ನಾನು ಮನೆ ಕಟ್ಟಿದ್ರೆ ಆ ಹೆಸರು ಇಡ್ತೀನಿ: ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟಿ ರಮ್ಯಾ ರಾಜು ಸಂದರ್ಶನ
Dec 17, 2024 07:07 AM IST
ನಾನು ಮನೆ ಕಟ್ಟಿದ್ರೆ ಆ ಹೆಸರು ಇಡ್ತೀನಿ: ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟಿ ರಮ್ಯಾ ರಾಜು ಸಂದರ್ಶನ
- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಲ್ಲಿ ರಾಧಾ ಪಾತ್ರದಲ್ಲಿ ರಮ್ಯಾ ರಾಜು ಅವರು ನಟಿಸುತ್ತಿದ್ದಾರೆ. ಈ ಸೀರಿಯಲ್‌ನ ಸ್ನೇಹಾ ಪಾತ್ರದ ಅಂತ್ಯಕ್ರಿಯೆ ಅವರ ತಂದೆಯ ಸಾವನ್ನು ನೆನಪಿಸಿದೆಯಂತೆ. ಈ ಬಗ್ಗೆ ರಮ್ಯಾ ರಾಜು ಅವರು Panchami Talks ಜೊತೆಗೆ ಮಾತನಾಡಿದ್ದಾರೆ. (ಸಂದರ್ಶನ: ಪದ್ಮಶ್ರೀ ಭಟ್)
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಸ್ನೇಹಾ ಪಾತ್ರ ಅಂತ್ಯವಾಗಿದೆ. ಈ ಸೀರಿಯಲ್ನಲ್ಲಿ ಸ್ನೇಹಾ ನಾಯಕಿಯಾದರೂ ಕೂಡ ಈ ಪಾತ್ರದ ಅಂತ್ಯ ಮಾಡುವಂತಾಯ್ತು. ಈ ರೀತಿ ಆಗತ್ತೆ ಅಂತ ವೀಕ್ಷಕರು ಅಂದುಕೊಂಡಿರಲಿಲ್ಲ. ಈ ಬಗ್ಗೆ ಈ ಧಾರಾವಾಹಿಯ ರಾಧಾ ಪಾತ್ರಧಾರಿ ರಮ್ಯಾ ರಾಜು ಅವರು Panchami Talks ಜೊತೆಗೆ ಮಾತನಾಡಿದ್ದಾರೆ.
ಚಿತೆ ಮೇಲೆ ಮಲಗೋದು ಸುಲಭ ಇರಲಿಲ್ಲ!
ರಮ್ಯಾ ರಾಜು ಅವರು, “ಸ್ನೇಹಾ ಅಂತ್ಯಕ್ರಿಯೆ ದೃಶ್ಯದ ಶೂಟಿಂಗ್ ನಿಜಕ್ಕೂ ಕಷ್ಟ ಆಯ್ತು. ಬೆಳಗ್ಗೆ ಎಲ್ಲರೂ ಆರಾಮಾಗಿದ್ದೆವು, ಆದರೆ ಸಂಜೆ ಅಷ್ಟೊತ್ತಿಗೆ ಎಲ್ಲರೂ ಅತ್ತಿದ್ದೇವೆ. ಸ್ನೇಹಾ ಪಾತ್ರಧಾರಿ ಸಂಜನಾ ಜೊತೆಗೆ ನಮ್ಮ ಬಾಂಧವ್ಯ ಚೆನ್ನಾಗಿತ್ತು. ಹೀಗಾಗಿ, ಬೇಸರ ಆಗಿ ಅತ್ತಿದ್ದೇವೆ. ಸ್ನೇಹಾ ಅಂತ್ಯಕ್ರಿಯೆ ವೇಳೆ ರಾಧಾ ಆದ ನಾನು ನಗಬೇಕಿತ್ತು. ಚಿತೆ ಮೇಲೆ ಸಂಜನಾ (ಸ್ನೇಹಾ) ಮಲಗಬೇಕಿತ್ತು. ಅದೆಲ್ಲ ಸುಲಭ ಇಲ್ಲ. ಸಂಜನಾ ಆರಾಮಾಗಿದ್ದಳು. ಆದರೆ ನಮಗೆ ನೋಡಲು ಕಷ್ಟ ಆಯ್ತು. ಹೇಗೆ ಈ ಎಪಿಸೋಡ್‌ನಲ್ಲಿ ನಟಿಸಿದೆ ಅಂತ ನಾನು ಸಂಜನಾಳನ್ನು ಪ್ರಶ್ನೆ ಮಾಡಿದೆ” ಎಂದು ಹೇಳಿದ್ದಾರೆ.
ಅಪ್ಪನ ನೆನಪಾಯ್ತು!
“ಸಹನಾ ಅಂತ್ಯಕ್ರಿಯೆ ಟೈಮ್‌ನಲ್ಲಿಯೂ ನನಗೆ ಬೇಸರ ಆಯ್ತು. ಶವದಪೆಟ್ಟಿಗೆ ಒಳಗಡೆ ಮಲಗಿಸೋದು, ಹೆಣಕ್ಕೆ ತಾಳಿ ಕಟ್ಟುವ ದೃಶ್ಯ ನೋಡಲು ಬಹಳ ಕಷ್ಟ ಆಯ್ತು. ಅದೆಲ್ಲ ನೋಡುವಾಗ ನನಗೆ ನನ್ನ ತಂದೆ ನೆನಪಾದರು. ನನ್ನ ತಂದೆಯೂ ಹಾಗೆ ಕೊನೇ ಸಲ ಮನೆಗೆ ಬಂದರು. ಎಲ್ಲಿಯಾದ್ರೂ ಸಾವಾದರೆ ಓಂ ಶಾಂತಿ ಅಂತ ಹೇಳ್ತೀನಿ. ನನ್ನ ತಂದೆಯನ್ನು ನಾವು ಕಳೆದುಕೊಂಡಿರೋದು ಕುಟುಂಬಕ್ಕೆ ದೊಡ್ಡ ನಷ್ಟ. ಇನ್ನೂ ನಾವು ಆ ನೋವಿನಿಂದ ಹೊರಗಡೆ ಬಂದಿಲ್ಲ. ಸಂಜನಾ ಕೂಡ ಪರ್ಸನಲ್ ಆಗಿ ತಗೋಬೇಡ ಅಂತ ಹೇಳಿದ್ದಳು. ಆದರೆ ಬೇಸರ ಇದ್ದೇ ಇರುತ್ತದೆ ಅಲ್ವಾ? ತಂದೆ ತೀರಿಕೊಂಡು ಹತ್ತು ವರ್ಷ ಆಗಿವೆ. ಆದರೂ ಕೂಡ ಅಪ್ಪ ನಮ್ಮ ಜೊತೆ ಇದ್ದಾರೆ ಎನ್ನುವ ಭಾವನೆ ಇದೆ. ಅಪ್ಪನಿಗೆ ಮನೆ ಕಟ್ಟುವ ಆಸೆ ಇತ್ತು. ನಾನು ಭವಿಷ್ಯದಲ್ಲಿ ಮನೆ ಕಟ್ಟಿದರೆ ಕನಸು ಅಂತ ಹೆಸರು ಇಡುತ್ತೇನೆ. ಅದು ನನ್ನ ಕನಸು ಕೂಡ ಹೌದು” ಎಂದು ರಮ್ಯಾ ಹೇಳಿದ್ದಾರೆ.
ರಮ್ಯಾ ತಂದೆ ಉದ್ಯೋಗ ಏನಾಗಿತ್ತು?
ರಮ್ಯಾ ತಂದೆ ಶೆಫ್ ಆಗಿ ಕೆಲಸ ಮಾಡುತ್ತಿದ್ದರಂತೆ. ಅಷ್ಟೇ ಅಲ್ಲದೆ ಇವೆಂಟ್‌ಗಳು, ಸಮಾರಂಭಗಳಿಗೂ ಅಡುಗೆ ಮಾಡುತ್ತಿದ್ದರು. ಅವರದ್ದೇ ಆದ ಹೋಟೆಲ್ ಕೂಡ ಇತ್ತು. ಸಂಬಂಧಿಕರ ಮನೆಯಲ್ಲಿ ಕರೆಂಟ್ ಶಾಕ್ ತಗುಲಿ ರಮ್ಯಾ ತಂದೆ ತೀರಿಕೊಂಡರು. ರಮ್ಯಾಗೆ ಅಕ್ಕ ಇದ್ದು, ಮದುವೆಯಾಗಿ ಮಗು ಕೂಡ ಇದೆ. ಅಷ್ಟೇ ಅಲ್ಲದೆ ಅವರು ಟೀಚರ್ ಆಗಿ ಕೆಲಸ ಮಾಡುತ್ತಿದ್ದಾರೆ. ರಮ್ಯಾ ರಾಜು ಅವರು 2016 ರಲ್ಲಿ ನಟಿಯಾಗಿ ಕನ್ನಡ ಕಿರುತೆರೆಗೆ ಕಾಲಿಟ್ಟರು. ʼಓಂ ಶಕ್ತಿ ಓಂ ಶಾಂತಿʼ, ʼಗೀತಾʼ, ʼಕೆಂಡಸಂಪಿಗೆʼ, ʼಮನಸಾರೆʼ ಧಾರಾವಾಹಿಗಳಲ್ಲಿ ರಮ್ಯಾ ನಟಿಸಿದ್ದರು. ʼಓಂ ಶಕ್ತಿ ಓಂ ಶಾಂತಿʼ ಧಾರಾವಾಹಿಯಲ್ಲಿ ರಮ್ಯಾ ರಾಜು ಅವರು ಲೀಡ್ ಆಗಿ ನಟಿಸಿದ್ದರು, ಕಾರಣಾಂತರಗಳಿಂದ ಪಾತ್ರಕ್ಕೆ ಬೇರೆಯವರ ಆಗಮನವಾಯಿತಂತೆ. ಇನ್ನು ರಮ್ಯಾ ಅವರು ಅತಿ ಹೆಚ್ಚು ವಿಲನ್ ಪಾತ್ರಗಳಲ್ಲಿಯೇ ಹೆಚ್ಚಾಗಿ ನಟಿಸಿದ್ದಾರಂತೆ. ರಮ್ಯಾಗೆ ಇನ್ನಷ್ಟು ಒಳ್ಳೆಯ ಪಾತ್ರಗಳಲ್ಲಿ ನಟಿಸುವ ಆಸೆ ಇದೆಯಂತೆ, ವಿಲನ್ ಪಾತ್ರದಿಂದ ಹೊರಬಂದು ಪಾಸಿಟಿವ್ ಆಗಿರುವ ಪಾತ್ರಗಳಿಗೋಸ್ಕರ ರಮ್ಯಾ ಕಾಯುತ್ತಿದ್ದಾರಂತೆ.