logo
ಕನ್ನಡ ಸುದ್ದಿ  /  ಮನರಂಜನೆ  /  36 ವರ್ಷಗಳ ಹಿಂದಿನ ಕಮಲ್‌ ಹಾಸನ್‌ ಕ್ಲಾಸಿಕ್‌ ಸಿನಿಮಾ ಮರು ಬಿಡುಗಡೆ

36 ವರ್ಷಗಳ ಹಿಂದಿನ ಕಮಲ್‌ ಹಾಸನ್‌ ಕ್ಲಾಸಿಕ್‌ ಸಿನಿಮಾ ಮರು ಬಿಡುಗಡೆ

Sep 17, 2023 11:22 AM IST

google News

Pushpaka Vimana: 36 ವರ್ಷಗಳ ಹಿಂದಿನ ಕಮಲ್‌ ಹಾಸನ್‌ ಕ್ಲಾಸಿಕ್‌ ಸಿನಿಮಾ ಮರು ಬಿಡುಗಡೆ

    • ಕಮಲ್‌ ಹಾಸನ್‌ ಅವರ ಸಿನಿಮಾ ವೃತ್ತಿ ಜೀವನದಲ್ಲಿನ ಹಲವು ಕ್ಲಾಸಿಕ್‌ ಸಿನಿಮಾಗಳಲ್ಲಿ ಪುಷ್ಪಕ ವಿಮಾನ ಚಿತ್ರವೂ ಒಂದು. ಇದೀಗ ಇದೇ ಸಿನಿಮಾ ಮರು ಬಿಡುಗಡೆ ಆಗುವುದಕ್ಕೆ ಸಿದ್ಧತೆ ನಡೆಸಿದೆ. 
Pushpaka Vimana: 36 ವರ್ಷಗಳ ಹಿಂದಿನ ಕಮಲ್‌ ಹಾಸನ್‌ ಕ್ಲಾಸಿಕ್‌ ಸಿನಿಮಾ ಮರು ಬಿಡುಗಡೆ
Pushpaka Vimana: 36 ವರ್ಷಗಳ ಹಿಂದಿನ ಕಮಲ್‌ ಹಾಸನ್‌ ಕ್ಲಾಸಿಕ್‌ ಸಿನಿಮಾ ಮರು ಬಿಡುಗಡೆ

Pushpaka Vimana: ಕಳೆದ ವರ್ಷ ವಿಕ್ರಂ ಸಿನಿಮಾ ಮೂಲಕ ಚಿತ್ರಪ್ರೇಮಿಗಳ ಮುಂದೆ ಬಂದಿದ್ದ ಉಳಗನಾಯಗನ್‌ ಕಮಲ್‌ ಹಾಸನ್‌, ಇದೀಗ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಕೊಟ್ಟಿದ್ದಾರೆ. ಇನ್ನೇನು ಶೀಘ್ರದಲ್ಲಿ ಅವರ ವೃತ್ತಿ ಜೀವನದ ಕ್ಲಾಸಿಕ್‌ ಸಿನಿಮಾಗಳಲ್ಲಿ ಒಂದಾದ ಪುಷ್ಪಕ ವಿಮಾನ ಸಿನಿಮಾ ಮರು ಬಿಡುಗಡೆ ಆಗಲಿದೆ. ಈ ವಿಚಾರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಕಮಲ್‌ ಹಾಸನ್‌ ಒಡೆತನದ ರಾಜ್ ಕಮಲ್‌ ಫಿಲಂಸ್‌ ಇಂಟರ್‌ನ್ಯಾಷನಲ್‌ ಶೇರ್‌ ಮಾಡಿದೆ.

ಸಿಂಗೀತಂ ಶ್ರೀನಿವಾಸ್‌ ರಾವ್‌ ನಿರ್ದೇಶನದಲ್ಲಿ 1987ರಲ್ಲಿ ತೆರೆಗೆ ಬಂದಿದ್ದ ಈ ಸಿನಿಮಾ ತಮಿಳಿನಲ್ಲಿ ಪೆಸುಮ್‌ ಪದಂ ಶೀರ್ಷಿಕೆಯಲ್ಲಿ ಬಿಡುಗಡೆಯಾದರೆ, ಹಿಂದಿಯಲ್ಲಿ ಪುಷ್ಪಕ್‌, ಕನ್ನಡದಲ್ಲಿ ಪುಷ್ಪಕ ವಿಮಾನ, ತೆಲುಗಿನಲ್ಲಿ ಪುಷ್ಪಕ ವಿಮಾನಂ ಹೆಸರಿನಲ್ಲಿ ಬಿಡುಗಡೆ ಆಗಿತ್ತು. ಇದೀಗ ಅದೇ ಮಾಸ್ಟರ್‌ ಪೀಸ್‌ ಸಿನಿಮಾಕ್ಕೆ ಮತ್ತಷ್ಟು ಆಧುನಿಕತೆಯ ರಂಗು ತುಂಬಿ ಮರು ಬಿಡುಗಡೆ ಮಾಡಲು ಕಮಲ್‌ ಹಾಸನ್‌ ನಿರ್ಧರಿಸಿದ್ದಾರೆ.

ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಸಂಸ್ಥೆ ಎಕ್ಸ್‌ನಲ್ಲಿ ಈ ವಿಚಾರವನ್ನು ಹೀಗೆ ಶೇರ್‌ ಮಾಡಿದೆ. "ಪುಷ್ಪಕ್, ಪೆಸುಂಪದಂ ಬ್ಲಾಕ್‌ ಕಾಮಿಡಿಯ ಮೂಕಿ ಸಿನಿಮಾ ಭಾರತದ ಮಾಸ್ಟರ್‌ಪೀಸ್‌ಗಳಲ್ಲೊಂದು. ಈ ಚಿತ್ರ ಶೀಘ್ರದಲ್ಲಿ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಆಗಲಿದೆ" ಎಂದಿದೆ. ಈ ಚಿತ್ರದಲ್ಲಿ ಕಮಲ್‌ ಹಾಸನ್, ಅಮಲಾ, ಲೋಕನಾಥ್, ಟೀನು ಆನಂದ್, ಪ್ರತಾಪ್, ರಮ್ಯ, ಪಿ.ಎಲ್. ನಾರಾಯಣ, ಮನ್‍ದೀಪ್ ರಾಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ನಿರ್ದೇಶನದ ಜತೆಗೆ ನಿರ್ಮಾಣ ಮತ್ತು ಸಂಗೀತ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು ಸಿಂಗೀತಂ ಶ್ರೀನಿವಾಸ್‌ ರಾವ್.‌ ಬಿ.ಸಿ ಗೌರಿಶಂಕರ್‌ ಛಾಯಾಗ್ರಹಣ ಈ ಚಿತ್ರಕ್ಕಿತ್ತು. ಹತ್ತಾರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದ ಈ ಸಿನಿಮಾ, ಭಾರತದ ಮೊದಲ ಪೂರ್ಣ ಪ್ರಮಾಣ ಮೂಕಿ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. 124 ನಿಮಿಷದ ಈ ಸಿನಿಮಾ ಬೆಂಗಳೂರಿನಲ್ಲಿ ಸುಮಾರು 35 ವಾರಗಳ ಕಾಲ ಭರ್ಜರಿ ಪ್ರದರ್ಶನ ಕಂಡಿತ್ತು.

35 ಲಕ್ಷ ಬಜೆಟ್‌ನಲ್ಲಿ ನಿರ್ಮಾಣ

1987ರಲ್ಲಿ ತೆರೆಗೆ ಬಂದಿದ್ದ ಪುಷ್ಪಕ ವಿಮಾನ ಸಿನಿಮಾ ಆ ಕಾಲದಲ್ಲಿ 35 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿತ್ತು. ಚಿತ್ರದ ಶೂಟಿಂಗ್‌ನ ಬಹುಪಾಲು ಬೆಂಗಳೂರಿನಲ್ಲಿಯೇ ನಡೆದಿತ್ತು ಎಂಬುದು ಮತ್ತೊಂದು ವಿಶೇಷ. ಬೆಂಗಳೂರಿನ ವಿನ್ಸರ್‌ ಮ್ಯಾನರ್ ಹೊಟೇಲ್‌ನಲ್ಲಿ ಚಿತ್ರೀಕರಣ ನಡೆದಿತ್ತು. ಹೀಗೆ ಹಲವು ವಿಶೇಷತೆಗಳ ಜತೆಗೆ ಬಿಡುಗಡೆಯಾದ ಈ ಸಿನಿಮಾ, ಆ ಸಮಯದಲ್ಲಿಯೇ 1 ಕೋಟಿಗೂ ಅಧಿಕ ಗಳಿಕೆ ಕಂಡಿತ್ತು.

ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ