OTT Children Movies: ಕಾಲ್ಪನಿಕ ಗೆಳೆಯರ ಮಜಬೂತಾದ ಕಥೆ, IF ಸಿನಿಮಾವನ್ನು ಮಕ್ಕಳೊಂದಿಗೆ ಮಿಸ್ ಮಾಡದೆ ನೋಡಿ
Oct 16, 2024 07:58 PM IST
OTT Children Movies: ಕಾಲ್ಪನಿಕ ಗೆಳೆಯರ ಮಜಬೂತಾದ ಕಥೆ, IF ಸಿನಿಮಾ ಮಕ್ಕಳೊಂದಿಗೆ ನೋಡಿ
- OTT Children Movies: ಅಮೆಜಾನ್ ಪ್ರೈಮ್ ವಿಡಿಯೋದಲ್ಲಿರುವ IF (imaginary friends) ಎಂಬ ಮಕ್ಕಳ ಸಿನಿಮಾ ಸೊಗಸಾಗಿದೆ. ಮಕ್ಕಳು ಬಾಲ್ಯದಲ್ಲಿ ಕಲ್ಪಿಸಿಕೊಂಡು, ದೊಡ್ಡವರಾದಂತೆ ಮರೆತಿರುವ ಕಾಲ್ಪನಿಕ ಗೆಳೆಯರ ಕಥೆಯಿದು.
OTT Children Movies: ಈಗ ಬಹುತೇಕರು ಒಟಿಟಿಯಲ್ಲಿ ಸಿನಿಮಾ ನೋಡುತ್ತಾರೆ. ಮನೆಯ ಟಿವಿಯಲ್ಲಿ ಮಕ್ಕಳು ಯೂಟ್ಯೂಬ್‌ನಲ್ಲಿ ಅರ್ಥವಾಗದ ವಿಡಿಯೋ ನೋಡುತ್ತಾ ಕಾಲಕಳೆಯುತ್ತಿದ್ದರೆ, ಅವರನ್ನು ಮಕ್ಕಳ ಸಿನಿಮಾ ನೋಡುವಂತೆ ಪ್ರೋತ್ಸಾಹಿಸಬಹುದು. ಮಕ್ಕಳಿಗೆ ರಜಾ ದಿನಗಳಲ್ಲಿ, ಮಳೆಯ ಕಾರಣದ ರಜಾ ಸಮಯದಲ್ಲಿ ತೋರಿಸಲು ಸೂಕ್ತ ಸಿನಿಮಾ ಹುಡುಕುತ್ತಿದ್ದಾರೆ ಮಿಸ್ ಮಾಡದೆ ನೋಡಬಹುದಾದ ಸಿನಿಮಾ IF. ಐ ಮತ್ತು ಎಫ್ ಎಂಬ ಎರಡೇ ಅಕ್ಷರ ನೋಡಿ ಇದೆಂಥ ಸಿನಿಮಾ ಎಂದು ಸ್ಕ್ರೋಲ್ ಮಾಡಬೇಡಿ. ಐ ಎಫ್ ಅನ್ನೋದು ಇಮ್ಯಾಜನರಿ ಫ್ರಂಡ್ಸ್‌ನ ಸಂಕ್ಷಿಪ್ತ ರೂಪ. ಕಾಲ್ಪನಿಕ ಗೆಳೆಯರು ಮಕ್ಕಳು ಮಾತ್ರವಲ್ಲದೆ ಮಕ್ಕಳ ಮನಸ್ಸಿನ ದೊಡ್ಡವರಿಗೂ ಇಷ್ಟವಾಗಬಹುದು.
ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಇಫ್ ಸಿನಿಮಾವನ್ನು ಜಾನ್ ಕ್ರಾಸಿನ್ಸ್ಕಿ ನಿರ್ದೇಶಿಸಿದ್ದಾರೆ. ಒಬ್ಬಳು ಬಾಲಕಿ (ಬಿಯಾ) ಅಮ್ಮನನ್ನು ಕಳೆದುಕೊಂಡಿದ್ದಾಳೆ. ಆಕೆಯ ತಂದೆ ಹೃದಯದ ತೊಂದರೆಯಿಂದ ಆಸ್ಪತ್ರೆಯಲ್ಲಿದ್ದಾನೆ. ಈ ಸಮಯದಲ್ಲಿ ಅಜ್ಜಿ ಮನೆಗೆ ಬರುವ ಈಕೆ ಒಬ್ಬಂಟಿಯಾಗಿರುತ್ತಾಳೆ. ಈ ಸಮಯದಲ್ಲಿ ಕಟ್ಟಡದ ಮೇಲಿನ ಮಹಡಿಗಳಿಗೆ ಹೋದಾಗ ಅಚ್ಚರಿಯ ವಿದ್ಯಮಾನಗಳು ನಡೆಯುತ್ತವೆ. ಈ ಸಮಯದಲ್ಲಿ ಆಕೆಗೆ ಕೆಲವು ಕೆಲಸವಿಲ್ಲದ ಇಮ್ಯಾಜನರಿ ಫ್ರೆಂಡ್ಸ್ ಕಾಣಲು ಆರಂಭವಾಗುತ್ತಾರೆ. ಆ ಅಪಾರ್ಟ್‌ಮೆಂಟ್‌ನ ಮಹಡಿಗಳಲ್ಲಿ ಸುತ್ತಾಡುತ್ತ ಇರುವುದು ಕಾಣಿಸುತ್ತದೆ. ಕಾಲ್(ರಿಯಾನ್ ರೆನಾಲ್ಡ್ಸ್) ಎಂಬಾತ ಈ ಕಾಲ್ಪನಿಕ ಗೆಳೆಯರ ಜತೆ ಇರುತ್ತಾನೆ.
ಕಾಲ್ಪನಿಕ ಗೆಳೆಯರು ಮಕ್ಕಳ ಪ್ರೀತಿಯ ವಸ್ತುಗಳಾಗಿರುತ್ತವೆ. ಮಕ್ಕಳು ಬಾಲ್ಯದಲ್ಲಿ ಏನಾದಾರೂ ವಸ್ತುವನ್ನು ಇಷ್ಟಪಟ್ಟಿರಬಹುದು, ಅದನ್ನೇ ತನ್ನ ಫ್ರೆಂಡ್ ಅಂದುಕೊಂಡಿರಬಹುದು. ಆದರೆ, ದೊಡ್ಡವರಾದ ಬಳಿಕ ಅಂತಹ ಕಲ್ಪನೆ ಮರೆತು ಬಿಟ್ಟಿರಬಹುದು. ಈ ರೀತಿ ಮಕ್ಕಳು ಮರೆತು ಬಿಟ್ಟಂತಹ ಆ ಕಾಲ್ಪನಿಕ ಫ್ರೆಂಡ್ಸ್‌ಗಳು ಮತ್ತೆ ತಮ್ಮ ಹಳೆಯ ಗೆಳೆಯರ (ಈಗ ದೊಡ್ಡವರಾಗಿರುವ ಮಕ್ಕಳ) ಜತೆ ಸೇರಲು ಈ ಬಾಲಕಿ ಸಹಾಯ ಮಾಡುತ್ತಾಳೆ. ನಕ್ಕುನಲಿಯುವ, ಖುಷಿಗೊಳ್ಳುವ ಸಾಕಷ್ಟು ಅಂಶಗಳು ಈ ಚಿತ್ರದಲ್ಲಿವೆ.
ಒಬ್ಬ ವ್ಯಕ್ತಿ ಏನೋ ಟೆನ್ಷನ್‌ನಲ್ಲಿದ್ದಾನೆ. ಆತನ ಹಳೆಯ ಇಮ್ಯಾಜಿನರಿ ಫ್ರೆಂಡ್ ಈ ವ್ಯಕ್ತಿಯ ಬೆನ್ನು ಟಚ್ ಮಾಡುತ್ತದೆ. ಆತ ರಿಲಾಕ್ಸ್ ಮೂಡ್‌ಗೆ ಬರುತ್ತಾನೆ. ಈ ಸಿನಿಮಾ ನೋಡಿದಾಗ ದೊಡ್ಡವರ ಮನಸ್ಸು ಮಕ್ಕಳ ಮನಸ್ಸಿನಂತೆ ಖುಷಿಗೊಳ್ಳಬಹುದು.
ಈ ಚಿತ್ರದಲ್ಲಿ ಒಂದಿಷ್ಟು ಹೊತ್ತು ಹೊಸ ಲೋಕವೇ ಕಾಣಿಸುತ್ತದೆ. ರಿಯಾನ್‌ನ ಕಲ್ಪನೆಯ ಜಗತ್ತಿನ ಬದಲು ಈ ಬಾಲಕಿ ಕಲ್ಪಿಸಿಕೊಳ್ಳಲು ಹೋದಾಗ ಆಕೆಯ ಜಗತ್ತು ಭಯಂಕರವಾಗಿರುತ್ತದೆ. ಚಂದ್ರಲೋಕ, ಸಮುದ್ರ ಎಲ್ಲ ಕಡೆಗೂ ಹೋದ ಅನುಭವ ನೀಡುತ್ತದೆ. ಒಬ್ಬ ನಿರ್ದೇಶಕನ ಕಲ್ಪನೆ ಸುಂದರವಾಗಿದ್ದರೆ ಸಿನಿಮಾ ಎಷ್ಟು ಸುಂದರವಾಗಿ ಮೂಡಿ ಬರುತ್ತದೆ ಎನ್ನುವುದಕ್ಕೆ ಸಾಕ್ಷಿಯೆಂಬಂತೆ ಈ ಚಿತ್ರ ಕಾಣಿಸಿತ್ತು. ಮಕ್ಕಳು ಬಯಸುವ ತಿಂಡಿತಿನಿಸುಗಳು, ಮಕ್ಕಳ ಗೊಂಬೆಗಳು ಎಲ್ಲವೂ ಇಲ್ಲಿ ಇಮ್ಯಾಜಿನರಿ ಫ್ರೆಂಡ್ಸ್‌ಗಳಾಗಿವೆ.