ಮಗ-ಸೊಸೆ ಸಂಸಾರದಲ್ಲಿರುವ ದೋಷ ಪರಿಹಾರಕ್ಕೆ ಊಟ, ನೀರು ಬಿಟ್ಟು ವ್ರತ ಆರಂಭಿಸಿದ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ
Nov 09, 2024 02:50 PM IST
Bhagyalakshmi Serial: ನವೆಂಬರ್ 8ರ ಸಂಚಿಕೆಯಲ್ಲಿ ಸೊಸೆ, ಮಗನಿಗೆ ಒಳ್ಳೆಯದಾಗಲಿ ಎಂದು ಕುಸುಮಾ ವ್ರತ ಮಾಡಲು ನಿರ್ಧರಿಸುತ್ತಾಳೆ
Bhagyalakshmi Kannada Serial: ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್ 8ರ ಎಪಿಸೋಡ್‌ನಲ್ಲಿ ಭಾಗ್ಯಾ ಹಾಗೂ ತಾಂಡವ್ ಸಂಸಾರದಲ್ಲಿ ಉಂಟಾಗಿರುವ ಸಮಸ್ಯೆಯನ್ನು ಪರಿಹರಿಸಲು ದೇವಸ್ಥಾನಕ್ಕೆ ತೆರಳುವ ಕುಸುಮಾ ಊಟ, ನೀರು ಸೇವಿಸದೆ ವ್ರತ ಮಾಡಲು ಮುಂದಾಗುತ್ತಾಳೆ.
Bhagyalakshmi Kannada Serial: ಕಪಲ್ ಟ್ರಿಪ್ ಆಯೋಜಿಸಿರುವ ರೆಫ್ರಿಜರೇಟರ್ ಕಂಪನಿಯೊಂದಿಗೆ ಭಾಗ್ಯಾ ಕೆಲಸ ಮಾಡುತ್ತಿರುವ ಸಿಟಿ ಆಫ್ ಲೈಟ್ಸ್ ಹೋಟೆಲ್ ಟೈ ಅಪ್ ಮಾಡಿಕೊಂಡಿದ್ದು ಟ್ರಿಪ್‌ಗೆ ಬರುವ ಕಪಲ್‌ಗಳಿಗಾಗಿ ಫುಡ್ ಕಾಂಟ್ರಾಕ್ಟ್ ಪಡೆದಿದೆ. ಹೆಡ್ ಶೆಫ್ ಭಾಗ್ಯಾ ಇವೆಂಟ್‌ಗೆ ಹೊರಟಿದ್ದಾಳೆ.
ಕುಸುಮಾಗೆ ಧೈರ್ಯ ಹೇಳಿದ ಧರ್ಮರಾಜ್
ಫಕೀರ ಹೇಳಿದ ಮಾತು ನಿಜವಾದರೆ ಸಮಸ್ಯೆಯಾಗುತ್ತದೆ ಎಂದುಕೊಳ್ಳುವ ಕುಸುಮಾ ಆಕೆ ಹೋಗದಂತೆ ತಡೆಯುತ್ತಾಳೆ. ಆದರೆ ಆಗಿದ್ದು ಆಗಲಿ, ಭಾಗ್ಯಾಳಿಂದ ಎಷ್ಟು ದಿನ ಅಂತ ವಿಚಾರ ಮುಚ್ಚಿಡಲು ಸಾಧ್ಯ? ಅವಳು ಹೋಗಲಿ ಎಂದು ಧರ್ಮರಾಜ್ ಹೇಳುತ್ತಾನೆ. ಆದರೆ ಕುಸುಮಾಗೆ ಮಾತ್ರ ಇದು ಇಷ್ಟವಿರುವುದಿಲ್ಲ. ಕುಸುಮಾಳನ್ನು ರೂಮ್‌ನಲ್ಲಿ ಕೂಡಿಹಾಕುವ ಧರ್ಮರಾಜ್, ಭಾಗ್ಯಾಳನ್ನು ಟ್ರಿಪ್‌ಗೆ ಕಳಿಸಿಕೊಡುತ್ತಾನೆ. ಭಾಗ್ಯಾ ಕೂಡಾ ಖುಷಿಯಿಂದ ಲಗ್ಗೇಜ್ ಜೊತೆ ಹೊರಡುತ್ತಾಳೆ. ಹೊರಗೆ ಬಂದು ಭಾಗ್ಯಾ ಇಲ್ಲದನ್ನು ನೋಡಿ ಕುಸುಮಾ ಗಾಬರಿ ಆಗುತ್ತಾಳೆ. ನೀನು ಹೆದರಬೇಡ, ಭಾಗ್ಯಾಗೆ ಏನೂ ಆಗುವುದಿಲ್ಲ. ಫಕೀರ ಹೇಳಿದ್ದೆಲ್ಲಾ ನಿಜವಾಗುವುದಿಲ್ಲ ಎಂದು ಧರ್ಮರಾಜ್, ಹೆಂಡತಿಗೆ ಧೈರ್ಯ ಹೇಳುತ್ತಾನೆ.
ಊಟ, ನೀರು ಬಿಟ್ಟು ವ್ರತ ಮಾಡಲು ಮುಂದಾದ ಕುಸುಮಾ
ಫಕೀರ ಹೇಳಿದಾಗಿನಿಂದ ಕುಸುಮಾ ಬಹಳ ಗಾಬರಿಯಾಗಿದ್ದಾಳೆ. ಕೊನೆಗೆ ಭಾಗ್ಯಾ-ತಾಂಡವ್‌ಗೆ ಇರುವ ಸಮಸ್ಯೆಗೆ ಪರಿಹಾರ ಮಾಡಿಸಲು ಕುಸುಮಾ ಅರ್ಚಕರಿಗೆ ಕರೆ ಮಾಡುತ್ತಾಳೆ. ಅವರ ಸೂಚನೆ ಮೇರೆಗೆ ದೇವಸ್ಥಾನಕ್ಕೆ ಹೋಗುತ್ತಾಳೆ. ಪೂಜಾ, ಸುಂದ್ರಿ ಕೂಡಾ ಕುಸುಮಾ ಜೊತೆ ಹೋಗುತ್ತಾರೆ. ಈ ಪರಿಹಾರ ಮಾಡುವುದು ಅಷ್ಟು ಸುಲಭವಲ್ಲ, ಬಹಳ ಕಷ್ಟ ಎಂದು ಅರ್ಚಕರು ಹೇಳುತ್ತಾರೆ. ಅದು ಎಷ್ಟೇ ಕಷ್ಟವಿರಲಿ ನಾನು ಮಾಡುತ್ತೇನೆ ಎಂದು ಕುಸುಮಾ ಹೇಳುತ್ತಾಳೆ. ನೀವೇ ಕೈಯಾರೆ 108 ಹಣತೆಗಳನ್ನು ತಯಾರಿಸಿ ಅದಕ್ಕೆ ಬತ್ತಿ, ಎಣ್ಣೆ ಹಾಕಿ ದೀಪ ಹಚ್ಚಿ ಆರತಿ ಬೆಳಗಬೇಕು. ವ್ರತ ಮುಗಿಯುವರೆಗೂ ತಿಂಡಿ, ಊಟ, ನೀರು ಏನೂ ಸೇವಿಸಬಾರದು ಎನ್ನುತ್ತಾರೆ. ಇದಕ್ಕೆ ಕುಸುಮಾ ಒಪ್ಪುತ್ತಾಳೆ. ಮಗ, ಸೊಸೆ ಜೀವನ ಸರಿ ಆಗಬೇಕೆಂಬ ಕಾರಣಕ್ಕೆ ಉಪವಾಸವಿದ್ದು ವ್ರತ ಮಾಡಲು ಶುರು ಮಾಡುತ್ತಾಳೆ.
ಭಾಗ್ಯಾಗೆ ಹೊಸ ಗೆಳತಿ ಪರಿಚಯ
ಇತ್ತ ಭಾಗ್ಯಾ ಇವೆಂಟ್‌ಗೆ ಹೊರಡುತ್ತಾಳೆ. ಅನಾರೋಗ್ಯದ ಕಾರಣ ಅವಳೊಂದಿಗೆ ಹಿತಾ ಬದಲಿಗೆ ಸಹನಾ ಎಂಬ ಹೊಸ ಎಂಪ್ಲಾಯ್ ಜೊತೆಯಾಗುತ್ತಾಳೆ. ಭಾಗ್ಯಾ, ಸಿಟಿ ಆಫ್ ಲೈಟ್ಸ್ ಹೋಟೆಲ್‌ನ ಹೆಡ್ ಕುಕ್ ಎಂದು ತಿಳಿಯದೆ, ಅವಳ ಮುಂದೆಯೇ ಆಕೆಯ ವರ್ತನೆ ಬಗ್ಗೆ ಮಾತನಾಡುತ್ತಾಳೆ. ಇವೆಂಟ್ ನಡೆಯುತ್ತಿರುವ ಹೋಟೆಲ್‌ನವರು ಭಾಗ್ಯಾಳನ್ನು ಸ್ವಾಗತಿಸಲು ತಯಾರಿ ಮಾಡಿಕೊಂಡಿರುತ್ತಾರೆ. ಆದರೆ ಭಾಗ್ಯಾ ತೆಗೆದುಕೊಳ್ಳಬೇಕಾದ ಹೂವಿನ ಬೊಕ್ಕೆಯನ್ನು ಸಹನಾ ಪಡೆಯುತ್ತಾಳೆ. ಇದನ್ನು ಗಮನಿಸುವ ಕಾರ್ ಡ್ರೈವರ್, ನಿಜ ಹೇಳಲು ಬಂದರೂ ಭಾಗ್ಯಾ ಆತನನ್ನು ತಡೆಯುತ್ತಾಳೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರಧಾರಿಗಳು
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್