ಬ್ಲಾಕ್ ಅಸ್ತ್ರ ಕೈಗೆತ್ತಿಕೊಂಡ ನವರಸ ನಾಯಕ ಜಗ್ಗೇಶ್, ದಿವಂಗತ ಗುರುಪ್ರಸಾದ್ ಸಾವಿನ ಟೀಕೆಗೆ ಅಂಜಿದ್ರ ಮಾತಿನ ಮಲ್ಲ
Nov 07, 2024 04:51 PM IST
ನಿರ್ದೇಶಕ ದಿವಂಗತ ಗುರುಪ್ರಸಾದ್ ಮತ್ತು ರಂಗನಾಯಕ ಸಿನಿಮಾದ ಪೋಸ್ಟರ್ (ಸಾಂದರ್ಭಿಕ ಚಿತ್ರ)
- ಮಠ, ಎದ್ದೇಳು ಮಂಜುನಾಥ, ರಂಗನಾಯಕ ಸಿನಿಮಾಗಳಲ್ಲಿ ಜಗ್ಗೇಶ್‌ಗೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಗುರುಪ್ರಸಾದ್ ಇತ್ತೀಚೆಗೆ ಸ್ವಹತ್ಯೆ ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಜಗ್ಗೇಶ್ ನೀಡಿರುವ ಹೇಳಿಕೆಗಳು ಟೀಕೆಗೆ ಒಳಗಾಗಿತ್ತು. ಇದೀಗ ತನ್ನನ್ನು ಟೀಕಿಸುವವರನ್ನು ಬ್ಲಾಕ್ ಮಾಡಲು ಆರಂಭಿಸಿದ್ದಾರೆ ಜಗ್ಗೇಶ್.
ಕನ್ನಡ ಚಿತ್ರರಂಗದಲ್ಲಿ ನವರಸ ನಾಯಕನೆಂದೇ ಖ್ಯಾತಿ ಪಡೆದಿರುವ ಜಗ್ಗೇಶ್ ಕಳೆದ ಕೆಲವು ದಿನಗಳಿಂದ ಚರ್ಚೆಯ ವಿಷಯವಾಗಿದ್ದಾರೆ. ನಿರ್ದೇಶಕ ಗುರುಪ್ರಸಾದ್ ಸ್ವಹತ್ಯೆ ಮಾಡಿಕೊಂಡ ಬಳಿಕ ಇವರು ನೀಡಿರುವ ಹೇಳಿಕೆಗಳೇ ಟೀಕೆಗಳಿಗೆ ಕಾರಣವಾಗಿದೆ. "ಮೃತಪಟ್ಟ ವ್ಯಕ್ತಿಯೊಬ್ಬರ ಬಗ್ಗೆ ಕೆಟ್ಟದ್ದಾಗಿ ಮಾತನಾಡುವುದು ಸರಿಯೇ?" ಎನ್ನುವುದು ಬಹುತೇಕರ ತಗಾದೆ. ಸೋಷಿಯಲ್ ಮೀಡಿಯಾ ಉತ್ತುಂಗದಲ್ಲಿರುವ ಈ ಕಾಲದಲ್ಲಿ ಆನ್‌ಲೈನ್ ನಿಂದನೆ, ಆನ್‌ಲೈನ್ ಅವಮಾನಗಳೂ ಕಡಿಮೆ ಇಲ್ಲ. ದಿವಂಗತ ಗುರುಪ್ರಸಾದ್ ವಿಷಯದಲ್ಲಿ ಜಗ್ಗೇಶ್‌ಗೆ ತುಸು ಹೆಚ್ಚೇ ಪ್ರತಿಕ್ರಿಯೆಗಳು ಬರುತ್ತಿವೆ. ಇಂತಹ ಸಮಯದಲ್ಲಿ ಮಾತಿನ ಮಲ್ಲ ಸಿನಿಮಾದಲ್ಲಿ ನಾಯಕ ಜಗ್ಗೇಶ್ ತನ್ನ ಬಗ್ಗೆ ಟೀಕಿಸಿದವರನ್ನು, ಟೀಕಿಸಿದವರ ಕುರಿತು ಸುದ್ದಿ ಪ್ರಕಟಿಸಿದ ಮಾಧ್ಯಮಗಳು, ಸೋಷಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್‌ಗಳ ಟ್ವಿಟ್ಟರ್ ಖಾತೆಗಳಿಗೆ ಬ್ಲಾಕ್ ಭಾಗ್ಯ ನೀಡುತ್ತಿದ್ದಾರೆ. ಮಾತಿನ ಮಲ್ಲ ಸೇರಿದಂತೆ ಕನ್ನಡ ಚಿತ್ರರಂಗಕ್ಕೆ ಹತ್ತು ಹಲವು ಸಿನಿಮಾಗಳನ್ನು ನೀಡಿರುವ ಜಗ್ಗೇಶ್ ಈ ಬಾರಿ ದಿವಂತ ಗುರುಪ್ರಸಾದ್ ಸಾವಿನ ಕುರಿತು ತಾನು ನೀಡಿರುವ ಹೇಳಿಕೆಗಳಿಗೆ ಬರುತ್ತಿರುವ ಸೋಷಿಯಲ್‌ಮೀಡಿಯಾ ಟೀಕೆಗಳಿಗೆ ಅಂಜಿದ್ರ ಎಂಬ ಪ್ರಶ್ನೆಯೂ ಈ ಸಂದರ್ಭದಲ್ಲಿ ಎದ್ದಿದೆ.
ಬ್ಲಾಕ್ ಅಸ್ತ್ರ ಕೈಗೆತ್ತಿಕೊಂಡ ನವರಸ ನಾಯಕ ಜಗ್ಗೇಶ್
ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಜನರು ಬಹಿರಂಗವಾಗಿಯೇ "ನಾನು ಕಾಮೆಂಟ್ ಮಾಡಿದ ಬಳಿಕ ಜಗ್ಗೇಶ್ ನನ್ನನ್ನು ಬ್ಲಾಕ್ ಮಾಡಿದ್ರು" ಎಂದು ಪೋಸ್ಟ್ ಹಾಕುತ್ತಿದ್ದಾರೆ. ವಿವಿಧ ಮಾಧ್ಯಮ ಸಂಸ್ಥೆಗಳ ಟ್ವಿಟ್ಟರ್ ಖಾತೆಗಳ ಮೇಲೂ ಜಗ್ಗೇಶ್ ಬ್ಲಾಕ್ ಅಸ್ತ್ರ ಪ್ರಯೋಗಿಸಿದ್ದಾರೆ. ಇದೇ ಕಾರಣಕ್ಕೆ ವಿವಿಧ ಜನರು ಜಗ್ಗೇಶ್‌ಗೆ ಬುದ್ದಿ ಹೇಳುತ್ತಿದ್ದಾರೆ. "ಇಂತಹ ಸಮಯದಲ್ಲಿ ನೀವು ಆ ರೀತಿ ಹೇಳಿಕೆ ನೀಡಬಾರದಿತ್ತು. ಅದಕ್ಕೆ ತಕ್ಕಂತೆ ಈ ರೀತಿ ಬ್ಲಾಕ್ ಮಾಡುವ ಗೋಜಿಗೆ ಹೋಗಬಾರದಿತ್ತು" ಎಂದೆಲ್ಲ ಬುದ್ದಿ ಹೇಳುತ್ತಿದ್ದಾರೆ.
ಉದಾಹರಣೆಗೆ ರಾಘು ಎಂಬವರು ಟ್ವಿಟ್ಟರ್‌ನಲ್ಲಿ ಜಗ್ಗೇಶ್ ಪೋಸ್ಟ್‌ಗೆ ನೀಡಿದ ಪ್ರತಿಕ್ರಿಯೆಯನ್ನೇ ಗಮನಿಸಿ. "ಸರ್ ನಿಮ್ಮ ಚಲನಚಿತ್ರಗಳನ್ನ ನೋಡಿ ನಕ್ಕು ಬೆಳೆದವರು ನಾವು! ನಾನು ಸಹ ನಿಮ್ಮ ಹಾಸ್ಯದ ಟೈಮಿಂಗಿನ ಅಭಿಮಾನಿ! ನಿಮ್ಮ ಹೇಳಿಕೆಗಳು ನಿಜವಿರಬಹುದು, ಆದರೆ ಈ ಬಾರಿ ಟೈಮಿಂಗ್ ಸರಿಯಿಲ್ಲ! ಬಹಳಷ್ಟು ಜನ ನಿಮ್ಮ ಬಗ್ಗೆ ವ್ಯಂಗ್ಯ ಮಾಡ್ತಾ ಇರೋರು ಟೀಕಿಸುತ್ತಿರುವವರು ಸಹ ಚಿಕ್ಕ ಹುಡುಗರೇ! ಚಿಕ್ಕ ಹುಡುಗರ ಮಾತಿಗೆ ಬೇಸರಗೊಂಡು, ಬ್ಲಾಕ್ ಮಾಡುವುದನ್ನು ನಿಲ್ಲಿಸಿ! Take a break! Find some peace! ರಾಯರು ಎಲ್ಲರಿಗೂ ಒಳ್ಳೇದ್ ಮಾಡ್ಲಿ" ಎಂದು ರಾಘು ಪ್ರತಿಕ್ರಿಯೆ ನೀಡಿದ್ದಾರೆ.
"ಆನೆ ನಡೆಯೋವಾಗ ಶ್ವಾನಗಳು ಉಸಿರು ಹೋಗುವಂತೆ ಅರಚುತ್ತದೆ, ನಿನ್ನ ಕೆಲಸ ನೀನು ಗಾಂಭೀರ್ಯದಿಂದ ಮಾಡುತ್ತಿರು.ಶ್ವಾನವು ಅವುಗಳ ಕೆಲಸ ಮಾಡದೆ ಬೇರೆ ವಿಧಿಯಿಲ್ಲಾ ಬೊಗಳುತ್ತದೆ" ಎಂಬ ಪೋಸ್ಟ್ ಹಾಕಿರುವ ಜಗ್ಗೇಶ್ ಅವರು ಗಾಂಭೀರ್ಯದಿಂದ ನಡೆಯುವ ಬದಲು ಬ್ಲಾಕ್ ಅಸ್ತ್ರದ ತೆಗೆದುಕೊಂಡು ಟೀಕಿಸಿದರನ್ನೆಲ್ಲ ಬ್ಲಾಕ್‌ಮಾಡುತ್ತ ಸಾಗುತ್ತಿರುವುದು ಅಚ್ಚರಿ ತಂದಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಅಭಿಪ್ರಾಯಪಟ್ಟಿದ್ದಾರೆ. "ಯಾವುದಾದ್ರೂ ಆನೆಯ ಸಾವು ಸಂಭವಿಸಿದಲ್ಲಿ ಉಳಿದ ಆನೆಗಳೆಲ್ಲ ಸೇರಿ ಮರುಕ ಪಡುತ್ತವೆ. ಅದು ಬಿಟ್ಟು ಆ ಆನೆ ಬದುಕ್ಕಿದ್ದಾಗ ಹಾಗೆ ಮಾಡಿತು, ಹೀಗೆ ಮಾಡಿತು ಅಂತ ಹೇಳುವ ಕೀಳು ಮಟ್ಟಕ್ಕೆ ಇಳಿಯುವುದಿಲ್ಲ" ಎಂದೆಲ್ಲ ತಮ್ಮ ಕಾಮೆಂಟ್‌ಗಳ ಮೂಲಕ ತಿವಿಯುವುದನ್ನು ಮುಂದುವರೆಸಿದ್ದಾರೆ.
ಏನಿದು ವಿವಾದ?
ಗುರುಪ್ರಸಾದ್ ಸ್ವಹತ್ಯೆ ಮಾಡಿಕೊಂಡ ಬಳಿಕ ಜಗ್ಗೇಶ್ ನೀಡಿರುವ ಹೇಳಿಕೆಗಳು ಟೀಕೆಗೆ ಒಳಗಾಗಿವೆ. "ಗುರುಪ್ರಸಾದ್‌ಗೆ ಸೋರಿಯಾಸಿಸ್ ಇತ್ತು. ಆತ ನಾವು ಊಟ ಮಾಡುವಾಗ ಹೇಳದೆ ಕೇಳದೆ ನಮ್ಮ ತಟ್ಟೆಯಲ್ಲಿ ಕೈ ಹಾಕುತ್ತಿದ್ದ. ನಮಗೆ ಭಯವಾಗುತ್ತಿತ್ತು. ಮೊದಲೆಲ್ಲಾ ಅವನ ಮನೆಯಲ್ಲಿ ಪುಸ್ತಕಗಳಿರುತ್ತಿದ್ದವು ನಂತರ ಆ ಜಾಗದಲ್ಲಿ ಮದ್ಯದ ಬಾಟಲಿಗಳು ಬಂದವು. ಶೂಟಿಂಗ್‌ಗೆ ಮಧ್ಯಾಹ್ನ 2 ಗಂಟೆಗೆ ಬಂದ್ರೆ, ಅವನು 4 ಗಂಟೆಗೆ ಬರುತ್ತಿದ್ದ. ಕತ್ತಲು ಆಗ್ತಿದ್ದಂತೆ, ಏನು ಶೂಟ್ ಮಾಡೋದು ಅಂತ ಅವನಿಗೇ ತಿಳಿಯುತ್ತಿರಲಿಲ್ಲ" ಎಂದೆಲ್ಲ ದಿವಂಗತ ಗುರುಪ್ರಸಾದ್ ಬಗ್ಗೆ ಜಗ್ಗೇಶ್ ಹೇಳಿಕೆ ನೀಡಿದ್ದರು. ಈ ಹೇಳಿಕೆಗಳನ್ನು ಸಾಕಷ್ಟು ಜನರು ವಿರೋಧಿಸಿದ್ದರು. ಜಗ್ಗೇಶ್ ಖ್ಯಾತಿಗೆ ಎದ್ದೇಳು ಮಂಜುನಾಥ, ಮಠದಂತಹ ಸಿನಿಮಾಗಳನ್ನು ಮಾಡಿರುವ ಗುರುಪ್ರಸಾದ್ ಕೊಡುಗೆ ಸಾಕಷ್ಟಿದೆ. ಈ ರೀತಿ ಟೀಕಿಸಬಾರದಿತ್ತು ಎಂದೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಜನರು ಬುದ್ದಿವಾದ ಹೇಳುತ್ತಿದ್ದರು. ಜತೆಗೆ, ಜಗ್ಗೇಶ್‌ರನ್ನು ಟ್ರೋಲ್ ಮಾಡುತ್ತಿದ್ದರು. "ರಾಘವೇಂದ್ರ ಸ್ವಾಮಿಗಳ ಭಕ್ತನಾಗಿ, ನಿನಗೆ ಲೈಫ್ ಕೊಟ್ಟ ನಿರ್ದೇಶಕನ ಬಗ್ಗೆ ಈ ರೀತಿ ಮಾತನಾಡಲು ಹೇಗೆ ಮನಸ್ಸು ಬಂತು?" ಎಂದು ಬಿಗ್‌ಬಾಸ್ ಸ್ಪರ್ಧಿ ಲಾಯರ್ ಜಗದೀಶ್ ಕೂಡ ಹೇಳಿದ್ದರು.