Pepe OTT: ಯಾವ ಒಟಿಟಿಗೆ ಬರುತ್ತೆ ವಿನಯ್ ರಾಜ್‌ಕುಮಾರ್ ಪೆಪೆ ಸಿನಿಮಾ, ಸ್ಟ್ರೀಮಿಂಗ್ ಯಾವಾಗ?
Vinay Rajkumar Pepe: ಪೆಪೆ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೊಸ ರಕ್ತಚರಿತ್ರೆಗೆ ವಿನಯ್ ರಾಜ್‌ಕುಮಾರ್ ಮುನ್ನುಡಿ ಬರೆದಿದ್ದರು. ಹಿಂದೆಂದೂ ಕಾಣದ ವಿನಯ್ ಅವರನ್ನು ನೋಡಿದ ಚಿತ್ರರಸಿಕರು, ಹೊಸ ಅವತಾರಕ್ಕೆ ಫಿದಾ ಆಗಿದ್ದರು. ಇದೀಗ ಇದೇ ಪೆಪೆ ಚಿತ್ರದ ಒಟಿಟಿ ಬಿಡುಗಡೆಯ ಅಪ್‌ಡೇಟ್ ಲಭ್ಯವಾಗಿದೆ.
Pepe OTT Release Update: ವಿನಯ್ ರಾಜ್‌ಕುಮಾರ್ ನಾಯಕನಾಗಿ ನಟಿಸಿರುವ ಪೆಪೆ ಸಿನಿಮಾ ಆಗಸ್ಟ್ 30ರಂದು ರಾಜ್ಯಾದ್ಯಂತ ತೆರೆಕಂಡಿತ್ತು. ಈ ವರೆಗೂ ಲವರ್‌ಬಾಯ್, ಪಕ್ಕದ್ಮನೆ ಹುಡುಗನ ರೀತಿಯಲ್ಲಿಯೇ ಹೆಚ್ಚು ಕಾಣಿಸಿದ್ದ ನಟ ವಿನಯ್ ರಾಜ್‌ಕುಮಾರ್, ಪೆಪೆ ಸಿನಿಮಾ ಮೂಲಕ ಮಾಸ್ ಅವತಾರ ಎತ್ತಿದ್ದರು. ಕೈಯಲ್ಲಿ ಮಚ್ಚು ಹಿಡಿದು, ರಕ್ತಹರಿಸಿದ್ದರು. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಸಿನಿಮಾಕ್ಕೆ ಪ್ರೇಕ್ಷಕನಿಂದಲೂ ಮೆಚ್ಚುಗೆ ಸಿಕ್ಕಿತ್ತು. ವಿಮರ್ಶೆ ದೃಷ್ಟಿಯಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಇಂದಿಗೂ ಚಿತ್ರಮಂದಿರದಲ್ಲಿ ಓಟಕ್ಕಿಳಿದಿರುವ ಈ ಸಿನಿಮಾದ ಒಟಿಟಿ ಬಿಡುಗಡೆ ಯಾವಾಗ? ಹೀಗಿದೆ ಮಾಹಿತಿ.
ಪೆಪೆ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೊಸ ರಕ್ತಚರಿತ್ರೆಗೆ ವಿನಯ್ ರಾಜ್‌ಕುಮಾರ್ ಮುನ್ನುಡಿ ಬರೆದಿದ್ದರು. ಹಿಂದೆಂದೂ ಕಾಣದ ವಿನಯ್ ಅವರನ್ನು ನೋಡಿದ ಚಿತ್ರರಸಿಕರು, ಹೊಸ ಅವತಾರಕ್ಕೆ ಫಿದಾ ಆಗಿದ್ದರು. ಟ್ರೇಲರ್ ನೋಡಿಯೇ ಬೆಚ್ಚಿದ್ದ ಪ್ರೇಕ್ಷಕನಿಗೆ, ಸಿನಿಮಾ ರುಚಿಸಿತ್ತು. ವಿನಯ್ ಹೀಗೂ ಕಾಣ್ತಾರಾ? ಈ ರೀತಿಯಲ್ಲಿಯೂ ನಟಿಸ್ತಾರಾ? ಎಂದು ಹುಬ್ಬೇರಿಸಿದ್ದಾರೆ. ನಿರ್ದೇಶಕ ಶ್ರೀಲೇಶ್ ನಾಯರ್ ಮೊದಲ ಪ್ರಯತ್ನದಲ್ಲಿ ದೊಡ್ಮನೆ ಕುಡಿಯನ್ನು ಬೇರೆ ರೀತಿಯಲ್ಲಿಯೇ ಪರಿಚಯಿಸಿದ್ದರು.
ಏನಿದು ಪೆಪೆ ಕಥೆ?
ಕೊಡಗಿನ ಬದವಾಳು ಗ್ರಾಮದ ಮಲಬಾರಿ ಮತ್ತು ರಾಯಪ್ಪ ಕುಟುಂಬಗಳ ನಡುವಿನ ವೈರತ್ವದ ಕಥೆಯೇ ಈ ಪೆಪೆ. ಸೇಡಿಗೆ ಸೇಡು ರಕ್ತಕ್ಕೆ ರಕ್ತ ಎಂಬಂತೆ ಇಲ್ಲಿ ದ್ವೇಷದ ದಳ್ಳುರಿಯೇ ಕಾಣಿಸುವುದು ಹೆಚ್ಚು. ರಾಯಪ್ಪನ ಮೊಮ್ಮಗ ಪ್ರದೀಪ್ ಅಲಿಯಾಸ್ ಪೆಪೆ (ವಿನಯ್ ರಾಜ್‌ಕುಮಾರ್) ಕೈಗೆ ರಕ್ತ ಅಂಟುವುದು ತಾಯಿಗೆ ಇಷ್ಟವಿಲ್ಲ. ಆದರೆ, ವಿಧಿಯಾಟ ಮಾತ್ರ ಬೇರೆ. ಅಲ್ಲಿ ನಡೆಯಬಾರದೆಲ್ಲವೂ ಘಟಿಸುತ್ತದೆ. ನೀರಿಗಾಗಿ ದೊಡ್ಡ ಸಮರವೇ ನಡೆಯುತ್ತದೆ. ಮೇಲ್ಜಾತಿ, ಕೆಳಜಾತಿಗಳ ನಡುವಿನ ಸಂಘರ್ಷದ ಜತೆಗೆ ಮಹಿಳಾ ದೌರ್ಜನ್ಯದ ಎಳೆಯೂ ಈ ಪೆಪೆಯಲ್ಲಿದೆ. ಇದೆಲ್ಲವನ್ನು ದಾಟಿ ಮೇಲ್ಜಾತಿಯ ಅಟ್ಟಹಾಸವನ್ನು ಹೇಗೆ ಕಥಾನಾಯಕ ಹುಟ್ಟಡಗಿಸುತ್ತಾನೆ ಎಂಬುದೇ ಕಥೆ.
ತಾರಾಗಣ ಮತ್ತು ತಾಂತ್ರಿಕ ಬಳಗ ಹೀಗಿದೆ..
ಉದಯ್ ಸಿನಿ ವೆಂಚರ್ಸ್ ಮತ್ತು ದೀಪಾ ಫಿಲಂಸ್ ಬ್ಯಾನರ್‌ನಲ್ಲಿ ಪೆಪೆ ಸಿನಿಮಾ ನಿರ್ಮಾಣವಾಗಿದೆ. ಶ್ರೀಲೇಶ್ ನಾಯರ್ ಕಥೆ ಬರೆದು ನಿರ್ದೇಶಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ, ಅಭಿಷೇಕ್ ಜಿ ಕಾಸರಗೋಡು ಅವರ ಛಾಯಾಗ್ರಹಣ ಈ ಚಿತ್ರದ ಹೈಲೈಟ್. ಮನು ಶೇಡ್ಗಾರ್ ಅವರ ಸಂಕಲನ ಈ ಚಿತ್ರಕ್ಕಿದೆ. ಅದೇ ರೀತಿ ತಾರಾಬಳಗದಲ್ಲಿ ವಿನಯ್ ರಾಜ್‌ಕುಮಾರ್. ಅರುಣಾ ಬಾಲರಾಜ್, ಮಯೂರ್ ಪಟೇಲ್, ಮೇದಿನಿ ಕೆಳಮನೆ, ನವೀನ್ ಪಡೀಲ್, ಯಶ್ ಶೆಟ್ಟಿ, ರವಿ ಪ್ರಸಾದ್ ಮಂಡ್ಯ ಸೇರಿ ಇನ್ನೂ ಹಲವರು ನಟಿಸಿದ್ದಾರೆ.
ಪೆಪೆ ಯಾವ ಒಟಿಟಿಯಲ್ಲಿ, ಯಾವಾಗ?
ಸಹಜವಾಗಿ ಒಂದು ಸಿನಿಮಾ ಚಿತ್ರಮಂದಿರಕ್ಕೆ ಬಂದ 30ರಿಂದ 40 ದಿನಗಳ ಬಳಿಕ ಒಟಿಟಿ ಅಂಗಳ ಪ್ರವೇಶಿಸುತ್ತವೆ. ಅದೇ ರೀತಿ ಇತ್ತೀಚೆಗಷ್ಟೇ ದುನಿಯಾ ವಿಜಯ್ ಅವರ ಭೀಮ ಸಿನಿಮಾ ಸಹ 30 ದಿನಗಳು ಪೂರೈಸುವುದಕ್ಕೂ ಮುನ್ನವೇ ಅಮೆಜಾನ್ ಪ್ರೈಂ ಒಟಿಟಿಗೆ ಎಂಟ್ರಿಕೊಟ್ಟಿತ್ತು. ಇದೀಗ ಕೃಷ್ಣಂ ಪ್ರಣಯ ಸಖಿ ಸಹ ಇನ್ನೇನು ಶೀಘ್ರದಲ್ಲಿ ಒಟಿಟಿ ಪ್ರವೇಶ ಪಡೆಯಲಿದೆ. ಇನ್ನು ಪೆಪೆ ಸಿನಿಮಾ ಬಿಡುಗಡೆಯಾಗಿ ಈಗಿನ್ನು ಎರಡು ವಾರಗಳು ಕಳೆದಿಲ್ಲ. ಕೆಲ ಮೂಲಗಳ ಮಾಹಿತಿ ಪ್ರಕಾರ ಪೆಪೆ ಸಿನಿಮಾ ಅಮೆಜಾನ್ ಪ್ರೈಂ ಒಟಿಟಿಗೆ ಡಿಜಿಟಲ್ ಹಕ್ಕುಗಳನ್ನು ಮಾರಾಟ ಮಾಡಿಕೊಂಡಿದೆ ಎನ್ನಲಾಗುತ್ತಿದೆ. ಎಲ್ಲ ಅಂದುಕೊಂಡಂತೆ ಆದರೆ, ಈ ಸಿನಿಮಾ ಅಕ್ಟೋಬರ್ 15ರ ನಂತರ ಒಟಿಟಿಗೆ ಬರುವ ಸಾಧ್ಯತೆ ಇದೆ.
ವಿಭಾಗ