ಭಾರತದ ಮಾನ ಜಗತ್ತಿನ ನಾನಾ ದೇಶಗಳಲ್ಲಿ ತೆಗೆಯುವ ಡಾ ಬ್ರೋ ಥರದ ಯೂಟ್ಯೂಬ್ ಚಾನೆಲ್ ಬಗ್ಗೆ ಹೆಮ್ಮೆ ಪಡಬೇಕಾ? - ಶ್ರೀಹರ್ಷ ದ್ವಾರಕನಾಥ್ ಬರಹ
Oct 24, 2024 02:47 PM IST
ಯೂಟ್ಯೂಬರ್ ಡಾ. ಬ್ರೋ ನೀಡುತ್ತಿರುವ ಮಾಹಿತಿ ಸರಿ ಇದೆಯಾ? ನೈಜಿರಿಯಾದ ಅನಿವಾಸಿ ಭಾರತೀಯ ಹರ್ಷಾ ದ್ವಾರಕಾನಾಥ್ ಬರಹ
- Dr bro Kannada: ಯೂಟ್ಯೂಬ್‌ನಲ್ಲಿ ವಿದೇಶಗಳ ಆಚಾರ, ವಿಚಾರ, ಆಹಾರ, ಸಂಸ್ಕೃತಿಯನ್ನು ಕಣ್ಣಿಗೆ ಕಟ್ಟಿದಂತೆ ತೋರಿಸುತ್ತ ಬಂದಿದ್ದಾರೆ ಡಾ ಬ್ರೋ. ಸದ್ಯ ನೈಜಿರಿಯಾದಲ್ಲಿರುವ ಗಗನ್ ಶ್ರೀನಿವಾಸ್, ಅಲ್ಲಿನ ವಾಸ್ತವವನ್ನೂ ತೆರೆದಿಡುತ್ತಿದ್ದಾರೆ. ಈ ನಡುವೆ ಡಾ ಬ್ರೋ ಗಗನ್ ಕೊಡುತ್ತಿರುವ ಈ ಮಾಹಿತಿ ಎಷ್ಟರ ಮಟ್ಟಿಗೆ ಸರಿ ಎನ್ನವ ಪ್ರಶ್ನೆಯೂ ಉದ್ಭವಿಸಿದೆ.
Dr Bro Kannada Youtube: ಕನ್ನಡದ ಖ್ಯಾತ ಯೂಟ್ಯೂಬರ್ ಗಗನ್ ಶ್ರೀನಿವಾಸ್, ಡಾ. ಬ್ರೋ ಯೂಟ್ಯೂಬ್ ಮೂಲಕ ಇಡೀ ಕರುನಾಡಿನ ಮನೆ ಮನ ತಲುಪಿದ್ದಾರೆ. ಈಗಾಗಲೇ 20ಕ್ಕೂ ಅಧಿಕ ದೇಶಗಳನ್ನು ಸುತ್ತಿದ್ದಾರೆ. ಅಲ್ಲಿನ ಜನ ಜೀವನ, ಆಹಾರ ಪದ್ಧತಿ, ಸಂಸ್ಕೃತಿ, ಆಚಾರ ವಿಚಾರದ ಬಗ್ಗೆ ವಿಡಿಯೋ ಮೂಲಕ ಎಲ್ಲರಿಗೂ ತೋರಿಸಿದ್ದಾರೆ. ಸದ್ಯ ಇದೇ ಗಗನ್, ನೈಜಿರಿಯಾದಲ್ಲಿದ್ದಾರೆ. ಅಲ್ಲಿನ ವಿವಿಧ ಸ್ಥಳಗಳಿಗೆ ತೆರಳಿ, ವಿಡಿಯೋ ಶೇರ್ ಮಾಡುತ್ತಿದ್ದಾರೆ. ಹೀಗಿರುವಾಗಲೇ ನೈಜಿರಿಯಾ ಬಗ್ಗೆ ತಪ್ಪು ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ನೈಜಿರಿಯಾದಲ್ಲಿರುವ ಅನಿವಾಸಿ ಭಾರತೀಯ ಶ್ರೀಹರ್ಷ ದ್ವಾರಕನಾಥ್, HT ಕನ್ನಡಕ್ಕೆ ವಿಶೇಷ ಲೇಖನ ಕಳಿಸಿದ್ದಾರೆ. ಅದರ ವಿವರ ಇಲ್ಲಿದೆ.
ಡಾ. ಬ್ರೋ ಬಗ್ಗೆ ಶ್ರೀಹರ್ಷ ದ್ವಾರಕಾನಾಥ್ ಪ್ರತಿಕ್ರಿಯೆ
ಕನ್ನಡಿಗರಿಗೆ ನಮಸ್ಕಾರ. ನನ್ನ ಹೆಸರು ಶ್ರೀಹರ್ಷ. ಸದ್ಯಕ್ಕೆ ನೈಜೀರಿಯಾದಲ್ಲಿ ಭಾರತೀಯ ಮೂಲದವರು ನಡೆಸುತ್ತಿರುವ ಹೋಟೆಲ್‌ನ ಅಕೌಂಟ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಕಳೆದ ಎರಡೂಕಾಲು ವರ್ಷದಿಂದ ಈ ದೇಶದ ಲಾಗೋಸ್ ಎಂಬ ನಗರದಲ್ಲಿ ಇದ್ದೀನಿ. ಹೀಗೊಂದು ಲೇಖನ ಬರೆಯುತ್ತೇನೆ ಅಥವಾ ಬರೆಯಬೇಕಾಗಬಹುದು ಎಂಬುದನ್ನು ವಾರದ ಹಿಂದೆ ಕೂಡ ಅಂದುಕೊಂಡಿರಲಿಲ್ಲ. ಡಾಕ್ಟರ್ ಬ್ರೋ- ಗಗನ್ ಶ್ರೀನಿವಾಸ್ ಎಂಬ ಯೂಟ್ಯೂಬರ್ ಈ ದೇಶಕ್ಕೆ(ನೈಜೀರಿಯಾ) ಬಂದು, ನಾನು ಈಗಿರುವ ನಗರಕ್ಕೆ ಬಂದು ವಿಡಿಯೋಗಳನ್ನು ಹಾಕಿದ್ದನ್ನು ನೋಡಿದ ಮೇಲೆ ಇನ್ನು ಸುಮ್ಮನಿದ್ದರೆ ಆಗಲ್ಲ ಎಂದೆನಿಸಿದ್ದರಿಂದ ಈ ಲೇಖನ ಬರೆಯುತ್ತಾ ಇದ್ದೀನಿ.
ಭಾರತದಿಂದ ನೈಜಿರೀಯಾಗೆ ಬಂದ ವ್ಯಕ್ತಿ ಈ ದೇಶದ ಒಬ್ಬೇ ಒಬ್ಬ ಇತಿಹಾಸ ತಜ್ಞರನ್ನೋ, ಆರ್ಥಿಕ ತಜ್ಞರನ್ನೋ, ಇಲ್ಲಿನ ವಿಶ್ವವಿದ್ಯಾಲಯದ ಪ್ರಾಧ್ಯಾಪಕರನ್ನೋ, ಮಾನವ ಹಕ್ಕುಗಳ ಹೋರಾಟಗಾರರನ್ನೋ, ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನೋ ಮಾತನಾಡಿಸಿ ಸಮಗ್ರವಾದ ಚಿತ್ರಣ ನೀಡುವ ಆಲೋಚನೆಯನ್ನು ಸಹ ಮಾಡದಿರುವುದು ವಿಪರ್ಯಾಸ. ಇಂಥ ವ್ಯಕ್ತಿ ತೋರಿಸುವ ಸಂಗತಿಗಳನ್ನು ನೋಡಿ, ಮನಸ್ಸಿಗೆ ಬಂದಂತೆ ಮಾತನಾಡುವುದನ್ನು ನೋಡಿ ಅದೇ ಸತ್ಯ ಎಂದುಕೊಳ್ಳುವವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ.
ಇದೇ ವ್ಯಕ್ತಿ ಝಾಂಝಿಬಾರ್ ಅನ್ನೋ ಸ್ಥಳದ ಬಗ್ಗೆ ಕೂಡ ಹೀಗೆ ಮಾತನಾಡಿದ್ದನ್ನು ಈಗಲೂ ಡಾ ಬ್ರೋ ಯೂಟ್ಯೂಬ್ ಚಾನೆಲ್ ನಲ್ಲಿ ನೋಡಬಹುದು. ಅಲ್ಲಿ ಸಿಗುವ ಸಂಬಾರ ಪದಾರ್ಥಗಳ ಬಣ್ಣ, ರುಚಿ ಇತ್ಯಾದಿಗಳ ಬಗ್ಗೆ ಅದೇನೋ ವಿಷ ಪದಾರ್ಥಗಳು ಎಂಬಂತೆ ಹಗುರವಾದ ಕಾಮೆಂಟ್ ಮಾಡಿದ್ದನ್ನು ಕಾಣಬಹುದು. ಸ್ವತಃ ಆ ಸ್ಥಳದಲ್ಲಿಯೂ ಕೆಲ ವರ್ಷಗಳು ನಾನು ಕೆಲಸ ಮಾಡಿದ್ದೇನೆ. ಜೊತೆಗೆ ಆ ಸಂಬಾರ ಪದಾರ್ಥಗಳು ಯಾವ ರೀತಿಯಲ್ಲೂ ಕಳಪೆ ಮಟ್ಟದಲ್ಲ ಎಂಬುದು ಅವುಗಳನ್ನು ಬಳಕೆ ಮಾಡಿಯೂ ಗೊತ್ತಿದ್ದ ನನ್ನಂಥವರಿಗೆ ತಿಳಿದ ಸಂಗತಿ. ಅಂದ ಹಾಗೆ ಇದು ಈ ವ್ಯಕ್ತಿ ಬಗ್ಗೆ ಮಾತ್ರ ಅಥವಾ ಈ ಯೂಟ್ಯೂಬರ್ ಬಗ್ಗೆ ಮಾತ್ರ ಹೇಳುವುದಲ್ಲ. ಭಾರತವನ್ನು ಪ್ರತಿನಿಧಿಸಿ, ಜಗತ್ತಿನ ವಿವಿಧ ಭಾಗಗಳಿಗೆ ತೆರಳಿ ವಿಡಿಯೋಗಳನ್ನು ಮಾಡುವವರು ಎಲ್ಲರೂ ಕೆಲ ವಿಷಯಗಳನ್ನು ಅರ್ಥ ಮಾಡಿಕೊಳ್ಳಬೇಕು.
ಒಂದು ದೇಶ, ಸ್ಥಳದ ಇತಿಹಾಸ, ಸಂಸ್ಕೃತಿ, ಆರ್ಥಿಕ ಹಾಗೂ ಸಾಮಾಜಿಕ ಜನಜೀವನವನ್ನು ಗಾಂಭೀರ್ಯದಿಂದ ಕಟ್ಟಿಕೊಡಬೇಕು. ಅದಕ್ಕಾಗಿ ಆ ದೇಶದ ಪತ್ರಕರ್ತರು, ಇತಿಹಾಸ ತಜ್ಞರು, ಸಾಮಾಜಿಕ ಕಾರ್ಯಕರ್ತೆಯರು- ಕಾರ್ಯಕರ್ತರು, ಧಾರ್ಮಿಕ ಮುಖಂಡರು, ಜನಸಾಮಾನ್ಯರಲ್ಲಿ ವಿವಿಧ ವರ್ಗದವರ ಮನೆಗಳಿಗೆ ಭೇಟಿ ನೀಡಿ, ಹೀಗೆ ವಿವಿಧ ಕ್ಷೇತ್ರದವರು- ಆಯಾ ದೇಶದ ಬಗ್ಗೆ ನಿಷ್ಪಕ್ಷಪಾತವಾಗಿ- ಸರಿಯಾದ ಮಾಹಿತಿ ನೀಡುವವರನ್ನು ಮಾತನಾಡಿಸಬೇಕು. ಅದು ಬಿಟ್ಟು ವಿಕಿಪೀಡಿಯಾ ಹಾಗೂ ತಮಗಾದ ಅಲ್ಪ ಸಮಯದ ಅನುಭವವನ್ನು ಅಂತಿಮ ಸತ್ಯ ಎಂಬಂತೆ ಬಿಂಬಿಸುವುದು ಎಷ್ಟು ಸರಿ?
ಅಯೋಧ್ಯೆ ಬಗ್ಗೆ ಮಾಹಿತಿ ನೀಡುವಾಗಲೂ ವಿಕಿಪೀಡಿಯಾದಲ್ಲಿ ಇದ್ದ ಮಾಹಿತಿ ತೆಗೆದುಕೊಂಡು, ಶ್ರೀರಾಮಚಂದ್ರನ ವಂಶದ ಮೂಲಪುರುಷ ವೃಷಭನಾಥ ಎಂದು ಹೇಳಿದ್ದ ವ್ಯಕ್ತಿ ಇದೇ ಡಾ ಬ್ರೋ. ಇಂಥ ವ್ಯಕ್ತಿಗಳ ಯೂಟ್ಯೂಬ್ ಚಾನೆಲ್ ನೋಡುವವರು ಇವರನ್ನು ಇತಿಹಾಸತಜ್ಞರು ಎಂಬಂತೆ ಬಿಂಬಿಸುವ ಅಗತ್ಯ ಖಂಡಿತಾ ಇಲ್ಲ. ಯೂಟ್ಯೂಬ್‌ನಲ್ಲಿ ಬರುವಂಥ ವಿಡಿಯೋಗೆ ಆದಾಯ ಇದೆ. ಯಾವುದೇ ದೇಶಕ್ಕೆ ಹೋದಾಗಲೂ ಅಲ್ಲಿ ಎಷ್ಟು ಅಗತ್ಯವೋ ಅಷ್ಟು ಭದ್ರತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು, ಅಲ್ಲಿ ಸುತ್ತಾಡಿ, ವಾಪಸ್ ಬರುವುದನ್ನು ದೇಶಭಕ್ತಿ ಎಂಬ ಮಟ್ಟಕ್ಕೆ- ಅತಿ ದೊಡ್ಡ ಸಾಹಸ ಎಂಬಂತೆ ನೋಡಬೇಕಿಲ್ಲ ಎಂಬುದು ನನ್ನ ಅನಿಸಿಕೆ. ಹೀಗೆ ಹೇಳುವುದಕ್ಕೆ ಕಾರಣ ಏನೆಂದರೆ, ನೈಜೀರಿಯಾದಲ್ಲಿ ಮಿಲಿಟರಿಯವರು ಡಾ ಬ್ರೋ ವಿಚಿತ್ರ ನಡವಳಿಕೆಗೆ ಅನುಮಾನಪಟ್ಟಿರುವುದು ಖಂಡಿತಾ ತಪ್ಪಲ್ಲ. ಆ ನಂತರದಲ್ಲಿ ಈ ದೇಶವನ್ನು ಅಫ್ಘಾನಿಸ್ತಾನಕ್ಕಿಂತ ಕೆಟ್ಟದಾಗಿದೆ ಎನ್ನುವ ಈ ವ್ಯಕ್ತಿಯ ಅಭಿಪ್ರಾಯವನ್ನು ಯಥಾವತ್ ಆಗಿ ಸತ್ಯ ಎಂದುಕೊಳ್ಳಬೇಡಿ.
ಕೆಲವೇ ಅಡಿಗಳು ಭೂಮಿ ಅಗೆದರೆ ಪೆಟ್ರೋಲ್- ಡೀಸೆಲ್ ಸಿಗುತ್ತೆ ಎಂದು ಹೇಳುವ ಡಾ ಬ್ರೋ- ಗಗನ್ ಶ್ರೀನಿವಾಸ್ ಸಾಮಾನ್ಯ ಜ್ಞಾನದ ಬಗ್ಗೆ ಜನಸಾಮಾನ್ಯರು ನಿರ್ಧಾರ ಮಾಡಬೇಕು. ಕಚ್ಚಾ ತೈಲವನ್ನು ಸಂಸ್ಕರಣೆ ಮಾಡಿದ ಮೇಲೆ ಪೆಟ್ರೋಲ್- ಡೀಸೆಲ್ ಹೀಗೆ ಮಾಡಲಾಗುತ್ತದೆ. ನೈಜೀರಿಯಾದಲ್ಲಿ ಸಂಸ್ಕರಣೆಗೆ ಬೇಕಾದಂಥ ಮೂಲಸೌಕರ್ಯಗಳೇ ಇಲ್ಲ. ಎಷ್ಟೆಲ್ಲಾ ಸಮಸ್ಯೆಗಳ ಮಧ್ಯೆ ಇದ್ದರೂ ಇನ್ನು ಹತ್ತು ವರ್ಷಗಳಲ್ಲಿ ನೈಜೀರಿಯಾ ದೇಶವು ಪ್ರಪಂಚದ ಟಾಪ್ ಐದು ಆರ್ಥಿಕ ಶಕ್ತಿಯುತ ದೇಶಗಳಲ್ಲಿ ಒಂದಾಗಿರುತ್ತದೆ ಎಂಬ ಅಂದಾಜು ಮಾಡಲಾಗಿದೆ.
ಇಂಥ ಮಾಹಿತಿ ವಿಡಿಯೋದಲ್ಲಿ ಇದೆಯೇ ಎಂಬುದನ್ನು ಹುಡುಕಾಡಿ ನೋಡಿ. ಇದು ನೈಜೀರಿಯಾಗೆ ಮಾತ್ರ ಅನ್ವಯಿಸುವುದಲ್ಲ. ಆ ವ್ಯಕ್ತಿಯೇ ಹೇಳಿಕೊಳ್ಳುವಂತೆ ಇಪ್ಪತ್ತಾರು ದೇಶಗಳಿಗೆ ಭೇಟಿ ನೀಡಿದ್ದಾರಂತೆ. ಆ ಪೈಕಿ ಎಲ್ಲಿಯಾದರೂ ಅಂಥ ಮಾಹಿತಿ ಇದೆಯೇ ಎಂಬುದನ್ನು ಹುಡುಕಿ ನೋಡಿ.
ಕೊನೆ ಮಾತು: ದೇಶ ಸುತ್ತಿ, ಅವುಗಳ ಬಗ್ಗೆ ವಿಡಿಯೋ ಮಾಡಿ, ಯೂಟ್ಯೂಬ್‌ನಲ್ಲಿ ಹಾಕುವುದರಿಂದ ಆದಾಯ ಬರುವುದು ಹೌದು. ಅದು ಒಂದು ವೃತ್ತಿ. ಅದನ್ನು ವೃತ್ತಿಪರವಾಗಿಯಾದರೂ ಮಾಡಲಿ.
ಲೇಖಕ: ಶ್ರೀಹರ್ಷ ದ್ವಾರಕನಾಥ್, ಲಾಗೋಸ್, ನೈಜೀರಿಯಾ
ಗಮನಿಸಿ: ಇಲ್ಲಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ. ಶೀರ್ಷಿಕೆ ಹೊರತುಪಡಿಸಿದರೆ ಲೇಖನವನ್ನು "ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಸಿಬ್ಬಂದಿ ಬದಲಿಸಿಲ್ಲ. ಯಾವುದೇ ಪ್ರಚಲಿತ ವಿದ್ಯಮಾನ, ಸಮಸ್ಯೆಗಳ ಕುರಿತು ನೀವೂ ನಿಮ್ಮ ಅಭಿಪ್ರಾಯ ಅನಿಸಿಕೆ ತಿಳಿಸಬಹುದು. ಇಮೇಲ್: ht.kannada@htdigital.in