ಪುಷ್ಪ 2 ಚಿತ್ರವನ್ನು ತಮ್ಮದೇ ಸ್ಟೈಲ್‌ನಲ್ಲಿ ವಿಮರ್ಶೆ ಮಾಡಿದ ಪ್ರಕಾಶ್ ರಾಜ್; ಅಲ್ಲು ಅರ್ಜುನ್ ಬಗ್ಗೆ ಏನಂದ್ರು?
Dec 07, 2024 07:59 AM IST
ಪುಷ್ಪ 2 ಚಿತ್ರವನ್ನು ವಿಮರ್ಶೆ ಮಾಡಿದ ಪ್ರಕಾಶ್ ರಾಜ್
- Prakash Raj tweet about Pushpa 2: ಅಲ್ಲು ಅರ್ಜುನ್ ನಟನೆಯ ಪುಷ್ಪ 2 ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಗಳಿಸಿದೆ. ಕಲೆಕ್ಷನ್ ವಿಚಾರದಲ್ಲಿಯೂ ಮೋಡಿ ಮಾಡುತ್ತಿದೆ. ಹೀಗಿರುವಾಗಲೇ ಇದೇ ಸಿನಿಮಾ ಬಗ್ಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಮಾತನಾಡಿದ್ದಾರೆ. ವಿಶೇಷ ಟ್ವಿಟ್ ಮಾಡಿ, ಶುಭಕೋರಿದ್ದಾರೆ.
Prakash Raj on Pushpa 2: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2’ ಬಿಡುಗಡೆಯ ದಿನ ಹೊಸದೊಂದು ದಾಖಲೆಯನ್ನು ಸೃಷ್ಟಿಸುತ್ತದೆ ಎಂದು ಮೊದಲೇ ಅಂದಾಜಿಸಲಾಗಿತ್ತು. ಏಕೆಂದರೆ, ಆ ಚಿತ್ರಕ್ಕಿದ್ದ ಕ್ರೇಜ್ ಅಂತಹದು. ಅದು ನಿಜವಾಗಿದೆ. ‘ಪುಷ್ಪ 2’ ಚಿತ್ರವು ಭಾರತೀಯ ಚಿತ್ರರಂಗದಲ್ಲಿದ್ದ ಹಿಂದಿನ ದಾಖಲೆಗಳನ್ನೆಲ್ಲಾ ಪುಡಿಪುಡಿ ಮಾಡಿ, ಮೊದಲ ದಿನ ಅತೀ ಹೆಚ್ಚು ಗಳಿಕೆ ಮಾಡಿದ ಮೊದಲ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಚಿತ್ರತಂಡದವರೇ ಘೋಷಿಸಿಕೊಂಡಂತೆ ಚಿತ್ರ ಮೊದಲ ದಿನ ದಾಖಲೆಯ 294 ಕೋಟಿ ರೂ. ಗಳಿಕೆ ಮಾಡಿದೆ. ಈ ನಡುವೆ ಇದೇ ಚಿತ್ರವನ್ನು ಬಹುಭಾಷಾ ನಟ ಪ್ರಕಾಶ್ ರಾಜ್ ತಮ್ಮದೇ ಸ್ಟೈಲ್‌ನಲ್ಲಿ ವಿಮರ್ಶೆ ಮಾಡಿದ್ದಾರೆ.
ಕಲೆಕ್ಷನ್‌ನಲ್ಲಿ ಪುಷ್ಪ 2 ದಾಖಲೆ
ಪುಷ್ಪ 2 ಚಿತ್ರಕ್ಕೂ ಮೊದಲು ಭಾರತೀಯ ಚಿತ್ರರಂಗದಲ್ಲಿ ಮೊದಲ ದಿನ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರವೆಂದರೆ ಅದು, ರಾಜಮೌಳಿ ನಿರ್ದೇಶನದ ‘RRR’. ಈ ಚಿತ್ರ ಮೊದಲ ದಿನ ಭಾರತದಲ್ಲಿ 165 ಕೋಟಿ ರೂ. ಗಳಿಕೆ ಮಾಡಿತ್ತು. ಈಗ ಅಲ್ಲು ಅರ್ಜುನ್ ಅವರ ‘ಪುಷ್ಪ 2’ ಸಿನಿಮಾ, ಆ ದಾಖಲೆಯನ್ನು ಪುಡಿಗಟ್ಟಿದೆ. ಭಾರತದ ಅತೀ ಹೆಚ್ಚು ಗಳಿಕೆ ಕಂಡ ಚಿತ್ರ ಎಂಬ ಇತಿಹಾಸ ಸೃಷ್ಟಿಸಿಕೊಂಡಿದೆ. ‘ಪುಷ್ಪ 2’ ಚಿತ್ರದ ಭಾರತದ ಗಳಿಕೆ ಒಟ್ಟು 175 ಕೋಟಿ. ಈ ಮೂಲಕ ಅಲ್ಲು ಅರ್ಜುನ್ ಕಲೆಕ್ಷನ್‌ನಲ್ಲಿ ಕಿಂಗ್ ಆಗಿ ಹೊರಹೊಮ್ಮಿದ್ದಾರೆ. ಹೀಗೆ ಎಲ್ಲೆಡೆಯಿಂದ ಪ್ರಶಂಸೆಯ ಸುರಿಮಳೆಯನ್ನೇ ಪಡೆದ ಇದೇ ಪುಷ್ಪರಾಜ್ ಬಗ್ಗೆ ಪ್ರಕಾಶ್ ರಾಜ್ ಮಾತನಾಡಿದ್ದಾರೆ.
'ಪುಷ್ಪ 2' ಚಿತ್ರ ಡಿಸೆಂಬರ್ 5 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಅದಕ್ಕೂ ಮುನ್ನ ಡಿಸೆಂಬರ್ 4ರಂದು ಹಲವೆಡೆ ಸಿನಿಮಾದ ಪ್ರೀಮಿಯರ್ ಶೋ ನಡೆದಿತ್ತು. ಪ್ರೀಮಿಯರ್ ಶೋದಿಂದಲೂ ಚಿತ್ರ ಕೋಟಿ ಕೋಟಿ ಕಲೆಕ್ಷನ್ ಮಾಡಿದೆ. ಮುಂಗಡ ಬುಕ್ಕಿಂಗ್‌ನಲ್ಲಿಯೂ ಧೂಳ್ ಎಬ್ಬಿಸಿದೆ. ಈ ನಡುವೆ ಚಿತ್ರೋದ್ಯಮದ ಆಪ್ತರೂ ಪುಷ್ಪ 2 ಸಿನಿಮಾ ವೀಕ್ಷಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಆ ಪೈಕಿ ಹಿರಿಯ ನಟ ಪ್ರಕಾಶ್ ರಾಜ್ ಸಹ ಸಿನಿಮಾ ವೀಕ್ಷಣೆ ಮಾಡಿ, ಪೋಸ್ಟ್ ಹಂಚಿಕೊಂಡಿದ್ದಾರೆ.
ಪ್ರಕಾಶ್ ರಾಜ್ ಹೇಳಿದ್ದೇನು?
ಅಲ್ಲು ಅರ್ಜುನ್ ಜತೆಗೆ ಸಾಕಷ್ಟು ಸಿನಿಮಾಗಳಲ್ಲಿ ಪ್ರಕಾಶ್ ರಾಜ್ ನಟಿಸಿದ್ದಾರೆ. ಅವರ ಬೆಳವಣಿಗೆಯನ್ನು ಹಂತ ಹಂತವಾಗಿ ನೋಡುತ್ತ ಬರುತ್ತಿದ್ದಾರೆ. ಇದೀಗ ಪುಷ್ಪ 2 ಚಿತ್ರದ ಮ್ಯಾಸಿವ್ ಸಕ್ಸಸ್ ಕಂಡು ಹಿರಿ ಹಿರಿ ಹಿಗ್ಗಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ಅವರು, 'ಗಂಗೋತ್ರಿಯಿಂದ ನಿಮ್ಮ ಪ್ರಯಾಣವನ್ನು ವೀಕ್ಷಿಸುತ್ತಿದ್ದೇನೆ. ಶಿಲ್ಪವನ್ನು ಕೆತ್ತಿದಂತೆ, ನಿಮ್ಮ ಪ್ರಯಾಣವು ಅದ್ಭುತವಾಗಿದೆ. ನಿಮ್ಮ ಬಗ್ಗೆ ನನಗೆ ಹೆಮ್ಮೆ ಇದೆ. ನೀವು ಯಾವಾಗಲೂ ನಿಮ್ಮ ನಟನೆಯಿಂದ ಎಲ್ಲೆಗಳನ್ನು ಮುರಿಯುತ್ತಲೇ ಇರುತ್ತೀರಿ. ಇಡೀ ಮೈತ್ರಿ ಮೂವಿ ಮೇಕರ್ಸ್ ತಂಡಕ್ಕೆ ಶುಭಾಶಯಗಳು." ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಪುಷ್ಪ 2 ನಿರ್ದೇಶಕ ಸುಕುಮಾರ್ ಅವರನ್ನೂ ಅಭಿನಂದಿಸಿದ್ದಾರೆ.
ಅಲ್ಲು ಅರ್ಜುನ್ ಜತೆ ಪ್ರಕಾಶ್ ರಾಜ್ ಸಿನಿಮಾಗಳು
ಅಲ್ಲು ಅರ್ಜುನ್ ಅಭಿನಯದ ಹಲವು ಸಿನಿಮಾಗಳಲ್ಲಿ ಪ್ರಕಾಶ್ ರಾಜ್ ಅಭಿನಯಿಸಿದ್ದಾರೆ. ಮೊದಲ ಚಿತ್ರ ಗಂಗೋತ್ರಿಯಿಂದ ಆರಂಭವಾಗಿ, ಬನ್ನಿ, ಪರುಗ, ಬದರಿನಾಥ್, ರೇಸ್ ಗುರ್ರಂ, ಸನ್ ಆಫ್ ಸತ್ಯಮೂರ್ತಿ, ರುದ್ರಮದೇವಿ ಚಿತ್ರಗಳಲ್ಲಿಯೂ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದೆ.