ಜೈಲಿಗೆ ಹೋಗಿ ಬಂದ ಅಲ್ಲು ಅರ್ಜುನ್ ಭೇಟಿ ಮಾಡಿದ ನೀವು, ಸಂತ್ರಸ್ತೆ ಮನೆಗೆ ಹೋಗಿದ್ರಾ? ತೆಲುಗು ನಟರಿಗೆ ಸಿಎಂ ರೇವಂತ್ ರೆಡ್ಡಿ ಟಾಂಗ್
Dec 22, 2024 11:48 AM IST
ಜೈಲಿಗೆ ಹೋಗಿ ಬಂದ ಅಲ್ಲು ಅರ್ಜುನ್ ಭೇಟಿ ಮಾಡಿದ ನೀವು, ಸಂತ್ರಸ್ತೆ ಮನೆಗೆ ಹೋಗಿದ್ರಾ? ತೆಲುಗು ನಟರಿಗೆ ಸಿಎಂ ರೇವಂತ್ ರೆಡ್ಡಿ ಬಿಸಿ
Pushpa 2 Row: ಪುಷ್ಪ 2' ಚಿತ್ರದ ಪ್ರೀಮಿಯರ್ ಶೋ ವೇಳೆ ಸಂಧ್ಯಾ ಚಿತ್ರಮಂದಿರದಲ್ಲಿ ಉಂಟಾದ ಕಾಲ್ತುಳಿತವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಘಟನೆಯ ಬಗ್ಗೆ ಸ್ವತಃ ಸಿಎಂ ರೇವಂತ್ ವಿಧಾನಸಭೆಯಲ್ಲಿ ಕೊಂಚ ಬಿರುಸಾಗಿಯೇ ಮಾತನಾಡಿದ್ದಾರೆ.
Revanth Reddy on Allu Arjun: ಟಾಲಿವುಡ್ ನಟ ಅಲ್ಲು ಅರ್ಜುನ್ Vs ಸಿಎಂ ರೇವಂತ್ ರೆಡ್ಡಿ ಎಂಬಂತಾಗಿದೆ ಸದ್ಯದ ಪರಿಸ್ಥಿತಿ. ಅದಕ್ಕೆ ಕಾರಣ, ಇತ್ತೀಚೆಗೆ ನಡೆದ ಒಂದಷ್ಟು ಅನಿರೀಕ್ಷಿತ ಘಟನೆಗಳು. ಪುಷ್ಪ 2 ಸಿನಿಮಾದ ಪ್ರೀಮಿಯರ್ ಶೋ ವೇಳೆ ಹೈದರಾಬಾದ್‌ನ ಆರ್‌ಟಿಸಿ ಬಳಿಯ ಸಂಧ್ಯಾ ಚಿತ್ರಮಂದಿರದ ಮುಂಭಾಗದಲ್ಲಿನ ಕಾಲ್ತುಳಿತ ಪ್ರಕರಣದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದರೆ, ಆ ಮಹಿಳೆಯ ಮಗ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾನೆ. ಈ ನಡುವೆ ಮತ್ತಷ್ಟು ಮಗದಷ್ಟು ವಿಚಾರಗಳು ಮುನ್ನೆಲೆಗೆ ಬಂದಿವೆ.
ಸಿನಿಮಾ ಕಲಾವಿದರ ಈ ರೀತಿಯ ನಡೆಯಿಂದ ಸಾರ್ವಜನಿಕರ ಜೀವ ಹಾನಿ ಸಂಭವಿಸಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದ ತೆಲಂಗಾಣ ಸರ್ಕಾರ, ಪುಷ್ಪ 2 ಸಿನಿಮಾದ ನಟ ಅಲ್ಲು ಅರ್ಜುನ್‌ಗೆ ಬಿಸಿ ಮುಟ್ಟಿಸಿದ್ದರು. ನೇರವಾಗಿ ಅಲ್ಲು ಅರ್ಜುನ್ ಮನೆಗೆ ಹೋಗಿ ಬಂಧಿಸಿ, ಕೋರ್ಟ್‌ಗೆ ಹಾಜರು ಪಡಿಸಿದ್ದರು. ಕೋರ್ಟ್‌ನಲ್ಲಿ 14 ದಿನಗಳ ನ್ಯಾಯಾಂಗ ಬಂಧನದ ತೀರ್ಪು ಹೊರಬೀಳುತ್ತಿದ್ದಂತೆ, ತಕ್ಷಣ ಜಾಮೀನು ಪಡೆದು, ಒಂದು ರಾತ್ರಿ ಜೈಲಿನಲ್ಲಿ ಕಳೆದು ಮರುದಿನ ಬಿಡುಗಡೆ ಆಗಿದ್ದರು ಅಲ್ಲು ಅರ್ಜುನ್.
ನಟ ಅಲ್ಲು ಅರ್ಜುನ್ ಹೀಗೆ ಜೈಲಿಂದ ಹೊರಬರುತ್ತಿದ್ದಂತೆ, ಟಾಲಿವುಡ್‌ನ ಬಹುತೇಕ ಎಲ್ಲ ಸ್ಟಾರ್ ನಟರು ಅವರ ನಿವಾಸಕ್ಕೆ ತೆರಳಿ ಭೇಟಿ ಮಾಡಿಬಂದಿದ್ದರು. ನಟ ನಾನಿ ಒಂದು ಹೆಜ್ಜೆ ಮುಂದೆ ಹೋಗಿ, ಸರ್ಕಾರ, ಪೊಲೀಸ್ ಮತ್ತು ಮಾಧ್ಯಮ ವ್ಯವಸ್ಥೆಗಳನ್ನು ಟೀಕಿಸಿ ಪೋಸ್ಟ್ ಮಾಡಿದ್ದರು. ಇನ್ನೂ ಕೆಲವರು ಅದೇ ಹಾದಿಯಲ್ಲಿ ನಡೆದರು. ಆದರೆ, ದುರಂತ ಏನೆಂದರೆ, ಸಂತ್ರಸ್ತೆಯ ಕುಟುಂಬವನ್ನು ಒಬ್ಬೇ ಒಬ್ಬ ಸಿನಿಮಾ ಸೆಲೆಬ್ರಿಟಿಯೂ ಭೇಟಿ ಮಾಡಲಿಲ್ಲ. ಟೀಕೆಗಳು ಹೆಚ್ಚಾಗುತ್ತಿದ್ದಂತೆ, ಚಿಕಿತ್ಸೆ ಪಡೆಯುತ್ತಿರುವ ಬಾಲಕನನ್ನು ಪುಷ್ಪ 2 ಸಿನಿಮಾ ನಿರ್ದೇಶಕ ಸುಕುಮಾರ್ ಭೇಟಿ ಮಾಡಿದರು. ಅವರ ಬೆಂಬಲಕ್ಕೆ ನಿಲ್ಲುವುದಾಗಿ ಭರವಸೆ ನೀಡಿದರು.
ಸಿಎಂ ರೇವಂತ್ ರೆಡ್ಡಿ ಕೆಂಡಾಮಂಡಲ
ಆದಾಗ್ಯೂ, ಘಟನೆಯ ನಂತರ ನಡೆದ ಬೆಳವಣಿಗೆಗಳನ್ನು ಮುಖ್ಯಮಂತ್ರಿ ರೇವಂತ್ ರೆಡ್ಡಿ ಗಂಭೀರವಾಗಿ ಪರಿಗಣಿಸಿದ್ದಾರೆ. ಸೆಲೆಬ್ರಿಟಿಗಳೆಂಬ ಕಾರಣಕ್ಕೆ ರೂಲ್ಸ್ ಬ್ರೇಕ್ ಮಾಡಬಹುದೇ, ಅಷ್ಟಕ್ಕೂ ಜೈಲಿನಲ್ಲಿ ಒಂದು ರಾತ್ರಿ ಕಳೆದ ಮಾತ್ರಕ್ಕೆ ಅಲ್ಲು ಅರ್ಜುನ್ ಅವರ ಕೈ ಕಾಲು ಮುರಿದಿದೆಯೇ, ಕಣ್ಣು , ಕಿಡ್ನಿ ಕಳೆದುಕೊಂಡ್ರಾ? ಜೈಲಿಂದ ಬಿಡುಗಡೆ ಆಗಿ ಹೊರಬಂದ ಬಳಿಕ ಅವರನ್ನು ಭೇಟಿ ಮಾಡುವ ಅಷ್ಟೊಂದು ತರಾತುರಿ ಸಿನಿಮಾ ಮಂದಿಗೇ ಏನಿತ್ತು? ಹಾಸಿಗೆ ಮೇಲೆ ಚಿಕಿತ್ಸೆ ಪಡೆಯುತ್ತಿರುವ ಆ ಬಾಲಕ, ಸಾವನ್ನಪ್ಪಿದ ಮಹಿಳೆ ಮನೆಗೆ ಈ ಸೆಲೆಬ್ರಿಟಿಗಳು ಭೇಟಿ ಕೊಟ್ರಾ? ಎಂದು ಕಿಡಿಕಾರಿದ್ದಾರೆ ಸಿಎಂ.
ಚಿತ್ರರಂಗಕ್ಕೆ ನೀಡುತ್ತಿದ್ದ ವಿಶೇಷ ಸೌಲಭ್ಯಗಳು ಕಟ್
ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಮಹಿಳೆ ಕುಟುಂಬಕ್ಕೆ ಭೇಟಿ ನೀಡಿದ ತೆಲಂಗಾಣ ಸರ್ಕಾರದ ಸಿನಿಮಾಟೋಗ್ರಾಫಿ ಸಚಿವ ವೆಂಕಟ್ ರೆಡ್ಡಿ 25 ಲಕ್ಷ ಪರಿಹಾರ ನೀಡಿದ್ದಾರೆ. ಜತೆಗೆ ತೆಲುಗು ಚಿತ್ರೋದ್ಯಮಕ್ಕೆ ನೀಡುತ್ತಿದ್ದ ವಿಶೇಷ ಸೌಲತ್ತುಗಳನ್ನೂ ಕಡಿತ ಮಾಡಿದ್ದಾರೆ. ಟಿಕೆಟ್ ದರ ಹೆಚ್ಚಳದ ಸೌಲತ್ತನ್ನೂ ಕಸಿದುಕೊಂಡಿದ್ದೇವೆ. ಚಿಕಿತ್ಸೆ ಪಡೆಯುತ್ತಿರುವ ಬಾಲಕ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ವಿಧಾನಸಭೆಯಲ್ಲಿ ವೆಂಕಟ್ ರೆಡ್ಡಿ ಹೇಳಿದ್ದಾರೆ.
"ಜೈಲಿಗೆ ಹೋದ ಹೀರೋನ ಮನೆಯಲ್ಲಿ ಸಾಲುಗಟ್ಟಿ ನಿಂತಿರುವ ಚಿತ್ರರಂಗದ ಸೆಲೆಬ್ರಿಟಿಗಳು ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಿದ್ದಾರೆಯೇ? ವ್ಯಾಪಾರ ಮಾಡಿ, ಆದರೆ ಇಂಥ ಘಟನೆ ಮೂಲಕ ಇತರರ ಜೀವನದೊಂದಿಗೆ ಆಟವಾಡಲು ನಾವು ಒಪ್ಪುವುದಿಲ್ಲ. ನಾವು ಅಧಿಕಾರದಲ್ಲಿ ಇರುವವರೆಗೂ ಇಂತಹ ಆಟಗಳು ನಡೆಯುವುದಿಲ್ಲ" ಎಂದು ಹೇಳಿ, ಇನ್ನು ಮುಂದೆ ಯಾವುದೇ ಬೆನ್-ಫಿಟ್ ಪ್ರದರ್ಶನಗಳು ಇರುವುದಿಲ್ಲ ಎಂದು ತೆಲಂಗಾಣ ಸರ್ಕಾರ ಸ್ಪಷ್ಟಪಡಿಸಿದೆ.