ಅಳಿಯನನ್ನು ಕಂಡು ಮುಖ ಸಿಂಡರಿಸಿದ ಲಕ್ಷ್ಮೀ, ಎರಡನೇ ಬಾರಿ ಭಾವನಾಗೆ ತಾಳಿ ಕಟ್ಟಲು ಮುಂದಾದ ಸಿದ್ದೇಗೌಡ; ಲಕ್ಷ್ಮೀ ನಿವಾಸ ಧಾರಾವಾಹಿ
Oct 29, 2024 10:47 AM IST
Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿ ಅಕ್ಟೋಬರ್ 28ರ ಸಂಚಿಕೆಯಲ್ಲಿ ಭಾವನಾಗೆ ಮತ್ತೆ ತಾಳಿ ಕಟ್ಟುವಂತೆ ಜಾಹ್ನವಿ ಸಿದ್ದೇಗೌಡನಿಗೆ ಮನವಿ ಮಾಡುತ್ತಾಳೆ.
Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಅಕ್ಟೋಬರ್ 28ರ ಸಂಚಿಕೆಯಲ್ಲಿ ಸಿದ್ದೇಗೌಡ ಹೆಂಡತಿ ಭಾವನಾ ಜೊತೆ ಅವಳ ತವರು ಮನೆಗೆ ಊಟಕ್ಕೆ ಬರುತ್ತಾನೆ. ಅಲ್ಲಿ ಅವರಿಗೆ ಅದ್ದೂರಿ ಸ್ವಾಗತ ದೊರೆಯುತ್ತದೆ. ಮತ್ತೊಮ್ಮೆ ಎಲ್ಲರ ಮುಂದೆ ಭಾವನಾಗೆ ತಾಳಿ ಕಟ್ಟುವಂತೆ ಜಾಹ್ನವಿ ಒತ್ತಾಯ ಮಾಡುತ್ತಾಳೆ.
Lakshmi Nivasa Serial: ತಂದೆ ತಾಯಿ ಖುಷಿಗಾಗಿ ತವರು ಮನೆಗೆ ಹೋಗುವಂತೆ ಗೌಡ್ರು ಹೇಳಿದ್ದು ನಿಜ ಎನಿಸಿ ಭಾವನಾ ಅಮ್ಮನ ಮನೆಗೆ ಸಿದ್ದೇಗೌಡನ ಜೊತೆ ಹೋಗಲು ಒಪ್ಪುತ್ತಾಳೆ. ಜೊತೆಗೆ ಖುಷಿ ಕೂಡಾ ಹೋಗುತ್ತಾಳೆ. ನಮ್ಮ ನಡುವೆ ಇರುವ ಮನಸ್ತಾಪವನ್ನು ಇಲ್ಲಿ ತೋರಿಸಬೇಡಿ. ನಿಮ್ಮ ಅಪ್ಪ-ಅಮ್ಮನಿಗಾದರೂ ಖುಷಿಯಿಂದ ಇರಿ ಎಂದು ಸಿದ್ದು , ಭಾವನಾ ಬಳಿ ಮನವಿ ಮಾಡುತ್ತಾನೆ.
ತವರು ಮನೆಯಲ್ಲಿ ಭಾವನಾ-ಸಿದ್ದುಗೆ ಅದ್ದೂರಿ ಸ್ವಾಗತ
ಭಾವನಾ ತವರು ಮನೆಯಲ್ಲಿ ಅವರಿಗೆ ಅದ್ದೂರಿ ಸ್ವಾಗತ ದೊರೆಯುತ್ತದೆ. ಏನೇ ಭಾವನಾ ಎಲ್ಲರಿಗೂ ಊಟ ಹಾಕಿಸಬೇಕು ಎಂಬ ಕಾರಣಕ್ಕೆ ಹೀಗೆ ಯಾರಿಗೂ ಹೇಳದೆ ಗುಟ್ಟಾಗಿ ಮದುವೆ ಆಗಿಬಿಟ್ಯಾ ಎಂದು ಹಿರಿಯಕ್ಕ ಮಂಗಳ, ತಂಗಿಯನ್ನು ರೇಗಿಸುತ್ತಾಳೆ. ಇದು ಆಕೆಗೆ ಮುಜುಗರ ಎನಿಸುತ್ತದೆ. ಅದೆಲ್ಲಾ ನಂತರ ಮಾತನಾಡೋಣ, ಅವರು ಒಳಗೆ ಬರಲಿ ಎಂದು ಶ್ರೀನಿವಾಸ್ ಹೇಳುತ್ತಾರೆ. ಭಾವನಾ , ಸಿದ್ದೇಗೌಡ ಮನೆಯವರನ್ನು ಮಾತನಾಡಿಸುತ್ತಾರೆ. ಅವರನ್ನು ಕಂಡು ಕೆಲವರು ಖುಷಿಯಾಗಿದ್ದರೆ, ಕೆಲವರು ಖುಷಿಯಾದಂತೆ ನಾಟಕ ಮಾಡುತ್ತಾರೆ. ಸಿದ್ದುವನ್ನು ಶ್ರೀನಿವಾಸ್ ಒಪ್ಪಿಕೊಂಡರೂ, ಲಕ್ಷ್ಮೀ ಮಾತ್ರ ಅಳಿಯ ಎಂದು ಒಪ್ಪಲು ತಯಾರಿಲ್ಲ. ಸಿದ್ದೇಗೌಡ ಮನೆಗೆ ಬಂದಾಗಲೂ ಲಕ್ಷ್ಮೀ ಬೇಸರದಿಂದಲೇ ಇರುತ್ತಾಳೆ.
ಎಲ್ಲರೂ ಒಟ್ಟಾಗಿ ಊಟ ಮಾಡುತ್ತಾರೆ. ಜಯಂತ್ ಜೊತೆ ಮಾತನಾಡುವ ಸಿದ್ದೇಗೌಡ, ನಾನು ಏನು ಮಾಡಿದರೂ ಪ್ರೀತಿಗಾಗಿ ಮಾಡಿದ್ದು ಎನ್ನುತ್ತಾನೆ. ಅಂತೂ ನೀವು ರಾಜಕಾರಣಿ ಅದ್ರಿ, ಜನರು ಎಷ್ಟೇ ಸಿಟ್ಟಿನಲ್ಲಿದ್ದರೂ ಅವರ ಮನ ಒಲಿಸಿ ರಾಜಕೀಯದವರು ಓಟು ಪಡೆಯುತ್ತಾರೆ. ನೀವೂ ಕೂಡಾ ಹಾಗೇ ಮಾಡಿಬಿಟ್ರಿ ಎಂದು ಜಯಂತ್, ಸಿದ್ದೇಗೌಡನ ಕಾಲೆಳೆಯುತ್ತಾನೆ. ಮಾತಿನ ಸಲಿಗೆಯಲ್ಲಿ ಸಿದ್ದೇಗೌಡ ಜಯಂತ್ ಹೆಗಲ ಮೇಲೆ ಕೈ ಹಾಕುತ್ತಾನೆ. ಅದು ಜಯಂತ್‌ಗೆ ಇಷ್ಟವಾಗುವುದಿಲ್ಲ. ಆದರೆ ತನ್ನ ಕೋಪವನ್ನು ಅವನ ಮೇಲೆ ತೋರಿಸದೆ ಹೆಗಲ ಮೇಲಿನ ಕೈ ತೆಗೆಯುತ್ತಾನೆ.
ಎಲ್ಲರ ಮುಂದೆ ಭಾವನಾಗೆ ಮತ್ತೆ ತಾಳಿ ಕಟ್ಟುವಂತೆ ಸಿದ್ದುಗೆ ಜಾಹ್ನವಿ ಮನವಿ
ಭಾವನಾಳಿಂದ ದೂರ ಕುಳಿತಿದ್ದ ಸಿದ್ದುವನ್ನು ಅವಳ ಹತ್ತಿರ ಕೂರುವಂತೆ ಜಾಹ್ನವಿ ಹೇಳುತ್ತಾಳೆ. ಅಕ್ಕನ ಮದುವೆಯನ್ನು ನಾವು ನೋಡಲಾಗಲಿಲ್ಲ. ಈಗಲಾದರೂ ನೋಡೋಣ ಅಂತ ಆಸೆ. ಆದ್ದರಿಂದ ಈಗ ಮತ್ತೊಮ್ಮೆ ಭಾವ, ಅಕ್ಕನ ಕೊರಳಿಗೆ ತಾಳಿ ಕಟ್ಟಲಿ ಎಂದು ಜಾಹ್ನವಿ ಹೇಳುತ್ತಾಳೆ. ಭಾವನಾ, ಸಿದ್ದೇಗೌಡ ಇಬ್ಬರಿಗೂ ಯಾವ ರೀತಿ ಪ್ರತಿಕ್ರಿಯಿಸಬೇಕು ಗೊತ್ತಾಗುವುದಿಲ್ಲ. ಹಿರಿಯ ಸೊಸೆ ವೀಣಾ ಎಲ್ಲರ ಕೈಲಿ ತಾಳಿ ಮುಟ್ಟಿಸುತ್ತಾಳೆ. ಆದರೆ ಲಕ್ಷ್ಮೀ ಮಾತ್ ಹಿಂಜರಿಯುತ್ತಾಳೆ. ಅವಳ ಬಳಿ ಬರುವ ಮಂಗಳ ನಿನ್ನ ಮುದ್ದು ಮಗಳ ಮದುವೆ ತಾನೇ ತಾಳಿ ಮುಟ್ಟು ಎಂದು ಅವಳೇ ಕೈ ಇಟ್ಟು ಮುಟ್ಟಿಸುತ್ತಾಳೆ. ಕೊನೆಗೆ ತಾಳಿ ಕಟ್ಟುವಂತೆ ಜಾಹ್ನವಿ ಸಿದ್ದುಗೆ ಹೇಳುತ್ತಾಳೆ. ಸಿದ್ದು ಮುಜುಗರದಿಂಲೇ ತಾಳಿಯನ್ನು ಕೈಗೆತ್ತಿಕೊಂಡು ಎಂಥ ಪರೀಕ್ಷೆ ಇದು ಎಂದುಕೊಳ್ಳುತ್ತಾನೆ.
ಇತ್ತ ಅತ್ತೆ ಮನೆಯಿಂದ ಹೊರಟ ಸಿಂಚನಾ, ಅಮ್ಮನ ಮನೆಗೆ ಬರುತ್ತಾಳೆ. ಮಗಳು ಲಗ್ಗೇಜ್ ಸಹಿತ ಬಂದಿದ್ದನ್ನೂ ನೋಡಿ ಸಿಂಚನಾ ಅಮ್ಮ ಗಾಬರಿ ಆಗುತ್ತಾಳೆ. ಈ ಮನೆ ತಲೆನೋವು ಅಲ್ಲಿಗೆ ಬಂದಿದೆಯಲ್ಲ ಅದಕ್ಕೆ ನಾನು ಅವರ ಮುಖ ನೋಡಲಾಗದೆ ಇಲ್ಲಿಗೆ ಬಂದೆ ಎಂದು ಸಿಂಚನಾ ಹೇಳುತ್ತಾಳೆ. ಮಗ ನನಗೆ ಒಂದು ಮಾತು ತಿಳಿಸದೆ ಅತ್ತೆ ಮನೆಗೆ ಹೋಗಿದ್ದನ್ನು ತಿಳಿದು ಸಿದ್ದು ಅಮ್ಮ ಬೇಸರಗೊಳ್ಳುತ್ತಾಳೆ.
ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು
ಸಿದ್ದೇಗೌಡ್ರು- ಧನಂಜಯ
ಭಾವನಾ- ದಿಶಾ ಮದನ್
ಲಕ್ಷ್ಮೀ- ನಟಿ ಶ್ವೇತಾ
ಶ್ರೀನಿವಾಸ್ - ಅಶೋಕ್ ಜೆಂಬೆ
ಹರೀಶ್ - ಅಜಯ್ ರಾಜ್
ಸಿಂಚನ - ರೂಪಶ್ರೀ
ಜಾಹ್ನವಿ - ಚಂದನ ಆನಂತಕೃಷ್ಣ
ಜಯಂತ್ - ದೀಪಕ್ ಸುಬ್ರಮಣ್ಯ
ಸಂತೋಷ್ - ಮಧು ಹೆಗಡೆ
ವೀಣಾ - ಲಕ್ಷ್ಮೀ ಹೆಗಡೆ