logo
ಕನ್ನಡ ಸುದ್ದಿ  /  ಮನರಂಜನೆ  /  ‘ಪರಮಾತ್ಮ’ ಪುನೀತ್‌ ರಾಜ್‌ಕುಮಾರ್‌ ಇಲ್ಲದ ಮೂರು ವರ್ಷ; ಮಗುವಿನ ನಗುವೂ ಮಿಸ್‌, ಎದೆಗಪ್ಪುವ ಮನಸ್ಸೂ ಕಾಣೆ

‘ಪರಮಾತ್ಮ’ ಪುನೀತ್‌ ರಾಜ್‌ಕುಮಾರ್‌ ಇಲ್ಲದ ಮೂರು ವರ್ಷ; ಮಗುವಿನ ನಗುವೂ ಮಿಸ್‌, ಎದೆಗಪ್ಪುವ ಮನಸ್ಸೂ ಕಾಣೆ

Suma Gaonkar HT Kannada

Oct 28, 2024 08:27 PM IST

google News

ಪರಮಾತ್ಮನಿಲ್ಲದ ಮೂರು ವರ್ಷ

    • ಪುನೀತ್‌ ರಾಜ್‌ಕುಮಾರ್‌ ಅಗಲಿ 3 ವರ್ಷವಾದರೂ ಅವರ ನಗು ಮಾತ್ರ ಇನ್ನೂ ಹಸನಾಗಿದೆ. ಸಿನಿಮಾರಂಗವೊಂದೇ ಅಲ್ಲದೇ, ಅಪ್ಪು ಅವರನ್ನು ಹಲವು ಸಂಗತಿಗಳು ಮಿಸ್ ಮಾಡಿಕೊಂಡಿವೆ. ಅಭಿಮಾನಿಗಳ ಹೃದಯದಲ್ಲಿ 'ಪರಮಾತ್ಮ'ನಾಗಿ ನೆಲೆಸಿರುವ ಪುನೀತ್ ರಾಜಕುಮಾರ್ ನೆನಪುಗಳನ್ನು ಮತ್ತೊಮ್ಮೆ ಮೆಲುಕು ಹಾಕೋಣ.
ಪರಮಾತ್ಮನಿಲ್ಲದ ಮೂರು ವರ್ಷ
ಪರಮಾತ್ಮನಿಲ್ಲದ ಮೂರು ವರ್ಷ

Puneeth Rajkumar 3rd Death Anniversary: ಪವರ್ ಸ್ಟಾರ್ ಪುನೀತ್ ರಾಜಕುಮಾರ್! ಕನ್ನಡಿಗರ ಕಣ್ಮಣಿ ಪುನೀತ್ ರಾಜ್‌ಕುಮಾರ್‌ ಅಥವಾ ಅಪ್ಪು ಭೌತಿಕ ಜಗತ್ತಿನಿಂದ ದೂರವಾಗಿ ಅಕ್ಟೋಬರ್ 29ಕ್ಕೆ ಬರೋಬ್ಬರಿ 3 ವರ್ಷ ತುಂಬಿದೆ. ಕನ್ನಡ ಸಿನಿಮಾರಂಗವೊಂದೇ ಅಲ್ಲದೇ, ಅಪ್ಪು ಅವರನ್ನು ಹಲವು ಸಂಗತಿಗಳು ಮಿಸ್ ಮಾಡಿಕೊಂಡಿವೆ. ಅಭಿಮಾನಿಗಳ ಹೃದಯದಲ್ಲಿ 'ಪರಮಾತ್ಮ'ನಾಗಿ ನೆಲೆಸಿರುವ ಪುನೀತ್ ರಾಜ್‌ಕುಮಾರ್‌ ಅವರ ಕುರಿತು ಈ ಸಂದರ್ಭದಲ್ಲಿ ಸ್ಮರಣೆ ಮಾಡಿಕೊಳ್ಳಬಹುದಾದ ಹತ್ತು ಹಲವು ಅಂಶಗಳು ನಿಮಗೆಂದೇ ಇಲ್ಲಿವೆ.

ಇಸವಿ ಸನ್ 1975, 17 ಮಾರ್ಚ್‌ನಲ್ಲಿ ವರನಟ ಡಾ ರಾಜ್‌ಕುಮಾರ್‌ ಮತ್ತು ಪಾರ್ವತಮ್ಮ ರಾಜ್‌ಕುಮಾರ್‌ ಅವರಿಗೆ ಜನಿಸಿದ ಲೋಹಿತ್ ಎಂಬ ಪುಟ್ಟ ಮಗುವೇ ಪುನೀತ್ ರಾಜ್‌ಕುಮಾರ್‌ ಆಗಿ ಮುಂದೆ ಖ್ಯಾತಿಯ ಉತ್ತುಂಗಕ್ಕೆ ಏರಿದರು. ಕೇವಲ 6 ತಿಂಗಳು ಇರುವಾಗಲೇ ಸಿನಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ಪುನೀತ್‌ ಬಾಲ್ಯದಲ್ಲೇ ತಮ್ಮ ನಟನೆಯ ಮೂಲಕ ಜನಮನವನ್ನು ಆಕರ್ಷಿಸಿದ್ದರು. ಕೇವಲ ನಟನೆಗೆ ಒಂದೇ ಅಲ್ಲದೇ, ತಮ್ಮನ್ನು ಗಾಯಕರನ್ನಾಗಿ, ನಿರ್ಮಾಪಕರನ್ನಾಗಿಯೂ ವಿಸ್ತರಿಸಿಕೊಂಡಿದ್ದರು ಅಪ್ಪು.

ಪುನೀತ್ ರಾಜ್‌ಕುಮಾರ್‌ ಅವರು 6 ತಿಂಗಳ ಮಗುವಾಗಿದ್ದಾಗ ‘ಪ್ರೇಮದ ಕಾಣಿಕೆ’ ಸಿನಿಮಾದಲ್ಲಿ ತೆರೆಮೇಲೆ ಕಾಣಿಸಿಕೊಂಡಿದ್ದರು. ತಾಯಿಗೆ ತಕ್ಕ ಮಗ ಸಿನಿಮಾದಲ್ಲಿ ಪುನೀತ್ ನಗು-ತೊದಲು ಮಾತನ್ನು ಜನ ಇಂದಿಗೂ ಮರೆತಿಲ್ಲ. ಮುಂದೆ ಶೆಲ್ಲಿ ಮೇಡಂ ಅವರಿಗೆ 'ಬೆಟ್ಟದ ಹೂವು' ತಂದುಕೊಟ್ಟ ಹೆಗ್ಗಳಿಕೆ ಅವರನ್ನು ರಾಷ್ಟ್ರೀಯ ಪ್ರಶಸ್ತಿಯವರೆಗೆ ಕರೆದೊಯ್ದಿತ್ತು. ವಸಂತ ಗೀತ, ಭಾಗ್ಯವಂತರು ಸಿನಿಮಾಗಳಲ್ಲಿಯೂ ಅವರು ಬಾಲ್ಯದಲ್ಲಿಯೇ ನಟಿಸಿ ಮಿಂಚಿದ್ದರು.

ಚಿಕ್ಕಂದಿನಿಂದಲೂ ಅವರ ಕಂಠಸಿರಿ ಕನ್ನಡಿಗರ ಮನ ಸೆಳೆದಿತ್ತು. ಪುನೀತ್ ಹಾಡಿದ್ದ ಚಲಿಸುವ ಮೋಡ ಸಿನಿಮಾದ 'ಕಾಣದಂತೆ ಮಾಯವಾದನೋ', 'ಬಾನ ದಾರಿಯಲ್ಲಿ ಸೂರ್ಯ' ಗೀತೆಗಳು ಇಂದಿಗೂ ಚಿರಸ್ಥಾಯಿಯಾಗಿ ಉಳಿದುಕೊಂಡಿವೆ.

ನಂತರ ಕೆಲ ವರ್ಷ ಪುನೀತ್ ರಾಜಕುಮಾರ್ ಸಿನಿಮಾ ಇಂಡಸ್ಟ್ರಿಯಿಂದ ದೂರ ಉಳಿದಿದ್ದರು. ಅಲ್ಲದೇ, ಅವರು ಸಿನಿಮಾ ರಂಗವನ್ನೇ ಬಿಡುವ ಯೋಚನೆಯನ್ನೂ ಮಾಡುವ ಕುರಿತು ಸಹ ಆಲೋಚಿಸಿದ್ದರು ಎಂದು ಕೆಲವು ಸಂದರ್ಶನಗಳಲ್ಲಿ ಉಲ್ಲೇಖವಿದೆ. ಆದರೆ 2002ರಲ್ಲಿ ಪುನೀತ್ ರಾಜಕುಮಾರ್ ಮತ್ತೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅಪ್ಪು ಚಿತ್ರದ ಮೂಲಕ ಅವರು ಕನ್ನಡಿಗರ ಮುಂದೆ ಖಡಕ್ ನಾಯಕನಾಗಿ ಕಾಣಿಸಿಕೊಂಡಿದ್ದರು.

ಅಪ್ಪು ನಟನೆಯ ಸಿನಿಮಾಗಳು

ಅಭಿ, ವೀರ ಕನ್ನಡಿಗ, ಮೌರ್ಯ, ಆಕಾಶ್ , ನಮ್ಮ ಬಸವ, ಅಜಯ್, ಮಿಲನಾ, ರಾಮ್, ಜಾಕಿ, ವಂಶಿ, ಪೃಥ್ವಿ, ರಣವಿಕ್ರಮ, ದೊಡ್ಮನೆ ಹುಡುಗ, ರಾಜಕುಮಾರ ಸಿನಿಮಾಗಳು ಅವರಿಗಾಗಿಯೇ ಸೃಷ್ಟಿಯಾಗಿದ್ದವು. ಪ್ರತಿಯೊಂದು ಸಿನಿಮಾವೂ ಚಿತ್ರಪರದೆಯಲ್ಲಿ ಅದ್ಭುತ ಹಿಟ್ ಆಗಿ ಮಿನುಗಿದ್ದವು. ಅಲ್ಲದೇ, ಯುವ ಸಿನಿಮಾ ಕರ್ಮಿಗಳಿಗೆ ಮುಕ್ತ ಮನಸ್ಸಿನಿಂದ ಸಹಾಯ-ಸಹಕಾರ ನೀಡುತ್ತಿದ್ದ ಪುನೀತ್ ರಾಜಕುಮಾರ್ ಅವರು ಪಿಆರ್‌ಎಕೆ ಎಂಬ ಹೆಸರಿನಲ್ಲಿ ಪ್ರೊಡಕ್ಷನ್ ಹೌಸ್ ನಿರ್ಮಿಸಿದ್ದರು. ಒಟಿಟಿ ವೇದಿಕೆಗಳಲ್ಲಿ ಕನ್ನಡ ಸಿನಿಮಾಗಳಿಗೆ ಸ್ಥಾನ ದೊರೆಯುವ ನಿಟ್ಟಿನಲ್ಲಿ ಕೆಲಸ ಮಾಡುವತ್ತ ಗಮನಹರಿಸಿದ್ದರು.

ದುರ್ವಿಧಿಯೊಂದು ಹಠಾತ್ ಎಂದು ಬಂದೆರಗಿದ ದಿನ

ಆದರೆ ಆ ದಿನ ದುರ್ವಿಧಿಯೊಂದು ಹಠಾತ್ ಎಂದು ಬಂದೆರಗಿತ್ತು. 2021 ಅಕ್ಟೋಬರ್ 29ರಂದು ಲಘು ಹೃದಯಾಘಾತದಿಂದ ಪುನೀತ್ ರಾಜ್‌ಕುಮಾರ್‌ ಭೌತಿಕ ಜಗತ್ತನ್ನು ಬಿಟ್ಟು ಹೋಗಿದ್ದರು. ಬಲಗೈ ಕೊಟ್ಟಿದ್ದು ಎಡಗೈಗೆ ತಿಳಿಯಬಾರದು ಎಂಬಂತೆ ಶಕ್ತಿಧಾಮದ ಮಕ್ಕಳ ಲಾಲನೆ ಪಾಲನೆಯ ಜವಾಬ್ದಾರಿ ಹೊತ್ತಿದ್ದರು. ಎಷ್ಟೋ ಬಡ ಮಕ್ಕಳ ಶಿಕ್ಷಣಕ್ಕೆ, ಸರ್ಕಾರಿ ಶಾಲೆಗಳ ಉದ್ಧಾರಕ್ಕೆ ಕಟಿಬದ್ಧರಾಗಿ ಕೆಲಸ ಮಾಡುತ್ತಿದ್ದರು. ಪುನೀತ್ ರಾಜ್‌ಕುಮಾರ್‌ ಅವರ ಮರಣದ ನಂತರ ಅವರ ಇಂತಹ ದಾನ ಧರ್ಮದ ಕೆಲಸಗಳು ಹೊರಜಗತ್ತಿಗೆ ತಿಳಿದು ಅಪ್ಪು ಬಗ್ಗೆ ಜಗತ್ತು ಇನ್ನಷ್ಟು ಭಾವುಕರಾಗುವಂತೆ ಅವರು ಆವರಿಸಿಬಿಟ್ಟರು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ