ಪುಷ್ಪ 2 ಸಿನಿಮಾದ ಟಿಕೆಟ್ ದರ ಹೆಚ್ಚಾಯ್ತು ಎಂದವರಿಗೆ ಸುಬ್ಬರಾಯರ ಇಡ್ಲಿ ಹೋಟೆಲ್ ಕಥೆ ಹೇಳಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ
Dec 04, 2024 04:10 PM IST
ಪುಷ್ಪ 2 ಸಿನಿಮಾದ ಟಿಕೆಟ್ ದರ ಹೆಚ್ಚಾಯ್ತು ಎಂದವರಿಗೆ ಸುಬ್ಬರಾಯರ ಇಡ್ಲಿ ಹೋಟೆಲ್ ಕಥೆ ಹೇಳಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ
- Pushpa 2 ticket price: ಸುಕುಮಾರ್ ನಿರ್ದೇಶನದ, ಅಲ್ಲು ಅರ್ಜುನ್, ಫಹಾದ್ ಫಾಸಿಲ್, ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ 2 ಸಿನಿಮಾದ ಟಿಕೆಟ್ ದರ ಹೆಚ್ಚಳದ ಕುರಿತು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತನ್ನದೇ ಶೈಲಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ.
ಸುಕುಮಾರ್ ಅವರ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ ಅಭಿನಯದ ಪುಷ್ಪ 2: ದಿ ರೂಲ್ ಸಿನಿಮಾ ಇಂದು ಸಂಜೆ ಅಂದರೆ ಡಿಸೆಂಬರ್ 4ರಂದು ಪ್ರಥಮ ಪ್ರದರ್ಶನ ಕಾಣಲಿದೆ. ಚಿತ್ರದ ನಿರ್ಮಾಪಕರು ಬೆಂಗಳೂರು, ದೆಹಲಿ ಮತ್ತು ಮುಂಬೈನ ಕೆಲವು ಥಿಯೇಟರ್‌ಗಳಲ್ಲಿ 2000 ರೂ. ದರದಲ್ಲಿ ಈ ಸಿನಿಮಾ ಪ್ರದರ್ಶಿಸಲು ಉದ್ದೇಶಿಸಿದ್ದಾರೆ. ಇಷ್ಟೊಂದು ದರ ನಿಗದಿಪಡಿಸಿರುವುದಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಆದರೆ, ಸಿನಿಮಾ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟಿಕೆಟ್ ದರ ಹೆಚ್ಚಳವನ್ನು ಸಮರ್ಥಿಸಿಕೊಂಡಿದ್ದಾರೆ.
ರಾಮ್ ಗೋಪಾಲ್ ವರ್ಮಾ ಏನಂದ್ರು?
ರಾಮ್ ಗೋಪಾಲ್ ವರ್ಮಾ ಅವರು ಎಕ್ಸ್‌ನಲ್ಲಿ (ಹಳೆಯ ಟ್ವಿಟ್ಟರ್) ತೆಲುಗಿನಲ್ಲಿ ಸುದೀರ್ಘವಾಗಿ ಈ ಕುರಿತು ಬರೆದಿದ್ದಾರೆ. ಟಿಕೆಟ್ ದರ ಹೆಚ್ಚಳದ ಕುರಿತು ಜನರು ತಮ್ಮ ಟ್ರೇಡ್ ಮಾರ್ಕ್ ಸ್ಟೈಲ್‌ನಲ್ಲಿ ಅಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಇದೇ ಸಮಯದಲ್ಲಿ ಮನರಂಜನಾ ಉದ್ಯಮ ಮತ್ತು ಐಷಾರಾಮಿ ಮಾರುಕಟ್ಟೆಯ ನಡುವೆ ಹೋಲಿಕೆ ಮಾಡಿದ್ದಾರೆ.
“ಸುಬ್ಬರಾವ್ ಎಂಬ ವ್ಯಕ್ತಿ ಇಡ್ಲಿ ಹೋಟೆಲ್ ಆರಂಭಿಸಿ ಪ್ರತಿ ಪ್ಲೇಟ್‌ಗೆ 1000 ರೂ ನಿಗದಿಪಡಿಸುತ್ತಾರೆ. ಏಕೆಂದರೆ ಸುಬ್ಬರಾಯರು ತಮ್ಮ ಇಡ್ಲಿಗಳು ಇತರ ಇಡ್ಲಿಗಳಿಗಿಂತ ಶ್ರೇಷ್ಠವೆಂದು ನಂಬುತ್ತಾರೆ. ಆದರೆ, ಗ್ರಾಹಕರು ಸುಬ್ಬರಾವ್ ಅವರು ಮಾರಾಟ ಮಾಡುವ ಇಡ್ಲಿಗಳು ಅಷ್ಟು ಉತ್ತಮವಾಗಿಲ್ಲದೆ ಇದ್ದರೆ ಅವರ ಹೋಟೆಲ್‌ಗೆ ಹೋಗುವುದಿಲ್ಲ. ಹೀಗಾದರೆ ಸುಬ್ಬರಾವ್ ಮಾತ್ರ ಸೋಲುತ್ತಾರೆ" ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.
"ಸುಬ್ಬರಾವ್ ಅವರ ಇಡ್ಲಿಗಳು ಜನಸಾಮಾನ್ಯರಿಗೆ ಕೈಗೆಟುಕುತ್ತಿಲ್ಲ ಎಂದು ಅಳಲು ತೋಡಿಕೊಳ್ಳುವವರು ‘ಸಿಲ್ಲಿ" ಎಂದ ಆರ್‌ಜಿವಿ ಹೇಳಿದ್ದಾರೆ. ‘ಸೆವೆನ್‌ಸ್ಟಾರ್ ಹೋಟೆಲ್ ಶ್ರೀಸಾಮಾನ್ಯನಿಗೆ ಕೈಗೆಟುಕುವುದಿಲ್ಲ" ಎಂದು ಹೇಳಬಹುದು. "ನೀವು ಸೆವೆನ್ ಸ್ಟಾರ್ ಹೋಟೆಲ್‌ನ ವಾತಾವರಣಕ್ಕಾಗಿ ಪಾವತಿಸುತ್ತಿದ್ದೀರಿ ಎಂದು ವಾದಿಸಿದರೆ, ಪುಷ್ಪ 2 ಪ್ರಕರಣದಲ್ಲಿ, ಸೆವೆನ್ ಸ್ಟಾರ್ ಗುಣಮಟ್ಟವು ಚಲನಚಿತ್ರವಾಗಿದೆ" ಎಂದು ಅವರು ಹೇಳಿದ್ದಾರೆ. ಈ ಮೂಲಕ ಇದು ಒಳ್ಳೆಯ ಗುಣಮಟ್ಟದ ಸಿನಿಮಾ, ಹೆಚ್ಚು ಪಾವತಿಸಿದರೆ ತಪ್ಪಿಲ್ಲ ಎಂದಿದ್ದಾರೆ.
'ಪ್ರಜಾಪ್ರಭುತ್ವದ ಬಂಡವಾಳಶಾಹಿಯು ವರ್ಗ ವ್ಯತ್ಯಾಸಗಳ ಮೇಲೆ ಕಾರ್ಯನಿರ್ವಹಿಸುತ್ತದೆ. ಚಲನಚಿತ್ರಗಳು ಲಾಭಕ್ಕಾಗಿ ಇರುವುದು. ಸಾರ್ವಜನಿಕ ಸೇವೆಗಾಗಿ ಅಲ್ಲ" ಎಂದು ಅವರು ಹೇಳಿದ್ದಾರೆ. "ಐಷಾರಾಮಿ ಕಾರುಗಳು, ಕಟ್ಟಡಗಳು ಮತ್ತು ಬ್ರಾಂಡೆಡ್ ಬಟ್ಟೆಗಳ ಬೆಲೆಗಳ ಬಗ್ಗೆ ಯಾರೂ ಅಳುವುದಿಲ್ಲ, ಚಲನಚಿತ್ರ ಟಿಕೆಟ್‌ಗಳ ಬಗ್ಗೆ ಏಕೆ ಅಳುವಿರಿ? ಮನರಂಜನೆ ಅತ್ಯಗತ್ಯವೇ? ವಸತಿ, ಆಹಾರ ಮತ್ತು ಬಟ್ಟೆಗಿಂತ ಇದು ಅತ್ಯಗತ್ಯವೇ? ಅಗತ್ಯ ವಸ್ತುಗಳ ಬೆಲೆಗೆ ಹೋಲಿಸಿದರೆ ಪುಷ್ಪ 2ರ ಟಿಕೆಟ್ ದರ ಕಡಿಮೆಯಾಗಿದೆ" ಎಂದು ಆರ್‌ಜಿವಿ ಹೇಳಿದ್ದಾರೆ.
ಟಿಕೆಟ್ ದರ ಕಡಿಮೆಯಾದಾಗ ಜನರು ಚಲನಚಿತ್ರವನ್ನು ನೋಡಲು ಅಥವಾ ನೋಡದಿರಲು ನಿರ್ಧರಿಸಿ ಎಂದು ಅವರು ಸಲಹೆ ನೀಡಿದ್ದಾರೆ. “ಸುಬ್ಬರಾಯರ ಹೋಟೆಲ್‌ಗೆ ಹಿಂತಿರುಗಿ ಬರೋಣ. ಇಡ್ಲಿಯ ಬೆಲೆ ಸ್ಪಷ್ಟವಾಗಿ ಕೆಲಸ ಮಾಡಿದೆ. ಸುಬ್ಬರಾಯರಿಗೂ ಹೊಟೇಲ್‌ನಲ್ಲಿ ಕುಳಿತುಕೊಳ್ಳಲು ಜಾಗ ಸಿಗಲಿಲ್ಲ ಎಂಬುದೇ ಸಾಕ್ಷಿ - ಎಲ್ಲಾ ಸೀಟುಗಳು ಬುಕ್ ಆಗಿವೆ!" ಎಂದು ಅವರು ಹೇಳಿದ್ದಾರೆ.
ಮೂರು ವರ್ಷಗಳಿಂದ ಪುಷ್ಪ 2 ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಸಿನಿಮಾದ ಕುರಿತು ಭಾರೀ ಹೈಪ್ ಇದೆ. ಅಡ್ವಾನ್ಸ್ ಬುಕ್ಕಿಂಗ್ ಟಿಕೆಟ್ ಪಡೆಯಲು ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ. ಅಡ್ವಾನ್ಸಡ್ ಬುಕ್ಕಿಂಗ್ ಆಧಾರದಲ್ಲಿ ಹೇಳುವುದಾದರೆ ಮೊದಲ ದಿನವೇ ಚಿತ್ರ 100 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಲಿದ್ದು, ಮೊದಲ ವಾರಾಂತ್ಯದಲ್ಲಿ 200 ಕೋಟಿ ರೂ. ಗಳಿಕೆ ಮಾಡಲಿದೆ. ಈಗಾಗಲೇ ಬುಕಿಂಗ್‌ನಲ್ಲಿ ಬಾಹುಬಲಿ 2, ಕೆಜಿಎಫ್ 2, ಕಲ್ಕಿ 2898 ಎಡಿ ಮತ್ತು ಆರ್‌ಆರ್‌ಆರ್‌ನಂತಹ ಚಲನಚಿತ್ರಗಳ ದಾಖಲೆಗಳನ್ನು ಮುರಿದಿದೆ. ಬೆಂಗಳೂರಿನಲ್ಲಿ ಬಹುತೇಕ ಚಿತ್ರಮಂದಿರಗಳಲ್ಲಿ ಪುಷ್ಪ 2 ಸಿನಿಮಾ ಪ್ರದರ್ಶನ ಕಾಣುತ್ತಿದೆ. ಪುಷ್ಪ 2 ಸಿನಿಮಾ ನಾಳೆ (ಡಿಸೆಂಬರ್ 5 ) ಬಿಡುಗಡೆಯಾಗಲಿದ್ದು, ಸಿನಿಮಾದ ಕುರಿತು ಮಾಹಿತಿಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ನೋಡುತ್ತ ಇರಿ.