ಯುಐ ಸಿನಿಮಾ ವಿಮರ್ಶೆ: ಉಪ್ಪಿ ಅಧ್ಯಾತ್ಮ
ಕನ್ನಡ ಸುದ್ದಿ  /  ಮನರಂಜನೆ  /  ಯುಐ ಸಿನಿಮಾ ವಿಮರ್ಶೆ: ಉಪ್ಪಿ ಅಧ್ಯಾತ್ಮ

ಯುಐ ಸಿನಿಮಾ ವಿಮರ್ಶೆ: ಉಪ್ಪಿ ಅಧ್ಯಾತ್ಮ

UI Movie Review: ಯುಐ ಸಿನಿಮಾದ ಮೂಲಕ ಪ್ರೇಕ್ಷಕರ ಮೆದುಳಿಗೆ ಮೇವು ನೀಡುವ ಕೆಲಸವನ್ನು ಉಪೇಂದ್ರ ಮಾಡಿದ್ದಾರೆ. ಈ ಸಿನಿಮಾ ಉಪೇಂದ್ರ ಅಭಿಮಾನಿಗಳಿಗೆ ಖಂಡಿತಾ ಖುಷಿ ನೀಡಬಹುದು. ಜಗತ್ತಿನಲ್ಲಿ ಬದಲಾವಣೆ ಬಯಸುವ ಆಲೋಚನೆ ಇರುವ ಮನಸ್ಸುಗಳಿಗೂ ತುಸು ಹಿತವಾಗಬಹುದು. ಆದರೆ, ಪಕ್ಕಾ ಮನರಂಜನೆ ಸಿನಿಮಾ ನೋಡಲು ಥಿಯೇಟರ್‌ಗೆ ಆಗಮಿಸುವವರಿಗೆ ತುಸು ತಲೆನೋವು ಬರಬಹುದು.

ಯುಐ ಸಿನಿಮಾ ವಿಮರ್ಶೆ: ಉಪ್ಪಿ ಅಧ್ಯಾತ್ಮ
ಯುಐ ಸಿನಿಮಾ ವಿಮರ್ಶೆ: ಉಪ್ಪಿ ಅಧ್ಯಾತ್ಮ

UI Movie Review: ಸಮಾಜದಲ್ಲಿ ಬದಲಾವಣೆ ತರುವ ಸಂದೇಶವನ್ನು ಸಿನಿಮಾ ಮಾಧ್ಯಮದ ಮೂಲಕ ಜನರಿಗೆ ತಲುಪಿಸುವ ಉಪೇಂದ್ರ ಪ್ರಯತ್ನ ನಿರಂತರ. ಉಪೇಂದ್ರ ಮಾತುಗಳು, ಆಲೋಚನೆಗಳು ಆಳವಾದ ಅರ್ಥ ಹೊಂದಿರುತ್ತವೆ. ಅವರ ಮಾತುಗಳು ಅರ್ಥವಾಗಬೇಕಾದರೆ "ಫೋಕಸ್‌" ಅಗತ್ಯ. ಯುಐ ಸಿನಿಮಾ ಕೂಡ "ಫೋಕಸ್‌" ಕಡೆಗೆ ಗಮನ ನೀಡಿದೆ. ಈ ಸಿನಿಮಾದ ನಿಜವಾದ ಹೀರೋ "ಮೆದುಳು" ಎಂದರೂ ತಪ್ಪಾಗದು. ಅದು ಉಪೇಂದ್ರ ಮೆದುಳೂ ಹೌದು. ಮೊಬೈಲ್‌ ರೀಲ್ಸ್‌ಗಳಲ್ಲಿ, ಸುದ್ದಿ ವಾಹಿನಿಗಳು ನೀಡುವ "ಮಹಾ ಕದನ ಸುದ್ದಿಗಳ" ಮೂಲಕ, ಸೆಲೆಬ್ರಿಟಿಗಳ ಸುದ್ದಿಗಳನ್ನು ಎಂಜಾಯ್‌ ಮಾಡುತ್ತ ಜನರು ಫೋಕಸ್‌ ಕಳೆದುಕೊಂಡಿದ್ದಾರೆ. ಇಂತಹ ಗದ್ದಲಗಳ ನಡುವೆ ಕಳೆದುಹೋಗಿರುವ ಜನರ "ಮೆದುಳಿಗೆ ಮೇವು" ನೀಡುವ ಪ್ರಯತ್ನವನ್ನು ಉಪೇಂದ್ರ ಯುಐ ಚಿತ್ರದಲ್ಲಿ ಮಾಡಿದ್ದಾರೆ. ಈ ಸಮಾಜಕ್ಕೆ ನಾನು ಏನು ಹೇಳಲು ಹೊರಟಿರುವೆ ಎಂಬ ಸಿನಿಮಾ ನಿರ್ದೇಶಕನ ದ್ವಂದ್ವವನ್ನು ಉಪೇಂದ್ರ ಇಲ್ಲಿ ವ್ಯಕ್ತಪಡಿಸಿದ್ದಾರೆ. ಎರಡು ಫೈಟಿಂಗ್‌, ಚಪ್ಪಾಳೆ ಗಿಟ್ಟಿಸುವಂತಹ ಡೈಲಾಗ್‌ಗಳು ಇರುವ, ಸಾಕಷ್ಟು ಮನರಂಜನೆ ಇರುವ ಸಿನಿಮಾ ಮಾಡಲೇ? ಈ ಸಮಾಜದಲ್ಲಿ ಎಲ್ಲರ ಕಣ್ಣೆದುರು ನಡೆಯುತ್ತಿರುವ ತಪ್ಪುಗಳ ಕುರಿತು ಜನರಲ್ಲಿ ಅರಿವು ಮೂಡಿಸಲೇ ಎಂಬ ಗೊಂದಲವನ್ನು ಯುಐ ಸಿನಿಮಾದೊಳಗಿನ ನಿರ್ದೇಶಕ ಉಪೇಂದ್ರ ವ್ಯಕ್ತಪಡಿಸುತ್ತಾರೆ. ಇದರೊಂದಿಗೆ ಈ ಚಿತ್ರದಲ್ಲಿ ಉಪೇಂದ್ರ ಕನಸಿನ "ಪ್ರಜಾಕೀಯ ಜಗತ್ತಿನ" ಪರಿಕಲ್ಪನೆಯೂ ಢಾಳಾಗಿ ಗೋಚರಿಸಿದೆ. ಸಿನಿಮಾ ಪೂರ್ಣ ಪ್ರಮಾಣದಲ್ಲಿ "ಉಪ್ಪಿ ಅಧ್ಯಾತ್ಮ" ಎಂದರೂ ತಪ್ಪಾಗದು.

ಯುಐ ಎಂದರೇನು?

ಈ ಸಿನಿಮಾದ ಶೀರ್ಷಿಕೆ “ಯುಐ” ಅರ್ಥವೇನು ಎಂಬ ಪ್ರಶ್ನೆ ನಿಮ್ಮಲ್ಲಿ ಇರಬಹುದು. ಯುಐ ಎಂದರೆ ಯೂನಿವರ್ಸಲ್‌ ಇಂಟಲಿಜೆನ್ಸ್‌. ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಕಾಲದಲ್ಲಿ ಉಪೇಂದ್ರ ಈ ಸಿನಿಮಾದ ಮೂಲಕ  ಸಾರ್ವತ್ರಿಕ ಪ್ರಜ್ಞೆ ಸಾರುವ ಪ್ರಯತ್ನ ಮಾಡಿದ್ದಾರೆ.

ಯುಐ ಸಿನಿಮಾದ ಕಥೆ

ಇದು ಗಟ್ಟಿ ಕಥೆ ಇರುವ ಸಿನಿಮಾವಲ್ಲ. ನಿಜ ಏನೆಂದರೆ, ಈ ಚಿತ್ರದಲ್ಲಿ ನಿರ್ದಿಷ್ಟ ಕಥೆಯನ್ನು ಹುಡುಕುವುದು ಕಷ್ಟ. ವಾಸ್ತವದ ಚಿತ್ರಣ ನೀಡುವ ದೃಶ್ಯಗಳ ಹೆಣಿಗೆ ಎಂದು ಹೇಳಬಹುದು. ಸದ್ಯದ ಜಗತ್ತನ್ನು ತೋರಿಸಲು ಕೆಲವೊಂದು ಉಪಮೆಯಗಳಂತೆ ಕಥೆಗಳ ತುಣುಕುಗಳನ್ನು ಬಳಸಲಾಗಿದೆ ಎನ್ನಬಹುದು. "ಈ ಸಮಾಜಕ್ಕೆ ನಾನು ಏನು ಹೇಳಬೇಕೋ ಅದನ್ನು ಹೇಳಬೇಕು" ಮತ್ತು "ಜನರಿಗೆ ಅದು ಸಿನಿಮಾದ ರೀತಿಯಾಗಿಯೂ ಕಾಣಿಸಬೇಕು" ಎಂಬ ಎರಡು ತತ್ತ್ವಗಳಡಿ ಉಪೇಂದ್ರ ಈ ಸಿನಿಮಾ ಮಾಡಿದಂತೆ ಇದೆ.

ಚಿತ್ರ ಆರಂಭವಾಗುವುದೇ ಯುಐ ಸಿನಿಮಾದೊಳಗಿನ "ಯುಐ ಸಿನಿಮಾ"ವನ್ನು ನೋಡಿ ಸಮಾಜದಲ್ಲಿ ಉಂಟಾಗುವ ಪ್ರಕ್ಷುಬ್ಧತೆಯಿಂದ, ಸಿನಿಮಾದೊಳಗಿನ ಸಿನಿಮಾ ಏನೆಂದು ನಮಗೆ ಗೊತ್ತಾಗುವುದಿಲ್ಲ. “ಹಾ ಹ್ಹಾಂ ಎ” ಸೌಂಡ್‌ ಮಾತ್ರ ಕೇಳಿಸುತ್ತದೆ. ಸಿನಿಮಾ ನೋಡಿ ಬಂದ ಜನರು ಸತ್ಯದ ಸಾಕ್ಷಾತ್ಕಾರವಾದಂತೆ ವರ್ತಿಸುತ್ತಾರೆ. ಉಪೇಂದ್ರನನ್ನು ಚಿತ್ರರಂಗದಿಂದ ಬ್ಯಾನ್‌ ಮಾಡಬೇಕೆಂದು ಪ್ರತಿಭಟನೆಗಳೂ ಚಿತ್ರದೊಳಗೆ ನಡೆಯುತ್ತವೆ. ಈ ಸಿನಿಮಾದ ವಿಮರ್ಶೆ ಬರೆಯಲು ಸಾಧ್ಯವಾಗದೆ ತಲೆಕೆಡಿಸಿಕೊಳ್ಳುವ ಸಿನಿಮಾದೊಳಗಿನ ಜನಪ್ರಿಯ ವಿಮರ್ಶಕ ಊಟಿಗೆ ನಿರ್ದೇಶಕನನ್ನು ಹುಡುಕಿ ಹೋಗುತ್ತಾನೆ. ಅಲ್ಲಿ ಆತನಿಗೆ ಉಪೇಂದ್ರ ಬರೆದು ಅರ್ಧ ಸುಟ್ಟು ಹಾಕಿದ ಕಥೆ ಸಿಗುತ್ತದೆ. ಆ ಕಥೆಯೇ ಯುಐ ಸಿನಿಮಾದ ನಿಜವಾದ ಕಥೆ. ಅಲ್ಲಿಂದ ನಿಜವಾದ ಯುಐ ಸಿನಿಮಾ ಆರಂಭವಾಗುತ್ತದೆ.

ಆಡಮ್‌ ಮತ್ತು ಈವ್‌ ಕಥೆ: ಈ ಸಿನಿಮಾದಲ್ಲಿ ಆಡಮ್‌ ಮತ್ತು ಈವ್‌ನ "ನಿಷೇಧಿತ ಆಪಲ್‌" ಕಥೆಯಿದೆ. ಇವರ ಕಥೆಯನ್ನು ತೆರೆಯ ಮೇಲೆ ಅತ್ಯಂತ ಸುಂದರವಾಗಿ ತರಲಾಗಿದೆ. ಒಂದು ಸುಂದರ ದೃಶ್ಯ ವೈಭವವಾಗಿ ಕಾಣಿಸುತ್ತದೆ. ಆಡಮ್‌ ಮತ್ತು ಈವ್‌ಗೆ ದೇವರು "ಈ ಜಗತ್ತಿನಲ್ಲಿ ಎಲ್ಲವನ್ನೂ ಅನುಭವಿಸಿ. ಆದರೆ, ಆ ಆಪಲ್‌ ಮಾತ್ರ ತಿನ್ನಬೇಡಿ" ಎಂದು ಹೇಳಿರುತ್ತಾರೆ. ಯಾವುದನ್ನು ಮಾಡಬೇಡಿ ಎಂದು ಹೇಳುತ್ತಾರೋ ಅದರ ಕುರಿತು ಜನರಿಗೆ ಕುತೂಹಲ ಜಾಸ್ತಿ. ಬೇರೆಲ್ಲ ಸುಖಗಳ ನಡುವೆ ಅವರ ಮನಸ್ಸು ಆಪಲ್‌ ಕಡೆಗೆ ಇರುತ್ತದೆ. ಆಸೆಯೇ ದುಃಖಕ್ಕೆ ಮೂಲ. ಈವ್‌ ಆಪಲ್‌ ತಿನ್ನುತ್ತಾಳೆ. ಪ್ರಕೃತಿ ಮುನಿದುಕೊಳ್ಳುತ್ತದೆ. ಪ್ರಕೃತಿಯ ಮುಂದೆ ನಮ್ಮ ಆಟ ನಡೆಯದು ಎಂದು ಸೂಚ್ಯವಾಗಿ ತಿಳಿಸುವ ಮೂಲಕ “ಸತ್ಯಯುಗ ಮತ್ತು ಕಲ್ಕಿ ಯುಗ”ದ ಕಥೆ ಆರಂಭವಾಗುತ್ತದೆ.

ಸತ್ಯ ಮತ್ತು ಕಲ್ಕಿ ಕಥೆ: ಯುಐ ಸಿನಿಮಾದಲ್ಲಿ ಉಪೇಂದ್ರ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಸತ್ಯಯುಗವನ್ನು ಪ್ರತಿನಿಧಿಸುವ ಸತ್ಯ ಮತ್ತು ಕೆಟ್ಟ ಜಗತ್ತನ್ನು ಪ್ರತಿಬಿಂಬಿಸುವ ಕಲ್ಕಿಯಾಗಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರು ಒಂದೇ ತಾಯಿಯ ಮಕ್ಕಳು. ಇದು ದ್ವಿಪಾತ್ರವೋ? ಇಬ್ಬರೂ ಒಬ್ಬರೇ ಆಗಿರಬಹುದೇ? ಎಂಬ ಗುಮಾನಿಯನ್ನೂ ಅಲ್ಲಲ್ಲಿ ಚಿತ್ರ ಮೂಡಿಸುತ್ತದೆ.

ತಾಯಿಯ ನೋವು: ಇಲ್ಲಿ ಪ್ರಕೃತಿಯ ಮೇಲೆ ಮನುಷ್ಯನು ಮಾಡುವ ಅನಾಚಾರ ಮತ್ತು ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯ ಒಂದೇ ಎಂಬಂತೆ ತೋರಿಸುವ ಪ್ರಯತ್ನ ಮಾಡಲಾಗಿದೆ. ಈ ಜಗತ್ತನ್ನು ಮನುಷ್ಯರು ತಮ್ಮ ದುರಾಸೆಯಿಂದ ಹಾಳು ಮಾಡಿದ್ದಾರೆ. ನಾನು ಪ್ರಕೃತಿಯನ್ನು (ಮತ್ತು ತನ್ನ ತಾಯಿಯನ್ನು) ಮೊದಲಿನ ಸ್ಥಿತಿಗೆ ತರುತ್ತೇನೆ. ಮನುಷ್ಯರಿಗಿಂತ ಪ್ರಾಣಿಗಳೇ ಮೇಲು ಎಂದು ಕಲ್ಕಿ ತನ್ನದೇ ರೀತಿಯಲ್ಲಿ ಜಗತ್ತನ್ನು ಆಳುತ್ತಾನೆ.

ರಾಜಕಾರಣ: ಈಗಿನ ರಾಜಕೀಯವು ಹೇಗಿದೆ ಎಂದು ಕತ್ರಿ ಸೀನಾ ಯಾನೆ ವಾಮನ ರಾವ್‌(ರವಿ ಶಂಕರ್‌) ಮೂಲಕ ತೋರಿಸಲಾಗಿದೆ. ಇವರ ಜತೆ ಒಂದಿಷ್ಟು ಕುಳ್ಳಗಿನ ಜನರು ಇರುತ್ತಾರೆ. ಜನರನ್ನು ತುಳಿದುತುಳಿದು ಜನರು ಹೀಗೆ ಆಗಿದ್ದಾರೆ ಎಂದು ಕುಳ್ಳಗಿನ ವ್ಯಕ್ತಿಗಳನ್ನು ಪ್ರತಿಮೆಯಂತೆ ತೋರಿಸಲಾಗಿದೆ.

ಇವಿಷ್ಟು ಉದಾಹರಣೆಯಷ್ಟೇ. ಯುಐ ಸಿನಿಮಾದಲ್ಲಿ ಇಂತಹ ಸಾಕಷ್ಟು ಕಥೆಗಳು (ಜಗತ್ತಿನ ವಾಸ್ತವಗಳು) ಇವೆ. ಮುಖ್ಯವಾಗಿ ಇದು ಸತ್ಯ ಮತ್ತು ಕಲ್ಕಿ ನಡುವಿನ, ಒಳ್ಳೆಯದು ಮತ್ತು ಕೆಟ್ಟದರ ನಡುವಿನ ಕಥೆ. ಸತ್ಯಯುಗದಲ್ಲಿ ಎಲ್ಲರೂ ಹಾಯಾಗಿದ್ದಾಗ ಅಲ್ಲಿಗೆ ಬಂದ ಕಲ್ಕಿ ಜನರ ಮನಸ್ಸಲ್ಲಿ "ಜಾತಿ ಧರ್ಮ" ಇತ್ಯಾದಿಗಳನ್ನು ಬಿತ್ತಿ ಸಮಾಜವನ್ನು ಒಡೆಯುತ್ತಾನೆ. ಈಗ ನಾವೆಲ್ಲರೂ ಬದುಕುತ್ತಿರುವ ಜಗತ್ತು ಹೇಗಿದೆ ಎಂಬ ವಾಸ್ತವವನ್ನು ಈ ಸಿನಿಮಾದಲ್ಲಿ ಉಪೇಂದ್ರ ತೋರಿಸಿದ್ದಾರೆ.

ಮೆದುಳಿನ ಕಥೆ

ಯುಐ ಸಿನಿಮಾದಲ್ಲಿ ಮೆದುಳು ಪ್ರಮುಖ ಹೈಲೈಟ್‌. ಕಲ್ಕಿಯ ನಿಗೂಢ ಕಾರಾಗೃಹವೂ ಮೆದುಳಿನ ಆಕಾರದಲ್ಲಿ ಇರುತ್ತದೆ. ಅದರಿಂದ ಹೊರಗೆ ಬರಲು ಫೋಕಸ್‌ ಆಗಿರಬೇಕು. ಸುತ್ತಮುತ್ತಲಿನ ಗದ್ದಲಗಳನ್ನು ಮರೆತು ಮೆದುಳು ಫೋಕಸ್‌ ಆಗಿದ್ದರೆ ಮಾತ್ರ ಈ ಬಂಧನದಿಂದ ಹೊರಬರಲು ಸಾಧ್ಯ ಎಂಬ ಉಪ್ಪಿ ಅಧ್ಯಾತ್ಮ ಈ ಸಿನಿಮಾದಲ್ಲಿದೆ. ಸಾಕಷ್ಟು ವಿಚಾರಗಳನ್ನು ಡೈಲಾಗ್‌ಗಳು ಮತ್ತು ಹಿನ್ನೆಲೆ ಧ್ವನಿ ಮೂಲಕ ಚಿತ್ರದಲ್ಲಿ ತಿಳಿಸಲಾಗಿದೆ. ಹೀಗಾಗಿ, ಈ ಸಿನಿಮಾವನ್ನು ಕಣ್ತೆರೆದು ನೋಡಿದರ ಸಾಲದು. ಕಿವಿತೆರೆದು ಫೋಕಸ್‌ ಆಗಿ ಕೇಳಬೇಕು. ಈ ಸಿನಿಮಾ ಬುದ್ದಿವಂತರಿಗೆ ಅಲ್ಲ, ದಡ್ಡರಿಗೆ ಮಾತ್ರ ಬುದ್ದಿವಂತರಾದರೆ ಥಿಯೇಟರ್‌ನಿಂದ ಹೊರಹೋಗಿ ಎಂದು ಚಿತ್ರದ ಆರಂಭದಲ್ಲಿಯೇ ತೋರಿಸಲಾಗುತ್ತದೆ. ಅಲ್ಲಲ್ಲಿ ಉಪೇಂದ್ರರ ಡೈಲಾಗ್‌ಗಳು ಖುಷಿ ಕೊಡುತ್ತವೆ. "ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಮಾತ್ರ ಪವರ್‌" "ಕಾಮದಿಂದ ಮಗುವನ್ನು ಹುಟ್ಟಿಸಿ ಆ ಮಗುವಿಗೆ ಕಾಮ ತಪ್ಪು ಎಂದು ಪಾಠ ಮಾಡ್ತಿರಿ" ಸೇರಿದಂತೆ ಹಲವು ಡೈಲಾಗ್‌ಗಳು ಸಿಳ್ಳೆಗಿಟ್ಟಿಸಿಕೊಳ್ಳುತ್ತವೆ.

ಯುಐ ಸಿನಿಮಾ ಹೇಗಿದೆ?

ಮೇಲೆ ತಿಳಿಸಿದಂತಹ (ತಿಳಿಸದೆ ಇರುವ ಸಾಕಷ್ಟು ಅಂಶಗಳು ಸೇರಿದಂತೆ) ಅಂಶಗಳು ಇರುವ ಸಿನಿಮಾವನ್ನು ಉಪೇಂದ್ರ ತನ್ನದೇ ಸ್ಟೈಲ್‌ನಲ್ಲಿ ಯುಐನಲ್ಲಿ ನೀಡಿದ್ದಾರೆ. ಚಿತ್ರ ಒಂದಿಷ್ಟು ಅದ್ಧೂರಿತನದಿಂದ ಮೂಡಿ ಬಂದಿದೆ. ಅತ್ಯುತ್ತಮ ತಂತ್ರಜ್ಞಾನಗಳನ್ನು ಬಳಸಿರುವುದರಿಂದ ಕೆಲವು ದೃಶ್ಯಗಳು ಕಣ್ಣಿಗೆ ರೋಲರ್‌ ಕೋಸ್ಟರ್‌ ಅನುಭವ ನೀಡಬಹುದು. ಕ್ಯಾಮೆರಾ ಚಲನೆಗಳೂ ಮಿದುಳಿನ ನರಗಳ ಆಳಕ್ಕೆ ನುಗ್ಗುವಂತೆ ಸಾಗುತ್ತವೆ. ಅದಕ್ಕೆ ತಕ್ಕಂತೆ ಇಬ್ಬರು ಮ್ಯೂಸಿಕ್‌ ಡೈರೆಕ್ಟರ್‌ಗಳು ಸ್ಪರ್ಧೆಗೆ ಬಿದ್ದವರಂತೆ "ಯುಐ ಯೂಐ ಯೂ ಹೈ, ಊ ಹ್ಹಾ ಊ ಹ್ಹಾ" "ಓಹ್‌ಹ್‌ಮಮ್‌.... ಓಮ್‌....ಓಂ..." ಎಂಬ ಹಿನ್ನೆಲೆ ಧ್ವನಿ ನೀಡಿದ್ದಾರೆ. ಇವೆಲ್ಲವೂ ಉಪ್ಪಿ ಅಧ್ಯಾತ್ಮಕ್ಕೆ ಮೆಡಿಟೇಷನ್‌ ಮ್ಯೂಸಿಕ್‌ನಂತೆ ಪ್ರೇಕ್ಷಕರಿಗೆ ಭಾಸವಾಗಬಹುದು. ಇಂತಹ ಮ್ಯೂಸಿಕ್‌, ದೃಶ್ಯಗಳ ಮೂಲಕ ಪ್ರೇಕ್ಷಕರ ಮುದುಳಿಗೆ ಎಕ್ಸರ್‌ಸೈಸ್‌ ನೀಡುವ ಪ್ರಯತ್ನವನ್ನೂ ಮಾಡಲಾಗಿದೆ.

ಎಲ್ಲರೂ ಮಾಡುವುದನ್ನು ಉಪೇಂದ್ರ ಮಾಡುವುದಿಲ್ಲ. ಉಪೇಂದ್ರ ಮಾಡುವ ಸಿನಿಮಾಗಳು ಡಿಫರೆಂಟ್‌ ಎನ್ನುವುದು ಉಪ್ಪಿ ಅಭಿಮಾನಿಗಳ ಅಭಿಪ್ರಾಯ. ಉಪ್ಪಿ ಅಭಿಮಾನಿಗಳಿಗೆ ಬೇಸರ ತರಿಸದಂತೆ ಯುಐ ಸಿನಿಮಾವಿದೆ. ಚಿತ್ರದ ಪೂರ್ತಿ ಉಪೇಂದ್ರ ಮತ್ತು ಉಪೇಂದ್ರ ಮಾತ್ರ ಇದ್ದಾರೆ. ರವಿಶಂಕರ್‌, ಸಾಧುಕೋಕಿಲಾರಿಗೆ ಸ್ವಲ್ಪ ಸ್ಕ್ರೀನ್‌ ಸ್ಪೇಸ್‌ ದೊರಕಿದೆ. ದಿವಂಗತ ನಟ, ನಿರ್ದೇಶಕ ಗುರು ಪ್ರಸಾದ್‌ ಸೇರಿದಂತೆ ಇತರೆ ಪ್ರಮುಖ ಕಲಾವಿದರ ನಟನೆ ಗಮನ ಸೆಳೆಯುತ್ತದೆ. ನಾಯಕಿ ರೀಷ್ಮಾ ನಾಣಯ್ಯಗೆ ಈ ಸಿನಿಮಾದಲ್ಲಿ ಒನ್‌ವೇ ಲವ್‌ ಸ್ಟೋರಿ. ನಾಯಕನಿಗೆ ಅಗತ್ಯವಿಲ್ಲದೆ ಇದ್ದರೂ ಸಿನಿಮಾದ ಅಗತ್ಯಕ್ಕಾಗಿ ನಾಯಕಿ ಪಾತ್ರವಿದೆ. ರೀಷ್ಮಾ ತೆರೆಮೇಲೆ ಇರುವಷ್ಟು ಕಾಲ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

ಈ ಸಿನಿಮಾದ ಮೂಲಕ ಮತ್ತೆ ಉಪೇಂದ್ರ ಪ್ರೇಕ್ಷಕರ ಮೆದುಳಿಗೆ ಕೈ ಹಾಕಿದ್ದಾರೆ. 2ಡಿ ಸಿನಿಮಾವಾದರೂ 3ಡಿ ಸಿನಿಮಾದಂತೆ ಯುಐನ ಕೆಲವು ದೃಶ್ಯಗಳು ಮೂಡಿ ಬಂದಿವೆ. ಈ ಸಿನಿಮಾ ಉಪೇಂದ್ರ ಅಭಿಮಾನಿಗಳಿಗೆ ಖಂಡಿತಾ ಖುಷಿ ನೀಡಬಹುದು. ಜಗತ್ತಿನಲ್ಲಿ ಬದಲಾವಣೆ ಬಯಸುವ ಆಲೋಚನೆ ಇರುವ ಮನಸ್ಸುಗಳಿಗೂ ಹಿತವಾಗಬಹುದು. ಆದರೆ, ಪಕ್ಕಾ ಮನರಂಜನೆ ಸಿನಿಮಾ ನೋಡಲು ಥಿಯೇಟರ್‌ಗೆ ಆಗಮಿಸುವವರಿಗೆ ತುಸು ತಲೆನೋವು ಬರಬಹುದು.

ಸಿನಿಮಾ: ಯುಐ

ಜಾನರ್: ಫಿಕ್ಷನ್‌

ಚಿತ್ರಕಥೆ, ನಿರ್ದೇಶನ: ಉಪೇಂದ್ರ

ನಿರ್ಮಾಣ: ಲಹರಿ ಫಿಲ್ಮ್ಸ್‌ ಮತ್ತು ವೆನ್ಯೂಸ್‌ ಎಂಟರ್‌ಟೈನರ್ಸ್‌

ಸಂಗೀತ: ಅಜನೀಶ್‌ ಲೋಕನಾಥ್‌

ಸಿನಿಮಾಟೋಗ್ರಾಫಿ: ಎಚ್‌ಸಿ ವೇಣುಗೋಪಾಲ್‌

ತಾರಾಗಣ: ‌ ರಿಯಲ್‌ ಸ್ಟಾರ್‌ ಉಪೇಂದ್ರ, ರೀಷ್ಮಾ ನಾಣಯ್ಯ, ಮುರಳಿ ಶರ್ಮಾ, ಸನ್ನಿ ಲಿಯೋನ್, ಜಿಶ್ಶು ಸೆಂಗುಪ್ತ, ನಿಧಿ ಸುಬ್ಬಯ್ಯ, ಸಾಧು ಕೋಕಿಲಾ, ಮುರಳಿ ಕೃಷ್ಣ, ಇಂದ್ರಜಿತ್ ಲಂಕೇಶ್

ಎಚ್‌ಟಿ ಕನ್ನಡ ರೇಟಿಂಗ್‌: 3/5

ಸಿನಿಮಾ ವಿಮರ್ಶೆ: ಪ್ರವೀಣ್‌ ಚಂದ್ರ ಪುತ್ತೂರು

Whats_app_banner