logo
ಕನ್ನಡ ಸುದ್ದಿ  /  ಮನರಂಜನೆ  /  ನಾನು ಮಗುವನ್ನು ಬಯಸಿರಲಿಲ್ಲ, ಎಲ್ಲರೂ ಹೇಳುವಂತೆ ಪ್ರೆಗ್ನೆನ್ಸಿ ಅಷ್ಟು ಸುಲಭದ ಮಾತಲ್ಲ; ಕಬಾಲಿ ಸಿನಿಮಾ ನಟಿ ರಾಧಿಕಾ ಆಪ್ಟೆ

ನಾನು ಮಗುವನ್ನು ಬಯಸಿರಲಿಲ್ಲ, ಎಲ್ಲರೂ ಹೇಳುವಂತೆ ಪ್ರೆಗ್ನೆನ್ಸಿ ಅಷ್ಟು ಸುಲಭದ ಮಾತಲ್ಲ; ಕಬಾಲಿ ಸಿನಿಮಾ ನಟಿ ರಾಧಿಕಾ ಆಪ್ಟೆ

Rakshitha Sowmya HT Kannada

Nov 24, 2024 12:38 PM IST

google News

ಪ್ರೆಗ್ನಿಸಿ ಚಾಲೆಂಜ್‌ ಅನುಭವಗಳನ್ನು ಹಂಚಿಕೊಂಡ ಕಬಾಲಿ ನಟಿ ರಾಧಿಕಾ ಆಪ್ಟೆ

  • Radhika Apte: ಕಬಾಲಿ ಸಿನಿಮಾ ನಟಿ ರಾಧಿಕಾ ಆಪ್ಟೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ರಾಧಿಕಾ, ನಾನು ಎಂದಿಗೂ ಮಗುವನ್ನು ಬಯಸಿರಲಿಲ್ಲ. ಪ್ರೆಗ್ನಿನ್ಸಿ ಎಲ್ಲರೂ ಅಂದುಕೊಂಡಷ್ಟು ಸುಲಭದ ಮಾತಲ್ಲ. ಗರ್ಭ ಧರಿಸುವುದು ಪವಿತ್ರತೆ ಎನ್ನುತ್ತಾರೆ. ಆದರೆ ಎಲ್ಲರೂ ಅದರಲ್ಲಿನ ಕಷ್ಟಗಳನ್ನು ಮುಚ್ಚಿಡುತ್ತಾರೆ ಎಂದಿದ್ದಾರೆ.

ಪ್ರೆಗ್ನಿಸಿ ಚಾಲೆಂಜ್‌ ಅನುಭವಗಳನ್ನು ಹಂಚಿಕೊಂಡ ಕಬಾಲಿ ನಟಿ ರಾಧಿಕಾ ಆಪ್ಟೆ
ಪ್ರೆಗ್ನಿಸಿ ಚಾಲೆಂಜ್‌ ಅನುಭವಗಳನ್ನು ಹಂಚಿಕೊಂಡ ಕಬಾಲಿ ನಟಿ ರಾಧಿಕಾ ಆಪ್ಟೆ (PC: Radhika apte Facebook)

Radhika Apte: ರಕ್ತ ಚರಿತ್ರ 2, ಪ್ಯಾಡ್‌ಮ್ಯಾನ್‌, ಕಬಾಲಿ, ಲಸ್ಟ್‌ ಸ್ಟೋರೀಸ್‌, ಅಂಧಾದುನ್‌ ಸೇರಿದಂತೆ ಅನೇಕ ಸೂಪರ್‌ ಹಿಟ್‌ ಸಿನಿಮಾದಲ್ಲಿ ತಮ್ಮ ಅಭಿನಯದ ಮೂಲಕ ಸಿನಿಪ್ರಿಯರ ಮನಗೆದ್ದಿರುವ ನಟಿ ರಾಧಿಕಾ ಆಪ್ಟೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ರಾಧಿಕಾ ಲಂಡನ್​ನ ಬ್ರಿಟಿಷ್ ಫಿಲ್ಮ್​ ಇನ್​ಸ್ಟಿಟ್ಯೂಟ್​ನಲ್ಲಿ ನಡೆದ ಲಂಡನ್ ಫಿಲ್ಮ್​ ಫೆಸ್ಟಿವಲ್‌ನಲ್ಲಿ ಭಾಗವಹಿಸಿದ್ದರು. ಗರ್ಭಿಣಿ ಆದ ನಂತರ ಮೊದಲ ಬಾರಿಗೆ ಆಕೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು.

ಮದುವೆ ವಿಚಾರವನ್ನು ಗುಟ್ಟಾಗಿ ಇಟ್ಟಿದ್ದ ರಾಧಿಕಾ ಆಪ್ಟೆ

ಸಾಮಾನ್ಯವಾಗಿ ಬಹಳಷ್ಟು ನಟಿಯರು ತಾವು ಮದುವೆ ಆಗಿರುವ ವಿಚಾರವನ್ನು ಹೇಳಿಕೊಳ್ಳಲು ಇಷ್ಟಪಡುವುದಿಲ್ಲ. ಅನಿವಾರ್ಯ ಸಂದರ್ಭಗಳಲ್ಲಿ ಅದು ಬಹಿರಂಗವಾಗುತ್ತದೆ. ಮಿ ಟೂ ವಿವಾದದ ಸಮಯದಲ್ಲಿ ಸ್ಯಾಂಡಲ್‌ವುಡ್‌ ನಟಿ ಶ್ರುತಿ ಹರಿಹರನ್‌ ಮದುವೆ ಆಗಿರುವ ವಿಚಾರ ಬಹಿರಂಗವಾಗಿತ್ತು, ಹಾಗೇ ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣ ಸದ್ದು ಮಾಡಿದಾಗ ಸಂಜನಾ ಗಲ್ರಾನಿ ಮದುವೆ ಆಗಿರುವ ವಿಚಾರ ಜಗಜ್ಜಾಹೀರಾಗಿತ್ತು. ಹಾಗೇ ರಾಧಿಕಾ ಆಪ್ಟೆ ಕೂಡಾ ಸುಮಾರು 12 ವರ್ಷಗಳ ಹಿಂದೆ ಮದುವೆ ಆಗಿದ್ದರೂ ಅವರು ವಿಚಾರವನ್ನು ಮುಚ್ಚಿಟ್ಟಿದ್ದರು. 2012ರಲ್ಲಿ ರಾಧಿಕಾ ಅಪ್ಟೆ ಬ್ರಿಟಿಷ್ ಮ್ಯೂಸಿಕ್ ಡೈರೆಕ್ಟರ್ ಬೆನೆಡಿಕ್ಟ್ ಟೈಲರ್‌ನನ್ನು ವಿವಾಹವಾಗಿದ್ದರು. ರಾಧಿಕಾ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮೊದಲ ಬಾರಿ ಪ್ರೆಗ್ನೆನ್ಸಿ ವಿಚಾರದ ಬಗ್ಗೆ ಮಾತನಾಡಿದ್ದಾರೆ.

ಸಿನಿಮಾಗೆ ಸಂಬಂಧಿಸಿದ ವಿಚಾರಗಳಾಗಲೀ, ವೈಯಕ್ತಿಕ ವಿಚಾರಗಳ ಬಗ್ಗೆಯಾಗಲೀ ರಾಧಿಕಾ ಅನ್ನಿಸಿದನ್ನು ಹೇಳುವುದರಲ್ಲಿ ಮುಜುಗರ ಪಡುವುದಿಲ್ಲ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಾಧಿಕಾ ನಾನು ಎಂದಿಗೂ ಮಗುವನ್ನು ಬಯಸಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ರಾಧಿಕಾ ನಟಿಸಿರುವ ಸಿಸ್ಟರ್ಸ್‌ ಮಿಡ್‌ನೈಟ್‌ ಇಂಗ್ಲೀಷ್‌ ಸಿನಿಮಾ ಬಿಡುಗಡೆಗೆ ಸಿದ್ಧವಿದೆ. ಅಕ್ಟೋಬರ್‌ 16 ರಂದು ಯುಕೆಯಲ್ಲಿ ಈ ಚಿತ್ರದ ಪ್ರೀಮಿಯರ್‌ ಆಯೋಜಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗಲೇ ರಾಧಿಕಾ, ಗರ್ಭಿಣಿ ಎಂಬ ವಿಚಾರ ಎಲ್ಲರಿಗೂ ತಿಳಿದದ್ದು. ಈ ವಿಚಾರದ ಬಗ್ಗೆ ರಾಧಿಕಾ ಹೇಳಿಕೊಂಡಿದ್ದಾರೆ.

ನಾನು ಎಂದಿಗೂ ಮಗುವನ್ನು ಬಯಸಿದವಳಲ್ಲ

ಯುಕೆ ಪ್ರೀಮಿಯರ್‌ನಲ್ಲಿ ನಾನು ಭಾಗವಹಿಸದೆ ಇದ್ದಿದ್ದರೆ ನನ್ನ ಪ್ರೆಗ್ನೆನ್ಸಿ ವಿಚಾರ ಯಾರಿಗೂ ತಿಳಿಯುತ್ತಿರಲಿಲ್ಲ. ಗರ್ಭಧಾರಣೆ ಶುರು ಆದಾಗಿನಿಂದ ನಾನು ಸರಿಯಾಗಿ ನಿದ್ರೆ ಮಾಡಲಾಗುತ್ತಿಲ್ಲ. ನಾನು ಮಕ್ಕಳನ್ನು ಪಡೆಯಬೇಕು ಎಂದು ಎಂದಿಗೂ ಪ್ಲ್ಯಾನ್‌ ಮಾಡಿರಲಿಲ್ಲ. ಆದರೆ ಜೀವನದಲ್ಲಿ ಇದೊಂದು ಟ್ವಿಸ್ಟ್‌, ಪ್ರೆಗ್ನೆನ್ಸಿ ಇಷ್ಟು ಕಷ್ಟ ಎಂದು ನಾನು ಊಹಿಸಿಯೂ ಇರಲಿಲ್ಲ, ದೇಹದಲ್ಲಿ ಇಷ್ಟೆಲ್ಲಾ ಬದಲಾವಣೆಗಳಾಗುತ್ತದೆ ಎಂದು ಊಹೆಯನ್ನೂ ಮಾಡಿರಲಿಲ್ಲ. ಒಂದು ಹೆಣ್ಣು ಗರ್ಭಿಣಿ ಆಗುವುದು ಎಷ್ಟು ಪವಿತ್ರ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಅದರಲ್ಲಿನ ಕಷ್ಟಗಳನ್ನು, ನಿಜಾಂಶವನ್ನು ನಿಮಗೆ ಯಾರೂ ತಿಳಿಸುವುದಿಲ್ಲ ಎಂದು ರಾಧಿಕಾ ತಮ್ಮ ಪ್ರೆಗ್ನೆನ್ಸಿ ಕಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ.

ರಾಧಿಕಾ ಆಪ್ಟೆ ಮಾತುಗಳಿಗೆ ನೆಟ್ಟಿಗರು ಪ್ರತಿಕ್ರಿಯಿಸಿ, ನಿಮ್ಮ ಮಾತುಗಳು ಅಕ್ಷರಶಃ ನಿಜ ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ಪ್ರೆಗ್ನೆನ್ಸಿ ಎನ್ನುವುದು ಸುಲಭದ ಜರ್ನಿ ಅಲ್ಲ ಎಂದು ರಾಧಿಕಾ ಹೇಳಿರುವುದಕ್ಕೆ ಜನರು ಹೌದು ನೀವು ಹೇಳಿದ್ದು ಸರಿ, ನಾವೂ ಕೂಡಾ ಪ್ರೆಗ್ನಿನ್ಸಿ ಸಮಯದಲ್ಲಿ ಅನುಭವಿಸಿದ ಕಷ್ಟಗಳು ಅಷ್ಟಿಷ್ಟಲ್ಲ, ಅದು ಹೇಳುವಷ್ಟು ಸುಲಭವಲ್ಲ ಎಂದು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ