‘ಅವನು ನವರಸ ನಾಯಕನಾದ, ಎಂಎಲ್‌ಎ ಆದ, ಸಂಸದನೂ ಆದ, ಆದರೆ ಕೊನೆಗೂ ಮನುಷ್ಯನಾಗಲಿಲ್ಲ’ ಜಗ್ಗೇಶ್ ಬಗ್ಗೆ ನೆಟ್ಟಿಗರ ಟೀಕೆ
Nov 04, 2024 02:46 PM IST
ಸಾವಿನ ಮನೆಯಲ್ಲಿ ಇಂಥ ಮಾತು ಬೇಕಿತ್ತಾ? ಸತ್ತಿದ್ದು ಕೇವಲ ಗುರುಪ್ರಸಾದ್ ಮಾತ್ರವಲ್ಲ ನಟ ಜಗ್ಗೇಶ್ ವ್ಯಕ್ತಿತ್ವವೂ ಕೂಡ ಎಂದ ನೆಟ್ಟಿಗರು.
- Actor Jaggesh: ನಿರ್ದೇಶಕ ಗುರುಪ್ರಸಾದ್ ಸಾವಿನ ಬೆನ್ನಲ್ಲೇ ನಟ ಜಗ್ಗೇಶ್, ಮಾಧ್ಯಮಗಳ ಮುಂದೆ ಸಾಕಷ್ಟು ಮಾತನಾಡಿದ್ದಾರೆ. ಈಗ ಆ ಮಾತುಗಳೇ ಅವರಿಗೇ ಮುಳುವಾಗಿವೆ. ಸಾವಿನ ಮನೆಯಲ್ಲಿ ಇಂಥ ಮಾತು ಬೇಕಿತ್ತಾ? ಸತ್ತಿದ್ದು ಕೇವಲ ಗುರುಪ್ರಸಾದ್ ಮಾತ್ರವಲ್ಲ ನಟ ಜಗ್ಗೇಶ್ ವ್ಯಕ್ತಿತ್ವವೂ ಕೂಡ ಎಂದು ಜಗ್ಗೇಶ್ ಮಾತುಗಳಿಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Actor Jaggesh: ಸಾಲದ ಸುಳಿಗೆ ಸಿಲುಕಿ ನೇಣಿಗೆ ಕೊರಳೊಡ್ಡಿದ್ದಾರೆ ನಟ, ನಿರ್ದೇಶಕ, ಬರಹಗಾರ ಗುರುಪ್ರಸಾದ್. ಅವರ ಸಾವಿನ ಬಳಿಕ ಒಳ್ಳೆಯ ವಿಚಾರಕ್ಕಿಂತ ನೆಗೆಟಿವ್ ವಿಚಾರಗಳೇ ಹೆಚ್ಚು ಸುದ್ದಿಯಲ್ಲಿವೆ. ಅವರ ಜತೆಗೆ ಕೆಲಸ ಮಾಡಿದ ಕೆಲವರು ಅವರ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದರೆ, ಇನ್ನು ಕೆಲವರು ಅವರನ್ನು ಹೀಗೆಳೆಯುತ್ತಿದ್ದಾರೆ. ಆ ಪೈಕಿ ಹಿರಿಯ ನಟ ಜಗ್ಗೇಶ್ ಸಹ ಗುರುಪ್ರಸಾದ್ ಬಗ್ಗೆ ಹಗುರವಾಗಿಯೇ ಮಾತನಾಡಿದ್ದಾರೆ. ಮಾಧ್ಯಮಗಳ ಮುಂದೆ ಜಗ್ಗೇಶ್ ಅವರಾಡಿದ ಮಾತುಗಳಿಗೆ ಟೀಕೆಗಳ ಮಹಾಪೂರವೇ ಹರಿದುಬರುತ್ತಿದೆ. ಸಾವಿನ ಮನೆಯಲ್ಲಿ ಇಂಥ ಮಾತುಗಳು ಬೇಕಿತ್ತಾ ಎಂದು ಕೆಲವರು ಆಕ್ರೋಶ ಹೊರಹಾಕುತ್ತಿದ್ದಾರೆ.
ಮಾಧ್ಯಮಗಳ ಮುಂದೆ ಜಗ್ಗೇಶ್ ಮಾತು
ಗುರುಪ್ರಸಾದ್ ಕುಡುಕ, ಚಟಗಾರ ಇನ್ನೊಂದು ಮತ್ತೊಂದು ಇರಬಹುದು. ಅದು ಅವರವರ ವೈಯಕ್ತಿಕ. ಆದರೆ, ಅದೇ ವೈಯಕ್ತಿಕ ವಿಚಾರಗಳನ್ನೇ ಮುನ್ನೆಲೆಗೆ ತಂದು ಮನಬಂದಂತೆ ಜಗ್ಗೇಶ್ ಮಾತನಾಡಿದ್ದು ಎಷ್ಟು ಸರಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಗುರುಪ್ರಸಾದ್ ಅವರಿಗೆ ಚರ್ಮರೋಗ ಇತ್ತು. ಮೈ ಕೈ ಕೆರೆದರೆ ಕೀವು ಬರುತ್ತಿತ್ತು. ಅವನ ಜತೆ ಕೂತು ಊಟ ಮಾಡುವುದಕ್ಕೂ ಭಯ. ನಮ್ಮ ತಟ್ಟೆಗೇ ಕೈ ಹಾಕೋನು ಎಂದು ಹೇಳುವ ಜಗ್ಗೇಶ್, ಈ ಮೂಲಕ ತಮ್ಮ ಹಿರಿತನದ ಕಿಮ್ಮತ್ತನ್ನು ತಾವೇ ಕಳೆದುಕೊಂಡಿದ್ದಾರೆ.
ಅಲ್ಲಿ ಪತಿಯನ್ನು ಕಳೆದುಕೊಂಡ ಸಂಕಟದಲ್ಲಿ ಇಬ್ಬರು ಹೆಂಡಿರು ಮತ್ತವರ ಮಕ್ಕಳು ಕುಟುಂಬ ಕಣ್ಣೀರಿಡುತ್ತಿದ್ದರೆ, ಇಲ್ಲಿ ನಟ ಜಗ್ಗೇಶ್ ಮಾತ್ರ ಹಳೇ ಘಟನೆಗಳಿಗೆ ಪಾಲಿಶ್ ಮಾಡಿ ಮಾಧ್ಯಮಗಳ ಮುಂದೆ ಗುರುಪ್ರಸಾದ್ ಅವರ ಬಗ್ಗೆ ಗಂಟೆಗಟ್ಟಲೆ ಮಾತನಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಜಗ್ಗೇಶ್ ಅವರ ವಿಡಿಯೋ ಕ್ಲಿಪ್‌ಗಳಿಗೆ ಅಷ್ಟೇ ಕಟು ಟೀಕೆಗಳನ್ನೇ ಎದುರಿಸುತ್ತಿದ್ದಾರೆ. ಮೊದಲೆಲ್ಲ ಶೂಟಿಂಗ್ ಸೆಟ್‌ಗೆ ಪುಸ್ತಕ ತರುತ್ತಿದ್ದ ಜಗ್ಗೇಶ್, ಇತ್ತೀಚೆಗೆ ಬಾಟಲ್‌ಗಳನ್ನು ತರ್ತಿದ್ದ ಎಂದೂ ಹೇಳಿದ್ದಾರೆ. ಸತ್ತ ವ್ಯಕ್ತಿಯ ಬಗ್ಗೆ ಸಭ್ಯರು ಮಾತನಾಡುವ ಮಾತೇ? ಎಂದೂ ಪ್ರಶ್ನೆ ಮಾಡಿದ್ದಾರೆ.
ಇದಷ್ಟೇ ಅಲ್ಲದೆ, ಪುನೀತ್ ರಾಜ್‌ಕುಮಾರ್‌ಗೆ ಕನ್ನಡ ಬರಲ್ಲ ಎಂದೂ ಗುರುಪ್ರಸಾದ್ ಆಡಿ ಮಾತನ್ನು ಮತ್ತೆ ಹೇಳಿದ್ದಾರೆ. ಇಷ್ಟಕ್ಕೆ ಮುಗಿಯಲಿಲ್ಲ. ಗುರುಪ್ರಸಾದ್ ಓರ್ವ ಎಡಪಂಥೀಯ, ಬಿಜೆಪಿಗೂ ಅವನಿಗೂ ಆಗಿ ಬರುತ್ತಿರಲಿಲ್ಲ ಎಂದು ಇದೇ ಸಾವಿನ ಮನೆಯಲ್ಲಿಯೇ ರಾಜಕರಣ ಮಾಡಿದ್ದಾರೆ. ಇದೆಲ್ಲದರ ಬಗ್ಗೆ ಈಗ ವ್ಯಾಪಕ ಟೀಕೆಗಳು ಕೇಳಿಬಂದಿವೆ.
ಸೋಷಿಯಲ್ ಮೀಡಿಯಾದಲ್ಲಿ ಕಟು ಟೀಕೆ
"ಯಾರಾದ್ರೂ ಜಗ್ಗೇಶವ್ರಿಗ್ ಹೇಳ್ರೋ ಗುರು ಪ್ರಸಾದ್ ಬರೀ 'ರಂಗನಾಯಕ' ಅಷ್ಟೇ ಮಾಡಿಲ್ಲ 'ಮಠ', 'ಎದ್ದೇಳು ಮಂಜುನಾಥ' ಅಂತಹ ಕೆರಿಯರ್ ಬೆಸ್ಟ್ ಸಿನಿಮಾಗಳ್ನೂ ಕೂಡ ಮಾಡಿದ್ರು ಅಂತ! ಒಬ್ಬ ಮನುಷ್ಯ ಸತ್ತಾಗ ಮೀಡಿಯಾ ಮುಂದೆ ಕೂತು ಹಿಂಗ್ ಮಾತಾಡೋಕ್ ಮನ್ಸಾದ್ರು ಹೆಂಗ್ ಬರ್ತದೆ ರಾಘವೇಂದ್ರ?" ಎಂದು ಪವನ್ ಗೌಡ ಎಂಬುವವರು ಟ್ವೀಟ್ ಮಾಡಿದ್ದಾರೆ.
"ಬಲ್ ನನ್ಮಗ ಜಗ್ಗೇಶ್ ನೀನು.. ಎಲ್ಲ ಸಿನಿಮಾ ನಟರ ಫ್ಯಾನ್ಸ್‌ಗೆ ಮನವಿ.. ಯಾರೂ ಇದನ್ನು ಬೆಂಬಲಿಸಬೇಡಿ. ಜಗ್ಗೇಶ್ ಅವರೇ ದಯವಿಟ್ಟು ಮಾತಿನ ಮಧ್ಯೆ ಯಾವತ್ತು ರಾಘವೇಂದ್ರ ಸ್ವಾಮಿಗಳ ಹೆಸರನ್ನು ತೆಗೆದುಕೊಳ್ಳಬೇಡಿ" ಎಂದು ಎ.ಜೆ ಕುಮಾರ್ ರಂಗನಾಯಕ ಸಿನಿಮಾದ ಪ್ರೆಸ್‌ಮೀಟ್ ಸಂದರ್ಭದಲ್ಲಿನ ತುಣುಕನ್ನು ಹಂಚಿಕೊಂಡಿದ್ದಾರೆ.
ಚೇತನ್ ಸೂರ್ಯ ಎಂಬುವವರು ಜಗ್ಗೇಶ್ ಅವರ ಫೋಟೋ ಹಂಚಿಕೊಂಡು, "ಇವತ್ತು ಸತ್ತಿದ್ದು ಕೇವಲ ಗುರುಪ್ರಸಾದ್ ಅವರು ಮಾತ್ರವಲ್ಲ ನಟ ಜಗ್ಗೇಶ್ ಅವರ ವ್ಯಕ್ತಿತ್ವವೂ ಕೂಡ.. ಎಲುಬಿಲ್ಲದ ನಾಲಿಗೆ..!" ಎಂದೂ ತಮ್ಮ ಅನಿಸಿಕೆ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. "ನಾವು ಆಡುವ ಮಾತುಗಳು ನಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದೆ ಹೊರತು, ನಾವು ಉಡುವ ಬಟ್ಟೆಯಿಂದ ಅಲ್ಲ" ಎಂದೂ ಕೆಲವರು ಜಗ್ಗೇಶ್ ಅವರನ್ನೂ ಟೀಕೆ ಮಾಡಿದ್ದಾರೆ.
"ಪ್ರೀತಿಯ ಜಗ್ಗೇಶ್ ಅವರೇ, ಒಬ್ಬ ವ್ಯಕ್ತಿಯ ಸಾವಿನಲ್ಲೂ ಅದೆಂತ ಅಸಹ್ಯದ ಮಾತು. ಧಿಕ್ಕಾರವಿರಲಿ ನಿಮಗೆ", "ಅವನು ನವರಸ ನಾಯಕನಾದ, ಎಂಎಲ್‌ಎ ಆದ, ಎಂಎಲ್ಸಿ ಆದ, ಸಂಸದನೂ ಆದ, ಆದರೆ ಕೊನೆಗೂ ಮನುಷ್ಯನಾಗಲಿಲ್ಲ - ಮಂಜು ಚಿನ್ಮಯ್" ಎಂದು ಸೋಷಿಯಲ್ ಮೀಡಿಯಾದಲ್ಲಿ ನಟ ಜಗ್ಗೇಶ್ ಅವರನ್ನು ಟೀಕೆ ಮಾಡುತ್ತಿದ್ದಾರೆ.