Kichcha Sudeep: ‘ಜಗತ್ತಿನಲ್ಲಿ ಅಮ್ಮನಿಗೆ ಸರಿ ಸಾಟಿ ಯಾರೂ ಇಲ್ಲ’; ಕಿಚ್ಚ ಸುದೀಪ್ ತಾಯಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ
kichcha Sudeep: ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ನಿಧನದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲಯದಿಂದ ಸುದೀಪ್ ಅವರಿಗೆ ಪತ್ರವೊಂದು ಬಂದಿದೆ. ಅಮ್ಮನ ನಿಧನಕ್ಕೆ ಮೋದಿ ಸಂತಾಪ ಸೂಚಿಸಿದ್ದಾರೆ.
Kichcha Sudeep: ನಟ ಕಿಚ್ಚ ಸುದೀಪ್ ಇನ್ನೂ ಅಮ್ಮನ ಅಗಲಿಕೆಯ ನೋವಿಂದ ಆಚೆ ಬಂದಿಲ್ಲ. ಕಳೆದ ವಾರವಷ್ಟೇ ವಯಸ್ಸಹಜ ಅನಾರೋಗ್ಯಕ್ಕೆ ತುತ್ತಾಗಿದ್ದರು. ಭಾನುವಾರ ಬಿಗ್ ಬಾಸ್‌ನ ವಾರದ ಕಥೆ ಕಿಚ್ಚನ ಜೊತೆ ಶೋ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಅಮ್ಮನ ಆರೋಗ್ಯ ತೀರಾ ಹದಗೆಟ್ಟ ವಿಚಾರ ಅರಿವಿಗೆ ಬಂದರೂ, ಕರ್ತವ್ಯ ಮರೆಯದೆ, ಕೊಟ್ಟ ಕೆಲಸವನ್ನು ಮುಗಿಸಿ, ಅಮ್ಮನ ಬಳಿ ತೆರಳಿದ್ದರು. ಆದರೆ, ಅಷ್ಟೊತ್ತಿಗಾಗಲೇ ಆ ತಾಯಿ ಕಣ್ಮುಚ್ಚಿದ್ದರು. ಈ ನಿಧನದ ಸುದ್ದಿ ಹೊರಬೀಳುತ್ತಿದ್ದಂತೆ, ಇಡೀ ಚಿತ್ರೋದ್ಯಮವೇ ಮೌನಕ್ಕೆ ಶರಣಾಗಿತ್ತು. ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದರು. ಇದೀಗ ಪ್ರಧಾನಿ ಮೋದಿ ಸಹ ಈ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಸುದೀಪ್ ಕಡೆಯಂದ ಧನ್ಯವಾದ
ಅಕ್ಟೋಬರ್ 23ರಂದೇ ಪ್ರಧಾನಿ ಕಾರ್ಯಾಲಯದಿಂದ ನಟ ಕಿಚ್ಚ ಸುದೀಪ್ ಅವರ ಬೆಂಗಳೂರಿನ ಜೆಪಿ ನಗರದ ಮನೆಗೆ ಪತ್ರ ರವಾನೆಯಾಗಿದೆ. ಇದೀಗ ಆ ಪತ್ರ ಸುದೀಪ್ ಕೈ ಸೇರಿದ್ದು, ಧನ್ಯವಾದಗಳನ್ನು ಅರ್ಪಿಸಿದ್ದಾರೆ. "ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿ... ನಿಮ್ಮ ಸಹಾನುಭೂತಿಯ ಸಂತಾಪ ಪತ್ರಕ್ಕಾಗಿ ನನ್ನ ಧನ್ಯವಾದಗಳು. ನಿಮ್ಮ ಚಿಂತನಶೀಲ ಮಾತುಗಳು ಈ ಕಷ್ಟದ ಸಮಯದಲ್ಲಿ ಸಾಂತ್ವಾನದ ಸೆಲೆಯನ್ನು ನೀಡಿದೆ. ನಿಮ್ಮ ಸಾಂತ್ವಾನವು ನನ್ನ ಹೃದಯ ತಟ್ಟಿದೆ. ನಿಮ್ಮ ವಿಶ್ವಾಸಕ್ಕೆ ನಾನು ಅಭಾರಿ" ಎಂದು ಸುದೀಪ್ ಪತ್ರಕ್ಕೆ ಪ್ರತಿಕ್ರಿಯಿಸಿದ್ದಾರೆ.
ಪ್ರಧಾನಿ ಮೋದಿ ಬರೆದ ಪತ್ರದಲ್ಲೇನಿದೆ...
"ಶ್ರೀಮತಿ ಸರೋಜಾ ಸಂಜೀವ್ ಅವರ ನಿಧನದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ತಾಯಿಯನ್ನು ಕಳೆದುಕೊಂಡ ದುಃಖವನ್ನು ಯಾರಿಂದಲೂ ಭರಿಸುವುದಕ್ಕೆ ಸಾಧ್ಯವಾಗುವುದಿಲ್ಲ. ತಾಯಿಯ ಅಗಲಿಕೆ ತುಂಬಲಾರದ ನಷ್ಟ. ತಾಯಿಯ ಹೃದಯದ ಮೃದುತ್ವಕ್ಕೆ ಈ ಜಗತ್ತಿನಲ್ಲಿ ಬೇರೆ ಸಾಟಿಯಿಲ್ಲ. ಅಮ್ಮನೊಂದಿಗಿನ ನಿಮ್ಮ ಭಾವನಾತ್ಮಕ ನಂಟು, ಬಂಧ ಎಂದೂ ಮುರಿಯಲಾಗದು. ನಿಮ್ಮ ಕುಟುಂಬದ ಮೇಲೆಯೂ ಅಮ್ಮ ಬೀರಿದ ಪರಿಣಾಮ, ಪ್ರಭಾವ ಸಣ್ಣದಲ್ಲ.
ಅವರೀಗ ನೆನಪುಗಳಲ್ಲಿ ಬದುಕನ್ನು ಮುಂದುವರಿಸುತ್ತಾರೆ. ಅವರ ಮೌಲ್ಯಗಳು ನಿಮ್ಮ ಮುಂದಿನ ದಾರಿಗೆ ಸ್ಫೂರ್ತಿ ನೀಡುತ್ತವೆ. ಈ ನಿಮ್ಮ ಜೀವನದ ಅತ್ಯಂತ ಕಷ್ಟಕರ ಸಮಯದಲ್ಲಿ ನನ್ನ ಕಡೆಯಿಂದ ಸಂತಾಪ ಸೂಚಿಸುತ್ತೇನೆ. ಆ ದೇವರು ಈ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ನಿಮಗೆ ದಯಪಾಲಿಸಲಿ. ಓಂ ಶಾಂತಿ!" ಎಂದಿದ್ದಾರೆ.
ಅನಾರೋಗ್ಯ ಹಿನ್ನೆಲೆ ನಿಧನ
ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಸಂಜೀವ್, ವಯಸ್ಸಹಜ ಅನಾರೋಗ್ಯದಿಂದ ಅಕ್ಟೋಬರ್ 20ರ ಭಾನುವಾರ ನಿಧನರಾಗಿದ್ದರು. ಕಳೆದ ಕೆಲ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸರೋಜಾ ಅವರನ್ನು ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.