ತಲೆಕೆಳಗಾದ ಲೆಕ್ಕಾಚಾರ, 7ನೇ ದಿನವೂ ಕುಸಿದ ವಿಜಯ್ ಅಭಿನಯದ ಗೋಟ್ ಸಿನಿಮಾ ಕಲೆಕ್ಷನ್; ಇದುವರೆಗೂ ಸಿನಿಮಾ ಗಳಿಸಿದೆಷ್ಟು?
Sep 13, 2024 05:23 PM IST
ತಲೆಕೆಳಗಾದ ಲೆಕ್ಕಾಚಾರ, 7ನೇ ದಿನವೂ ಕುಸಿದ ವಿಜಯ್ ಅಭಿನಯದ ಗೋಟ್ ಸಿನಿಮಾ ಕಲೆಕ್ಷನ್; ಇದುವರೆಗೂ ಸಿನಿಮಾ ಗಳಿಸಿದೆಷ್ಟು?
ಕಳೆದ ಗುರುವಾರ (ಸೆ.5) ತೆರೆ ಕಂಡ ವಿಜಯ್ ಅಭಿನಯದ ಗೋಟ್ ಸಿನಿಮಾ ಕಲೆಕ್ಷನ್‌ನಲ್ಲಿ ಕುಸಿತ ಕಂಡಿದೆ. ವಿಶ್ವಾದ್ಯಂತ ಇದುವರೆಗೂ ಸಿನಿಮಾ 300 ಕೋಟಿ ರೂ.ನಷ್ಟು ಸಂಗ್ರಹಿಸಿದೆ. ಸಿನಿಮಾ 700-800 ಕೋಟಿ ರೂ. ಲಾಭ ಮಾಡಬಹುದು ಎಂಬ ಸಿನಿ ಪಂಡಿತರ ಲೆಕ್ಕಾಚಾರ ತಲೆಕೆಳಗಾಗಿದೆ.
ಸೆಪ್ಟೆಂಬರ್ 5 ರಂದು ಅದ್ಧೂರಿಯಾಗಿ ತೆರೆ ಕಂಡ ಗೋಟ್ ಸಿನಿಮಾ ಕಲೆಕ್ಷನ್ ವಿಚಾರದಲ್ಲಿ ಭಾರೀ ನಿರಾಸೆ ಉಂಟು ಮಾಡಿದೆ. ಈ ಸಿನಿಮಾ ಸಾವಿರ ಕೋಟಿ ಕ್ಲಬ್ ಸೇರಬಹುದು ಎಂದು ಕಾಯುತ್ತಿದ್ದವರಿಗೆ ಬಹಳ ಬೇಸರ ಮೂಡಿಸಿದೆ. ಬಿಡುಗಡೆಯಾಗಿ 7 ದಿನಗಳ ನಂತರವೂ ಸಿನಿಮಾ 300 ಕೋಟಿ ರೂ ಮಾತ್ರ ಕಲೆಕ್ಷನ್ ಮಾಡಿದ್ದು ಹಾಕಿದ ಬಂಡವಾಳದ ಅಂಕಿ ಮುಟ್ಟಲು ಇನ್ನೂ ಎಷ್ಟು ದಿನಗಳು ಬೇಕು? ಎಂಬ ಪ್ರಶ್ನೆ ಎದುರಾಗಿದೆ.
ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡದ ಗೋಟ್
ಮೊದಲ ದಿನ ಗೋಟ್ ಭಾರೀ ಸದ್ದು ಮಾಡಿತ್ತು. ಸಿನಿಮಾ ನೋಡಿದವರು ಟ್ವಿಟ್ಟರ್ ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು. ಇದುವರೆಗೂ ತೆರೆ ಕಂಡ ವಿಜಯ್ ಅಭಿನಯದ ಬೆಸ್ಟ್ ಸಿನಿಮಾಗಳ ಪಟ್ಟಿಯಲ್ಲಿ ಇದೂ ಕೂಡಾ ಒಂದು ಎನ್ನಲಾಗಿತ್ತು. ಆದರೆ ಇನ್ನೂ ಕೆಲವರು ಚಿತ್ರದ ಬಗ್ಗೆ ನೆಗೆಟಿವ್ ಮಾತನಾಡಿದ್ದರು. ಚಿತ್ರದಲ್ಲಿ ಅನಗತ್ಯ ವಿಎಫ್‌ಎಕ್ಸ್ ಇದೆ. ಈ ಚಿತ್ರದಲ್ಲಿ ವಿಜಯ್ ದ್ವಿಪಾತ್ರದಲ್ಲಿ ನಟಿಸಿದ್ದರೂ ಒಂದು ಲುಕ್‌ನಲ್ಲಿ, ಲಿಯೋ ಪಾತ್ರ ನೋಡಿದಂತೇ ಇದೆ. ಅಂತಹ ವ್ಯತ್ಯಾಸವಿಲ್ಲ, ಒಮ್ಮೆ ಸಿನಿಮಾ ನೋಡಬಹುದು ಅಷ್ಟೇ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದರ ನಡುವೆಯೂ ಸಿನಿಮಾ ಮೊದಲ ದಿನ ತಕ್ಕ ಮಟ್ಟಿಗೆ ಕಲೆಕ್ಷನ್ ಮಾಡಿತ್ತು. ಆದರೆ 2ನೇ ದಿನದಿಂದ ಕಲೆಕ್ಷನ್ ಇಳಿಯಿತು.
ಸಿನಿಮಾ ಕಲೆಕ್ಷನ್ ಸುಧಾರಿಸಬಹುದು ಎಂದು ಕಾಯತ್ತಿದ್ದವರಿಗೆ ಈಗ ನಿರಾಸೆಯಾಗಿದೆ. ದಿನೇ ದಿನೆ ಕಲೆಕ್ಷನ್ ಕುಸಿಯುತ್ತಿದೆ. ಗೋಟ್, ಬಾಕ್ಸ್ ಆಫೀಸಿನಲ್ಲಿ ಸದ್ದು ಮಾಡುವುದನ್ನು ನಿಲ್ಲಿಸಿದೆ. ತಮಿಳುನಾಡು ಹೊರತುಪಡಿಸಿ ಬೇರೆ ರಾಜ್ಯಗಳಲ್ಲಿ ಸಿನಿಮಾ ಹೇಳಿಕೊಳ್ಳುವಷ್ಟು ಸಂಗ್ರಹಿಸಿಲ್ಲ. ಮೊದಲ ದಿನ ತಮಿಳುನಾಡಿನಲ್ಲಿ 29.50 ಕೋಟಿ, ಶುಕ್ರವಾರ 21.50 ಕೋಟಿ, ಶನಿವಾರ ದಿನ 27 ಕೋಟಿ, ಭಾನುವಾರ 28 ಕೋಟಿ ರೂ ಸಂಗ್ರಹಿಸಿತ್ತು. ಉತ್ತರ ಭಾರತದಲ್ಲಿ 1.7 ಕೋಟಿ, ತೆಲುಗು ವರ್ಷನ್‌ನಿಂದ 3 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಒಟ್ಟಾರೆ ಸೋಮವಾರ 14.75 ಕೋಟಿ ರೂ. ಹಾಗೂ ಮಂಗಳವಾರ 11 ಕೋಟಿ ಗಳಿಸಿದೆ. ಬುಧವಾರ ಗಳಿಕೆ ಇನ್ನೂ ಕಡಿಮೆ ಆಗಿದ್ದು 8 ಕೋಟಿ ರೂ. ಯಷ್ಟು ಸಂಗ್ರಹಿಸಿದೆ. ಇದರ ಪ್ರಕಾರ ಇದುವರೆಗೂ ಭಾರತದಲ್ಲಿ ಒಟ್ಟು 170 ಕೋಟಿ ರೂ. ಓವರ್‌ಸೀಸ್ ಕಲೆಕ್ಷನ್ 126 ಕೋಟಿ ರೂ. ನಷ್ಟು ಆಗಿದೆ ಎಂಬ ಮಾಹಿತಿ ದೊರೆತಿದೆ.
400 ಕೋಟಿ ರೂ. ಬಜೆಟ್‌ನ ಸಿನಿಮಾ
400 ಕೋಟಿ ರೂ. ಖರ್ಚು ಮಾಡಿ ಸಿನಿಮಾ ಮಾಡಲಾಗಿದೆ. ಅದರೆ ಇದುವರೆಗೂ ಹಾಕಿದ ಬಂಡವಾಳದಷ್ಟು ಸಿನಿಮಾ ಕಲೆಕ್ಷನ್ ಮಾಡಿಲ್ಲ. ಸಿನಿಮಾ 700 ಕೋಟಿ ರೂ. ಕಲೆಕ್ಷನ್ ಮಾಡಬಹುದು ಎಂದು ಚಿತ್ರ ವಿಮರ್ಶಕರು ಊಹಿಸಿದ್ದರು. ಇನ್ನೂ ಕೆಲವರು ಸಿನಿಮಾ 1000 ಕೋಟಿ ರೂ. ಕ್ಲಬ್ ಸೇರಬಹುದು ಎಂದುಕೊಂಡಿದ್ದರು. ಆದರೆ ಸಿನಿಮಾ ಕಲೆಕ್ಷನ್ ಇಳಿಕೆಯಾಗುವ ಮೂಲಕ ಎಲ್ಲರ ಲೆಕ್ಕಾಚಾರವನ್ನು ತಪ್ಪಿಸಿದೆ. ಇದು ವಿಜಯ್ ವೃತ್ತಿ ಜೀವನದ ಕೊನೆಯ ಸಿನಿಮಾವಾಗಿದ್ದು , ಇನ್ಮುಂದೆ ಅವರು ರಾಜಕೀಯದಲ್ಲಿ ಬ್ಯುಸಿ ಆಗಲಿದ್ದಾರೆ ಎಂಬ ಮಾತು ಕೂಡಾ ಕೇಳಿ ಬರುತ್ತಿದೆ. ಆದರೆ ಈ ವಿಚಾರವಾಗಿ ವಿಜಯ್ ಅಧಿಕೃತವಾಗಿ ಮಾಹಿತಿ ನೀಡಿಲ್ಲ.
ಗೋಟ್ ಚಿತ್ರಕ್ಕೆ ವೆಂಕಟ್ ಪ್ರಭು ಚಿತ್ರಕಥೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಎಜಿಎಸ್ ಎಂಟರ್‌ಟೈನ್ಮೆಂಟ್ ಬ್ಯಾನರ್ ಅಡಿ ಕಲ್ಪತಿ ಅಗೋರಂ, ಕಲ್ಪತಿ ಗಣೇಶ್ ಹಾಗೂ ಕಲ್ಪತಿ ಸುರೇಶ್ ಜೊತೆ ಸೇರಿ ಸಿನಿಮಾ ನಿರ್ಮಿಸಿದ್ದಾರೆ. ಯುವನ್ ಶಂಕರ್ ರಾಜಾ, ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಪ್ರಶಾಂತ್, ಪ್ರಭುದೇವ, ಜಯರಾಮ್, ಸ್ನೇಹ, ಪಾರ್ವತಿ ನಾಯರ್, ಮೀನಾಕ್ಷಿ ಚೌಧರಿ, ಯೋಗಿ ಬಾಬು ಹಾಗೂ ಇನ್ನಿತರರು ಗೋಟ್ ಸಿನಿಮಾದಲ್ಲಿ ನಟಿಸಿದ್ದಾರೆ. ಒಂದು ಹಾಡಿಗೆ ತ್ರಿಷಾ ಕೃಷ್ಣನ್ ಹೆಜ್ಜೆ ಹಾಕಿದ್ದಾರೆ.