ಲಿಂಗ ಸಿನಿಮಾ ಸೋಲಿಗೆ ರಜನಿಕಾಂತ್ ಕಾರಣ; 10 ವರ್ಷಗಳ ನಂತರ ಸೂಪರ್ ಸ್ಟಾರ್ ಕಡೆ ಬೆರಳು ತೋರಿದ ನಿರ್ದೇಶಕ ರವಿಕುಮಾರ್
Oct 08, 2024 12:54 PM IST
ಲಿಂಗ ಸಿನಿಮಾ ಸೋಲಿಗೆ ರಜನಿಕಾಂತ್ ಕಾರಣ; 10 ವರ್ಷಗಳ ನಂತರ ಸೂಪರ್ ಸ್ಟಾರ್ ಕಡೆ ಬೆರಳು ತೋರಿದ ನಿರ್ದೇಶಕ ರವಿಕುಮಾರ್
ಲಿಂಗ ಸಿನಿಮಾ ತೆರೆ ಕಂಡು 10 ವರ್ಷಗಳ ನಂತರ ನಿರ್ದೇಶಕ ಕೆ.ಎಸ್.ರವಿಕುಮಾರ್ ರಜನಿಕಾಂತ್ ವಿರುದ್ಧ ಆರೋಪ ಮಾಡಿದ್ದಾರೆ. ಈ ಸಿನಿಮಾ ಸೋಲಿಗೆ ರಜನಿಕಾಂತ್ ಅವರೇ ಕಾರಣ. ಅನಾವಶ್ಯಕವಾಗಿ ಸಿನಿಮಾ ಸ್ಕ್ರಿಪ್ಟ್‌ನಲ್ಲಿ ತಲೆ ಹಾಕಿದ್ದರಿಂದಲೇ ಸಿನಿಮಾ ಅಟ್ಟರ್ ಫ್ಲಾಪ್ ಆಯ್ತು ಎಂದು ರವಿಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಭಾರೀ ನಿರೀಕ್ಷೆ ಇಟ್ಟುಕೊಂಡು ತಯಾರಾದ ಸೂಪರ್ ಸ್ಟಾರ್‌ಗಳು ಅಭಿನಯಿಸಿರುವ ಎಷ್ಟೋ ಸಿನಿಮಾಗಳು ಇನ್ನಿಲ್ಲದಂತೆ ನೆಲ ಕಚ್ಚಿವೆ. ಅವುಗಳಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಲಿಂಗ ಸಿನಿಮಾ ಕೂಡಾ ಒಂದು. ಈ ಸಿನಿಮಾ ರಜನಿಕಾಂತ್ ಅವರ ಸಿನಿ ಕರಿಯರ್‌ನಲ್ಲಿ ದೊಡ್ಡ ಫ್ಲಾಪ್ ಎನಿಸಿಕೊಂಡ ಸಿನಿಮಾ. ಈ ಚಿತ್ರ 2014ರಲ್ಲಿ ತೆರೆ ಕಂಡಿತ್ತು.
ಚಿತ್ರದ ಸೋಲಿಗೆ ರಜನಿಕಾಂತ್ ಕಾರಣ ಎಂದ ರವಿಕುಮಾರ್
ಲಿಂಗ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷೆಯಷ್ಟು ಕಲೆಕ್ಷನ್ ಮಾಡಲಿಲ್ಲ. ಈ ಚಿತ್ರವನ್ನು ಕೆಎಸ್ ರವಿಕುಮಾರ್ ನಿರ್ದೇಶಿಸಿದ್ದಾರೆ. 100 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾ ಜನರನ್ನು ಚಿತ್ರಮಂದಿದತ್ತ ಸೆಳೆಯಲು ವಿಫಲವಾಗಿತ್ತು. ಸಿನಿಮಾ ತೆರೆ ಕಂಡು 10 ವರ್ಷಗಳ ನಂತರ ನಿರ್ದೇಶಕ ರವಿಕುಮಾರ್ ಕೆಲವೊಂದು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಇದೀಗ ಲಿಂಗ ಸಿನಿಮಾದ ಸೋಲಿನ ಪ್ರಮುಖ ಅಂಶಗಳನ್ನು ನಿರ್ದೇಶಕ ರವಿಕುಮಾರ್ ಬಹಿರಂಗಪಡಿಸಿದ್ದಾರೆ. ಈ ಚಿತ್ರದ ಫ್ಲಾಪ್‌ಗೆ ಪ್ರಮುಖ ಕಾರಣ ರಜನಿಕಾಂತ್ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ರಜನಿಕಾಂತ್, ಲಿಂಗ ಚಿತ್ರದ ದ್ವಿತೀಯಾರ್ಧವನ್ನು ಸಂಪೂರ್ಣವಾಗಿ ಬದಲಾಯಿಸಲು ನಮಗೆ ಸೂಚಿಸಿದ್ದರು, ಇಷ್ಟವಿಲ್ಲದಿದ್ದರೂ ನಾವು ಆ ಕೆಲಸ ಮಾಡಬೇಕಾಯ್ತು. ಜೊತೆಗೆ ಗ್ರಾಫಿಕ್ಸ್ ಮಾಡಲು ನಮಗೆ ಹೆಚ್ಚು ಸಮಯ ಕೊಡಲಿಲ್ಲ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಮೂಗು ತೂರಿಸುತ್ತಿದ್ದರು. ಕ್ಲೈಮ್ಯಾಕ್ಸ್‌ನಲ್ಲಿ ಬೇರೆಯದ್ದೇ ಸೀನ್‌ಗಳನ್ನು ಅಳವಡಿಸಲು ಅವರೇ ಕಾರಣ. ಜೊತೆಗೆ ಅನುಷ್ಕಾ ಶೆಟ್ಟಿ ಜೊತೆಗಿನ ಹಾಡೊಂದರನ್ನು ತೆಗೆಯಲು ಅವರೇ ಹೇಳಿದ್ದು ಎಂದು ರವಿಕುಮಾರ್ ಆರೋಪಿಸಿದ್ದಾರೆ.
ಚಿತ್ರದಲ್ಲಿ ಬೇಡದ ದೃಶ್ಯಗಳನ್ನು ಸೇರಿಸಲು ಸೂಚಿಸಿದ್ದರು
ಲಿಂಗ ಚಿತ್ರದ ಫೈಟ್‌ನಲ್ಲಿ ರಜನಿಕಾಂತ್ ಸೇತುವೆಯಿಂದ ಏರ್ ಬಲೂನ್‌ನಿಂದ ನೆಗೆಯುವ ದೃಶ್ಯಗಳಿವೆ. ಈ ಐಡಿಯಾ ಕೂಡಾ ಅವರದ್ದೇ. ಬೇಡದ ದೃಶ್ಯಗಳನ್ನು ಅಳವಡಿಸುವ ಮೂಲಕ ಸಿನಿಮಾವನ್ನು ಸಂಪೂರ್ಣ ಹಾಳು ಮಾಡಿದರು ಎಂದು ರವಿಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ರಜನಿಕಾಂತ್ ಲಿಂಗೇಶ್ವರನ್ ಮತ್ತು ರಾಜಾ ಲಿಂಗೇಶ್ವರನ್ ಎಂಬ ಎರಡು ಪಾತ್ರಗಳಲ್ಲಿ ನಟಿಸಿದ್ದರು. ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಮತ್ತು ಸೋನಾಕ್ಷಿ ಸಿನ್ಹಾ ನಾಯಕಿಯರಾಗಿ ನಟಿಸಿದ್ದಾರೆ. ಜಗಪತಿ ಬಾಬು, ಕೆ ವಿಶ್ವನಾಥ್, ಸಂತಾನಂ, ಕರುಣಾಕರನ್, ಬ್ರಹ್ಮಾನಂದಂ, ದೇವ್ ಗಿಲ್, ರಾಧಾ ರವಿ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಲಿಂಗ ಚಿತ್ರವನ್ನು ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿ ವೆಂಕಟೇಶ್ ನಿರ್ಮಿಸಿದ್ದಾರೆ. ಈ ಚಿತ್ರದ ಮೂಲಕ ನಿರ್ದೇಶಕ ಕೆ.ಎಸ್.ರವಿಕುಮಾರ್ ಟೀಕೆಗೆ ಗುರಿಯಾಗಿದ್ದರು. ರಜನಿಕಾಂತ್ ನಾಯಕನಾಗಿ ನಟಿಸಿರುವ ವೆಟ್ಟಯನ್ ಇದೇ ವಾರ ತೆರೆ ಕಾಣುತ್ತಿದೆ. ಇದೇ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ರಾಣಾ ದಗ್ಗುಬಾಟಿ, ಫಹಾದ್ ಫಾಜಿಲ್ ಮುಂತಾದ ಸ್ಟಾರ್ ನಟರು ನಟಿಸಿದ್ದಾರೆ. ಟಿಜೆ .ಜ್ಞಾನವೇಲ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನದ ಕೂಲಿ ಚಿತ್ರದಲ್ಲೂ ರಜನಿಕಾಂತ್ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ, ತೆಲುಗಿನ ಅಕ್ಕಿನೇನಿ ನಾಗಾರ್ಜುನ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.