logo
ಕನ್ನಡ ಸುದ್ದಿ  /  ಮನರಂಜನೆ  /  Bagheera Review: ಸಮಾಜ ಕಾಡಾಗಿ ಬದಲಾದಾಗ ನ್ಯಾಯಕ್ಕಾಗಿ ನರಭಕ್ಷಕನಾಗುವ ಈ ಬಘೀರ! ಶ್ರೀಮುರಳಿ ‘ಬಘೀರ’ ಚಿತ್ರವಿಮರ್ಶೆ

Bagheera Review: ಸಮಾಜ ಕಾಡಾಗಿ ಬದಲಾದಾಗ ನ್ಯಾಯಕ್ಕಾಗಿ ನರಭಕ್ಷಕನಾಗುವ ಈ ಬಘೀರ! ಶ್ರೀಮುರಳಿ ‘ಬಘೀರ’ ಚಿತ್ರವಿಮರ್ಶೆ

Oct 31, 2024 03:43 PM IST

google News

ಶ್ರೀಮುರಳಿ ‘ಬಘೀರ’ ಚಿತ್ರವಿಮರ್ಶೆ

    • Bagheera Movie Review: ಶ್ರೀಮುರಳಿ ನಟನೆಯ ಬಘೀರ ಸಿನಿಮಾ ಇಂದು (ಅ. 31) ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿ ಮೂಡಿಬಂದ ಈ ಚಿತ್ರಕ್ಕೆ ಡಾ. ಸೂರಿ ನಿರ್ದೇಶನ ಮಾಡಿದ್ದಾರೆ. ಹಾಗಾದರೆ ಹೇಗಿದೆ ಬಘೀರ? ಇಲ್ಲಿದೆ ಚಿತ್ರವಿಮರ್ಶೆ
ಶ್ರೀಮುರಳಿ ‘ಬಘೀರ’ ಚಿತ್ರವಿಮರ್ಶೆ
ಶ್ರೀಮುರಳಿ ‘ಬಘೀರ’ ಚಿತ್ರವಿಮರ್ಶೆ

Bagheera Movie Review:"ದೇವರು ಯಾಕಮ್ಮ, ಯಾವಾಗ್ಲೋ ಒಂದೊಂದ್ ಸಲ ರಾಮಾಯಣ ಮಹಾಭಾರತ ಅಂತ ಮಾತ್ರ ಬರ್ತಾನೆ? ಯಾವಾಗ್ಲೂ ಯಾಕಮ್ಮ ಬರಲ್ಲ?" ದೇವ್ರು ಯಾವಾಗ್ಲೂ ಬರಲ್ಲ. ಸಮಾಜದಲ್ಲಿ ಪಾಪಗಳು ಮಿತಿ ಮೀರಿದಾಗ, ಒಳ್ಳೆಯದರ ಮೇಲೆ ಕೆಟ್ಟದ್ದು ಆವಿಯಾದಾಗ, ಸಮಾಜ ಕುಲಗೆಟ್ಟಾಗ, ಮನುಷ್ಯರು ಮೃಗಗಳಾದಾಗ, ಅವನು ಅವತಾರ ಎತ್ತುತ್ತಾನೆ.. ಅವನು ಯಾವಾಗ್ಲೂ ದೇವರಾಗಿಯೇ ಬರಲ್ಲ. ರಾಕ್ಷಸನಾಗಿಯೂ ಬರಬಹುದು" ಹೀಗೆ ಮಗನ ಪ್ರಶ್ನೆಗೆ ಅಮ್ಮ ಉತ್ತರಿಸುತ್ತಾಳೆ. ಆ ಮೂಲಕ ಪುಟಾಣಿಯ ಎದೆಯೊಳಗೂ ರೋಷಾವೇಷವನ್ನು ನಾಟಿ ಮಾಡುತ್ತಾಳೆ ಆ ತಾಯಿ. ಅಲ್ಲಿಂದ ಶುರು ಬಘೀರನ ಕಥೆ.

ವೇದಾಂತ್‌ (ಶ್ರೀಮುರಳಿ) ಚಿಕ್ಕಂದಿನಿಂದಲೇ ಸೂಪರ್‌ ಹೀರೋ ಆಗುವ ಕನಸು ಕಂಡವನು. ಸೂಪರ್‌ ಮ್ಯಾನ್‌ ಬಂದು ಕಾಪಾಡ್ತಾನೆ ಅಂತ, ಮನೆ ಮೇಲಿಂದ ಬಿದ್ದು ಕಾಲು ಮುರಿದುಕೊಂಡವನೂ ಇವನೇ. ಆಗ ಆ ಪುಟಾಣಿಯ ಪ್ರಶ್ನೆಗೆ ಅವರಮ್ಮ ಕೊಟ್ಟ ಉತ್ತರ ಈ ಮೇಲಿನಂತಿದೆ. ಸಮಾಜದಲ್ಲಿ ತನ್ನಿಂದ ಸಾಧ್ಯವಾದಷ್ಟು ಬದಲಾವಣೆ ಆಗಬೇಕು, ವ್ಯವಸ್ಥೆ ಸರಿಮಾಡಬೇಕು ಎಂದು ಗುರಿ ಇಟ್ಟುಕೊಂಡು, ಟಾಪ್‌ ರ್ಯಾಂಕ್‌ನಲ್ಲಿಯೇ ಐಪಿಎಸ್‌ ಪಾಸ್‌ ಮಾಡಿ, ಅಪ್ಪ (ಅಚ್ಯುತ್‌ ಕುಮಾರ್) ಕೆಲಸ ಮಾಡಿದ ಮಂಗಳೂರು ಸ್ಟೇಷನ್‌ಗೇ ನೇಮಕಗೊಳ್ಳುತ್ತಾನೆ ವೇದಾಂತ್. ತನ್ನ ಖಡಕ್‌ ನೇಚರ್‌ ಹೇಗಿರುತ್ತೆ ಎಂಬುದನ್ನು ತೋರಿಸಲು ಭ್ರಷ್ಟರ ವಿರುದ್ಧ ಸೆಟೆದು ನಿಲ್ಲುತ್ತಾನೆ, ತಪ್ಪು ಮಾಡಿದವರ ಮಟ್ಟಹಾಕುತ್ತ, ಪುಡಿ ರೌಡಿಗಳ ಮೂಳೆ ಮುರಿಯುತ್ತ ನೇಮು ಫೇಮು ಗಿಟ್ಟಿಸಿಕೊಳ್ಳುತ್ತಾನೆ. ಆದರೆ, ಅದೇ ವ್ಯವಸ್ಥೆಯ ಅಡಿಯಾಳಾಗುವ ಸ್ಥಿತಿಗೂ ತಲುಪುತ್ತಾನೆ. ಮೇಲಾಧಿಕಾರಿಗಳ ಕೈಗೊಂಬೆಯಾಗಿಯೂ ಬದಲಾಗುತ್ತಾನೆ.

"ಎದುರು ನಿಲ್ಲಬೇಡ, ಸಿಸ್ಟಮ್‌ನಲ್ಲಿ ಒಬ್ಬನಾಗು, ಮುಖವಾಡ ಹಾಕಿಕೊಂಡಿರು" ಎಂದು ಸ್ವತಃ ಅಪ್ಪನೇ ಹೇಳುತ್ತಾನೆ. ಒಳಗೊಳಗೆ ಎದೆ ಬಗೆಯುಷ್ಟು ಕೋಪತಾಪ ಇದ್ದರೂ, ಅದು ಆತನಿಂದ ಸಹಿಸಿಕೊಳ್ಳಲು ಅಸಾಧ್ಯ. ಹೀಗಿರುವಾಗಲೇ ಅಮಾಯಕ ಜೀವದ ಸಾವಿನ ಮೂಲಕ ಕಿಡಿಯೊಂದು ಹೊತ್ತಿಕೊಳ್ಳುತ್ತದೆ. ಆ ಕಿಡಿ, ಕಾಳ್ಗಿಚ್ಚಾಗಿ ಬದಲಾಗುತ್ತದೆ. ಅಲ್ಲಿಂದ ಹೊಸ ಅಧ್ಯಾಯ ಶುರುವಾಗುತ್ತದೆ. ಮಂಗಳೂರಿನ ಸಮುದ್ರದ ಅಲೆಗಳಿಗೆ ಆವತ್ತು ಮೊದಲ ಸಲ ಮನುಷ್ಯರ ರಕ್ತತರ್ಪಣವಾಗುತ್ತದೆ! ಸಣ್ಣ ಮೀನುಗಳು ಕಣ್ಮರೆಯಾಗಿ, ದೊಡ್ಡ ತಿಮಿಂಗಿಲಗಳ ಎಂಟ್ರಿಯಾಗುತ್ತದೆ. ಮುಂದೆ? ಆ ತಿಮಿಂಗಲಗಳ ಮಟ್ಟಹಾಕಲು ಸೂಪರ್‌ ಹೀರೋ ಬಘೀರನ ಸಾಹಸ ಹೇಗಿರುತ್ತದೆ? ಇದೇ ಈ ಚಿತ್ರದ ಹೈಲೈಟ್‌.

ಬಘೀರ ಸಿನಿಮಾ ತೀರಾ ವಿಶೇಷ ಕಥೆಯನ್ನು ಹೊಂದಿದೆ ಎಂದು ಹೇಳುವುದು ತುಸು ಕಷ್ಟ. ಆರ್ಗನ್‌ ಟ್ರೇಡಿಂಗ್‌, ಮಾನವ ಕಳ್ಳಸಾಗಾಣಿಕೆ, ಡ್ರಗ್ಸ್‌, ಭ್ರಷ್ಟಾಚಾರ.. ಹೀಗೆ ಒಂದಷ್ಟು ವಿಚಾರಗಳನ್ನು ಈ ಸಿನಿಮಾದಲ್ಲಿ ನಿರ್ದೇಶಕರು ಟಚ್‌ ಮಾಡಿದ್ದಾರೆ. ಈ ವಿಚಾರಗಳಿಗೆ ಸೂಪರ್‌ ಮ್ಯಾನ್‌ ಅನ್ನೂ ಲೇಬಲ್‌ ಅಂಟಿಸಿ ಚೆಂದವಾಗಿ ಸುಣ್ಣ ಬಣ್ಣ ಮಾಡಿ, ಪೇಟೆಗೆ ತರಲಾಗಿದೆ. ಮೇಕಿಂಗ್‌ ವಿಚಾರದಲ್ಲಿ ತುಸು ಹೆಚ್ಚೇ ರಿಚ್‌ ಆಗಿದ್ದಾನೆ ಈ ಬಘೀರ. ಜತೆಗೆ ಈ ಚಿತ್ರದ ಕಥೆ ಪ್ರೇಕ್ಷಕನ ಊಹೆಗೆ ನಿಲುಕುವಂಥದ್ದು. ಮುಂದೇನಾಗುತ್ತದೆ ಎಂಬುದನ್ನು ಸಲೀಸಾಗಿಯೇ ಆತ ಊಹಿಸಿಬಿಡಬಲ್ಲ! ಕೆಲವು ಕಡೆ ಲಾಜಿಕ್‌ ಮರೆತು, ತೆರೆಮೇಲಿನ ಮ್ಯಾಜಿಕ್ಕನ್ನಷ್ಟೇ ನೋಡಬೇಕು.

ಶ್ರೀಮುರಳಿ ಅವರನ್ನು ಗಮನದಲ್ಲಿಟ್ಟುಕೊಂಡೇ ಭಾವ ಪ್ರಶಾಂತ್‌ ನೀಲ್‌ ಕೆತ್ತಿದ ಕಥೆಯೇ ಈ ಬಘೀರ. ವ್ಯವಸ್ಥೆಯ ವಿರುದ್ಧ ಎದೆಗೊಟ್ಟು ನಿಲ್ಲುವ ವ್ಯಕ್ತಿಯಾಗಿ ಶ್ರೀಮುರಳಿ ಇಲ್ಲಿ ಕಾಣಿಸಿಗುತ್ತಾರೆ. ಖಾಕಿ ಧರಿಸಿ ತನ್ನ ಕೈಯಿಂದ ಮಾಡಲಾಗದ ಎಷ್ಟೋ ಸಾಹಸಗಳನ್ನು ಮುಖವಾಡ ಧರಿಸಿದ ಬಘೀರ ಮಾಡುತ್ತ ಹೋಗುತ್ತಾನೆ. ಬಘೀರನಾಗಿ ಶತ್ರುಗಳನ್ನು ಕಣ್ಣಲ್ಲಿಯೇ ನುಂಗುವಷ್ಟು ಉಗ್ರಸ್ವರೂಪಿಯಾದರೆ, ನೆಚ್ಚಿನ ಹುಡುಗಿ ಎದುರಿಗೆ ಬಂದರೆ, ಸೋತು ಶರಣಾಗುವ ವೇದಾಂತ್ ಆಗಿಯೂ ಶ್ರೀಮುರಳಿ ಕಂಡಿದ್ದಾರೆ. ಸಾಹಸ ದೃಶ್ಯಗಳಿಗೆ ಅವರಿಂದ ಮತ್ತೊಂದು ಮೆರುಗು ಸಿಕ್ಕಿದೆ. ಆ ಬಘೀರನ ಸಾಹಸವನ್ನು ವಿಜೃಂಭಿಸಲು ಇಲ್ಲಿ ರಣ ರಾಕ್ಷಸರೆಂಬಂತೆ ದೈತ್ಯ ಬಾಹುಬಲದ ಖಳರೂ ನೋಡುಗರ ಎದೆ ನಡುಗಿಸುತ್ತಾರೆ.

ಕುರೂಪಿ ಮುಖದ ರಾಣಾ ಪಾತ್ರದಲ್ಲಿ ಗರುಡ ರಾಮ್‌ ಖಳನ ಗತ್ತಲ್ಲಿ ಮಿಂದೆದ್ದಿದ್ದಾರೆ. ಕಾನ್‌ಸ್ಟೇಬಲ್‌ ಪಾತ್ರದಲ್ಲಿ ರಂಗಾಯಣ ರಘು, ಅಪ್ಪನಾಗಿ ಅಚ್ಯುತ್‌ ಕುಮಾರ್‌, ಹಿರಿಯ ನಟ ಅವಿನಾಶ್‌ ಗಮನ ಸೆಳೆಯುತ್ತಾರೆ. ಸಿಬಿಐ ಅಧಿಕಾರಿಯಾಗಿ ಪ್ರಕಾಶ್‌ ರಾಜ್‌ ಗಂಭೀರ ಪಾತ್ರದ ಮೂಲಕ ಇಷ್ಟವಾಗುತ್ತಾರೆ. ಚಿತ್ರದ ನಾಯಕಿ ಸ್ನೇಹಾ ಪಾತ್ರಧಾರಿ ರುಕ್ಮಿಣಿ ವಸಂತ್‌ ಅವರಿಗೆ ಹೆಚ್ಚು ಸ್ಕ್ರೀನ್‌ ಸ್ಪೇಸ್‌ ಇಲ್ಲ. ಸಿಕ್ಕ ಅವಕಾಶವನ್ನೇ ಅವರು ಚೆನ್ನಾಗಿ ಬಳಿಸಿಕೊಂಡಿದ್ದಾರೆ. ಚಿತ್ರದ ಮೇಕಿಂಗ್‌ ವಿಚಾರದಲ್ಲಿ ಪೂರ್ಣಾಂಕ ಸಲ್ಲಬೇಕು. ಛಾಯಾಗ್ರಾಹಕ ಎ,ಜೆ ಶೆಟ್ಟಿ ಕ್ಯಾಮರಾ ಕಣ್ಣುಗಳು ಸೊಗಸು. ಅಜನೀಶ್‌ ಲೋಕನಾಥ್‌ ಹಾಡುಗಳಿಗಿಂತ ಹಿನ್ನೆಲೆ ಸಂಗೀತದಲ್ಲಿ ಹೆಚ್ಚು ಹಿಡಿದಿಟ್ಟುಕೊಳ್ಳುತ್ತಾರೆ.

 

ಚಿತ್ರ: ಬಘೀರ

ನಿರ್ದೇಶನ: ಡಾ. ಸೂರಿ

ನಿರ್ಮಾಣ: ಹೊಂಬಾಳೆ ಫಿಲಂಸ್‌

ತಾರಾಬಳಗ: ಶ್ರೀಮುರಳಿ, ರುಕ್ಮಿಣಿ ವಸಂತ್‌, ಪ್ರಕಾಶ್‌ ರಾಜ್‌, ಗರುಡ ರಾಮ್, ರಂಗಾಯಣ ರಘು, ಅವಿನಾಶ್‌,

ಸ್ಟಾರ್:‌ 3\5

ವಿಮರ್ಶೆ: ಮಂಜು ಕೊಟಗುಣಸಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ