ಸತ್ತಮೇಲೂ ಜನರ ಬಾಯಿಗೆ ಆಹಾರವಾಗಬಾರದಿತ್ತು ಗುರು, ವೆರಿ ಸಾರೀ: ಗುರುಪ್ರಸಾದ್ ನೆನಪು ಹಂಚಿಕೊಂಡ ರಂಗಸ್ವಾಮಿ ಮೂಕನಹಳ್ಳಿ
Nov 03, 2024 05:15 PM IST
ಗುರುಪ್ರಸಾದ್ ಕುರಿತು ರಂಗಸ್ವಾಮಿ ಮೂಕನಹಳ್ಳಿ ಬರಹ
- ಸರಳವಾದ ಬದುಕನ್ನು ಮಿತಿ ಮೀರಿ ಹದಗೆಡಿಸಿಕೊಂಡರೆ ಅದು ನರಕವಾಗುತ್ತದೆ. ಯಾವ ಸಮಸ್ಯೆಗೂ ಆತ್ಮಹತ್ಯೆ ಖಂಡಿತ ಉತ್ತರವಲ್ಲ. ಜೇಬು ಖಾಲಿ ಎನ್ನುವುದು ಸಿನಿಮಾ ಕ್ಷೇತ್ರವನ್ನು ಹತ್ತಿರದಿಂದ ಕಂಡವರಿಗೆಲ್ಲಾ ಗೊತ್ತಿರುವ ವಿಷಯ ಎಂದು ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಬಳಿಕ ರಂಗಸ್ವಾಮಿ ಮೂಕನಹಳ್ಳಿ ಬರೆದುಕೊಂಡಿದ್ದಾರೆ.
ನಿರ್ದೇಶಕ ಗುರುಪ್ರಸಾದ್ ಅವರ ಮೃತದೇಹ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಸ್ಯಾಂಡಲ್‌ವುಡ್‌ಗೆ ದಂಗುಬಡಿಸಿದೆ. ಕನ್ನಡಕ್ಕೆ ಹಲವು ಸಿನಿಮಾಗಳನ್ನು ಕೊಟ್ಟ ನಿರ್ದೇಶಕನ ಸಾವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಾವಿನ ಸುದ್ದಿ ಬಂದ ಬೆನ್ನಲ್ಲೇ ರಂಗಸ್ವಾಮಿ ಮೂಕನಹಳ್ಳಿ ಅವರು, ನಿರ್ದೇಶಕನ ಜತೆಗೆ ಈ ಹಿಂದೆ ನಡೆದ ಮಾತುಕತೆಯ ಬಗ್ಗೆ ಬರೆದುಕೊಂಡಿದ್ದಾರೆ. ಫೇಸ್‌ಬುಕ್‌ನಲ್ಲಿ ಮೂಕನಹಳ್ಳಿ ಹಂಚಿಕೊಂಡ ಬರಹ ಇಲ್ಲಿದೆ.
ಅದು ಸಂವಾದ ಚಾನೆಲ್‌ಗೆ ವ್ಯವಸ್ಥಿತವಾಗಿ ಮತ್ತು ನಿರಂತರವಾಗಿ ವಿಡಿಯೋ ಮಾಡುತ್ತಿದ್ದ ದಿನಗಳು. ಸುಮಾರು 18 ವರ್ಷ ಈ ನೆಲದಿಂದ ದೂರವಿದ್ದ ನನಗೆ ಮತ್ತೆ ಒಳ್ಳೆಯ ಸಂಪರ್ಕ ಒದಗಿಸಿಕೊಟ್ಟದ್ದು ಸಂವಾದ! ಹೀಗೆ ಒಂದು ದಿನ ಸಂವಾದಕ್ಕೆ ಒಂದು ವಿಡಿಯೋ ಶೂಟ್ ಮುಗಿಸಿ ಮನೆಗೆ ಮರಳುತ್ತಿದ್ದೆ. ಆಗ ನನ್ನ ಮೊಬೈಲ್‌ನಲ್ಲಿ ಸೇವ್ ಆಗಿರದ ಒಂದು ಸಂಖ್ಯೆಯಿಂದ ಫೋನ್ ಬಂದಿತು. ಕರೆ ಮಾಡಿದ್ದು ಗುರು ಗುರುಪ್ರಸಾದ್. ತನ್ನ ಪರಿಚಯ ಹೇಳಿಕೊಂಡದ್ದು ಡೈರೆಕ್ಟರ್ ಗುರು, ಮಠ, ಎದ್ದೇಳು ಮಂಜುನಾಥ ಚಿತ್ರಗಳ ನಿರ್ದೇಶಕರು ಎಂದು. ಸಿನಿಮಾದಿಂದ ನಾನು ದೂರ, ಬಹುದೂರ ಅಲ್ಲದೆ ಬಹುಕಾಲ ಇಲ್ಲಿಲ್ಲದ ಕಾರಣ ನಿಜಕ್ಕೂ ಆತನ ಬಗ್ಗೆ ಗೊತ್ತಿರಲಿಲ್ಲ.
ನಾನ್ಯಾರು ಎನ್ನುವುದು ಅವರಿಗೆ ಗೊತ್ತಿತ್ತು. ಚೆನ್ನಾಗಿ ಮಾತನಾಡುತ್ತೀರಿ, ಮಾತನಾಡುವಾಗ ಭಾವನೆ ಕೂಡ ವ್ಯಕ್ತಪಡಿಸುತ್ತೀರಿ ಎನ್ನುವ ಮಾತನ್ನು ಆಡಿದರು. ನಮ್ಮ ಎಡಿಟಿಂಗ್ ಸ್ಟುಡಿಯೋಗೆ ಬನ್ನಿ ಎಂದರು. ಅದಾದ ಒಂದೆರೆಡು ದಿನದಲ್ಲಿ ಅವರ ಸಹಾಯಕ ನಿರ್ದೇಶಕರೊಬ್ಬರು ದಯವಿಟ್ಟು ಬನ್ನಿ, ಗುರು ಅವರು ನಿಮ್ಮನ್ನು ನೋಡಬೇಕಂತೆ ಎಂದರು. ಅವರು ಕಳುಹಿಸಿದ ಲೊಕೇಷನ್‌ಗೆ ಹೋಗಿದ್ದೆ. ಸರಿಸುಮಾರು ಎರಡು ತಾಸಿಗೂ ಹೆಚ್ಚು ಕಳೆದೆವು. ಎಡಿಟಿಂಗ್ ರೂಮ್‌ನಲ್ಲಿ ಕೂಡ ಹದಿನೈದು ನಿಮಿಷ ಕುಳಿತ್ತಿದ್ದೆವು. ಡೈರೆಕ್ಟರ್ ಸ್ಪೆಷಲ್ ಎನ್ನುವ ಪುಸ್ತಕ ಉಡುಗೊರೆ ನೀಡಿದರು. ಸಿನಿಮಾ ಮಾಡಲಾಗದ ಕಥೆಗಳು ಇಲ್ಲಿವೆ ಓದಿ ಹೇಳಿ ಎಂದಿದ್ದರು. ನಾನು ಕೂಡ ನನ್ನ ಪುಸ್ತಕ ನೀಡಿದ್ದೆ. ಯಾವುದು ಎನ್ನುವುದು ನೆನಪಿಲ್ಲ. ಹಣಕಾಸು ನಿರ್ವಹಣೆ ಕಲಿಯಬೇಕು ನೋಡಿ ಎಂದಿದ್ದರು. ಮತ್ತೆ ಮತ್ತೆ ಸಿಕ್ಕೋಣ ಎಂದಿದ್ದರು.
ನನಗೆ ಯಾವುದನ್ನೂ ಮುಚ್ಚಿಟ್ಟು ಅಭ್ಯಾಸವಿಲ್ಲ. ಅವತ್ತು ಕೂಡ ಮಠ ಗುರು ಜೊತೆ ಒಂದೆರೆಡು ಗಂಟೆ ಎನ್ನುವ ಹೆಡ್ಡಿಂಗ್ ಹಾಕಿ ಫೋಟೋ ಹಾಕಿದ್ದೆ. ಫೋಟೋ ಹಾಕಿದ ಅರ್ಧ ಗಂಟೆಯಲ್ಲಿ ಕನಿಷ್ಠ ಹತ್ತು ಕಾಲ್‌ಗಳು ಬಂದವು. ಕರೆ ಮಾಡಿದವರೆಲ್ಲಾ ನನ್ನ ಹಿತವನ್ನು ಬಯಸುವರು ಆಗಿದ್ದರು. ಮರುಗಳಿಗೆ ಫೋಟೋ ಡಿಲೀಟ್ ಮಾಡಿದ್ದೆ. ನಂತರ ಗುರು ಅವರನ್ನು ಭೇಟಿಯಾಗಲೇ ಇಲ್ಲ.
ಸರಳವಾದ ಬದುಕನ್ನು ಮಿತಿ ಮೀರಿ ಹದಗೆಡಿಸಿಕೊಂಡರೆ ಅದು ನರಕವಾಗುತ್ತದೆ. ಅದೇನೇ ಇರಲಿ ಯಾವ ಸಮಸ್ಯೆಗೂ ಸಾವು ಪರಿಹಾರವಲ್ಲ. ಅದರಲ್ಲೂ ಆತ್ಮಹತ್ಯೆ ಖಂಡಿತ ಉತ್ತರವಲ್ಲ. ಯಾರೋ ಒಂದಿಬ್ಬರು ಸ್ಟಾರ್ ನಟರು, ನಿರ್ದೇಶಕರು ಬಿಟ್ಟರೆ ಉಳಿದವರೆಲ್ಲರ ಜೇಬು ಖಾಲಿ ಎನ್ನುವುದು ಸಿನಿಮಾ ಕ್ಷೇತ್ರವನ್ನು ಹತ್ತಿರದಿಂದ ಕಂಡವರಿಗೆಲ್ಲಾ ಗೊತ್ತಿರುವ ವಿಷಯ. ಸರಳತೆ, ಮಾತಿನಲ್ಲಿ ನಯ, ದೈವ ಭಕ್ತಿ, ನಡತೆಯಲ್ಲಿ ಶುಚಿತ್ವ, ಕೈ ಬಾಯಿ ಶುದ್ಧವಾಗಿಟ್ಟು ಕೊಂಡರೆ, ಹಣವಿಲ್ಲದೆ ಕೂಡ ಗೌರವಯುತವಾಗಿ ಬದುಕಬಹುದು.
ಕೇವಲ ಬುದ್ದಿವಂತಿಕೆಯಿಂದ ಬದುಕು ಬಂಗಾರವಾಗುವುದಿಲ್ಲ ಎನ್ನುವುದಕ್ಕೆ ಗುರು ಸಾಕ್ಷಿ. ಅವರ ಬಗ್ಗೆ ಹೆಚ್ಚಿನದನ್ನು ಬರೆಯಲು ನನಗೆ ಗೊತ್ತಿಲ್ಲ. ಅವರೊಂದಿಗೆ ಕಳೆದದ್ದು ಎರಡು ಅಥವಾ ಮೂರು ತಾಸು ಅಷ್ಟೇ. ಸತ್ತಾಗ ಎಲ್ಲರೂ ಅಯ್ಯೋ ಪಾಪ ಎನ್ನುತ್ತಾರೆ. ಇದ್ದಾಗ ಯಾರೂ ಸಹಾಯಕ್ಕೆ ಬರುವುದಿಲ್ಲ ಇದು ವಾಸ್ತವ. ವಾಸ್ತವವನ್ನು ಅರಿತು ಬಾಳಬೇಕು. ಸತ್ತಮೇಲೂ ಜನರ ಬಾಯಿಗೆ ಆಹಾರವಾಗಬಾರದಿತ್ತು ಗುರು. ವೆರಿ ಸಾರೀ.