ಮಲಯಾಳಂನ ಮಂಜುಮ್ಮೆಲ್ ಬಾಯ್ಸ್ ಸಿನಿಮಾ ನಿಜಕ್ಕೂ ಚೆನ್ನಾಗಿದೆಯಾ? ಅಥವಾ ಬರೀ ಹೈಪಾ? ಹೀಗಿದೆ ಚಿತ್ರ ವಿಮರ್ಶೆ
May 05, 2024 06:02 PM IST
ಮಲಯಾಳಂನ ಮಂಜುಮ್ಮೆಲ್ ಬಾಯ್ಸ್ ಸಿನಿಮಾ ನಿಜಕ್ಕೂ ಚೆನ್ನಾಗಿದೆಯಾ? ಅಥವಾ ಬರೀ ಹೈಪಾ? ಹೀಗಿದೆ ಚಿತ್ರ ವಿಮರ್ಶೆ
- ಕಥೆಯ ಗಟ್ಟಿತನ, ಭಾವನಾತ್ಮಕ ಸೆಳೆತ, ಕೊನೇ ಕ್ಷಣದ ಕ್ಲೈಮ್ಯಾಕ್ಸ್ ಜತೆಗೆ ಒಂದಷ್ಟು ರೋಮಾಂಚನ ಎನಿಸುವ ಗುಣಗಳೂ ಈ ಸಿನಿಮಾದಲ್ಲಿವೆ. ಹಾಗೆಂದ ಮಾತ್ರಕ್ಕೆ ಇದೊಂದು ಮಾಸ್ಟರ್‌ಪೀಸಾ? ಎಂದು ಹೇಳುವುದಕ್ಕೂ ಬಾರದು. ಆ ಮಟ್ಟದ ಬೆರಗು ಇಲ್ಲಿ ಕಾಣಿಸದೇ ಇದ್ದರೂ, ಮಂಜುಮ್ಮೆಲ್ ಬಾಯ್ಸ್ ಸಿನಿಮಾ ನೋಡುಗನಿಗೆ ಹೊಸ ಅನುಭವ ನೀಡುತ್ತದೆ.
Manjummel Boys Review in Kannada: ಒಂದು ಸರಳ ಕಥೆಯನ್ನು ಹೇಗೆ ರೋಚಕತೆಯ ಓಟಕ್ಕೆ ಇಳಿಸಬೇಕು, ನೋಡುಗನನ್ನು ಸೀಟಿನ ತುದಿಗೆ ಹೇಗೆ ಅಂಟಿಕೊಂಡೇ ಕೂರಿಸಬೇಕು ಎಂಬುದನ್ನು ಮಂಜುಮ್ಮೆಲ್ ಬಾಯ್ಸ್ ಸಿನಿಮಾ ನಿರ್ದೇಶಕರು ಚೆನ್ನಾಗಿಯೇ ಅರಿತಂತಿದೆ. ಸಣ್ಣ ಎಳೆಗೆ ಗಟ್ಟಿ ಕಥೆಯನ್ನೇ ಹೆಣೆದು ನೋಡಿಸಿಕೊಂಡು ಹೋಗುವಂಥ ಸಿನಿಮಾ ಮಾಡಿದ್ದಾರವರು. ಇಲ್ಲಿ ವ್ಯಕ್ತಿಯೊಬ್ಬನ ಜೀವನ್ಮರಣದ ಕಥೆಯನ್ನಷ್ಟೇ ನಿರ್ದೇಶಕರು ಹೇಳಿಲ್ಲ. ಅದರಾಚೆಗೆ ಸ್ನೇಹಕ್ಕೆ ಎಷ್ಟು ತಾಕತ್ತಿದೆ ಎಂಬುದನ್ನೂ ಸಿನಿಮಾದುದ್ದಕ್ಕೂ ಪಸರಿಸುತ್ತಲೇ ಹೋಗಿದ್ದಾರೆ. ಹಾಗಾಗಿಯೇ ಮಂಜುಮಲೆಯ ಹುಡುಗರು ತುಂಬಾನೇ ಇಷ್ಟವಾಗ್ತಾರೆ!
2006ರಲ್ಲಿ ನಡೆದ ನೈಜ ಘಟನೆ
ಇದು ನಮ್ಮ ಆಪ್ತ ವಲಯದಲ್ಲಿಯೇ ನಡೆದ ಕಥೆ ಎಂಬಂತೆ ಎಲ್ಲರ ಮನಸ್ಸನ್ನು ಮುಟ್ಟುವ ಕೆಲಸ ನಿರ್ದೇಶಕರಿಂದಾಗಿದೆ. ಕೇವಲ ಎರಡು ಗಂಟೆಯ ಅವಧಿಯ ಮಂಜುಮ್ಮೆಲ್ ಬಾಯ್ಸ್ ಚಿತ್ರ, ಮಾಲಿವುಡ್ ಅಂಗಳದಲ್ಲಿ ಸೃಷ್ಟಿಸಿದ ದಾಖಲೆ, ಮಾಡಿದ ಮೋಡಿ ಸಣ್ಣದೇನಲ್ಲ. 200 ಕೋಟಿ ಗಳಿಕೆ ಕಂಡ ಮೊದಲ ಸಿನಿಮಾ ಎಂಬ ಹಣೆಪಟ್ಟಿಯೂ ಈ ಮಂಜುಮ್ಮೆಲ್ ಬಾಯ್ಸ್‌ಗೆ ಅಂಟಿಕೊಂಡಿದೆ! 2006ರಲ್ಲಿ ನಡೆದ ನೈಜ ಘಟನೆಯನ್ನೇ ಹೆಕ್ಕಿ ತೆಗೆದ ನಿರ್ದೇಶಕ ಚಿದಂಬರಂ, ತಮ್ಮ ಎರಡನೇ ಸಿನಿಮಾ ಪ್ರಯತ್ನದಲ್ಲಿಯೇ ದೊಡ್ಡ ಯಶಸ್ಸು ದಾಖಲಿಸಿಕೊಂಡಿದ್ದಾರೆ.
ಮಂಜುಮ್ಮೆಲ್ ಊರಿನ ಯುವಕರ ಕಥೆ
ಕೇರಳದ ಮಂಜುಮ್ಮೆಲ್ ಅನ್ನೋ ಊರಲ್ಲಿ 11 ಯುವಕರ ತಂಡ. ಎಲ್ಲರದ್ದೂ ಒಂದೊಂದು ಕಡೆ ಕೆಲಸ. ಸಂಜೆ ಸಮಯ ಸಿಕ್ಕರೆ ಹರಟೆ, ಮಾತುಕತೆ. ಹೀಗಿರುವಾಗ ಒಂದು ದಿನ ಎಲ್ಲಾದರೂ ಟ್ರಿಪ್ ಹೋಗಬೇಕೆಂಬ ಪ್ಲಾನ್ ಬರುತ್ತೆ. ಆ ಊರು ಈ ಊರು ಎಂದೆಲ್ಲ ಚರ್ಚೆಯಾಗಿ ಕೊನೆಗೆ ಕೊಡೈಕೆನಾಲ್ ಫಿಕ್ಸ್ ಆಗುತ್ತೆ. ಕ್ವಾಲಿಸ್ ಏರಿ ಹೊರಟೇ ಬಿಡ್ತಾರೆ. ಕಡಿದಾದ ದಾರಿಯಲ್ಲಿ ಬೆಟ್ಟ ಗುಡ್ಡ ನೋಡುತ್ತ ಗುಣ ಗುಹೆಯತ್ತಲೂ ಹೆಜ್ಜೆ ಹಾಕ್ತಾರೆ. ಬಿಗಿ ಭದ್ರತೆ, ನಿಷೇಧದ ನಡುವೆಯೂ ಅಲ್ಲಿನ ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಿ ನಿಷೇಧಿತ ಪ್ರದೇಶಕ್ಕೆ 11 ಯುವಕರ ತಂಡ ಪ್ರವೇಶಿಸುತ್ತದೆ.
ಗುಣ ಗುಹೆಯ ಸುತ್ತ..
ಅಲ್ಲಿಯವರೆಗೂ ಎಲ್ಲವೂ ಚೆನ್ನಾಗಿ ಹೋಗುತ್ತಿರುತ್ತದೆ. ಮೋಜು, ಮಸ್ತಿ ಮಾಡುತ್ತ ತರಲೆ ಮಾತುಗಳನ್ನಾಡುತ್ತ ಸಾಗುವಾಗಲೇ, ಒಂದು ಕ್ಷಣ ಆ 11 ಮಂದಿಯಲ್ಲೊಬ್ಬ ಅಲ್ಲೇ ಇದ್ದ ಕಿರಿದಾದ ಕಲ್ಲಿನ ಕಂದಕದೊಳಕ್ಕೆ ಬೀಳ್ತಾನೆ. ಏಕಾಏಕಿ ಎಲ್ಲರ ಆಗಮನವಾಗುತ್ತದೆ. ಭಯದ ಜತೆಗೆ ಎಲ್ಲರ ಎದೆಬಡಿತವೂ ಹೆಚ್ಚಾಗುತ್ತ ಹೋಗುತ್ತದೆ. ಮುಂದೆ? ಹಾಗೆ ಆಳದ ಕಂದಕಕ್ಕೆ ಬಿದ್ದವ ಏನಾಗ್ತಾನಾ? ಅವನು ಬದುಕುಳಿದಿರ್ತಾನಾ? ರಕ್ಷಣಾ ಕಾರ್ಯಾಚರಣೆ ಹೇಗಿರುತ್ತದೆ? ಅಧಿಕಾರಿಗಳ ಆಲಸ್ಯ ಎಷ್ಟರಮಟ್ಟಿಗಿರುತ್ತದೆ? ಹೀಗೆ ಎಲ್ಲವೂ ಪದರಗಳಾಗಿ ಬಿಚ್ಚಿಕೊಳ್ಳುತ್ತ, ಕುತೂಹಲಕ್ಕೆ ಒಗ್ಗರಣೆ ಹಾಕುತ್ತಲೇ ಸಾಗುತ್ತದೆ.
ಬಲಿಷ್ಠ ತಾಂತ್ರಿಕ ವರ್ಗ
ನಟರ ಶ್ರಮ ಒಂದು ಕಡೆ ಎದ್ದು ಕಾಣಿಸಿದರೆ, ಇತ್ತ ಅದಕ್ಕೆ ಪೈಪೋಟಿಗೆ ಬಿದ್ದಂತೆ ತಾಂತ್ರಿಕ ವರ್ಗದ ಕೆಲಸವೂ ಮೆಚ್ಚುವಂಥದ್ದು. ತಾಂತ್ರಿಕವಾಗಿ ಸಿನಿಮಾ ಬಲಿಷ್ಠವಾಗಿದೆ ಎಂದರೆ ಅಲ್ಲಿ ತೆರೆ ಹಿಂದಿನ ದುಡಿಮೆಯೂ ವರ್ಕೌಟ್ ಆಗಿದೆ. ಕ್ಯಾಮರಾ ಕೋನಗಳಲ್ಲಿ ಕೊಡೈಕೆನಾಲ್‌ನ ಗುಣ ಗುಹೆಯ ಅಂದವನ್ನು ಕಣ್ಣಿಗೆ ಕಟ್ಟಿದಂತೆ ತೋರಿಸಿದ್ದಾರೆ ಛಾಯಾಗ್ರಾಹಕ ಶೈಜು ಖಾಲೀದ್. ಅದೇ ಗುಣ ಗುಹೆಯ ಮತ್ತೊಂದು ಮಗ್ಗಲಿನಲ್ಲಿ ಅದರಾಳದ ಕರಾಳತೆಯನ್ನೂ ತೋರಿಸಿ ಭಯಭೀತಗೊಳಿಸಿದ್ದಾರೆ. ಸುಶೀನ್ ಶ್ಯಾಮ್ ಹಿನ್ನೆಲೆ ಸಂಗೀತ, ಆಳ ಗುಹೆಯಲ್ಲೂ ಮಾರ್ಧನಿಸುತ್ತದೆ. ಕಡು ಮೌನದಲ್ಲಿಯೇ ತೇಲಿ ಬರುವ ಸಂಗೀತ ನೋಡುಗನನ್ನು ಕಥೆಯಲ್ಲಿ ತಲ್ಲೀನನಾಗುವಂತೆ ಮಾಡುತ್ತದೆ.
ಸಾಮಾನ್ಯ ಕಥೆಯ ಹೆಣಿಗೆ ಚೆಂದ
ಕಥೆಯ ಗಟ್ಟಿತನ, ಭಾವನಾತ್ಮಕ ಸೆಳೆತ, ಕೊನೇ ಕ್ಷಣದ ಕ್ಲೈಮ್ಯಾಕ್ಸ್ ಜತೆಗೆ ಒಂದಷ್ಟು ರೋಮಾಂಚನ ಎನಿಸುವ ಗುಣಗಳೂ ಈ ಸಿನಿಮಾದಲ್ಲಿವೆ. ಹಾಗೆಂದ ಮಾತ್ರಕ್ಕೆ ಇದೊಂದು ಮಾಸ್ಟರ್‌ಪೀಸಾ? ಎಂದು ಹೇಳುವುದಕ್ಕೂ ಬಾರದು. ಆ ಮಟ್ಟದ ಬೆರಗು ಇಲ್ಲಿ ಕಾಣಿಸಿದೇ ಇದ್ದರು, ನೋಡುಗನಿಗೆ ಹೊಸ ಅನುಭವ ನೀಡುತ್ತದೆ. ತಾಂತ್ರಿಕ ವಿಚಾರದಲ್ಲಿ, ಕಥೆ ಹೇಳುವ ರೀತಿಯಲ್ಲಿ ಸಿನಿಮಾ ಬಲಿಷ್ಠವಾಗಿದೆ. ಹನ್ನೊಂದು ಕಲಾವಿದರಿಂದ ನೈಜ ನಟನೆಯನ್ನು ಚೆನ್ನಾಗಿಯೇ ದುಡಿಸಿಕೊಂಡಿದ್ದಾರೆ ನಿರ್ದೇಶಕರು.
ವಿಮರ್ಶೆ: ಮಂಜುನಾಥ ಕೊಟಗುಣಸಿ