Director Guruprasad: ಪ್ರಖರ ಪ್ರತಿಭೆಯ ಸಿನಿಮಾ ವ್ಯಾಮೋಹಿ ಗುರುಪ್ರಸಾದ್ ಕನ್ನಡಕ್ಕೆ ಕೊಟ್ಟ ಹಲವು ಕೊಡುಗೆಗಳು
- ನಿರ್ದೇಶಕನಾಗಿ ಗುರುಪ್ರಸಾದ್ ಖಾಲಿಯಾಗಿದ್ದರು ಎಂದು ಅವರ ಸಾವಿನ ದಿನವೇ ಹಲವರು ಹೇಳುತ್ತಿದ್ದಾರೆ. ಆದರೆ ಒಬ್ಬ ನಿರ್ದೇಶಕನಾಗಿ, ಸ್ಕ್ರಿಪ್ಟ್ ರೈಟರ್ ಆಗಿ ಗುರುಪ್ರಸಾದ್ ಅವರ ಬಳಿ ಎನರ್ಜಿ ಇಂದಿಗೂ ಇತ್ತು. ಬೆಳಗಿ, ಆಸರೆಯಾಗುವ ಮೊದಲೇ ಕಮರಿ ಹೋದರು.
- ನಿರ್ದೇಶಕನಾಗಿ ಗುರುಪ್ರಸಾದ್ ಖಾಲಿಯಾಗಿದ್ದರು ಎಂದು ಅವರ ಸಾವಿನ ದಿನವೇ ಹಲವರು ಹೇಳುತ್ತಿದ್ದಾರೆ. ಆದರೆ ಒಬ್ಬ ನಿರ್ದೇಶಕನಾಗಿ, ಸ್ಕ್ರಿಪ್ಟ್ ರೈಟರ್ ಆಗಿ ಗುರುಪ್ರಸಾದ್ ಅವರ ಬಳಿ ಎನರ್ಜಿ ಇಂದಿಗೂ ಇತ್ತು. ಬೆಳಗಿ, ಆಸರೆಯಾಗುವ ಮೊದಲೇ ಕಮರಿ ಹೋದರು.
(1 / 11)
ಚಿತ್ರಕಥೆಯನ್ನು ರೂಪಿಸುವ ವಿಚಾರದಲ್ಲಿ ಗುರುಪ್ರಸಾದ್‌ಗೆ ಗುರುಪ್ರಸಾದ್ ಒಬ್ಬರೇ ಸಾಟಿ. ಸುನಿಲ್ ಕುಮಾರ್ ದೇಸಾಯಿ, ಟಿ.ಎನ್.ಸೀತಾರಾಮ್ ಅವರಂಥ ಘಟಾನುಘಟಿಗಳ ಮೂಸೆಯಲ್ಲಿ ರೂಪುಗೊಂಡ ಪ್ರತಿಭೆ ಗುರುಪ್ರಸಾದ್. ಮಠ, ಎದ್ದೇಳು ಮಂಜುನಾಥ್ ಚಿತ್ರಗಳು ಗುರುಪ್ರಸಾದ್ ಅವರೊಳಗಿದ್ದ ನಿರ್ದೇಶಕನ ಸಾಮರ್ಥ್ಯಕ್ಕೆ ಕನ್ನಡಿ ಹಿಡಿದಿದ್ದವು.
(2 / 11)
ಕನ್ನಡದಲ್ಲಿ ಅತ್ಯುತ್ತಮ ಚಿತ್ರಕತೆ (ಸ್ಕ್ರಿಪ್ಟ್) ಮಾಡುವವರ ಒಂದು ಸಶಕ್ತ ತಂಡ ರೂಪಿಸುವ ಕಾಳಜಿ ಗುರುಪ್ರಸಾದ್ ಅವರಿಗೆ ಇತ್ತು. ಇದಕ್ಕಾಗಿ ಒಂದಿಷ್ಟು ದಿನ ನಿಯಮಿತ ತರಗತಿಗಳನ್ನೂ ನಡೆಸುತ್ತಿದ್ದರು. ಸುಮಾರು 3 ಸಾವಿರ ಸ್ಕ್ರಿಪ್ಟ್‌ಗಳನ್ನು ಸಂಗ್ರಹಿಸಿದ್ದರು. ಕನ್ನಡದ ಪ್ರಖ್ಯಾತ ಕಪ್ಪು-ಬಿಳುಪು ಚಿತ್ರಗಳನ್ನು ವಿದ್ಯಾರ್ಥಿಗಳ ಎದುರು ಪ್ರದರ್ಶಿಸಿ ಅದರ ಚಿತ್ರಕತೆ ಹೇಗೆ ಮಾಡಿರಬಹುದು ಎಂದು ಆಳವಾಗಿ ಚರ್ಚಿಸುತ್ತಿದ್ದರು. ನಂತರ ಮೂಲ ಚಿತ್ರಕತೆಯನ್ನು ವಿದ್ಯಾರ್ಥಿಗಳ ಎದುರು ಹಿಡಿಯುತ್ತಿದ್ದರು.
(3 / 11)
ಪುಸ್ತಕಗಳನ್ನು ಖರೀದಿಸಲು, ಓದಲು ಗುರುಪ್ರಸಾದ್ ಎಂದಿಗೂ ಹಿಂಜರಿದವರಲ್ಲ. ಅವರ ಬಳಿ ಸಾವಿರಾರು ಪುಸ್ತಕಗಳ ಸಂಗ್ರಹವಿತ್ತು. ಸ್ವತಃ ಓದಿರುತ್ತಿದ್ದರು, ಅದರ ಬಗ್ಗೆ ಚರ್ಚಿಸುತ್ತಿದ್ದರು, ಇತರರಿಗೂ ಓದಲು ಪ್ರೇರೇಪಿಸುತ್ತಿದ್ದರು. ಬದುಕಿನ ಹಲವು ಒಳಸುಳಿಗಳನ್ನು ಅರ್ಥ ಮಾಡಿಕೊಳ್ಳಲು ಪುಸ್ತಕಗಳು ನೆರವಾಗುತ್ತವೆ ಎನ್ನುವುದು ಗುರುಪ್ರಸಾದ್ ಅವರ ನಂಬಿಕೆಯಾಗಿತ್ತು.
(4 / 11)
ಪುನೀತ್ ರಾಜ್‌ಕುಮಾರ್ ಅವರ ಕಟ್ಟಾ ಅಭಿಮಾನಿಯಾಗಿದ್ದರು ಗುರುಪ್ರಸಾದ್. ಪುನೀತ್ ರಾಜ್‌ಕುಮಾರ್ ಸತ್ತ ದಿನವೇ ನಾನೂ ಸಾಯಬೇಕು ಅನ್ನೋದು ನನ್ನ ಆಸೆ ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರು. ಪುನೀತ್ ಸಾವಿನಿಂದ ತೀವ್ರವಾಗಿ ನೊಂದಿದ್ದರು.
(5 / 11)
ಕನಕಪುರ ರಸ್ತೆಯ ತಮ್ಮ ಸ್ವಂತ ಮನೆಯಲ್ಲಿ ಗುರುಪ್ರಸಾದ್ ಅವರ ಎಷ್ಟೋ ಕನಸುಗಳು ಚಿಗುರಿತ್ತು. ವೈಯಕ್ತಿಕ ಬದುಕಿನ ಏರಿಳಿತಗಳು ಮತ್ತು ಆರ್ಥಿಕ ಹೊಡೆತಗಳಿಂದ ಚೇತರಿಸಿಕೊಳ್ಳಲು ಆಗದೆ ಆ ಮನೆಯನ್ನೂ ಗುರುಪ್ರಸಾದ್ ಕಳೆದುಕೊಳ್ಳುವಂತಾಯಿತು. ಸ್ವತಃ ತಾವು ಇಷ್ಟೆಲ್ಲಾ ನೋವಿನಲ್ಲಿದ್ದರೂ, ತಮ್ಮ ಇಷ್ಟದ ಐ-ಮ್ಯಾಕ್ ಸಿಸ್ಟಂ ಒಂದನ್ನು ಕಡಿಮೆ ಬೆಲೆಗೆ ಮಾರಲೇಬೇಕಾದ ಪರಿಸ್ಥಿತಿ ಬಂದಿದ್ದಾಗಲೂ ಒಂದು ಕಾಲಕ್ಕೆ ತಮಗೆ ಆಸರೆಯಾಗಿದ್ದ ಮತ್ತೊಬ್ಬ ನಿರ್ದೇಶಕನ ಕಷ್ಟಕ್ಕೆ ಗುರುಪ್ರಸಾದ್ ಮಿಡಿದಿದ್ದರು. ಎಷ್ಟೋ ಸಲ ಅವರಿಗೆ ಆರ್ಥಿಕವಾಗಿ ಸಹಾಯವೂ ಒದಗುವಂತೆ ಮಾಡಿದ್ದರು.
(6 / 11)
ದೇಶದ ಪ್ರಸಿದ್ಧ ವೈಮಾನಿಕ ಕಾರ್ಖಾನೆ ಎಚ್‌ಎಎಲ್ (ಹಿಂದೂಸ್ತಾನ್ ಏರೊನಾಟಿಕಲ್ ಲಿಮಿಟೆಡ್) ಸಂಸ್ಥೆಯಲ್ಲಿ ವಿಜ್ಞಾನಿಯಾಗಿದ್ದವರು ಗುರುಪ್ರಸಾದ್. ಕಲೆ ಮತ್ತು ವಿಜ್ಞಾನದ ಹದಮಿಶ್ರಣ ಎನಿಸಿದ ಸಿನಿಮಾ ವ್ಯಾಕರಣವನ್ನು ವೈಜ್ಞಾನಿಕವಾಗಿ ನೋಡಲು ಈ ಹಿನ್ನೆಲೆ ನೆರವಾಗಿತ್ತು. ಅವರ ಬಳಿ ಚಿತ್ರಕತೆಯ ಪಾಠ ಕೇಳಿದಾಗ ಈ ಮನುಷ್ಯನಿಗೆ ಎಷ್ಟೊಂದು ಎನರ್ಜಿ ಇದೆ ಎಂಬುದು ಅನುಭವಕ್ಕೆ ಬರುತ್ತಿತ್ತು. ಆದರೆ ಅದ್ಯಾಕೋ ಅಂಥ ಎನರ್ಜಿ ಅವರು ತೆರೆಗೆ ತಂದ ಸಿನಿಮಾಗಳಿಗೆ ವರ್ಗಾವಣೆ ಆಗುತ್ತಿರಲಿಲ್ಲ.
(7 / 11)
ಟೈಟಾನಿಕ್ ಸಿನಿಮಾ ಬಗ್ಗೆ ಗುರುಪ್ರಸಾದ್ ಮಾಡಿದ್ದ ಒಂದು ಪಾಠವನ್ನು ಅವರ ವಿದ್ಯಾರ್ಥಿಗಳು ಸದಾ ನೆನಪಿಸಿಕೊಳ್ಳುತ್ತಿರುತ್ತಾರೆ. ಒಂದು ವಿಷಯದ ಬಗ್ಗೆ 13 ಸಿನಿಮಾಗಳು ತೆರೆಕಂಡಿದ್ದವು. ಎಲ್ಲವೂ ಫ್ಲಾಪ್ ಆಗಿದ್ದವು. ಆದರೆ ಒಬ್ಬ ಪ್ರತಿಭಾವಂತ ನಿರ್ದೇಶಕ ಬಂದ. ಎಲ್ಲ 13 ಸಿನಿಮಾಗಳ ದೌರ್ಬಲ್ಯ ಪಟ್ಟಿ ಮಾಡಿದ ನಂತರ ಅದೇ ವಿಷಯದ ಬಗ್ಗೆ ಹೊಸದೊಂದು ಚಿತ್ರಕತೆ ಬರೆದ. ಆ ಸಿನಿಮಾ ವಿಶ್ವದಾದ್ಯಂತ ಸೂಪರ್‌ಹಿಟ್ ಆಯಿತು. ಹೀಗೆ ಹಿಟ್ ಆದ ಸಿನಿಮಾವೇ ಟೈಟಾನಿಕ್. ಪ್ರೇಕ್ಷಕರನ್ನು ಭಾವನೆಗಳ ಕಡಲಿನಲ್ಲಿ ಮುಳುಗಿಸದಿದ್ದರೆ ಸಿನಿಮಾ ಗೆಲ್ಲುವುದಿಲ್ಲ ಎನ್ನುವುದನ್ನು ಗುರುಪ್ರಸಾದ್ ಕಂಡುಕೊಂಡಿದ್ದರು. ಅದನ್ನೇ ಅವರ ಚಿತ್ರಕತೆಗಳಲ್ಲಿಯೂ ಗಮನಿಸಬಹುದಿತ್ತು.
(8 / 11)
ನಿರ್ದೇಶಕನಾಗಿ ಅವರಿಗೆ ಇನ್ನೂ ಅದೆಷ್ಟೋ ಸಿನಿಮಾಗಳನ್ನು ತೆರೆಗೆ ತರುವ ಉತ್ಸಾಹವಿತ್ತು. ಬೆಸ್ಟ್ ಎನ್ನುವಂಥ ಸಿನಿಮಾ ಕೊಡುವ ಮೊದಲೇ ಕಣ್ಮುಚ್ಚಿದರು. ನಿರ್ದೇಶಕನ ಕೈಲಿದ್ದ ಸಿಗರೇಟ್ ಒಂದು ತಾನು ಏನೆಲ್ಲ ಗಮನಿಸಿದೆ ಎಂದು ಹೇಳುವುದನ್ನೇ ಒಂದು ಕಥೆಯಾಗಿಸಿ ಚಿತ್ರ ಮಾಡುವ ಉತ್ಸಾಹ ತೋರುತ್ತಿದ್ದರು. ಕ್ರಾಂತಿಕಾರಕ ಎನಿಸುವ, ಅಚ್ಚರಿಯಿಂದ ನಿಬ್ಬರಗು ಮಾಡುವ, ಈ ಕಾಲಕ್ಕಿಂತ ಮುಂದಿರುವ ಎಷ್ಟೋ ಕಥೆಗಳು, ದೃಶ್ಯಗಳನ್ನು ಅವರು ಬರೆದಿಟ್ಟುಕೊಂಡಿದ್ದರು. ಈಗ ಅಂಥ ಚಿತ್ರಕತೆಗಳೆಲ್ಲಾ ಅನಾಥವಾಗಿವೆ.
(9 / 11)
ಕನ್ನಡ ಸಿನಿಮಾ ಲೋಕದಲ್ಲಿ ಕಲಾವಿದರು ಮತ್ತು ನಿರ್ದೇಶಕರ ವೃತ್ತಿ ಜೀವನದ ಸಂಘರ್ಷ ಬೇರೆಬೇರೆ ರೀತಿಯಲ್ಲಿಯೇ ಇರುತ್ತದೆ. ಮೊದಲ ಸಲ ನಿರ್ದೇಶಕ ತನ್ನ ಸಾಮರ್ಥ್ಯ ಸಾಬೀತುಪಡಿಸಲು ಅವಕಾಶ ಸಿಗುವಂತೆ ಮಾಡಿಕೊಳ್ಳುವುದೇ ಒಂದು ದೊಡ್ಡ ಸವಾಲು. ದೇಹದ ಅಂದ, ಆಕಾರಕ್ಕಿಂತಲೂ ಸಾಮರ್ಥ್ಯ ಮತ್ತು ಚಿಂತನೆಯೇ ಮುಖ್ಯವಾಗುತ್ತದೆ. ಮಠ ಸಿನಿಮಾಕ್ಕೆ ಮೊದಲು ಗುರುಪ್ರಸಾದ್ ಅವರ ಬದುಕು ಇಂಥದ್ದೇ ಸಂಕಷ್ಟಗಳನ್ನು ಹಾದು ಬಂದಿತ್ತು. ಮಠ ಮತ್ತು ಎದ್ದೇಳು ಮಂಜುನಾಥ ಅವರಿಗೆ ದೊಡ್ಡಮಟ್ಟದ ಬ್ರೇಕ್ ಕೊಟ್ಟವು. ಕನ್ನಡಿಗರಲ್ಲಿ ಗುರುಪ್ರಸಾದ್ ಪ್ರತಿಭೆಯ ಬಗ್ಗೆ ಭರವಸೆಯನ್ನೂ ಮೂಡಿಸಿದವು.
(10 / 11)
ನಿರ್ದೇಶಕನಾಗಿ ಗುರುಪ್ರಸಾದ್ ಖಾಲಿಯಾಗಿದ್ದರು ಎಂದು ಅವರ ಸಾವಿನ ದಿನವೇ ಹಲವರು ಹೇಳುತ್ತಿದ್ದಾರೆ. ಪ್ರಖರ ಪ್ರತಿಭೆಯ ಒಬ್ಬ ಕಲಾವಿದನ ಬಗ್ಗೆ ಹೀಗೆ ಎಂದಿಗೂ ಮಾತನಾಡಬಾರದು. ಒಬ್ಬ ನಿರ್ದೇಶಕನಾಗಿ, ಸ್ಕ್ರಿಪ್ಟ್ ರೈಟರ್ ಆಗಿ ಗುರುಪ್ರಸಾದ್ ಅವರ ಬಳಿ ಎನರ್ಜಿ ಇಂದಿಗೂ ಇತ್ತು. ಅದರೆ ಸಮರ್ಪಕವಾದ ಒಂದು ತಂಡದ ಬಲ ಇಲ್ಲದೆ ಗುರುಪ್ರಸಾದ್ ಅದನ್ನು ತೆರೆಗೆ ತರುವಲ್ಲಿ ವಿಫಲರಾದರು. ಗುರುಪ್ರಸಾದ್ ಉದ್ದೇಶಪೂರ್ವಕವಾಗಿ ಬೇರೆಯವರಿಗೆ ಮೋಸ ಮಾಡಲಿಲ್ಲ. ಆದರೆ ತಮ್ಮೊಳಗಿದ್ದ ಸಿನಿಮಾಗಳನ್ನು ಸಮರ್ಥವಾಗಿ ತೆರೆಗೆ ತರದೆ ತಮಗೆ ತಾವೇ ಮೋಸ ಮಾಡಿಕೊಂಡರು. ಕನ್ನಡ ಚಿತ್ರರಂಗದ ಪ್ರಖರ ಪ್ರತಿಭೆಯಾಗಿ ಅರಳಿ, ಬೆಳಗಿ, ಆಸರೆಯಾಗುವ ಮೊದಲೇ ಕಮರಿ ಹೋದರು.
(11 / 11)
ಗಮನಿಸಿ: ಗುರುಪ್ರಸಾದ್ ಅವರ ಆಪ್ತ ಒಡನಾಡಿಗಳು ಕೊಟ್ಟ ಮಾಹಿತಿ ಇಲ್ಲಿದೆ. ಕೆಲ ಮಾಹಿತಿ ಇದೇ ಮೊದಲ ಬಾರಿಗೆ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ದಾಖಲಾಗುತ್ತಿದೆ. ಗುರುಪ್ರಸಾದ್ ಬಗ್ಗೆ ದೌರ್ಬಲ್ಯಗಳ ಬಗ್ಗೆ, ವೈಫಲ್ಯಗಳ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತಿರುವ ಸಂದರ್ಭ ಕಣ್ಣುಮುಚ್ಚಿದ ವ್ಯಕ್ತಿಯ ಕನಸುಗಳು ಹೀಗಿದ್ದವು ಎಂದು ಓದುಗರ ಗಮನಕ್ಕೆ ತರುವ ವಿನಮ್ರ ಪ್ರಯತ್ನ ಇದು.
ಇತರ ಗ್ಯಾಲರಿಗಳು