಮಾಗೆ ವಿಮರ್ಶಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ವಿಭಾಗ