ಕನ್ನಡ ಸುದ್ದಿ  /  ಮನರಂಜನೆ  /  Dr Bro Exclusive Interview: ‘ನಮಸ್ಕಾರ ದೇವ್ರು’ ಎಂದ ಡಾ. ಬ್ರೋ ಅಲಿಯಾಸ್‌ ಗಗನ್‌ ಶ್ರೀನಿವಾಸ್ ಎಕ್ಸ್‌ಕ್ಲೂಸಿವ್‌ ಸಂದರ್ಶನ ಇಲ್ಲಿದೆ..

Dr Bro Exclusive Interview: ‘ನಮಸ್ಕಾರ ದೇವ್ರು’ ಎಂದ ಡಾ. ಬ್ರೋ ಅಲಿಯಾಸ್‌ ಗಗನ್‌ ಶ್ರೀನಿವಾಸ್ ಎಕ್ಸ್‌ಕ್ಲೂಸಿವ್‌ ಸಂದರ್ಶನ ಇಲ್ಲಿದೆ..

ಗಗನ್‌ ಶ್ರೀನಿವಾಸ್ (Dr Bro). ವಯಸ್ಸು ಈಗಿನ್ನೂ 23. ಇಷ್ಟು ಚಿಕ್ಕವಯಸ್ಸಿನಲ್ಲಿಯೇ ಹತ್ತಾರು ದೇಶ ಸುತ್ತಿ, ಕರುನಾಡಿನ ಮಂದಿಗೆ ಕುಳಿತಲ್ಲೇ ಪ್ರಪಂಚ ಪರ್ಯಟನೆ ಮಾಡಿಸುತ್ತಿದ್ದಾರೆ ಈ ಡಾಕ್ಟರ್!

‘ನಮಸ್ಕಾರ ದೇವ್ರು’ ಎಂದ ಡಾ. ಬ್ರೋ ಅಲಿಯಾಸ್‌ ಗಗನ್‌ ಶ್ರೀನಿವಾಸ್ ಎಕ್ಸ್‌ಕ್ಲೂಸಿವ್‌ ಸಂದರ್ಶನ ಇಲ್ಲಿದೆ..
‘ನಮಸ್ಕಾರ ದೇವ್ರು’ ಎಂದ ಡಾ. ಬ್ರೋ ಅಲಿಯಾಸ್‌ ಗಗನ್‌ ಶ್ರೀನಿವಾಸ್ ಎಕ್ಸ್‌ಕ್ಲೂಸಿವ್‌ ಸಂದರ್ಶನ ಇಲ್ಲಿದೆ.. (Instagram/ Dr Bro)

Dr Bro Exclusive Interview: ದೇಶ ಸುತ್ತಿನೋಡು, ಕೋಶ ಓದಿ ನೋಡಿ ಅನ್ನೋ ಮಾತಿನಂತೆ ದೇಶ ಸುತ್ತುವುದರಲ್ಲಿಯೇ ನಿರತರಾಗಿದ್ದಾರೆ ಡಾ. ಬ್ರೋ (Dr Bro). ಇವರ ಮೂಲ ಹೆಸರು ಗಗನ್‌ ಶ್ರೀನಿವಾಸ್.‌ ವಯಸ್ಸು ಈಗಿನ್ನೂ 23. ಇಷ್ಟು ಚಿಕ್ಕವಯಸ್ಸಿನಲ್ಲಿಯೇ ಹತ್ತಾರು ದೇಶ ಸುತ್ತಿ, ಕರುನಾಡಿನ ಮಂದಿಗೆ ಕುಳಿತಲ್ಲೇ ಪ್ರಪಂಚ ಪರ್ಯಟನೆ ಮಾಡಿಸುತ್ತಿದ್ದಾರೆ ಈ ಡಾಕ್ಟರ್! ಫೇಸ್‌ಬುಕ್‌ ಮತ್ತು ಯೂಟ್ಯೂಬ್‌ನಲ್ಲಿ ಸರಣಿ ವಿಡಿಯೋ ಹಂಚಿಕೊಳ್ಳುತ್ತ, ವಿದೇಶದ ಆಚರಣೆ, ಆಹಾರ ಪದ್ಧತಿ, ಅಲ್ಲಿನ ಸಣ್ಣ ಸಣ್ಣ ಕೌತುಕಗಳನ್ನೂ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ. ಇದೀಗ ಇದೇ ಡಾ ಬ್ರೋ Hindustan Times Kannadaಕ್ಕೆ ಆಫ್ರಿಕಾದ ತಾಂಜೇನಿಯಾದಿಂದಲೇ ಸಂದರ್ಶನ ನೀಡಿದ್ದಾರೆ. ಅವರ ಸಂದರ್ಶನದ ಪೂರ್ಣ ವಿವರ ಇಲ್ಲಿದೆ.

ನಿಮ್ಮ ಹಿನ್ನೆಲೆ ಹೇಳಿ.. ಯಾವ ಊರು, ನಿಮ್ಮ ವಿದ್ಯಾಭ್ಯಾಸ ಮತ್ತು ಕುಟುಂಬದ ಬಗ್ಗೆ..

ನನ್ನ ಹೆಸರು ಗಗನ್...‌ ನನ್ನ ತಂದೆ ಶ್ರೀನಿವಾಸ, ತಾಯಿ ಪದ್ಮಾ, ನನ್ನ ತಮ್ಮ ಚಂದನ್‌, ಅವನಿಗೆ 12 ವರ್ಷ. ನನಗೆ 23 ವರ್ಷ. ನಾನು ಹುಟ್ಟಿದ್ದು ಬೆಂಗಳೂರಿನ ಹೊರವಲಯದ ಊರಲ್ಲಿ. ನಮ್ಮದು ಲೋವರ್‌ ಮಿಡಲ್‌ ಕ್ಲಾಸ್‌ ಫ್ಯಾಮಿಲಿ. ಅಷ್ಟೇನೂ ಹೇಳಿಕೊಳ್ಳುವಂತಹ ಅನುಕೂಲ ಇರಲಿಲ್ಲ. ಹಾಗಂತ ಊಟಕ್ಕೆ ತಿಂಡಿಗೆ ಸಮಸ್ಯೆ ಇರಲಿಲ್ಲ.. ಅದು ಬಿಟ್ಟರೆ ಬ್ರಾಹಣ ಕುಟುಂಬ ಆಗಿರೋದ್ರಿಂದ ಚಿಕ್ಕ ವಯಸ್ಸಿನಿಂದಲೇ ದೇವಸ್ಥಾನದ ಪೌರೋಹಿತ್ಯ, ಸಂಧ್ಯಾವಂದನೆ, ಧ್ಯಾನ, ಮಂತ್ರ, ಹೋಮ ಹವನ.. ಇದರಲ್ಲಿಯೇ ನನ್ನ ಬಾಲ್ಯ ಕಳೆದಿದ್ದೇನೆ. ದೇವಸ್ಥಾನದ ಪೂಜೆ, ದೇವಸ್ಥಾನದ ನಿರ್ವಹಣೆ, ಯಾರದ್ದಾದರೂ ಮದುವೆ, ಗೃಹಪ್ರವೇಶ ಇದ್ದರೆ ಅಲ್ಲಿ ನಮ್ಮ ಹಾಜರಿ ಇರುತ್ತಿತ್ತು. ಏಕೆಂದರೆ ನಾನು ಬೆಳೆದು ಬಂದಿದ್ದೇ ಆ ರೀತಿ.

1 ರಿಂದ 10ನೇ ತರಗತಿವರೆಗೂ ಇಂಗ್ಲಿಷ್‌ ಮೀಡಿಯಂನಲ್ಲಿಯೇ ಕಲಿತಿದ್ದೇನೆ. ಫಸ್ಟ್‌ ಪಿಯು ಸೈನ್ಸ್‌ ಫೇಲ್‌ ಆದೆ. ಆಗ ನನ್ನ ಹಣೆಬರಹ ಗೊತ್ತಾಯ್ತು.. ಟೆನ್ಷನ್‌ ಬೇಡ ಅಂತ ಕಾಮರ್ಸ್‌ ಮಾಡಿದೆ. ಅದಾದ ಮೇಲೆ ಈ ಕೆಲಸ ಶುರು ಮಾಡಿದೆ. ಓದಿದ್ದು ನೆಲಮಂಗಲದ ಬಸವೇಶ್ವರ ಕಾಲೇಜು, ಬಿಕಾಂ ಮಾಡಿದ್ದು ಕೆ.ಆರ್‌ ಪುರದ ವಿಶ್ವೇಶ್ವರ ಪುರ ಕಾಲೇಜು. ಇಂಗ್ಲಿಷ್‌ ಹಣೆಬರಹ ಗೊತ್ತಿದ್ದಿದ್ದಕ್ಕೆ ಕನ್ನಡ ಮೀಡಿಯಂ ಕಾಲೇಜೇ ಸೇರಿಕೊಂಡೆ.

ಇಷ್ಟೆಲ್ಲ ಸುತ್ತಾಡೋ ನಿಮಗೆ ಮನೆ ನೆನಪು ಆಗುವುದಿಲ್ಲವಾ.. ಕುಟುಂಬದ ಸಪೋರ್ಟ್‌ ಹೇಗಿದೆ?

ಪ್ರತಿ ದಿನ, ಪ್ರತಿ ಕ್ಷಣ ಮನೆಯ ನೆನಪಾಗುತ್ತದೆ. ಪ್ರತಿ ದಿನ ಮನೆಗೆ ಕಾಲ್‌ ಮಾಡ್ತೀನಿ. ಅವರ ಸಪೋರ್ಟ್‌ ತುಂಬ ಇದೆ. ಮನೆಯಲ್ಲಿ ಆಗೆಲ್ಲ ಪಕ್ಕದೂರಿಗೆ ಕಳುಹಿಸೋಕೆ ಹಿಂಜರಿಯುತ್ತಿದ್ದರು. ಅಂತದ್ದರಲ್ಲಿ ಜಿಲ್ಲೆ, ರಾಜ್ಯ, ರಾಷ್ಟ್ರ ಬಿಟ್ಟು ಇಲ್ಲಿಗೆ ಬಂದಿದ್ದೇನೆ ಎಂದರೆ ಮನೆಯಲ್ಲಿ ಸಹಜವಾಗಿ ಭಯ ಇದ್ದೇ ಇರುತ್ತದೆ. ನನಗಿಂತ ಜಾಸ್ತಿ ಅವರಿಗೇ ಭಯ. ಆದರೆ, ಅವರಿಗೆ ಇದೆಲ್ಲವೂ ಅಭ್ಯಾಸ ಆಗಿದೆ. ನಾನು ಕಳೆದ ಎರಡು ವರ್ಷದಿಂದ ಪ್ರಯಾಣದಲ್ಲಿದ್ದೇನೆ. ಆಗಿನಿಂದಲೂ ಅವರಿಗಿದು ರೂಢಿ. ಒಂದು ತಿಂಗಳು ಟ್ರಿಪ್‌ಗೆ ಹೋಗುತ್ತಿದ್ದೆ. ಮರಳಿ ಬಂದು ಮನೆಯಲ್ಲಿಯೇ ಆ ಎಲ್ಲ ವಿಡಿಯೋಗಳನ್ನು ಎಡಿಟ್‌ ಮಾಡುತ್ತಿದ್ದೆ. ಮತ್ತೆ ಹೋಗುತ್ತಿದೆ. ಮತ್ತೆ ಬರುತ್ತಿದ್ದೆ.. ಹಾಗಾಗಿ ಮನೆಯವರಿಗೂ ಇದು ಕಾಮನ್‌ ಆಗಿಬಿಟ್ಟಿದೆ. ಎಲ್ಲೇ ಇದ್ದರೂ ಸೇಫ್‌ ಆಗಿ ಇರ್ತಾನೆ ಅನ್ನೋ ನಂಬಿಕೆ ಅವರಿಗೂ ಇದೆ.

ಇಷ್ಟೆಲ್ಲ ಸುತ್ತಾಡ್ತಿರಿ, ಎಂದಾದರೂ ನಿಮ್ಮ ಆರೋಗ್ಯ ಕೈ ಕೊಟ್ಟಿದೆಯಾ? ಅದನ್ನು ಹೇಗೆ ಸರಿಪಡಿಸಿಕೊಂಡಿದ್ದೀರಿ..

ಟ್ರಾವೆಲಿಂಗ್‌ ಪ್ರತಿನಿತ್ಯ ಆಗ್ತಾನೇ ಇರುತ್ತೆ. ಬೇರೆ ಬೇರೆ ಜಾಗ, ಬೇರೆ ಬೇರೆ ಜನ, ಬೇರೆ ಬೇರೆ ವಾತಾವರಣ, ಬೇರೆ ಊಟ, ಹಾಗಾಗಿ ತುಂಬ ಸಮಸ್ಯೆ ಆಗುತ್ತೆ. ಆಗುತ್ತಿದೆ. ಹಾಗಾಗಿಯೇ ನಾನು ಊಟದ ವಿಚಾರದಲ್ಲಿ ತುಂಬ ಸ್ಟ್ರಿಕ್ಟ್‌. ಸಾಧ್ಯವಾದಷ್ಟು ಒಂದೇ ಥರದ ಊಟ ಮಾಡೋಕೆ ಟ್ರೈ ಮಾಡ್ತಿನಿ. ಹೆಸರು ಕಾಳು, ಕಾಬೂಲ್‌ ಕಡಲೆ, ಕಡಲೆ ಬೀಜ, ಕಡಲೆ ಕಾಳು ಈ ಮೂರನ್ನು ರಾತ್ರಿಯಿಡಿ ನೆನೆಸಿ ತಿಂತಿನಿ. ಬ್ಯಾಗ್‌ನಲ್ಲಿ ಕ್ಯಾರೆಟ್‌, ಸೌತೆಕಾಯಿ ಇಟ್ಕೊಂಡು ಸುತ್ತಾಡ್ತಿನಿ. ಏಕೆಂದರೆ, ನನ್ನಂತಹ ವೆಜಿಟೇರಿಯನ್‌ ಟ್ರಾವೆಲರ್‌ಗೆ ಹೊರ ದೇಶಗಳಲ್ಲಿ ಸಸ್ಯಾಹಾರಿ ಊಟ ಸಿಗುವುದು ತುಂಬ ಕಷ್ಟ. ದೇವರ ದಯೆಯಿಂದ ಇಲ್ಲಿಯವರೆಗೂ ಆರೋಗ್ಯ ಚೆನ್ನಾಗಿಯೇ ಇದೆ. ಸಣ್ಣಪುಟ್ಟ ತಲೆ, ಕೈಕಾಲು ನೋವು ಬಿಟ್ಟರೆ ಬೇರೆನೂ ಸಮಸ್ಯೆ ಎದುರಾಗಿಲ್ಲ. ಹೋದಲ್ಲೆಲ್ಲ ಎಣ್ಣೆ ಪದಾರ್ಥ ಮುಟ್ಟಲ್ಲ. ಬೀದಿ ಬದಿ ಆಹಾರ ತಿನ್ನಲ್ಲ.. ಒಂದೇ ರೀತಿ ಆಹಾರ ಸೇವಿಸುತ್ತೇನೆ.

ನಿಮ್ಮ ಈ ಸುದೀರ್ಘ ವಿದೇಶಿ ಪ್ರಯಾಣದಲ್ಲಿ ನಿಮಗೆ ಎದುರಾದ ತುಂಬ ರಿಸ್ಕಿ ಪರಿಸ್ಥಿತಿ ಯಾವುದು? ಅದರಿಂದ ಹೇಗೆ ಹೊರಬಂದ್ರಿ..

ಸದ್ಯಕ್ಕೆ ದೇವರ ದಯೆಯಿಂದ ಏನೂ ಸಮಸ್ಯೆ ಆಗಿಲ್ಲ. ಇಂಡಿಯಾದಿಂದ ರಷ್ಯಾಗೆ ಹೋಗುತ್ತಿದ್ದಾಗ, ರಷ್ಯಾ ಏರ್‌ಪೋರ್ಟ್‌ನಲ್ಲಿ ನನ್ನ ಬ್ಯಾಗ್‌ ಕಳೆದು ಬಿಡ್ತು. ಫ್ಲೈಟ್‌ನಲ್ಲಿ ನನ್ನ ಬ್ಯಾಗ್‌ ಜತೆಗೆ ಇನ್ನುಳಿದ ಬೇರೆಯವರ10 ಬ್ಯಾಗ್‌ ಹಾಕಲೇ ಇಲ್ಲ. ಬಿಲ್ಲಿಂಗ್‌ ಮಾಹಿತಿಯೂ ಇರಲಿಲ್ಲ. ಬ್ಯಾಗ್‌ ಇಲ್ಲದೆ ರಷ್ಯಾಕ್ಕೆ ಪ್ರಯಾಣ ಮಾಡಿದೆ. ಬ್ಯಾಗ್‌ ಕಾಣೆಯಾದ ಬಗ್ಗೆ ಅಲ್ಲಿನ ಅಧಿಕಾರಿಗಳಿಗೆ ದೂರು ನೀಡಿದೆ. ಕೊನೆಗೆ ಮೂರು ದಿನಗಳ ಬಳಿಕ ಬ್ಯಾಗ್‌ ಸಿಕ್ತು.

ರಷ್ಯಾದಲ್ಲಿ ಎಟಿಎಂ ಯಾವುದೂ ವರ್ಕ್‌ ಆಗಲ್ಲ. ಮೂರು ದಿನ ನನ್ನ ಬಳಿ ಹಣವೂ ಇರಲಿಲ್ಲ. ಒಂದೇ ಬಟ್ಟೆಯಲ್ಲಿ ಸುತ್ತಾಡಿದ್ದೆ. ನನಗಂತೂ ತಲೆ ಕೆಟ್ಟೋಗಿತ್ತು.. ಅದೇ ವೇಳೆ ಮುಂಬೈನಿಂದ ವಿವೇಕ್‌ ಜೋಷಿ ಎಂಬುವವರು ನಾನು ಉಳಿದ ಹಾಸ್ಟೆಲ್‌ನಲ್ಲಿದ್ದರು. ನನಗೆ ಅವರೇ ಸಹಾಯ ಮಾಡಿದ್ರು. ಅದಾದ ಮೇಲೆ ಏರ್‌ಪೋರ್ಟ್‌ನಿಂದ ನಿಮ್ಮ ಬ್ಯಾಗ್‌ ಸಿಕ್ಕಿದೆ ಎಂದು ಕಾಲ್‌ ಬಂತು. ಆಗ ನನಗೆ ಜೀವ ಹೋಗಿ ಬಂದಂಗಾಯ್ತು. ನಾಲ್ಕು ಗಂಟೆ ಕಾದು ಬ್ಯಾಗ್‌ ಪಡೆದುಕೊಂಡೆ. ನಿರಾಳವಾಗಿ ನನ್ನ ಪ್ರಯಾಣ ಮುಂದುವರಿಸಿದೆ.

ನೀವು ಶುದ್ಧ ಸಸ್ಯಾಹಾರಿ.. ಊಟದ ವಿಷಯದಲ್ಲಿ ವಿದೇಶದಲ್ಲಿ ನಿಮಗೆ ಎದುರಾದ ಮತ್ತು ಸದಾ ನೆನಪಿನಲ್ಲಿ ಉಳಿಯುವ ವಿಚಾರ ಇದೆಯೇ?

ಅಫಘಾನಿಸ್ತಾನಕ್ಕೆ ಹೋಗಬೇಕಾದರೆ, ಕಾಬೂಲ್‌ಗೆ ಹೋಗುವಾಗ, ಅನ್ನ ಮತ್ತು ಇನ್ನೊಂದು ಥರದ ಪಲ್ಯ ಹಾಕಿ ಕೊಟ್ಟರು. ನನಗೆ ಅದನ್ನು ನೋಡಿದ ಕೂಡಲೇ ಅನುಮಾನ ಶುರುವಾಯ್ತು. ನಾನು ಸಸ್ಯಾಹಾರಿ ಆದ ಕಾರಣ, ಚಿಕ್ಕಂದಿನಿಂದ ಅದನ್ನೇ ರೂಢಿಸಿಕೊಂಡಿದ್ದೇನೆ. ಹೊಸ ಥರದ ಅಡುಗೆ, ಅದರ ವಾಸನೆ ಗೊಂದಲ ಉಂಟು ಮಾಡಿತು. ಇದು ಸೀಗಡಿ ಮೀನಿನ ರೆಸಿಪಿಯಾ..? ಎಂದು ಅವರಿಗೆ ಕೇಳಿದೆ. ಅದಕ್ಕವರು ಹೌದು ಎಂದು ತಲೆ ಅಲ್ಲಾಡಿಸಿದರು. ನನಗೆ ತಲೆ ಕೆಟ್ಟೋಯ್ತು. ತಗೊಳಮ್ಮ ಬೇಡ ಅಂತ ಅವರ ಕೈಗಿಟ್ಟೆ.

ಒಂದೊಂದು ದೇಶದಲ್ಲಿ ಒಂದೊಂದು ಪದಾರ್ಥವನ್ನು ಸಸ್ಯಾಹಾರ ಎಂದು ಅಲ್ಲಿನ ಜನ ಸೇವಿಸ್ತಾರೆ. ಥೈಲೈಂಡ್‌ನಲ್ಲಿ ಮೀನು ವೆಜಿಟೇರಿಯನ್‌. ಅದೇ ರೀತಿ ಅಫ್ಘಾನಿಸ್ಥಾನದಲ್ಲಿ 11 ದಿನ ಇದ್ದೆ. ತರಕಾರಿ ತಿಂದೇ ಕಾಲ ಕಳೆದಿದ್ದೇನೆ. ಯಾವುದೇ ದೇಶಕ್ಕೆ ಹೋದರೂ ಫುಡ್‌ ವಿಚಾರದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಿದ್ದೇನೆ. ಹಾಗಾಗಿ ನನ್ನ ಬ್ಯಾಗ್‌ನಲ್ಲಿ ಸದಾ ಸೌತೆಕಾಯಿ, ಮೂಲಂಗಿ, ಕ್ಯಾರೆಟ್‌, ನೆನೆಸಿದ ಕಾಳುಗಳೇ ಇರುತ್ವೆ. ಹೋದಲೆಲ್ಲ ಅದಕ್ಕೆ ಚೂರು ಉಪ್ಪು ಹಾಕ್ಕೊಂಡು ತಿಂತೀನಿ.

ದೇಶ ಸುತ್ತಿ ನೋಡು, ಕೋಶ ಓದಿ ನೋಡು ಅಂತಾರೆ... ನೀವು ದೇಶ ಸುತ್ತುತ್ತಿದ್ದೀರಿ.. ಈ ಸುತ್ತಾಟದಿಂದ ನಿಮ್ಮಲ್ಲಾದ ಬದಲಾವಣೆಗಳೇನು?

ತುಂಬ ಬದಲಾವಣೆ ಕಂಡುಕೊಂಡಿದ್ದೇನೆ. ನಾವಿರುವ ಮನೆ, ನಮ್ಮ ಸುತ್ತಮುತ್ತಲಿನ ಸ್ಥಿತಿ ಹೇಗಿದೆ ಎಂಬುದು ನಮಗೆ ಗೊತ್ತು. ಅವನು ಮನೆ ಕಟ್ಟಿದಾನೆ. ಅವನ ಹತ್ತಿರ ಕಾರ್‌ ಇದೆ ಅನ್ನೋ ಭಾವ ಎಲ್ಲರಲ್ಲಿ ತುಂಬ ಸಹಜ. ಆದರೆ, ಬೇರೆ ದೇಶದಲ್ಲಿ ಪರಿಸ್ಥಿತಿ ನಮ್ಮಲ್ಲಿ ಇದ್ದಂತಿಲ್ಲ. ತುಂಬ ಸಮಸ್ಯೆಗಳಿವೆ. ಜನರಿಗೆ ಅಗತ್ಯ ಸೌಲಭ್ಯಗಳೇ ಇಲ್ಲ. ಮಳೆಯಲ್ಲಿಯೇ ಗುಡಿಸಲಲ್ಲಿ ಇರುತ್ತಾರೆ. ನಾನೀಗ ಆಫ್ರಿಕಾದಲ್ಲಿದ್ದೇನೆ. ಇಲ್ಲಿನ ಜನ ಬೇಟೆಯಾಡಿಯೇ ಜೀವನ ನಡೆಸಬೇಕು. ಬೇಟೆ ಸಿಗಲಿಲ್ಲ ಎಂದರೆ, ಅವರ ಅವತ್ತಿನ ಊಟ ಇಲ್ಲ.

ಅದೇ ರೀತಿ ನಾನು ಕೆಲವು ವರ್ಷಗಳಿಂದ ಟ್ರಾವೆಲ್‌ ಮಾಡುತ್ತ ಕಂಡುಕೊಂಡಿದ್ದೇನೆಂದರೆ, ಎಲ್ಲರ ಬಾಯಲ್ಲಿಯೂ ನೆಮ್ಮದಿ ಇಲ್ಲ ಅನ್ನೋ ಮಾತು ಆಗಾಗ ಬಂದೇ ಬರುತ್ತದೆ. ಸಾಕಷ್ಟು ಜನ ಅಂತಾರೆ ನೆಮ್ಮದಿಯ ಹುಡುಕಾಟದಲ್ಲಿದ್ದೇವೆ ಅಂತ. ನೆಮ್ಮದಿ ಎಲ್ಲಿಯೂ ಸಿಗುವುದಿಲ್ಲ. ಬೇರೆ ದೇಶ, ಬೇರೆ ರಾಜ್ಯ ಎಲ್ಲಿಯೂ ಸಿಗುವುದಿಲ್ಲ. ಅದನ್ನು ನಾವೇ ಹುಡುಕಿಕೊಳ್ಳಬೇಕು. ನಾವೆಲ್ಲಿ ಇರುತ್ತೇವೋ ಅಲ್ಲಿಯೇ ನೆಮ್ಮದಿಯನ್ನು ಹುಡುಕಿಕೊಳ್ಳಬೇಕು. ಜಗತ್ತಿನ ಯಾವುದೇ ಮೂಲೆಗೆ ಹೋದರೂ ಅಲ್ಲಿ ಕೆಟ್ಟತನ, ಒಳ್ಳೆಯತನ, ಹಸಿವು, ಬಡತನ ಇದ್ದಿದ್ದೇ. ಎಲ್ಲ ಜಾಗದಲ್ಲಿ ಎಲ್ಲವೂ ಇದೆ. ಯಾವುದೂ ಶಾಶ್ವತ ಅಲ್ಲ. ಭೂತಕಾಲದ ಚಿಂತೆಯಲ್ಲಿ ಭವಿಷ್ಯದ ಪ್ಲಾನಿಂಗ್‌ನಲ್ಲಿ ವರ್ತಮಾನವನ್ನೇ ನಾವೆಲ್ಲರೂ ಕಳೆದುಕೊಳ್ಳುತ್ತಿದ್ದೇವೆ. ಹಾಳು ಮಾಡಿಕೊಳ್ಳುತ್ತಿದ್ದೇವೆ. ಆಗಿದ್ದಾಯ್ತು, ಮುಂದಿನದ್ದು ಗೊತ್ತಿಲ್ಲ. ಸದ್ಯಕ್ಕೆ ಏನಿದೆ ಹಾಗೆ ಜೀವಿಸೋಣ ಈ ಅರಿವು ನನಗೆ ನನ್ನ ಪ್ರಯಾಣದಿಂದ ಸಿಕ್ಕಿದೆ.

ನಿಮ್ಮ ಆರಂಭದ ಯೂಟ್ಯೂಬ್‌ ಜರ್ನಿ ಹೇಗಿತ್ತು...

2015ರಿಂದ ಯೂಟ್ಯೂಬ್‌ ಶುರುವಾಯ್ತು. ಕನ್ನಡ ಯೂಟ್ಯೂಬರ್‌ ಅವರು ಕೇವಲ ನಾಲ್ಕೈದು ಜನ. ಆಗ ಜನರಿಗೂ ಗೊತ್ತಿರಲಿಲ್ಲ. ಆಗ ಜನ ಟಿವಿ ಮತ್ತು ಪೇಪರ್‌ ಮೇಲೆ ಅವಲಂಬಿತರಾಗಿದ್ದರು. 2015ರಲ್ಲಿ ನಾನು ಸೈಬರ್‌ ಕೆಫೆಗೆ ಹೋಗಿ ಅರ್ಧಗಂಟೆಗೆ 10ರೂ ಕೊಟ್ಟು ಬ್ರೌಸ್‌ ಮಾಡ್ತಿದ್ದೆ. ಏನೇ ಟೈಪ್‌ ಮಾಡಿದರೂ ಯೂಟ್ಯೂಬ್‌ನಲ್ಲಿ ಎಲ್ಲವೂ ಸಿಗುತ್ತಿತ್ತು. ಆವಾಗಿನಿಂದ ಈ ಕ್ರೇಝ್‌ ಶುರುವಾಯ್ತು. ಇದೊಂದು ಥರ ವೇದಿಕೆ ಚೆನ್ನಾಗಿದೆಯೆಲ್ಲ ಎನಿಸಿತು. ನಿತ್ಯ ಯೂಟ್ಯೂಬ್‌ ನೋಡ್ತಿದ್ದೆ. ಒಂದಷ್ಟು ತಿಂಗಳು ದುಡ್ಡು ಕೊಟ್ಟು ನೋಡೋದೇ ಆಯ್ತು. ಹೀಗಿರುವಾಗಲೇ ನನ್ನ ಸ್ನೇಹಿತ ಯೋಗೇಂದ್ರ ಅಡಿಗ ಬಳಿ ಸ್ಮಾರ್ಟ್‌ ಫೋನ್‌ ಇತ್ತು. ಅದನ್ನು ಬಳಸಿ ವಿಡಿಯೋ ಹಾಕ್ತಿದ್ದೆ. ಆವಾಗೆಲ್ಲ ಮಾನಟೈಸೇಷನ್‌ ಇರಲಿಲ್ಲ. ವಿಡಿಯೋ ಅಪ್‌ಲೋಡ್‌ ಮಾಡ್ತಿದ್ದಂತೆ ದುಡ್ಡು ಬರ್ತಿತ್ತು. ಆ ಅಮೌಂಟ್‌ ಹೇಗೆ ತೆಗೆದುಕೊಳ್ಳುವುದೆಂದೂ ನನಗೆ ಗೊತ್ತಿರಲಿಲ್ಲ. 30 ಡಾಲರ್‌ ಹಣ ತೋರಿಸುತ್ತಿತ್ತು. ಅದಾದ ಮೇಲೆ ಒಂದು ದಿನ 300 ಜನ ಸಬ್‌ಸ್ಕ್ರೈಬರ್ಸ್‌ ಇದ್ದ ನನ್ನ ಚಾನೆಲ್‌ ಕಣ್ಮರೆಯಾಯ್ತು. 2015ರಲ್ಲಿ 300 ಜನ ಸಬ್‌ಸ್ಟ್ರೈಬರ್‌ ಅಂದ್ರೆ ಅದೇ ದೊಡ್ಡ ವಿಷ್ಯಾ. ನನ್ನ ಚಾನೆಲ್‌ಮೇಲೆ ಕಾಪಿ ರೈಟ್‌ ಸ್ಟ್ರೈಕ್‌ ಬಿದ್ದಿತ್ತು. ಅ ಕಾಪಿರೈಟ್‌ ಅಂದರೂ ನನಗೆ ಗೊತ್ತಿರಲಿಲ್ಲ. ಹಾಗಾಗಿ ಚಾನೆಲ್‌ ಕ್ಲೋಸ್‌ ಆಗಿತ್ತು.

ಪಾರ್ಟ್‌ 2 ಸಂದರ್ಶನದಲ್ಲೇನಿರಲಿದೆ..

  • ಚಂದ್ರಯಾನ ಮತ್ತು ಮಂಗಳಯಾನದ ಬಗ್ಗೆಯೂ ಇದೇ ಗಗನ್‌ ಪ್ಲಾನ್‌
  • ಸುತ್ತಾಟಕ್ಕಾಗಿ ಖರ್ಚಾಗುವ ಹಣವೆಷ್ಟು, ಸೋಷಿಯಲ್‌ ಮೀಡಿಯಾದ ಸಂಪಾದನೆ ಎಷ್ಟು?
  • ಆ ಒಂದು ಅವಮಾನವೇ ಗಗನ್‌ಗೆ ಯೂಟ್ಯೂಬ್‌ ಚಾನೆಲ್‌ ತೆರೆಯಲು ಕಾರಣವಾಯಿತಂತೆ! ಏನದು?
  • ತಮ್ಮ ಅಪಾರ ಫಾಲೋವರ್ಸ್‌ ಬಗ್ಗೆಯೂ ಗಗನ್‌ ಮಾತನಾಡಿದ್ದಾರೆ.
  • ವಿಡಿಯೋ ಮಾಡಲು ಬಳಸುವ ಕ್ಯಾಮರಾ, ಎಡಿಟಿಂಗ್‌ ಪ್ರೊಸೆಸ್‌ ಬಗ್ಗೆಯೂ ಹೇಳಿದ್ದಾರೆ.
  • ಇದೆಲ್ಲ ಓಕೆ ಡಾ. ಬ್ರೋ ಮುಂದಿನ ಗೋಲ್‌ ಏನು? ಆ ಅಂಶವೂ ಎರಡನೇ ಪಾರ್ಟ್‌ನಲ್ಲಿರಲಿದೆ..

IPL_Entry_Point