ಅಡಿಯೋಸ್‌ ಅಮಿಗೋಸ್‌ ಒಟಿಟಿ ಸಿನಿಮಾ ವಿಮರ್ಶೆ: ಶ್ರೀಮಂತ ಕುಡುಕ- ಅಸಹಾಯಕ ಬಡವನ ನಶೆಯ ಪ್ರಯಾಣ; ಕಾಮಿಡಿ ಕಿಕ್‌ ನೀಡುವ ಫೀಲ್‌ ಗುಡ್‌ ಮೂವಿ
ಕನ್ನಡ ಸುದ್ದಿ  /  ಮನರಂಜನೆ  /  ಅಡಿಯೋಸ್‌ ಅಮಿಗೋಸ್‌ ಒಟಿಟಿ ಸಿನಿಮಾ ವಿಮರ್ಶೆ: ಶ್ರೀಮಂತ ಕುಡುಕ- ಅಸಹಾಯಕ ಬಡವನ ನಶೆಯ ಪ್ರಯಾಣ; ಕಾಮಿಡಿ ಕಿಕ್‌ ನೀಡುವ ಫೀಲ್‌ ಗುಡ್‌ ಮೂವಿ

ಅಡಿಯೋಸ್‌ ಅಮಿಗೋಸ್‌ ಒಟಿಟಿ ಸಿನಿಮಾ ವಿಮರ್ಶೆ: ಶ್ರೀಮಂತ ಕುಡುಕ- ಅಸಹಾಯಕ ಬಡವನ ನಶೆಯ ಪ್ರಯಾಣ; ಕಾಮಿಡಿ ಕಿಕ್‌ ನೀಡುವ ಫೀಲ್‌ ಗುಡ್‌ ಮೂವಿ

ಅಡಿಯೋಸ್‌ ಅಮಿಗೋಸ್‌ ಒಟಿಟಿ ಸಿನಿಮಾ ವಿಮರ್ಶೆ: ನೆಟ್‌ಫ್ಲಿಕ್ಸ್‌ನಲ್ಲಿ ಮೂಲ ಮಲಯಾಳಂನ ಅಡಿಯೋಸ್‌ ಅಮಿಗೋಸ್‌ ಎಂಬ ಸಿನಿಮಾವಿದೆ. ತಾಯಿಯ ಚಿಕಿತ್ಸೆಗೆ 25 ಸಾವಿರ ಹೊಂದಿಸಲು ಪರದಾಡುವ ವ್ಯಕ್ತಿಗೆ ಜಾಲಿಗಾಗಿ ಸುತ್ತಾಡುವ ಶ್ರೀಮಂತ ಕುಡುಕನೊಬ್ಬನ ಗೆಳೆತನ ದೊರಕುತ್ತದೆ. ಸ್ನೇಹದ ಅಮಲಿನ ಪ್ರಯಾಣದಲ್ಲಿ ಸಿಕ್ಕಾಪಟ್ಟೆ ನಗು ಪ್ರೇಕ್ಷಕರಿಗೆ ದೊರಕುತ್ತದೆ.

ಅಡಿಯೋಸ್‌ ಅಮಿಗೋಸ್‌ ಒಟಿಟಿ ಸಿನಿಮಾ ವಿಮರ್ಶೆ
ಅಡಿಯೋಸ್‌ ಅಮಿಗೋಸ್‌ ಒಟಿಟಿ ಸಿನಿಮಾ ವಿಮರ್ಶೆ

ಅಡಿಯೋಸ್‌ ಅಮಿಗೋಸ್‌ ಒಟಿಟಿ ಸಿನಿಮಾ ವಿಮರ್ಶೆ: ನೆಟ್‌ಫ್ಲಿಕ್ಸ್‌ನಲ್ಲಿ ಇತ್ತೀಚೆಗೆ ಬಿಡುಗಡೆಯಾದ ಅಡಿಯೋಸ್‌ ಅಮಿಗೋಸ್‌ (Adios amigo) ಎಂಬ ಸಿನಿಮಾ ಚಿತ್ರಮಂದಿರಗಳಲ್ಲಿ ದೊಡ್ಡಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ. ಆದರೆ, ಒಟಿಟಿ ಪ್ರೇಕ್ಷಕರಿಂದ ಈ ಸಿನಿಮಾಕ್ಕೆ ಮೆಚ್ಚುಗೆ ದೊರಕುತ್ತಿದೆ. ಎರಡು ವಿರುದ್ಧ ದಿಕ್ಕುಗಳು ಒಂದಾಗುವಂತಹ ಕಥೆಯಿದು. ಚಿತ್ರದಲ್ಲಿ ಇಬ್ಬರು ನಾಯಕರು. ಒಬ್ಬಾತನಿಗೆ ಹಣದ ಅವಶ್ಯಕತೆಯಿದೆ. ತನ್ನ ತಾಯಿಯ ಚಿಕಿತ್ಸೆಗೆ 25 ಸಾವಿರ ರೂಪಾಯಿ ಹೊಂದಿಸಲು ಪರದಾಡುತ್ತಾನೆ. ಯಾರೂ ಸಾಲ ಕೊಡುವುದಿಲ್ಲ. ಬಡ್ಡಿಗೆ ಹಣ ಕೊಡುತ್ತೇನೆ ಎಂದವನು ಹೇಳಿದ ಸ್ಥಳಕ್ಕೆ ಬರದೆ ಕಾಡಿಸುತ್ತಾನೆ. ಇದೇ ನೋವಿನಲ್ಲಿ ಬಸ್‌ ನಿಲ್ದಾಣದಲ್ಲಿ ಕುಳಿತ ಬಡವ ಶ್ರೀಮಂತ ಕುಡುಕನೊಬ್ಬನ ಕಣ್ಣಿಗೆ ಬೀಳುತ್ತಾನೆ.

ಮತ್ತೊಬ್ಬ ನಾಯಕ ಶ್ರೀಮಂತ ಕುಡುಕ. ಅಪ್ಪನ ಹಣ ಖರ್ಚು ಮಾಡಬೇಕು. ಎಲ್ಲೋ ಗೊತ್ತಿಲ್ಲದ ಊರಿಗೆ ಹೋಗಿ ಬರಬೇಕು. ಸದಾ ನಶೆಯಲ್ಲಿರಬೇಕು ಎಂಬ ಜಾಯಮಾನದ ಯುವಕ. ಈತನಿಗೆ ಹಣ ವಿಷಯವೇ ಅಲ್ಲ. ಲಾಟರಿ ಮಾರುವವಳಿಗೆ ತನ್ನ ಕಿಸೆಯಲ್ಲಿರುವ 7 ಸಾವಿರ ರೂಪಾಯಿ ಕೊಡಲು ಹಿಂಜರಿಯುವುದಿಲ್ಲ. ಈತನಿಗೆ ಕುಡಿಯಲು ಸುತ್ತಾಡಲು ಕಂಪನಿ ಇಲ್ಲ. ಅಪರಿಚಿತರನ್ನು ಕಂಪನಿ ಮಾಡಿಕೊಂಡು ಸುತ್ತಾಡುವ ಜಾಯಮಾನದ ಈತನ ಕಣ್ಣಿಗೆ ಬಡವ ಕಾಣಿಸುತ್ತಾನೆ. ಇವರಿಬ್ಬರ ಪ್ರಯಾಣದ ಕಥೆಯೇ ಅಡಿಯೋಸ್‌ ಅಮಿಗೋಸ್.‌ ಈ ರಷ್ಯಾ ಪದಗಳ ಅರ್ಥ "ಶುಭ ವಿದಾಯ ಗೆಳೆಯ" ಅಂತೆ.

ನಹಾಸ್‌ ನಝಾರ್‌ ನಿರ್ದೇಶನದ ಈ ಚಿತ್ರದಲ್ಲಿ ಇಬ್ಬರು ಅಪರಿಚಿತರ ಸ್ನೇಹದ ಅಮಲಿನ ಪ್ರಯಾಣದ ಕಥೆಯಿದೆ. ಈ ಇಬ್ಬರು ಅಪರಿಚಿತರಾಗಿ ಆಸೀಫ್‌ ಆಲಿ ಮತ್ತು ಸೂರಜ್‌ ವಂಜರಮೂಡು ನಟಿಸಿದ್ದಾರೆ. ಇದು ಫೀಲ್‌ ಗುಡ್‌ ಕಾಮಿಡಿ ಸಿನಿಮಾ. ಕುಡುಕರ ಸಹವಾದ ಮಾಡಿದವರಿಗೆ ಅಥವಾ ಕುಡುಕರಿಗೆ ಈ ಸಿನಿಮಾ ಇನ್ನಷ್ಟು ಕಿಕ್‌ ನೀಡಬಹುದು. ಇವರಿಬ್ಬರು ಒಬ್ಬರಿಗೊಬ್ಬರು ಪೈಪೋಟಿ ನೀಡುವಂತೆ ನಟಿಸಿದ್ದಾರೆ. ಕುಡುಕನ ಪಾತ್ರವಂತೂ ನಿಮ್ಮ ಹೊಟ್ಟೆ ಹುಣ್ಣಾಗಿಸಬಹುದು.

ಈ ಸಿನಿಮಾದಲ್ಲಿ ಹಳೆಯ ಕಥೆಗಳ ಬದಲು ಸಹಜವಾಗಿ ನಡೆಯುವ ಪ್ರಯಾಣದಂತೆ ಕಥೆ ಕಟ್ಟಿಕೊಡಲಾಗಿದೆ. ಇಬ್ಬರು ಅಪರಿಚಿತರು ಒಂದು ಬಿಂದುವಿನಲ್ಲಿ ಸಂಧಿಸಿ ಮತ್ತೆ ಜತೆಯಾಗಿ ಸಾಗುತ್ತಾರೆ. ಆಸಿಫ್‌ ಆಲಿಯ ನಟನೆ ಆರಂಭದ ತುಸು ಹೊತ್ತು ಅಷ್ಟೇನೂ ಇಷ್ಟವಾಗದೆ ಇದ್ದರೂ ಬಳಿಕ ನಮ್ಮನ್ನು ಪೂರ್ತಿಯಾಗಿ ಆವರಿಸಿಕೊಂಡು ಬಿಡುತ್ತಾರೆ.

ಇದೊಂದು ಫನ್‌ ಸಿನಿಮಾ. ಗಾಳಿ ಬೀಸಿದ ಕಡೆಗೆ ಸಾಗುವಂತಹ ಕಥೆ. ಯಾವುದೇ ಪ್ರಮುಖ ಉದ್ದೇಶ, ಗುರಿ ಕಾಣಿಸದೆ ಇದ್ದರೂ ಮಜ ನೀಡುತ್ತ ಹೋಗುತ್ತದೆ. ಸೀಮಿತ ಕಥೆಯ ಕಾರಣ ಈ ಚಿತ್ರ ಅಲ್ಲಲ್ಲಿ ಎಲ್ಲೆಲ್ಲೋ ಹೋಗುತ್ತದೆ. ಶ್ರೀಮಂತ ಮತ್ತು ಬಡವರ ಬದುಕು, ಬದುಕಿಗೆ ಬೇಕಾದದ್ದು ಕೇವಲ ಹಣ ಮಾತ್ರವೇ? ಇತ್ಯಾದಿ ವಿಷಯಗಳ ಕುರಿತು ಒಂದಿಷ್ಟು ಯೋಚಿಸುವಂತೆ ಈ ಸಿನಿಮಾ ಮಾಡುತ್ತದೆ. ಸಿನಿಮಾದ ಕಥೆ ಗಟ್ಟಿಯಾಗದೆ ಇದ್ದರೂ ನೋಡುವಷ್ಟು ಹೊತ್ತು ಒಂದಿಷ್ಟು ನಗುವನ್ನು ನೀಡುವ ಸಿನಿಮಾವಿದು. ನೆಟ್‌ಫ್ಲಿಕ್ಸ್‌ನಲ್ಲಿ ಕನ್ನಡ ಭಾಷೆಯಲ್ಲಿಯೇ ಈ ಮಲಯಾಳಂ ಸಿನಿಮಾ ನೋಡಬಹುದು. ಕನ್ನಡಕ್ಕೆ ಡಬ್ಬಿಂಗ್‌ ಗುಣಮಟ್ಟವೂ ಉತ್ತಮವಾಗಿದೆ.

ವಿಮರ್ಶೆ: ಪ್ರವೀಣ್‌ ಚಂದ್ರ ಪುತ್ತೂರು

Whats_app_banner