Pushpa 2 OTT: ಪುಷ್ಪ 2 ಚಿತ್ರದ ಒಟಿಟಿ ಬಿಡುಗಡೆ ಬಗ್ಗೆ ಹರಿದಾಡಿದ್ದ ವದಂತಿಗೆ ಸ್ಪಷ್ಟನೆ; ಸುದ್ದಿ ಕೇಳಿ ಒಟಿಟಿ ವೀಕ್ಷಕರ ಅಸಮಾಧಾನ
Pushpa 2 OTT Release Date: ಕಲೆಕ್ಷನ್ ವಿಚಾರದಲ್ಲಿ ಹಲವು ದಾಖಲೆ ಬರೆದ ಪುಷ್ಪ 2 ದಿ ರೂಲ್ ಸಿನಿಮಾ ಇದೀಗ ಒಟಿಟಿ ವಿಚಾರವಾಗಿ ಸುದ್ದಿಯಲ್ಲಿದೆ. ಅಷ್ಟಕ್ಕೂ ಈ ಸಿನಿಮಾ ಯಾವಾಗ ಒಟಿಟಿ ಅಂಗಳ ಪ್ರವೇಶಿಸಲಿದೆ. ಅದಕ್ಕೆ ಸ್ವತಃ ಮೈತ್ರಿ ಮೂವಿ ಮೇಕರ್ಸ್ ಉತ್ತರ ನೀಡಿದೆ.
Pushpa 2 OTT Release Date: ಟಾಲಿವುಡ್ ನಟ, ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2: ದಿ ರೂಲ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸಿನ ಓಟವನ್ನು ಮುಂದುವರಿಸಿದೆ. ಗಳಿಕೆಯಲ್ಲಿ ಈಗಾಗಲೇ 1500 ಕೋಟಿಯ ಗಡಿ ದಾಟಿದ ಈ ಸಿನಿಮಾ, ಮುಂದಿನ ದಿನಗಳಲ್ಲಿ ಮಗದಷ್ಟು ಮೈಲಿಗಲ್ಲುಗಳನ್ನು ಮುಟ್ಟುವ ಸಾಧ್ಯತೆಗಳೂ ಹೆಚ್ಚಿವೆ. ಅದು ಹೇಗೆ ಎಂಬುದಕ್ಕೆ ಸ್ವತಃ ಚಿತ್ರ ನಿರ್ಮಾಣ ಸಂಸ್ಥೆಯೇ ಪರೋಕ್ಷವಾಗಿ ಹೇಳಿಕೊಂಡಿದೆ.
ಡಿಸೆಂಬರ್ 5 ರಂದು ವಿಶ್ವದಾದ್ಯಂತ ಸುಮಾರು 12,500 ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಪುಷ್ಪ 2 ಸಿನಿಮಾ, ತೆಲುಗು, ಕನ್ನಡ, ತಮಿಳು, ಮಲಯಾಳಂ, ಬೆಂಗಾಲಿ ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗಿದೆ. ಈ ವರೆಗೂ 1500 ಕೋಟಿ ಗಡಿ ದಾಟಿ ಹೊಸ ದಾಖಲೆ ಬರೆದಿದೆ. ಈ ನಡುವೆ ಚಿತ್ರತಂಡಕ್ಕೆ ಖುಷಿಯ ವಿಚಾರ ಏನೆಂದರೆ, ಸಂಕ್ರಾಂತಿಯವರೆಗೆ ತೆಲುಗಿನಲ್ಲಿ ಯಾವುದೇ ದೊಡ್ಡ ಚಿತ್ರಗಳು ರೇಸ್‌ನಲ್ಲಿ ಇಲ್ಲ. ಇದನ್ನೇ ಎನ್‌ಕ್ಯಾಶ್ ಮಾಡಿಕೊಂಡಿರುವ ಪುಷ್ಪ 2, ಅಲ್ಲಿಯವರೆಗೆ ಚಿತ್ರಮಂದಿರದಲ್ಲಿ ಪ್ರದರ್ಶನ ಮುಂದುವರಿಸುವ ಸಾಧ್ಯತೆ ಇದೆ.
ಒಟಿಟಿಯಲ್ಲಿ ಪುಷ್ಪ 2 ಯಾವಾಗ?
ಪುಷ್ಪ 2 ಶೀಘ್ರದಲ್ಲೇ ಒಟಿಟಿಗೆ ಬರಲಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದೀಗ ಇದೇ ಸುದ್ದಿಗೆ ಚಿತ್ರ ನಿರ್ಮಾಣ ಮಾಡಿದ ಮೈತ್ರಿ ಮೂವಿ ಮೇಕರ್ಸ್ ಸ್ಪಷ್ಟನೆ ನೀಡಿದೆ. ಪುಷ್ಪ 2 ಚಿತ್ರ ಬಿಡುಗಡೆಯಾದ ದಿನದಿಂದ 56 ದಿನಗಳ ಒಳಗೆ ಒಟಿಟಿಯಲ್ಲಿ ಬಿಡುಗಡೆಯಾಗುವುದಿಲ್ಲ. ಅಲ್ಲಿಯವರೆಗೆ ಪುಷ್ಪ 2 ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡಬೇಕು" ಎಂದು ಟ್ವಿಟ್ ಮಾಡಿದೆ.
ಪುಷ್ಪ 2 ಒಟಿಟಿ ಹಕ್ಕು ಯಾರ ಪಾಲು?
ಪುಷ್ಪ 2 ನ ಒಟಿಟಿ ಹಕ್ಕುಗಳನ್ನು ನೆಟ್‌ಪ್ಲಿಕ್ಸ್ ಸಂಸ್ಥೆ ಭಾರಿ ಬೆಲೆಗೆ ಖರೀದಿಸಿದೆ. ಅಮೆಜಾನ್ ಒಟಿಟಿಯಿಂದ ತೀವ್ರ ಸ್ಪರ್ಧೆಯ ಹೊರತಾಗಿಯೂ, ನೆಟ್‌ಫ್ಲಿಕ್ಸ್ ಪುಷ್ಪ 2 ಚಿತ್ರದ ಒಟಿಟಿ ಹಕ್ಕುಗಳನ್ನು ಬರೋಬ್ಬರಿ 270 ಕೋಟಿ ರೂ.ಗೆ ಪಡೆದುಕೊಂಡಿದೆ ಎನ್ನಲಾಗುತ್ತಿದೆ. ಅಮೆಜಾನ್ ಪ್ರೈಮ್ ವಿಡಿಯೋ 2021ರಲ್ಲಿ ಪುಷ್ಪ: ದಿ ರೈಸ್ ಚಿತ್ರದ ಒಟಿಟಿ ಹಕ್ಕುಗಳನ್ನು ಪಡೆದಿತ್ತು. ಇದೀಗ ಇವೆರಡು ಸ್ಪರ್ಧೆಯಲ್ಲಿ ನೆಟ್‌ಫ್ಲಿಕ್ಸ್ ಪಾಲಾಗಿದೆ ಅಲ್ಲು ಅರ್ಜುನ್ ಸಿನಿಮಾ.
ಪುಷ್ಪ 2 ಚಿತ್ರದಲ್ಲಿ ಅಲ್ಲು ಅರ್ಜುನ್‌ಗೆ ರಶ್ಮಿಕಾ ಮಂದಣ್ಣ ಜೋಡಿಯಾಗಿದ್ದಾರೆ. ಶ್ರೀಲೀಲಾ ಐಟಂ ಹಾಡಿನಲ್ಲಿ ಬಳುಕಿದರೆ, ರಾವ್ ರಮೇಶ್, ಜಗಪತಿ ಬಾಬು, ಅನಸೂಯಾ, ಸುನಿಲ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ ಮತ್ತು ಬಂಗಾಳಿ ಭಾಷೆಗಳಲ್ಲಿ ಬಿಡುಗಡೆಯಾದ ಪುಷ್ಪ 2 ಎಲ್ಲಾ ಭಾಷೆಗಳಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಪುಷ್ಪ 2 ಕಲೆಕ್ಷನ್ ತೆಲುಗುಗಿಂತ ಹಿಂದಿಯಲ್ಲಿ ಹೆಚ್ಚಾಗಿದೆ.