Guruprasad Death: ‘ಹೆಸರು ಹೇಳಿದ್ರೆ ಕಾಂಟ್ರವರ್ಸಿ ಆಗುತ್ತೆ, ಅಂಥವರ ಸಹವಾಸಕ್ಕೆ ಬಿದ್ದು ಗುರುಪ್ರಸಾದ್ ಹಾಳಾದ’; ಜಗ್ಗೇಶ್ ಪ್ರತಿಕ್ರಿಯೆ
Director Guruprasad Death: ಖ್ಯಾತ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಾವಿನ ಬೆನ್ನಲ್ಲೇ ನಟ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಜಗ್ಗೇಶ್ ಕೆರಿಯರ್ಗೆ ಮಠ, ಎದ್ದೇಳು ಮಂಜುನಾಥ ಸಿನಿಮಾಗಳನ್ನು ನೀಡಿದ್ದ ಗುರುಪ್ರಸಾದ್ ಬಗ್ಗೆ, ತಾವು ಕಂಡಂತೆ ಒಂದಷ್ಟು ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.
Guruprasad Death: ಸ್ಯಾಂಡಲ್ವುಡ್ಗೆ ಮಠ, ಎದ್ದೇಳು ಮಂಜುನಾಥ್, ಡೈರೆಕ್ಟರ್ಸ್ ಸ್ಪೇಷಲ್ ಸೇರಿ ಇತ್ತೀಚಿನ ರಂಗನಾಯಕ ಚಿತ್ರಗಳನ್ನು ಕನ್ನಡಿಗರಿಗೆ ನೀಡಿದ್ದವರು ಖ್ಯಾತ ನಿರ್ದೇಶಕ ಗುರುಪ್ರಸಾದ್. ಈಗ ಇದೇ ನಿರ್ದೇಶಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರು ಉತ್ತರದ ಮಾದನಾಯಕನಹಳ್ಳಿ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಇತ್ತ ಇದೇ ಗುರು ಪ್ರಸಾದ್ ಜತೆಗೆ ಆರಂಭದಿಂದಲೂ ನಂಟು ಹೊಂದಿದ್ದ ನಟ ಜಗ್ಗೇಶ್, ಈ ಆತ್ಮಹತ್ಯೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಜಗ್ಗೇಶ್ ಪ್ರತಿಕ್ರಿಯೆ..
"ಆತನ ಆರಂಭದ ದಿನಗಳಿಂದ ನೋಡಿದ್ದೇನೆ. ಒಳ್ಳೆಯ ಬರಹಗಾರ. ವಿಭಿನ್ನವಾದ ಬರಹಗಾರ. ಇದರ ಜತೆಗೆ ಕೆಳವು ತಪ್ಪುಗಳು ಏನಂದ್ರೆ, ಆತನಿಗೆ ಅಹಂ ಜಾಸ್ತಿ. ನಾನು ಅಂದುಕೊಂಡಿದ್ದೇ ಆಗಬೇಕು ಅನ್ನೋ ಮನಸ್ಥಿತಿ. ಹತ್ತು ವರ್ಷ ಅವನ ಜತೆ ಮಾತೇ ಬಿಟ್ಟಿದ್ದೆ. ಹೀಗಿರುವಾಗ, ವಿಖ್ಯಾತ ಜತೆಗೆ ಸಿನಿಮಾ ಚರ್ಚೆಯಾಗುತ್ತೆ. ನೀವಿಬ್ಬರೂ ಸೇರಿ ಸಿನಿಮಾ ಮಾಡಿ ಎಂದೂ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತೆ. ಸಿನಿಮಾನೂ ಶುರುವಾಗುತ್ತೆ. ನಾನು ಮಧ್ಯಾಹ್ನ 2 ಗಂಟೆಗೆ ಬಂದ್ರೆ, ಅವನು 4 ಗಂಟೆಗೆ ಬರೋನು. ಕತ್ತಲು ಆಗ್ತಿದ್ದಂತೆ, ಏನು ಶೂಟ್ ಮಾಡೋದು ಅಂತ ಅವನಿಗೇ ತಿಳಿತಿರಲಿಲ್ಲ"
ಆತನ ಮನೆತುಂಬ ಬಾಟ್ಗಳು..
“ಯಾಕಪ್ಪ ಹೀಗೆ ಮಾಡ್ತಿದ್ದೀಯಾ, ಆ ಪ್ರೊಡ್ಯೂಸರ್ ನಿನಗೆ 90 ಲಕ್ಷ ಕೊಟ್ಟಿದ್ದಾನೆ. ನಿನ್ನ ಲೈಫೇ ಸೆಟಲ್ ಆಗುತ್ತೆ ಎಂದು ಹೇಳುತ್ತಲೇ ಬಂದಿದ್ದೆ. ಹೀಗಿರುವಾಗಲೇ ಒಂದಿನ ಬಲವಂತ ಮಾಡಿ ಮನೆಗೆ ಕರೆದ, ಆ ಮನೆಗೆ ಹೋದ ಮೇಲೆ ನನಗೆ ಆಶ್ಚರ್ಯ ಆಗಿದ್ದೇನೆಂದರೆ, ಆ ಮನೆಯಲ್ಲಿ ಎಲ್ಲೆಲ್ಲಿ ಜಾಗ ಇದೆಯ್ಯೋ ಅಲ್ಲೆಲ್ಲ ಬಾಟಲ್ಗಳೇ ಇದ್ದವು. ಆ ಒಂದು ಚಟ ಅವನನ್ನೇ ಹಾಳು ಮಾಡ್ತು. ಇದು ಎಲ್ಲರಿಗೂ ಒಂದು ಪಾಠ. ಚಟಗಳಿಗೆ ದಾಸರಾಗಬಾರದು. ಈಗೋ ಇರಬಾರದು. ಶೂಟಿಂಗ್ ಸಮಯದಲ್ಲಿ ಹೇಳ್ತಿದ್ದ, ನೋಡ್ತಿರಾ ನಾನು ಏನಾದರೊಂದು ಬಿಟ್ಟು ಹೋಗ್ತಿನಿ ಅಂತಿದ್ದ”
ಸಹವಾಸ ದೋಷ, ಚಟ ಅವನನ್ನು ಹಾಳು ಮಾಡ್ತು..
“ಸಿನಿಮಾದಲ್ಲಿ ದೊಡ್ಡದಾಗಿ ಬಿಲ್ಡಪ್ ಕೊಡ್ತಾ ಒಂದಿಷ್ಟು ಜನ ಓಡ್ತಾಡ್ತಿರ್ತಾರೆ. ಅವರ ಸಹವಾಸಕ್ಕೆ ಬಿದ್ದರು. ಅವ್ರು ಏನಂದ್ರು ಅಂದ್ರೆ, ನಾನು ಆ ಸಿನಿಮಾ ಮಾಡ್ತಿನಿ, ನೀವು ಡೈಲಾಗ್ ಬರೆದು ಕೊಡಿ ಎಂದು ಗುರುಪ್ರಸಾದ್ ಅವರನ್ನು ಬುಟ್ಟಿಗೆ ಹಾಕ್ಕೊಂಡ್ರು. ಈ ವಿಚಾರ ಗುರು ಅವರ ಹೆಂಡತಿಗೂ ಕೋಪ ಬಂತು. ನಾನು ಗಂಡ ಹೆಂಡತಿಯನ್ನ ಇಬ್ಬರನ್ನೂ ಕರೆಸಿ, ಬುದ್ಧಿ ಹೇಳಿದೆ. ನೋಡಿ ಗಂಡ ಹೆಂಡತಿ ಸಂಬಂಧಗಳು ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಎಂದು ಹೇಳಿ ಸಮಾಧಾನ ಮಾಡಿ ಕಳಿಸಿದ್ದೆ. ಮತ್ತೆ ಅವರಿಂದಲೇ ದಾರಿ ತಪ್ಪಿದರು”
"ನಾನು ನೋಡಿದ ಗುರುಪ್ರಸಾದ್ ಹೇಗೆ ಎಂದರೆ, ಮೊದಲು ಸೆಟ್ಗೆ ನಾಲ್ಕು ಪುಸ್ತಕಗಳನ್ನು ಹಿಡಿದುಕೊಂಡು ಬರ್ತಿದ್ದ. ಅದಾದ ಮೇಲೆ ಅದೇ ಹುಡುಗ ಬ್ಯಾಗ್ನಲ್ಲಿ ಆರು ಬಾಟಲ್ಗಳನ್ನು ಹಿಡಿದುಕೊಂಡು ಬರೋ ಹಾಗಾದ. ಒಟ್ಟಿಗೆ ಕೂತು ಊಟ ಮಾಡ್ತಿದ್ವಿ. ಮಾತನಾಡ್ತಿದ್ವಿ. ಈ ಕುಡಿತದ ಚಟದ ಬಗ್ಗೆ ಸಾಕಷ್ಟು ಮಾತನಾಡಿದ್ದೆ. ಎಲ್ಲವನ್ನು ಟೇಕನ್ ಫಾರ್ ಗ್ರ್ಯಾಂಟೆಡ್ ಎಂದು ತೆಗೆದುಕೊಳ್ಳಬೇಡ. ಅದರಿಂದ ಆಚೆಬಾ, ಹೊರಗಡೆ ಬಂದು ಚೇಂಜ್ ಆಗು ಎಂದಿದ್ದೆ. ಇದೆಲ್ಲ ಆದಮೇಲೆ ಎರಡನೇ ಮದುವೆ ಆದ, ಆ ಹೆಂಡತಿಗೆ ಒಂದು ಹೆಣ್ಣು ಮಗು ಇದೆ" ಎಂದಿದ್ದಾರೆ ಜಗ್ಗೇಶ್ ಎಂದು ಖಾಸಗಿ ಸುದ್ದಿವಾಹಿನಿ ಜತೆಗೆ ಜಗ್ಗೇಶ್ ಮಾತನಾಡಿದ್ದಾರೆ.