UI Box Office Collection: ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿದ ಉಪೇಂದ್ರ ಯುಐ; ಹೀಗಿದೆ ಚಿತ್ರದ ಮೊದಲ ದಿನದ ಗಳಿಕೆ
Dec 21, 2024 07:07 AM IST
ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿದ ಉಪೇಂದ್ರ ಯುಐ
- ಉಪೇಂದ್ರ ಅವರ ಯುಐ ಸಿನಿಮಾ ಡಿಸೆಂಬರ್ 20ರಂದು ವಿಶ್ವದಾದ್ಯಂತ ಬಿಡುಗಡೆ ಆಗಿದೆ. ಕಲೆಕ್ಷನ್ ವಿಚಾರದಲ್ಲಿಯೂ ಈ ಸಿನಿಮಾ ಹಿಂದೆ ಬಿದ್ದಿಲ್ಲ. ಕ್ರೇಜ್‌ಗೆ ತಕ್ಕಂತೆ ಕರ್ನಾಟಕದಲ್ಲಿ ಮುಂದಡಿ ಇರಿಸಿದೆ. ಪರಭಾಷೆಗಳಲ್ಲಿ ಇನ್ನು ಮುಂದೆ ಕುದುರಿಕೊಳ್ಳಬೇಕಿದೆ. ಹಾಗಾದರೆ ಉಪ್ಪಿಯ ಯುಐ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು?
UI Box Office Collection: ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶಿಸಿದ ಯುಐ ಸಿನಿಮಾ ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿತ್ತು. ಅದರಂತೆ, ಅದೈ ಹೈಪ್‌ನಲ್ಲಿಯೇ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೂ ಈ ಚಿತ್ರ ಡಿ. 20ರಂದು ವಿಶ್ವದಾದ್ಯಂತ ಬಿಡುಗಡೆ ಆಗಿತ್ತು. ಕನ್ನಡದಲ್ಲಿ ಮುಂಗಡ ಬುಕ್ಕಿಂಗ್‌ನಿಂದ ಹಿಡಿದು, ವಿದೇಶದಲ್ಲಿಯೂ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಕಲೆಕ್ಷನ್ ವಿಚಾರದಲ್ಲಿಯೂ ಈ ಸಿನಿಮಾ ಹಿಂದೆ ಬಿದ್ದಿಲ್ಲ. ಕ್ರೇಜ್‌ಗೆ ತಕ್ಕಂತೆ ಕರ್ನಾಟಕದಲ್ಲಿ ಈ ಸಿನಿಮಾ ಮುಂದಡಿ ಇರಿಸಿದರೆ, ಪರಭಾಷೆಗಳಲ್ಲಿ ಇನ್ನು ಮುಂದೆ ಕುದುರಿಕೊಳ್ಳಬೇಕಿದೆ. ಹಾಗಾದರೆ ಉಪ್ಪಿಯ ಈ ಯುಐ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು?
ಯುಐ ಸಿನಿಮಾ ಮೇಲೆ ಉಪೇಂದ್ರ ಅವರ ಅಭಿಮಾನಿಗಳಿಗೆ ವಿಶೇಷ ಅಭಿಮಾನ. ಏಕೆಂದರೆ, ಈ ಸಿನಿಮಾದಲ್ಲಿ ನಟಿಸುವುದಷ್ಟೇ ಅಲ್ಲದೆ, ನಿರ್ದೇಶನದ ಹೊಣೆಯೂ ಉಪೇಂದ್ರ ಅವರದ್ದು. ಈ ಕಾರಣಕ್ಕೆ ಯುಐ ಸಿನಿಮಾ ಕುತೂಹಲ ಮೂಡಿಸಿತ್ತು. ಅವರ ನಿರ್ದೇಶನಕ್ಕೆ ಫ್ಯಾನ್ಸ್ ಜಾಸ್ತಿ. ಅದರಂತೆ, 2015ರ ಉಪ್ಪಿ 2 ಸಿನಿಮಾ ಬಳಿಕ ಅಂದರೆ, 9 ವರ್ಷಗಳ ಬಳಿಕ ಯುಐ ಸಿನಿಮಾ ಮೂಲಕ ಆಗಮಿಸಿದ್ದಾರೆ ಉಪೇಂದ್ರ. ಮೊದಲ ದಿನ ಈ ಚಿತ್ರಕ್ಕೆ ದೊಡ್ಡ ಓಪನಿಂಗ್ ಸಿಕ್ಕಿದೆ. ಕಲೆಕ್ಷನ್ ವಿಚಾರದಲ್ಲಿಯೂ ಮೋಡಿ ಮಾಡಿದೆ.
ಇದನ್ನೂ ಓದಿ: ಯುಐ ಸಿನಿಮಾ ವಿಮರ್ಶೆ: ಉಪ್ಪಿ ಅಧ್ಯಾತ್ಮ
ನೈಟ್ ಶೋಗೆ ಹೆಚ್ಚಿನ ಪ್ರೇಕ್ಷಕನ ಆಗಮನ
ಸಿನಿಮಾಗಳ ಕಲೆಕ್ಷನ್ ಮಾಹಿತಿ ಒದಗಿಸುವ sacnilk ವೆಬ್‌ತಾಣ ಉಪೇಂದ್ರ ಅವರ ಯುಐ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು ಎಂಬುದನ್ನು ತಿಳಿಸಿದೆ. ಅದರಂತೆ, ಚಿತ್ರಕ್ಕೆ ರಾಜ್ಯಾದ್ಯಂತ ಯಾವೆಲ್ಲ ಜಿಲ್ಲೆಗಳಲ್ಲಿ ಪ್ರೇಕ್ಷಕರ ಆಕ್ಯುಪೆನ್ಸಿ ಹೇಗಿದೆ ಎಂಬುದನ್ನೂ ತಿಳಿಸಿದೆ. ಯುಐ ಸಿನಿಮಾಕ್ಕೆ ಬೆಳಗಿನ ಶೋಗಳಿಗೆ 63.6% ಆಕ್ಯುಪೆನ್ಸಿ ಇದ್ದರೆ, ಮಧ್ಯಾಹ್ನದ ಶೋಗಳಿಗೆ 61.82% ಪ್ರೇಕ್ಷಕರ ಆಗಮನವಾಗಿದೆ. ಅದೇ ರೀತಿ ಸಂಜೆ ಶೋಗಳಿಗೆ 75% ರಷ್ಟಿದ್ದರೆ, ರಾತ್ರಿ ಶೋಗಳಿಗೆ ಭರ್ತಿ 89.86% ಆಕ್ಯುಪೆನ್ಸಿ ಇದೆ. ಈ ಮೂಲಕ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತಂದಿದ್ದಾರೆ ಉಪೇಂದ್ರ.
ಕರ್ನಾಟಕದ ಜಿಲ್ಲೆಗಳಲ್ಲಿ ಹೇಗಿದೆ ಪ್ರತಿಕ್ರಿಯೆ?
ಬೆಂಗಳೂರಿನಲ್ಲಿ 492 ಶೋಗಳ ಪೈಕಿ ರಾತ್ರಿ ಶೋಗಳಿಗೆ ಹೆಚ್ಚಿನ ಪ್ರೇಕ್ಷಕರು ಆಗಮಿಸಿದ್ದಾರೆ. ಶೇ. 77. 50 ಆಕ್ಯುಪೆನ್ಸಿ ಸಿಕ್ಕರೆ, ಹುಬ್ಬಳ್ಳಿಯಲ್ಲಿ (27 ಶೋ) 58.50%, ಮಂಗಳೂರಿನಲ್ಲಿ (30 ಶೋ) 23.25%, ಕಲಬುರಗಿ (15 ಶೋ) 67.50%, ಬೆಳಗಾವಿ (12 ಶೋ) 38.25, ಮೈಸೂರಿನಲ್ಲಿ (58 ಶೋ) 89. 25%, ಶಿವಮೊಗ್ಗ (21 ಶೋ) 79.25%, ಕುಂದಾಪುರ (16 ಶೋ) 65.50%, ತುಮಕೂರಿನಲ್ಲಿ 89.25%, ಮಣಿಪಾಲದಲ್ಲಿ 34.75%, ರಾಯಚೂರಿನಲ್ಲಿ 98.25% ಹೈದರಾಬಾದ್‌ನಲ್ಲಿ 44.45%, ಮುಂಬೈನಲ್ಲಿ (15 ಶೋ) 13.75% ಆಕ್ಯುಪೆನ್ಸಿ ಹೊಂದಿದೆ. ಅಂದರೆ, ಅಷ್ಟೊಂದು ಪ್ರಮಾಣದ ಮಂದಿ ಸಿನಿಮಾ ವೀಕ್ಷಣೆ ಮಾಡಿದೆ.
ಯುಐ ಕಲೆಕ್ಷನ್ ಎಷ್ಟು?
ಕನ್ನಡದ ಜತೆಗೆ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಿರುವ ಯುಐ ಸಿನಿಮಾ ಮೊದಲ ದಿನ sacnilk ವೆಬ್‌ತಾಣದ ಮಾಹಿತಿ ಪ್ರಕಾರ 6.75 ಕೋಟಿ ಕಲೆಕ್ಷನ್ ಮಾಡಿದೆ. ಆದರೆ, ವಿತರಕರ ವಲಯದಲ್ಲಿ ಮೊದಲ ದಿನ ಎಲ್ಲ ಭಾಷೆಗಳನ್ನೂ ಒಟ್ಟುಗೂಡಿಸಿದರೆ, 15 ಕೋಟಿಗೂ ಅಧಿಕ ಕಲೆಕ್ಷನ್ ಆಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಚಿತ್ರದ ನಿರ್ಮಾಪಕರೇ ಅಧಿಕೃತ ಘೋಷಣೆ ಮಾಡಬೇಕಿದೆ.
ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಪ್ರೈಸಸ್ ಬ್ಯಾನರ್‌ನಲ್ಲಿ ಜಿ. ಮನೋಹರನ್ ಹಾಗೂ ಕೆ.ಪಿ. ಶ್ರೀಕಾಂತ್ ಯುಐ ಚಿತ್ರವನ್ನು ನಿರ್ಮಿಸಿದ್ದಾರೆ. ನವೀನ್ ಮನೋಹರ್ ಅವರ ಸಹ ನಿರ್ಮಾಣ ಹಾಗೂ ತುಳಸಿರಾಮ ನಾಯ್ಡು (ಲಹರಿ ವೇಲು), ಜಿ. ರಮೇಶ್, ಜಿ. ಆನಂದ್, ಚಂದ್ರು ಮನೋಹರನ್ ಹಾಗೂ ನಾಗೇಂದ್ರ ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಚಿತ್ರದಲ್ಲಿ ಉಪೇಂದ್ರಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.