logo
ಕನ್ನಡ ಸುದ್ದಿ  /  ಮನರಂಜನೆ  /  ಸೇವಂತಿಗೆ ಚೆಂಡಿನಂಥ ಮುದ್ದುಕೋಳಿ...ಡುಮ್ಮ ಸರ್‌ ಕಣ್ಣಾಲಿಗಳ ತುಂಬಿಸಿದ ಭೂಮಿಕಾ ಲಾಲಿಹಾಡು ಯಾವ ಸಿನಿಮಾದ್ದು ಗೊತ್ತೆ? - ಇಲ್ಲಿದೆ ಲಿರಿಕ್ಸ್‌

ಸೇವಂತಿಗೆ ಚೆಂಡಿನಂಥ ಮುದ್ದುಕೋಳಿ...ಡುಮ್ಮ ಸರ್‌ ಕಣ್ಣಾಲಿಗಳ ತುಂಬಿಸಿದ ಭೂಮಿಕಾ ಲಾಲಿಹಾಡು ಯಾವ ಸಿನಿಮಾದ್ದು ಗೊತ್ತೆ? - ಇಲ್ಲಿದೆ ಲಿರಿಕ್ಸ್‌

Praveen Chandra B HT Kannada

Nov 05, 2024 10:30 AM IST

google News

ಸೇವಂತಿಗೆ ಚೆಂಡಿನಂಥ ಮುದ್ದುಕೋಳಿ...ಡುಮ್ಮ ಸರ್‌ ಕಣ್ಣಾಲಿಗಳ ತುಂಬಿಸಿದ ಲಾಲಿಹಾಡು

    • 1964ರಲ್ಲಿ ತೆರೆಕಂಡ ಚಿನ್ನದ ಗೊಂಬೆ ಎಂಬ ಸಿನಿಮಾದ ಹಾಡು "ಸೇವಂತಿಗೆ ಚೆಂಡಿನಂಥ ಮುದ್ದು ಕೋಳಿ ತಾಯಿ ಮಡಿಲಿನಲಿ ಬೀಡು ಬಿಟ್ಟ ಮುದ್ದು ಕೋಳಿ" ಕಿರುತೆರೆ ಪ್ರೇಕ್ಷಕರಿಗೆ ಮತ್ತೆ ನೆನಪಾಗಿದೆ. ಏಕೆಂದರೆ, ಅಮೃತಧಾರೆ ಧಾರಾವಾಹಿಯಲ್ಲಿ ಅಮ್ಮನ ನೆನಪಿನಲ್ಲಿರುವ ಗೌತಮ್‌ಗೆ ಭೂಮಿಕಾ ಇದೇ ಹಾಡಿನ ಮೂಲಕ ಲಾಲಿಹಾಡು ಹಾಡಿದ್ದಾರೆ.
ಸೇವಂತಿಗೆ ಚೆಂಡಿನಂಥ ಮುದ್ದುಕೋಳಿ...ಡುಮ್ಮ ಸರ್‌ ಕಣ್ಣಾಲಿಗಳ ತುಂಬಿಸಿದ ಲಾಲಿಹಾಡು
ಸೇವಂತಿಗೆ ಚೆಂಡಿನಂಥ ಮುದ್ದುಕೋಳಿ...ಡುಮ್ಮ ಸರ್‌ ಕಣ್ಣಾಲಿಗಳ ತುಂಬಿಸಿದ ಲಾಲಿಹಾಡು

ಅಮೃತಧಾರೆ ಧಾರಾವಾಹಿಯಲ್ಲಿ ಅಮ್ಮ ಮತ್ತು ತಂಗಿ ಬದುಕಿದ್ದಾರೆ ಎಂಬ ಸುದ್ದಿ ತಿಳಿದ ಬಳಿಕ ಗೌತಮ್‌ ದಿವಾನ್‌ ನಿದ್ದೆಯಿಲ್ಲದ ರಾತ್ರಿ ಕಳೆಯುತ್ತಿದ್ದಾರೆ. ಎಲ್ಲಿದ್ದಾರೆ ಅಮ್ಮ, ಎಲ್ಲಿದ್ದಾರೆ ತಂಗಿ ಎಂದು ಮನಸ್ಸು ಪರಿತಪಿಸುತ್ತದೆ. ಆತನ ಮನಸ್ಸಲ್ಲಿ "ನಿಮ್ಮ ತಾಯಿ ಮತ್ತು ತಂಗಿ ಸತ್ತಿಲ್ಲ. ಅವರಿನ್ನೂ ಬದುಕಿದ್ದಾರೆ" ಎಂದು ಧನ್ಯ ಹೇಳಿದ ಮಾತೇ ಕೇಳುತ್ತಿದೆ. ಎಚ್ಚರಗೊಂಡ ಭೂಮಿಕಾ ಗೌತಮ್‌ನನ್ನು ಸಮಧಾನ ಮಾಡಲು ಆತ ತನ್ನ ತಾಯಿಯ ಬಗ್ಗೆ ಹೇಳಿದ ಕವಿತೆಯನ್ನು ನೆನಪಿಸುತ್ತಾರೆ. "ಸೇವಂತಿಗೆ ಚೆಂಡಿನಂಥ ಮುದ್ದುಕೋಳಿ, ತಾಯಿ ಮಡಿಲಲ್ಲಿ ಬೀಡುಬಿಟ್ಟ ಮುದ್ದು ಕೋಳಿ" ಎಂದು ಹಾಡುತ್ತಾರೆ. ಇದು ಗೌತಮ್‌ಗೆ ಬಾಲ್ಯದಲ್ಲಿ ತಾಯಿ ಹಾಡುತ್ತಿದ್ದ ಲಾಲಿಹಾಡು. ಭೂಮಿಕಾ ಬಾಯಿಯಿಂದ ಈ ಹಾಡು ಕೇಳಿ ಗೌತಮ್‌ ಕಣ್ಣಾಲಿಗಳು ತುಂಬಿ ಬರುತ್ತವೆ. ಭೂಮಿಕಾ ಮಡಿಲಲ್ಲಿ ತಲೆಯಿಟ್ಟು ಗೌತಮ್‌ ಮಲಗುತ್ತಾರೆ. ಭೂಮಿಕಾ ತಾಯಿ ಪ್ರೀತಿ ತೋರುತ್ತಾರೆ. ಒಂದು ಭಾವುಕ ಕ್ಷಣದಲ್ಲಿ ಸಾಂತ್ವಾನದ ಹಾಡಾಗಿ "ಸೇವಂತಿಗೆ ಚೆಂಡಿನಂಥ ಮುದ್ದುಕೋಳಿ" ಹಾಡು ಕಾಡುತ್ತದೆ.

ಅಮೃತಧಾರೆ ಸೀರಿಯಲ್‌ನಲ್ಲಿ ಗೌತಮ್‌ ಮತ್ತು ಭೂಮಿಕಾ ಜೋಡಿಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಗಂಡ ಹೆಂಡತಿ ಇದ್ದರೆ ಹೀಗಿರಬೇಕು ಎಂದು ಹೇಳುವಂತಹ ಜೋಡಿ ಅವರದ್ದು. ಇಲ್ಲಿ ಗೌತಮ್ ಮನಸ್ಸು ಮಗುವಿನಂತೆ. ಭೂಮಿಕಾ ಪತ್ನಿಯ ರೀತಿ ಮಾತ್ರವಾಗಿರದೆ ಬೇಸರದಲ್ಲಿರುವ ಗೌತಮ್‌ಗೆ ಅಮ್ಮನಂತೆ ಪ್ರೀತಿ ತೋರುತ್ತಾರೆ.

ಸೇವಂತಿಗೆ ಚೆಂಡಿನಂಥ ಮುದ್ದುಕೋಳಿ- ಚಿನ್ನದ ಗೊಂಬೆ

ಹಳೆಯ ಕನ್ನಡ ಚಿತ್ರಗೀತಗಳನ್ನು ಕೇಳುತ್ತಾ ಇರುವವರಿಗೆ ಇದು ಯಾವ ಸಿನಿಮಾದ ಹಾಡೆಂದು ತಿಳಿದಿರಬಹುದು. ಇದು ಚಿನ್ನದ ಗೊಂಬೆ ಎಂಬ ಚಲನಚಿತ್ರ ಜನಪ್ರಿಯಗೀತೆಯಾಗಿದೆ. ಚಿನ್ನದ ಗೊಂಬೆ ಎಂಬ ಕನ್ನಡ ಚಿತ್ರವನ್ನು 1964ರಲ್ಲಿ ಬಿಡುಗಡೆಯಾಗಿದೆ. ಬಿ.ಆರ್.ಪಂತುಲು ನಿರ್ದೇಶನದ ಸಿನಿಮಾ ಇದಾಗಿದೆ.

ಎಮ್.ವಿ.ರಾಜಮ್ಮ,ಜಯಲಲಿತಾ,ಸಂಧ್ಯಾ ಮತ್ತು ಕಲ್ಪನ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಟಿ.ಜಿ.ನಿಜಲಿಂಗಪ್ಪ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದರು.ಈ ಸಿನಿಮಾವನ್ನು ತಮಿಳಿನಲ್ಲಿ ಮುರಾದನ್ ಮುತ್ತು ಎಂಬ ಹೆಸರಿನಲ್ಲಿ ಮಾಡಲಾಯಿತು. ಹಿಂದಿಯಲ್ಲಿ ಗೋಪಿ ಎಂದು ಹಾಗೂ ತೆಲುಗಿನಲ್ಲಿ ಪಲೆಟ್ಟೋರಿ ಚಿನ್ನೋಡು ಎಂಬ ಹೆಸರಿನಲ್ಲಿ ನಿರ್ಮಿಸಲಾಗಿದೆ. ಈ ಚಿತ್ರವು ದಿವಂಗತ ಜಯಲಲಿತಾ ಅವರ ಮೊದಲ ಚಲನಚಿತ್ರವಾಗಿದೆ.

ಚಿನ್ನದ ಗೊಂಬೆ ಸಿನಿಮಾದ ಹಾಡುಗಳು

ಚಿನ್ನದ ಗೊಂಬೆ ಸಿನಿಮಾದಲ್ಲಿ ಆರು ಹಾಡುಗಳಿದ್ದವು. ಆರ್‌ಎನ್‌ ಜಯಗೋಪಾಲ್‌ ಸಾಹಿತ್ಯದ ಗೂಡಿನಲ್ಲಿ ಒಂದು ಬಾನಾಡಿ, ಹೊನ್ನಾಸೆ ಉಳ್ಳವಗೆ , ನೋಡಲ್ಲಿ ಮೆರವಣಿಗೆ ಹಾಡುಗಳು ಗಮನಸೆಳೆಯುತ್ತವೆ. ಈ ಹಾಡುಗಳನ್ನು ಕ್ರಮವಾಗಿ ಆರ್‌. ಪಾಣಿಗ್ರಾಹಿ, ಪಿಬಿ ಶ್ರೀನಿವಾಸ್‌, ಪಿ ಸುಶೀಲಾ ಹಾಡಿದ್ದಾರೆ. ವಿಜಯ ನಾರಸಿಂಹ ಅವರ ಸಾಹಿತ್ಯದ ತಾವರೆ ಹೂಕೆರೆ ಹಾಡನ್ನು ಪಿಬಿ ಶ್ರೀನಿವಾಸ್‌ ಮತ್ತು ಪಿ. ಸುಶೀಲಾ ಹಾಡಿದ್ದರು. ವಿಜಯ ನಾರಸಿಂಹ ಸಾಹಿತ್ಯದ "ಸೇವಂತಿಗೆ ಚೆಂಡಿನಂಥ" ಹಾಡನ್ನು ಸೂಲಮಂಗಲಂ ರಾಜಲಕ್ಷ್ಮಿ ಹಾಡಿದ್ದಾರೆ. ಇದೇ ಗೀತೆಯನ್ನೇ ಭೂಮಿಕಾ ಲಾಲಿಹಾಡಿನಂತೆ ಹಾಡಿ ಡುಮ್ಮಸರ್‌ಗೆ ಸಾಂತ್ವಾನದ ಪ್ರೀತಿ ತೋರಿದ್ದಾರೆ.

ಸೇವಂತಿಗೆ ಚೆಂಡಿನಂಥ ಮುದ್ದುಕೋಳಿ ಲಿರಿಕ್ಸ್‌

ಸೇವಂತಿಗೆ ಚೆಂಡಿನಂಥ ಮುದ್ದು ಕೋಳಿ

ತಾಯಿ ಮಡಿಲಿನಲಿ ಬೀಡು ಬಿಟ್ಟ ಮುದ್ದು ಕೋಳಿ

ಸೇವಂತಿಗೆ ಚೆಂಡಿನಂಥ ಮುದ್ದು ಕೋಳಿ

ತಾಯಿ ಮಡಿಲಿನಲಿ ಬೀಡು ಬಿಟ್ಟ ಮುದ್ದು ಕೋಳಿ

ಅಮ್ಮನಿತ್ತದೀ ಅಮೃತ ಎನುವ ಕೋಳಿ

ಅಮ್ಮನಿತ್ತದೀ ಅಮೃತ ಎನುವ ಕೋಳಿ

ಒಳ್ಳೆ ನಲ್ಮೆಯಿಂದ ಬೆಳೆದು ಬಂದ ಮುದ್ದು ಕೋಳಿ

ಸೇವಂತಿಗೆ ಚೆಂಡಿನಂಥ ಮುದ್ದು ಕೋಳಿ

ತಾಯಿ ಮಡಿಲಿನಲಿ ಬೀಡು ಬಿಟ್ಟ ಮುದ್ದು ಕೋಳಿ

ತಾಯಿ ತೊರೆದು ಘಳಿಗೆ ಕೂಡ ಅಗಲಲಾರದು

ತನ್ನ ಸೋದರರ ಮರೆತು ಬಿಟ್ಟು ಮೆರೆಯಲಾರದು

ತಾಯಿ ತೊರೆದು ಘಳಿಗೆ ಕೂಡ ಅಗಲಲಾರದು

ತನ್ನ ಸೋದರರ ಮರೆತು ಬಿಟ್ಟು ಮೆರೆಯಲಾರದು

ಜಾಣ ಮರಿ ಮುದ್ದು ಕೋಳಿ ಮಾತನಾಡದು

ಜಾಣ ಮರಿ ಮುದ್ದು ಕೋಳಿ ಮಾತನಾಡದು

ತನ್ನ ಸಾಕಿದವರ ಬಿಟ್ಟು ದೂರ ಓಡಿ ಹೋಗದು

ಸೇವಂತಿಗೆ ಚೆಂಡಿನಂಥ ಮುದ್ದು ಕೋಳಿ

ತಾಯಿ ಮಡಿಲಿನಲಿ ಬೀಡು ಬಿಟ್ಟ ಮುದ್ದು ಕೋಳಿ

ಪ್ರೇಮವಿರುವ ಮನೆಯದುವೆ ನಿತ್ಯ ಸುಂದರ

ಆ ಪ್ರೇಮಭರಿತ ಹೃದಯವದು ದೇವ ಮಂದಿರ

ಪ್ರೇಮವಿರುವ ಮನೆಯದುವೆ ನಿತ್ಯ ಸುಂದರ

ಆ ಪ್ರೇಮಭರಿತ ಹೃದಯವದು ದೇವ ಮಂದಿರ

ದೇವನವನೆ ಪ್ರೇಮರೂಪ ದಯಾಸಾಗರ

ದೇವನವನೆ ಪ್ರೇಮರೂಪ ದಯಾಸಾಗರ

ಆ ದೈವರಕ್ಷೆ ಕಾವುದೆಲ್ಲ ಪ್ರೇಮಜೀವರ

ಸೇವಂತಿಗೆ ಚೆಂಡಿನಂಥ ಮುದ್ದು ಕೋಳಿ

ತಾಯಿ ಮಡಿಲಿನಲಿ ಬೀಡು ಬಿಟ್ಟ ಮುದ್ದು ಕೋಳಿ

ಸೇವಂತಿಗೆ ಚೆಂಡಿನಂಥ ಮುದ್ದು ಕೋಳಿ

ತಾಯಿ ಮಡಿಲಿನಲಿ ಬೀಡು ಬಿಟ್ಟ ಮುದ್ದು ಕೋಳಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ