Maryade Prashne Movie Review: ‘ಮರ್ಯಾದೆ ಪ್ರಶ್ನೆ’ ಚಿತ್ರವಿಮರ್ಶೆ; ನವಿರು ಪ್ರೇಮ-ಮಧುರ ಗಾನ; ಮಧ್ಯಮ ವರ್ಗದ ಜನರ ತಲ್ಲಣ
Maryade Prashne Movie Review: “ನಾವು ಬಡವರಿರಬಹುದು, ಆದ್ರೆ ರೌಡಿಗಳಲ್ಲ” ಮರ್ಯಾದೆ ಪ್ರಶ್ನೆ ಸಿನಿಮಾದ ಈ ಡೈಲಾಗ್ ವೀಕ್ಷಕರ ನೋಟದ ದಿಕ್ಕನ್ನೇ ಬದಲಿಸಿಬಿಡುತ್ತದೆ. ರಾಕೇಶ್ ಅಡಿಗ, ಶೈನ್ ಶೆಟ್ಟಿ, ತೇಜು ಬೆಳವಾಡಿ ಅಭಿನಯದ ಸಿನಿಮಾ ಹೇಗಿದೆ? ಇಲ್ಲಿದೆ ಚಿತ್ರ ವಿಮರ್ಶೆ
Maryade Prashne Movie Review: ಸಾದಾ ಸೀದಾ ಮಿಡಲ್ ಕ್ಲಾಸ್ ಜನರ ಮನಸ್ಥಿತಿ ಮತ್ತು ಅವರ ಪರಿಸ್ಥಿತಿ ಎರಡನ್ನೂ ವಿವರಿಸುವ ಸಿನಿಮಾ ಮರ್ಯಾದೆ ಪ್ರಶ್ನೆ. ಮಧ್ಯಮ ವರ್ಗದವರು ಯಾವಾಗಲೂ ಮರ್ಯಾದೆಗೆ ಅಂಜಿ ಬದುಕುವವರು. “ನಾವು ಬಡವರಿರಬಹುದು, ಆದ್ರೆ ರೌಡಿಗಳಲ್ಲ” ಮರ್ಯಾದೆ ಪ್ರಶ್ನೆ ಸಿನಿಮಾದ ಈ ಡೈಲಾಗ್ ವೀಕ್ಷಕರ ನೋಟದ ದಿಕ್ಕನ್ನೇ ಬದಲಿಸಿಬಿಡುತ್ತದೆ. ಇದು ಜೀವಕ್ಕೆ ಜೀವ ಕೊಡುವ ಮೂರು ಗೆಳೆಯರ ಕಥೆ. ಸೂರಿ, ಮಂಜ ಮತ್ತು ಸತೀಶ ಈ ಮೂವರೂ ಒಂದೇ ಬದುಕನ್ನು ಬೇರೆ ಬೇರೆ ಆಯಾಮದಲ್ಲಿ ಬದುಕುತ್ತಿರುತ್ತಾರೆ. ಮೂವರಿಗೂ ಅವರವರದೇ ಆದ ವಿಭಿನ್ನ ಕಷ್ಟಗಳಿದೆ. ಅವರ ಬಳಿ ಬೇರೆಲ್ಲ ಇದೆ, ಆದರೆ ಹಣ, ಆಸ್ತಿ, ಸಂಪತ್ತು ಇದ್ಯಾವುದೂ ಇಲ್ಲ. “ದುಡ್ಡಿದ್ರೆ ದುನಿಯಾನೇ ಕೊಂಡ್ಕೊಬಹುದು” ಎಂಬ ಮಾತು ಈ ಸಿನಿಮಾದ ಆಧಾರ ಸ್ಥಂಬವಾಗಿ ನಿಂತಿದೆ.
ದುಡ್ಡು ಇದ್ದೋರು ಒಬ್ಬನ ಜೀವಕ್ಕೂ ಬೆಲೆ ಕಟ್ಟುತ್ತಾರೆ. ಅಷ್ಟೇ ಅಲ್ಲ, ಜೀವಕ್ಕೆ ಬೆಲೆಯೇ ಇಲ್ಲ ಎಂದು ಹಂಗಿಸಿಯೂ ಬದುಕುತ್ತಾರೆ ಎಂಬಂತೆ ಮರ್ಯಾದೆ ಪ್ರಶ್ನೆ ಸಿನಿಮಾ ಕಥೆ ಸಾಗುತ್ತದೆ. ಫ್ಯಾಮಿಲಿ ಸೆಂಟಿಮೆಂಟ್ ಇರುವ ಸಿನಿಮಾ ಇದು. ಒಂದು ಕೆಳ ಮಧ್ಯಮ ವರ್ಗದ ಕುಟುಂಬದ ಹಾಡುಪಾಡಿನ ಸಂಪೂರ್ಣ ಚಿತ್ರಣವನ್ನು ಸಿನಿಮಾ ಕಟ್ಟಿಕೊಡುತ್ತದೆ. ಮರೆವಿನ ಕಾಯಿಲೆ ಇರುವ ಅಪ್ಪ, ಮಕ್ಕಳ ಕಾಳಜಿ ಮಾಡುವ ಅಮ್ಮ, ಅಣ್ಣನೆಂದರೆ ಸಂಭ್ರಮಿಸುವ ತಂಗಿ. ತಂಗಿಯೆಂದರೆ ಜೀವ ಎನ್ನುವ ಅಣ್ಣ ಸತೀಶ ಒಂದೆಡೆಯಾದರೆ ಗೆಳೆಯರೇ ಎಲ್ಲ ಎಂದು ಬದುಕುತ್ತಿರುವ ಸ್ವಂತ ಕುಟುಂಬವೇ ಇಲ್ಲದ ಸೂರಿ. ಜೊತೆಗೆ ಎಣಿಸಲಾರದಷ್ಟು ದುಡ್ಡು ಮಾಡೋದನ್ನೇ ಗುರಿಯಾಗಿಸಿಕೊಂಡ ಮಂಜ. ಈ ಮೂವರ ಹೆಣಗಾಟದಲ್ಲಿ ವೀಕ್ಷಕರ ಭಾವನೆಗಳ ತಾಕಲಾಟ ಆರಂಭವಾಗುತ್ತದೆ.
ನವಿರಾದ ಪ್ರೇಮ
ಸೂರಿ ಕಾರ್ಪೋರೇಟರ್ ಆಗಬೇಕು ಎಂಬ ಹಂಬಲ ಹೊತ್ತಿರುತ್ತಾನೆ. ಆದರೆ ತಾನು ಅಂದುಕೊಂಡದ್ದು ಆಗದೇ ಇದ್ದರೂ ಪರೋಪಕಾರ ಮಾಡುತ್ತಲೇ ಜೀವನ ನಡೆಸುತ್ತಿರುತ್ತಾನೆ. ಸಿನಿಮಾ ಜೀವಾಳವೇ ಆದ ಸೂರಿ ಪಾತ್ರದಲ್ಲಿ ರಾಕೇಶ್ ಅಡಿಗ ಅಭಿನಯಿಸಿದ್ದಾರೆ. ಚಿತ್ರದುದ್ದಕ್ಕೂ ಇವರ ಅಭಿನಯವೇ ಜೀವತುಂಬಿದೆ. ಶೆಟ್ಟಿ ಪಾತ್ರದಲ್ಲಿ ಶೈನ್ ಶೆಟ್ಟಿ ಅಭಿನಯಿಸಿದ್ದಾರೆ. ನವಿರಾದ ಪ್ರೇಮದ ಅಲೆಯೊಂದಲ್ಲಿ ತೇಜು ಬೆಳವಾಡಿ ಚಿಕ್ಕ ಚೊಕ್ಕದಾಗಿ ಗಮನ ಸೆಳೆಯುತ್ತಾರೆ. ಆದರೆ ಆ ನವಿರಾದ ಪ್ರೇಮಕ್ಕೊಂದು ಅಂತ್ಯ ಇಲ್ಲ ಎಂಬ ಭಾವನೆ ಮೂಡುತ್ತದೆ.
ಕುಡಿದು ವಾಹನ ಚಲಾಯಿಸುವುದು, ಫುಡ್ ಡೆಲಿವರಿ ಹುಡುಗರ ಬದುಕು, ಹೆಲ್ಮೆಟ್ ರಹಿತ ಚಾಲನೆ, ರಾಜಕೀಯ ಕುತಂತ್ರ, ಹಣ ಇದ್ದವರ ದರ್ಪ ಈ ಎಲ್ಲಾ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತ ಸಿನಿಮಾ ಸಾಗುತ್ತದೆ. ಇದರಿಂದ ಮರ್ಯಾದೆ ಪ್ರಶ್ನೆ ಚಿತ್ರದುದ್ದಕ್ಕೂ ಡಿಸ್ಕ್ಲೈಮರ್‌ಗಳು ಕಾಣಿಸುತ್ತವೆ. ಜೊತೆಗೆ ಇಂಟರ್‌ವಲ್ ನಂತರ ಬೀಪ್ ಸೌಂಡ್ ಇರುವ ಡೈಲಾಗ್‌ಗಳು ಕಿವಿಗೆ ಚುಚ್ಚುತ್ತವೆ. ಇದು ವೀಕ್ಷಕರಿಗೆ ಕಿರಿಕಿರಿ ಕೂಡ ಉಂಟುಮಾಡುವ ಅಪಾಯವಿದೆ. ಬೆಂಗಳೂರಿನ ಮೂಲೆ ಮೂಲೆಗಳು ಸಿನಿಮಾದುದ್ದಕ್ಕೂ ಕಾಣುತ್ತವೆ.
ಇದು ಬೇಕಿತ್ತಾ?
ಸಿನಿಮಾದಲ್ಲಿ ಇದು ಬೇಕಿತ್ತಾ ಎಂಬ ಪ್ರಶ್ನೆ ಹುಟ್ಟಿಸುವ ಕೆಲವು ಸನ್ನಿವೇಶಗಳಿವೆ. ಪೊಲೀಸರು ಸತೀಶನ ಗೆಳೆಯರನ್ನು ಯಾಕೆ ಬಂಧಿಸಬೇಕಿತ್ತು? ಲಕ್ಕಿ (ತೇಜು ಬೆಳವಾಡಿ) ಯಾಕೆ ತನ್ನ ಅಣ್ಣನ ಅತ್ಯಾಪ್ತ ಗೆಳೆಯರ ವಿರುದ್ದವೇ ದೂರು ದಾಖಲಿಸಿದಳು ಎಂಬ ಪ್ರಶ್ನೆಗಳು ವೀಕ್ಷಕರಿಗೆ ಹುಟ್ಟುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಸೂರಿಯ ಸಿಟ್ಟು ಹೆಚ್ಚಿಸಲು ಇವೆಲ್ಲ ಪೂರಕವೇ ಆಗಿದ್ದರೂ ಅಗತ್ಯ ಆಗಿರಲಿಲ್ಲ.
ಅರ್ಜುನ್ ರಾಮು ಅವರ ಸಂಗೀತ ಸ್ವಾದ
ಮರ್ಯಾದೆ ಪ್ರಶ್ನೆಯ ‘ನಾ ನಾನಾಗುವೇ ನಿನ್ನ ಜೊತೆ' ಹಾಡು ಮಾಧುರ್ಯತೆಯಿಂದಲೇ ಎಲ್ಲೆಡೆ ಈಗಾಗಲೇ ವೈರಲ್ ಆಗಿದೆ. ವಾಸುಕಿ ಅವರ ಕಂಠಸಿರಿ, ಅರ್ಜುನ್ ರಾಮು ಅವರ ಸಾಹಿತ್ಯ ಎರಡೂ ಕೂಡ ಈ ಗೀತೆಯಲ್ಲಿ ತುಂಬಾ ಚೆನ್ನಾಗಿ ಸಿಂಕ್ ಆಗಿದೆ. ಅಷ್ಟೇ ಅಲ್ಲ, ಸಿನಿಮಾದಲ್ಲಿ ಬರುವ ಪ್ರತಿ ಹಾಡು ಸಮಯೋಚಿತ ಮತ್ತು ಸುಂದರ ಸಾಹಿತ್ಯಿಕ ಸಾಲುಗಳಿಂದ ಥಿಯೇಟರ್‌ನಿಂದ ಹೊರಬಂದರೂ ಗುನುಗಿಸಿಕೊಳ್ಳುತ್ತವೆ. ಜೊತೆಗೆ, ಸಿನಿಮಾಟೋಗ್ರಫಿಗೆ ಒಂದು ಮೆಚ್ಚುಗೆಯನ್ನು ಖಂಡಿತ ಹೇಳಲೇಬೇಕು.
ಮರ್ಯಾದೆ ಪ್ರಶ್ನೆ ಸಿನಿಮಾ ವಿವರ
ಜಾನರ್: ಫ್ಯಾಮಿಲಿ ಡ್ರಾಮಾ
ತಾರಾಗಣ: ರಾಕೇಶ್ ಅಡಿಗ, ಸುನಿಲ್ ರಾವ್, ಶೈನ್ ಎಸ್ ಶೆಟ್ಟಿ, ಪ್ರಭು ಮುಂಡ್ಕೂರು, ತೇಜು ಬೆಳವಾಡಿ, ಪೂರ್ಣಚಂದ್ರ ಮೈಸೂರು
ಚಿತ್ರಕಥೆ, ಸಂಭಾಷಣೆ, ನಿರ್ದೇಶನ: ನಾಗರಾಜ್ ಸೋಮಯಾಜಿ
ಬರಹ: ಆರ್‌ಜೆ ಪ್ರದೀಪ್
ನಿರ್ಮಾಪಕಿ: ಶ್ವೇತಾ ಪ್ರಸಾದ್
ಸಂಗೀತ: ಅರ್ಜುನ್ ರಾಮು
ಸಿನಿಮಾಟೋಗ್ರಾಫಿ: ಸಂದೀಪ್ ವಲ್ಲೂರಿ
ಸ್ಟಾರ್: 4\5
ವಿಮರ್ಶೆ: ಸುಮಾ ಕಂಚೀಪಾಲ್