ಭೈರಾದೇವಿ ಸಿನಿಮಾ ವೀಕ್ಷಣೆ ವೇಳೆ ಮಹಿಳೆ ಮೇಲೆ ದೈವದ ಆವಾಹನೆ! ಗಂಡಸರಿಗೂ ಬಗ್ಗದ ಯುವತಿಗೆ ಅದೆಂಥ ಶಕ್ತಿ? ಬೆಚ್ಚಿದ ಚಿತ್ರತಂಡ
Sep 30, 2024 10:26 AM IST
ಭೈರಾದೇವಿ ಸಿನಿಮಾ ವೀಕ್ಷಣೆ ವೇಳೆ ಮಹಿಳೆ ಮೇಲೆ ದೈವದ ಆವಾಹನೆ
- Bhairadevi Movie: ರಾಧಿಕಾ ಕುಮಾರಸ್ವಾಮಿ ನಟನೆಯ ಭೈರಾದೇವಿ ಸಿನಿಮಾದ ಸೆಲೆಬ್ರಿಟಿ ಶೋ ವೇಳೆ, ಸಿನಿಮಾ ವೀಕ್ಷಣೆ ಮಾಡುತ್ತಿದ್ದ ಮಹಿಳೆಯೊಬ್ಬರ ಮೇಲೆ ದೇವಿಯ ಆವಾಹನೆಯಾಗಿದೆ. ನವಶಕ್ತಿ, ಶಿವಶಕ್ತಿ ಹಾಡು ಪ್ರಸಾರವಾಗುತ್ತಿದ್ದಂತೆ, ಕುಳಿತ ಕುರ್ಚಿಯ ಮೇಲಿಂದ ಎದ್ದು ಯದ್ವಾತದ್ವಾ ನೃತ್ಯ ಮಾಡುತ್ತಿದ್ದಾರೆ.
Bhairadevi movie: ಸ್ಯಾಂಡಲ್‌ವುಡ್ ನಟಿ ರಾಧಿಕಾ ಕುಮಾರಸ್ವಾಮಿ ಬಹು ದಿನಗಳ ಬಳಿಕ ಮತ್ತೆ ಬೆಳ್ಳಿತೆರೆ ಮೇಲೆ ಮಿನುಗಲು ರೆಡಿಯಾಗಿದ್ದಾರೆ. ಭೈರಾದೇವಿ ಮೂಲಕ ಶತಾಯಗತಾಯ ಗೆಲ್ಲಲೇಬೇಕು ಎಂಬ ನಿಟ್ಟಿನಲ್ಲಿ ಬರುತ್ತಿದ್ದಾರೆ. ಚಿತ್ರದಲ್ಲಿ ಶೀರ್ಷಿಕೆ ರೋಲ್ ಪ್ಲೇ ಮಾಡಿರುವ ರಾಧಿಕಾ, ನಟನೆಯ ಜತೆಗೆ ನಿರ್ಮಾಣವನ್ನೂ ಮಾಡಿದ್ದಾರೆ. ಅಕ್ಟೋಬರ್ 3ರಂದು ಈ ಸಿನಿಮಾ ಅದ್ಧೂರಿಯಾಗಿ ತೆರೆಗೆ ಬರಲಿದೆ. ಅದಕ್ಕೂ ಮೊದಲು ಭಾನುವಾರ ಈ ಸಿನಿಮಾದ ಪ್ರೀಮಿಯರ್ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಆ ಶೋನಲ್ಲಿ ಅಚ್ಚರಿಯ ಘಟನೆಯೊಂದು ನಡೆದು ಎಲ್ಲರನ್ನು ಬೆಚ್ಚಿಬೀಳಿಸಿದೆ.
ಶಮಿಕ ಎಂಟರ್ಪ್ರೈಸಸ್ ಬ್ಯಾನರ್‌ನಲ್ಲಿ ರಾಧಿಕಾ ಕುಮಾರಸ್ವಾಮಿ ನಿರ್ಮಿಸಿ, ನಾಯಕಿಯಾಗಿಯೂ ನಟಿಸಿರುವ ಭೈರಾದೇವಿ ಸಿನಿಮಾ ಅಕ್ಟೋಬರ್ 3ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಪ್ರಚಾರ ಕಾರ್ಯದಲ್ಲಿಯೂ ತೊಡಗಿಸಿಕೊಂಡಿರುವ ಚಿತ್ರತಂಡ, ರಾಜ್ಯಾದ್ಯಂತ ಸುತ್ತಾಟ ಆರಂಭಿಸಿ, ಜನರಿಗೆ ಸಿನಿಮಾ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಇದೀಗ ಸಿನಿಮಾ ಬಿಡುಗಡೆ ಎರಡ್ಮೂರು ದಿನ ಇದೆ ಎನ್ನುವಾಗಲೇ, ಬೇರೆ ವಿಚಾರಕ್ಕೆ ಈ ಸಿನಿಮಾ ಸದ್ದು ಮಾಡುತ್ತಿದೆ. ಸಿನಿಮಾ ವೀಕ್ಷಣೆ ವೇಳೆ ಮಹಿಳೆಯೊಬ್ಬರ ಮೇಲೆ ದೇವಿಯ ಆವಾಹನೆಯಾಗಿದೆ!
ಸ್ಪೇಷಲ್ ಸ್ಕ್ರೀನಿಂಗ್ ವೇಳೆ ಬೆಚ್ಚಿದ ಜನ
ಬೆಂಗಳೂರಿನ ಮಾಲ್‌ವೊಂದರಲ್ಲಿ ನೂರಾರು ಮಂದಿ ಪ್ರೇಕ್ಷಕರಿಗೆ ಭೈರಾದೇವಿ ಸಿನಿಮಾದ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು. ರಾಧಿಕಾ ಕುಮಾರಸ್ವಾಮಿ, ರಮೇಶ್ ಅರವಿಂದ್ ಜತೆಗೆ ನಟ ಧ್ರುವ ಸರ್ಜಾ ಸಹ ಈ ಸಿನಿಮಾ ವೀಕ್ಷಣೆಗೆ ಆಗಮಿಸಿದ್ದರು. ಹೀಗಿರುವಾಗಲೇ ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ದೇವಿಯ ಅವತಾರದಲ್ಲಿ ಎದುರಾಗಿ ಮೈ ನಡುಗಿಸುವ ನವಶಕ್ತಿ, ಶಿವಶಕ್ತಿ ಹಾಡಿಗೆ ನೃತ್ಯ ಮಾಡಿದ್ದಾರೆ. ಇದೇ ಹಾಡು ಚಿತ್ರಮಂದಿರದಲ್ಲಿ ಪ್ಲೇ ಆಗುತ್ತಿದ್ದಂತೆ, ಮಹಿಳೆಯೊಬ್ಬರ ಮೈಮೇಲೆ ದೇವಿಯ ಆವಾಹನೆಯಾಗಿದೆ. ಹಾಡಿಗೆ ಅವರೂ ಕುಳಿತ ಕುರ್ಚಿಯ ಮೇಲಿಂದ ಎದ್ದು ಯದ್ವಾತದ್ವಾ ನೃತ್ಯ ಮಾಡುತ್ತಿದ್ದಾರೆ.
ಹತ್ತಾರು ಮಂದಿಗೂ ಬಗ್ಗದ ಮಹಿಳೆ
ಮಹಿಳೆ ಹೀಗೆ ವರ್ತಿಸುತ್ತಿದ್ದಂತೆ, ಅವರ ಸಹಾಯಕ್ಕೆ ನಾಲ್ಕೈದು ಜನ ಗಂಡಸರು ಆಗಮಿಸಿದ್ದಾರೆ. ಅವರಿಗೂ ಬಗ್ಗದೇ ಹಾಡಿಗೆ ನೃತ್ಯ ಮಾಡಿದ್ದಾರೆ. ಕೊನೆಗೆ ಮಹಿಳೆಯನ್ನು ಚಿತ್ರಮಂದಿರದಿಂದ ಹೊತ್ತು ಸಾಗಿಸುವುದಕ್ಕೂ ಪರದಾಡಲಾಯ್ತು. ಸ್ಕ್ರೀನ್ ಮುಂಭಾಗದಲ್ಲಿಯೂ ಈ ಹೈಡ್ರಾಮಾ ನಡೆಯಿತು. ನಾಲ್ಕು ಮಂದಿ ಸಾಕಾಗದಿದ್ದಾಗ ಹತ್ತು ಹನ್ನೆರಡು ಜನ ಸೇರಿ ಆ ಮಹಿಳೆಯನ್ನು ಹೊತ್ತು ಚಿತ್ರಮಂದಿರದಿಂದ ಹೊರ ಕರೆದುಕೊಂಡು ಬಂದರು. ಬಳಿಕ ನೀರು ಕುಡಿಸಿ ಸಮಾಧಾನಪಡಿಸಲಾಯಿತು. ಈ ಪ್ರಹಸನ ಕಂಡು ಕೆಲ ಕಾಲ ಚಿತ್ರತಂಡದ ಸದಸ್ಯರ ಜತೆಗೆ ಪ್ರೇಕ್ಷಕರೂ ಬೆಚ್ಚಿದರು.
ತಾರಾಬಳಗ, ತಾಂತ್ರಿಕ ವರ್ಗ ಹೀಗಿದೆ
ನಿರ್ದೇಶಕ ಶ್ರೀಜೈ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ರಮೇಶ್ ಅರವಿಂದ್, ರಾಧಿಕಾ ಕುಮಾರಸ್ವಾಮಿ, ಅನು ಪ್ರಭಾಕರ್, ರವಿಶಂಕರ್, ರಂಗಾಯಣ ರಘು, ಸುಚೇಂದ್ರ ಪ್ರಸಾದ್, ಮಾಳವಿಕಾ ಅವಿನಾಶ್, ಸ್ಕಂದ ಅಶೋಕ್, ಪದ್ಮಜಾ ರಾವ್ ಸೇರಿ ಘಟಾನುಘಟಿ ತಾರಾಬಳಗವೇ ಇದೆ. ತಾಂತ್ರಿಕ ಬಳಗದಲ್ಲಿ ಕೆಕೆ ಸೇಂಥಿಲ್ ಪ್ರಶಾಂತ್ ಈ ಚಿತ್ರಕ್ಕೆ ಸಂಗೀತ ನೀಡಿದರೆ, ಜೆ.ಎಸ್ ವಾಲಿ ಛಾಯಾಗ್ರಹಣ, ಸಿ ರವಿಚಂದ್ರನ್ ಸಂಕಲನ ಈ ಚಿತ್ರಕ್ಕಿದೆ.