logo
ಕನ್ನಡ ಸುದ್ದಿ  /  ಮನರಂಜನೆ  /  ಆರಾಮ್ ಅರವಿಂದ ಸ್ವಾಮಿ ಚಿತ್ರವಿಮರ್ಶೆ; ಇದು ಸಾಮಾನ್ಯವಾಗಿ ಎಲ್ಲರ ಜೀವನದ ಕಥೆ - ಪ್ರೀತಿ ಸೋತು ಬದುಕು ಗೆದ್ದ ಚಿತ್ರ

ಆರಾಮ್ ಅರವಿಂದ ಸ್ವಾಮಿ ಚಿತ್ರವಿಮರ್ಶೆ; ಇದು ಸಾಮಾನ್ಯವಾಗಿ ಎಲ್ಲರ ಜೀವನದ ಕಥೆ - ಪ್ರೀತಿ ಸೋತು ಬದುಕು ಗೆದ್ದ ಚಿತ್ರ

Suma Gaonkar HT Kannada

Nov 23, 2024 03:45 PM IST

google News

ಆರಾಮ್ ಅರವಿಂದ ಸ್ವಾಮಿ ಚಿತ್ರವಿಮರ್ಶೆ

    • ಆರಾಮ್ ಅರವಿಂದ ಸ್ವಾಮಿ ಸಿನಿಮಾ ಹೆಸರು ವಿಭಿನ್ನವಾಗಿದೆ. ಹೆಸರಿಗೆ ಹಾಸ್ಯದ ಸ್ಪರ್ಷವಿದೆ. ಸಿನಿಮಾದಲ್ಲಿ ಹಾಸ್ಯವಿದ್ದರೂ ಸಿನಿಮಾದ ಕಥನ ಗಂಭೀರವಾಗಿದೆ. ಹೇಗಿದೆ ಆರಾಮ್‌ ಅರವಿಂದ ಸ್ವಾಮಿ ಚಿತ್ರ ಎಂಬ ಪ್ರಶ್ನೆಗೆ ಇಲ್ಲೇ ಇದೆ ಉತ್ತರ. 
ಆರಾಮ್ ಅರವಿಂದ ಸ್ವಾಮಿ ಚಿತ್ರವಿಮರ್ಶೆ
ಆರಾಮ್ ಅರವಿಂದ ಸ್ವಾಮಿ ಚಿತ್ರವಿಮರ್ಶೆ

ಆರಾಮ್ ಅರವಿಂದ್ ಸ್ವಾಮಿ’ ರೊಮ್ಯಾಂಟಿಕ್ ಡ್ರಾಮಾ ಸಿನಿಮಾ. ಎರಡು ಗಂಟೆ ಹನ್ನೆರಡು ನಿಮಿಷಗಳ ಕಾಲ ಈ ಸಿನಿಮಾ ಇದೆ. ಅರವಿಂದ ಸ್ವಾಮಿ ಪಾತ್ರದಲ್ಲಿ ನಟ ಅನೀಶ್‌ ತೇಜೇಶ್ವರ್‌ ಅಭಿನಯಿಸಿದ್ದಾರೆ. ಹಳ್ಳಿಯ ಹುಡುಗನೊಬ್ಬ ಪೇಟೆ ಸೇರಿ ಓದಿಗೆಂದು ಕಾಲೇಜು ಮೆಟ್ಟಿಲು ಹತ್ತಿ, ಅದೇ ಕಾಲೇಜಿನ ಒಂದು ಹುಡುಗಿಯನ್ನು ಪ್ರೀತಿಸುತ್ತಾನೆ. ಆದರೆ ಎಲ್ಲವೂ ಸುಳ್ಳಿನ ಮೇಲೆ ನಿಂತಿರುತ್ತದೆ. ಯಾವ ಒಂದು ದಿನವೂ ತಾನು ಪ್ರೀತಿಸಿದ ಹುಡುಗಿಯ ಹತ್ತಿರ ಸತ್ಯ ಹೇಳಿರುವುದಿಲ್ಲ. ತಾನು ಯಾರು? ಎಲ್ಲಿಂದ ಬಂದೆ? ಅಪ್ಪ, ಅಮ್ಮ ಹೇಗಿದ್ದಾರೆ ಈ ಯಾವ ವಿಚಾರವನ್ನೂ ಹಂಚಿಕೊಂಡಿರುವುದಿಲ್ಲ. ಹೀಗಿರುವಾಗ ಆರು ವರ್ಷಗಳ ಕಾಲ ಅವರ ಪ್ರೀತಿ ನಡೆದುಕೊಂಡು ಬಂದಿರುವುದು ಆಶ್ಚರ್ಯ ಎನಿಸುತ್ತದೆ.

ಆರಾಮ್ ಅವರವಿಂದ ಸ್ವಾಮಿ ಪಾತ್ರ ಒಂದು ದುರಹಂಕಾರಿಯ ಪಾತ್ರ. ಸಿನಿಮಾದ ಮೊದಲ ಅರ್ಧ ಭಾಗವನ್ನು ಹೀರೋ ಕ್ಯಾರೆಕ್ಟರ್‌ ಹೇಗಿದೆ ಎಂದು ತಿಳಿಸುವುದಕ್ಕಾಗಿಯೇ ತುಂಬಾ ಸಮಯ ತೆಗೆದುಕೊಂಡಂತಿದೆ. ಅದಾದ ನಂತರದಲ್ಲಿ ಸಮಸ್ಯೆ ಬಂದಾಗ ಅಡಗಿ ಕೂರುವುದು ನಾಯಕ ನಟನ ಗುಣ ಎಂಬಂತೆ ತೋರಿಸಿದ್ದು ಅಷ್ಟು ಸಮಂಜಸ ಎನಿಸಲಾರದು. ಅರವಿಂದ ಸ್ವಾಮಿ ಮದುವೆ ಸಂದರ್ಭ ಬಂದಾಗ, ಹೀಗೆ ಯಾರಾದ್ರೂ ಮದುವೆ ಆಗೋಕೆ ಸಾಧ್ಯವೇ? ಎಂದೆನಿಸುತ್ತದೆ. ಗೊಂದಲಗಳಲ್ಲೇ ಸಮಯ ಕಳೆಯುತ್ತದೆ. ಇದಕ್ಕಿದ್ದ ಹಾಗೇ ತಾನು ಪ್ರೀತಿಸಿಯೇ ಇರದ ಹುಡುಗಿಯ ಜೊತೆ ಹೇಗೆ ಹೀರೋ ಮದುವೆ ಆಗುತ್ತಾನೆ ಎಂದು ಎಲ್ಲರಿಗೂ ಆಶ್ಚರ್ಯವೂ ಆಗುತ್ತದೆ.

ಆದರೆ ನಂತರದ ಅರ್ಧ ಭಾಗದಲ್ಲಿ ಕಥೆ ಟ್ವಿಸ್ಟ್‌ ಪಡೆದುಕೊಳ್ಳುತ್ತದೆ. ನಾವು ಹೀಗಿದೆ ಎಂದು ಕೊಂಡರೆ ಅದು ಹಾಗಲ್ಲ ಎಂದು ಕಥೆ ಹೇಳುತ್ತಾ ಸಿನಿಮಾ ಸಾಗುತ್ತದೆ. ಪ್ರೀತಿಸಿದ ಹುಡುಗಿ ಜೊತೆ ಮದುವೆಯಾಗಿಲ್ಲ ಆದರೆ ಈಗ ಮದುವೆಯಾದ ಹುಡುಗಿಯ ಜೀವನ ಏನು ಎನ್ನುವ ಪ್ರಶ್ನೆ ಬರುತ್ತದೆ. ಅದರೆ ಅದಕ್ಕೆ ಉತ್ತರ ನೀಡಿದ್ದಾರೆ. ಇನ್ನು ತಮ್ಮ ಸ್ವಾರ್ಥಕ್ಕಾಗಿ ಹಣ ಇದ್ದವರು ಏನು ಬೇಕಾದರೂ ಮಾಡುತ್ತಾರೆ ಎಂಬುದು ಮೋಸದ ಮದುವೆಯಲ್ಲಿ ತಿಳಿಯುತ್ತದೆ.

ಸಿನಿಮಾದ ಕೊನೆಯಲ್ಲಿತ್ತು ಟ್ವಿಸ್ಟ್‌

ಮಿಲನಾ ನಾಗರಾಜ್ ತಮ್ಮ ಉತ್ತಮ ಪ್ರದರ್ಶನವನ್ನು ಮತ್ತೊಮ್ಮೆ ನೀಡಿದ್ದಾರೆ. ಪ್ರೀತಿಸಿ ಕೊನೆಗೆ ಬೇರೆ ಹುಡುಗನನ್ನು ಮದುವೆಯಾಗುವ ಹುಡುಗಿಯರ ನೋವು, ಇನ್ನೊಂದು ಹೆಣ್ಣಿಗಾಗಿ ಅವಳ ಬದುಕಿಗಾಗಿ ಮಿಡಿಯುವ ಭಾವ ಎಲ್ಲವೂ ಚೆನ್ನಾಗಿ ಮೂಡಿ ಬಂದಿದೆ. ದುರಹಂಕಾರಿಯಾಗಿದ್ದ ಅರವಿಂದ ಸ್ವಾಮಿ ತನ್ನದಲ್ಲದ ತಪ್ಪಿಗೆ ನಿಜವಾದ ಬದುಕು ಹೇಗಿರುತ್ತದೆ ಎಂಬುದನ್ನು ಅರಿತು ಅದೇ ರೀತಿ ಬಾಳುತ್ತಾನೆ. ಇನ್ನು ಇಬ್ಬರು ಗೆಳೆಯರ ಪಾತ್ರವಿದೆ. ಗೌರವ್‌ ಶೆಟ್ಟಿ ಮತ್ತು ಆರ್‌ ಜೆ ವಿಕ್ಕಿ ಈ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸಿನಿಮಾದಲ್ಲಿ ಆಗಾಗ ಬಂದು ಹೋಗುವ ಕಾಮಿಡಿ ಸೀನ್‌ಗಳನ್ನು ವೀಕ್ಷಕರು ಇಷ್ಟಪಡುತ್ತಾರೆ.

ಪ್ರೀತಿ ಸೋತು, ಬದುಕು ಗೆದ್ದಿತು

ಸಿನಿಮಾದ ಕೊನೆ ಹಂತಗಳಲ್ಲಿ ನೋವಿದೆ. ಪ್ರೀತಿ ಸೋತು ಬದುಕು ಗೆಲ್ಲುತ್ತದೆ. ತಾನು ಪ್ರೀತಿಸಿದ ಹುಡುಗಿಗಾಗಿ ಅರವಿಂದ ಸ್ವಾಮಿ ಹಂಬಲಿಸಿದರೆ ತನಗೆ ತಾಳಿ ಕಟ್ಟಿದ ಗಂಡನನ್ನು ಲಕ್ಷ್ಮೀ ತನ್ನಂತರಾಳದಲ್ಲಿ ಪ್ರೀತಿಸುತ್ತಾಳೆ. ಕೊನೆಗೆ ಎಲ್ಲರ ಬದುಕೂ ಅರ್ಥ ಕಳೆದುಕೊಂಡು ತಮ್ಮ ತಮ್ಮಲ್ಲೇ ಹೊಸ ಅರ್ಥ ಕಂಡುಕೊಂಡು ಇದ್ದ ಬದುಕನ್ನು ಹಸನಾಗಿಸಿಕೊಳ್ಳುತ್ತಾರೆ. ಸಿನಿಮಾದ ಅಂತ್ಯ ಮಜವಾಗಿದೆ.

ಸಂಗೀತ
ಆರಾಮ್ ಅರವಿಂದ ಸ್ವಾಮಿ ಸಿನಿಮಾದಲ್ಲಿ ಸದಾ ಗುನುಗುವಂತ ಹಾಡುಗಳು ಅಷ್ಟಾಗಿ ಕಂಡುಬಂದಿಲ್ಲ. ಆದರೆ ದೇನನ, ದಾದಾ ದೇನನ ಮ್ಯೂಸಿಕ್ ಸಖತ್ ಮ್ಯಾಜಿಕ್ ಮಾಡಿದೆ. ವೀಕ್ಷಕರನ್ನು ಕುಣಿತಲ್ಲೇ ಈ ಹಾಡು ಕುಣಿಸಿಬಿಡುತ್ತದೆ.

ಕಥೆ, ಚಿತ್ರಕಥೆ, ಸಂಭಾಷಣೆ: ಅಭಿಷೇಕ್ ಶೆಟ್ಟಿ

ನಿರ್ದೇಶನ: ಅಭಿಷೇಕ್ ಶೆಟ್ಟಿ

ನಿರ್ಮಾಪಕರು: ಶ್ರೀಕಾಂತ್ ಪ್ರಸನ್ನ, ಪ್ರಶಾಂತ್ ರೆಡ್ಡಿ

ಸಂಗೀತ: ಅರ್ಜುನ್ ಜನ್ಯ

ಸಿನಿಮಾಟೋಗ್ರಾಫಿ: ಶಿವ ಸಾಗರ್ ವೈಬಿ

ತಾರಾಗಣ: ಅನೀಶ್‌ ತೇಜೇಶ್ವರ್, ಮಿಲನಾ ನಾಗರಾಜ್, ಹೃತಿಕಾ ಶ್ರೀನಿವಾಸ್‌, ಗೌರವ್ ಶೆಟ್ಟಿ, ಆರ್‌ ಜೆ ವಿಕ್ಕಿ

ಸ್ಟಾರ್:‌ 3\5

ವಿಮರ್ಶೆ: ಸುಮಾ ಕಂಚೀಪಾಲ್

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ