ನಿರ್ದೇಶಕ ಗುರುಪ್ರಸಾದ್‌ ಬಗ್ಗೆ ಮಾತನಾಡಿದ್ದಕ್ಕೆ ಜಗ್ಗೇಶ್‌ ಟ್ರೋಲ್‌; ಶ್ವಾನಗಳು ಬೊಗಳುತ್ತವೆ, ಆನೆಯಾಗಲು ಯೋಗ ಬೇಕು ಎಂದ ನವರಸ ನಾಯಕ
ಕನ್ನಡ ಸುದ್ದಿ  /  ಮನರಂಜನೆ  /  ನಿರ್ದೇಶಕ ಗುರುಪ್ರಸಾದ್‌ ಬಗ್ಗೆ ಮಾತನಾಡಿದ್ದಕ್ಕೆ ಜಗ್ಗೇಶ್‌ ಟ್ರೋಲ್‌; ಶ್ವಾನಗಳು ಬೊಗಳುತ್ತವೆ, ಆನೆಯಾಗಲು ಯೋಗ ಬೇಕು ಎಂದ ನವರಸ ನಾಯಕ

ನಿರ್ದೇಶಕ ಗುರುಪ್ರಸಾದ್‌ ಬಗ್ಗೆ ಮಾತನಾಡಿದ್ದಕ್ಕೆ ಜಗ್ಗೇಶ್‌ ಟ್ರೋಲ್‌; ಶ್ವಾನಗಳು ಬೊಗಳುತ್ತವೆ, ಆನೆಯಾಗಲು ಯೋಗ ಬೇಕು ಎಂದ ನವರಸ ನಾಯಕ

ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ ಮಾಡಿಕೊಂಡಾಗ ನಟ ಜಗ್ಗೇಶ್‌ ಅವರ ವಿರುದ್ಧ ಮಾತನಾಡಿದ್ದರು. ಈ ವಿಚಾರಕ್ಕೆ ಜಗ್ಗೇಶ್‌ ಟ್ರೋಲ್‌ ಆಗಿದ್ದರು. ಈಗ ಜಗ್ಗೇಶ್‌, ತಮ್ಮನ್ನು ಟ್ರೋಲ್‌ ಮಾಡಿದವರಿಗೆ ಪ್ರತಿಕ್ರಿಯಿಸಿ ಆನೆಯನ್ನು ನೋಡಿ ನಾಯಿಗಳು ಬೊಗಳುತ್ತವೆ, ಆದರೆ ಆನೆ ಆಗಲು ಯೋಗ ಬೇಕು ಎಂದಿದ್ದಾರೆ.

ನಿರ್ದೇಶಕ ಗುರುಪ್ರಸಾದ್‌ ಬಗ್ಗೆ ಮಾತನಾಡಿದಕ್ಕೆ ಟ್ರೋಲ್‌ ಮಾಡಿದವರಿಗೆ ಪ್ರತಿಕಿಯಿಸಿದ ನಟ ಜಗ್ಗೇಶ್
ನಿರ್ದೇಶಕ ಗುರುಪ್ರಸಾದ್‌ ಬಗ್ಗೆ ಮಾತನಾಡಿದಕ್ಕೆ ಟ್ರೋಲ್‌ ಮಾಡಿದವರಿಗೆ ಪ್ರತಿಕಿಯಿಸಿದ ನಟ ಜಗ್ಗೇಶ್ (PC: @Jaggesh2)

ಸ್ಯಾಂಡಲ್‌ವುಡ್‌ ನಿರ್ದೇಶಕ , ಮಠ ಸಿನಿಮಾ ಖ್ಯಾತಿಯ ಗುರುಪ್ರಸಾದ್‌ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಗುರುಪ್ರಸಾದ್‌ ಸಾವಿಗೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ಪ್ರತಿಭಾವಂತ ನಿರ್ದೇಶಕರೊಬ್ಬರನ್ನು ಕಳೆದುಕೊಂಡು ಆಘಾತ ವ್ಯಕ್ತಪಡಿಸಿದೆ. ಅಂಥ ನಿರ್ದೇಶಕ ಈ ರೀತಿ ದುರಂತ ಅಂತ್ಯ ಕಂಡಿದ್ದಕ್ಕೆ ಎಲ್ಲರೂ ಬೇಸರ ವ್ಯಕ್ತಪಡಿಸಿದ್ದಾರೆ.

ಗುರುಪ್ರಸಾದ್‌ ಬಗ್ಗೆ ನೆಗೆಟಿವ್‌ ಮಾತುಗಳನ್ನಾಡಿದ್ದ ಜಗ್ಗೇಶ್

ಗುರುಪ್ರಸಾದ್‌ ನಿಧನರಾದ ನಂತರ ನಟ ಜಗ್ಗೇಶ್‌ ಅವರ ಬಗ್ಗೆ ನೆಗೆಟಿವ್‌ ಮಾತುಗಳನ್ನಾಡಿದ್ದರು. ಗುರುಪ್ರಸಾದ್‌ಗೆ ಸೋರಿಯಾಸಿಸ್‌ ಇತ್ತು. ಆತ ನಾವು ಊಟ ಮಾಡುವಾಗ ಹೇಳದೆ ಕೇಳದೆ ನಮ್ಮ ತಟ್ಟೆಯಲ್ಲಿ ಕೈ ಹಾಕುತ್ತಿದ್ದ ಎಂದು ಜಗ್ಗೇಶ್‌ ಹೇಳಿದ್ದರು. ಮೊದಲೆಲ್ಲಾ ಅವನ ಮನೆಯಲ್ಲಿ ಪುಸ್ತಕಗಳಿರುತ್ತಿದ್ದವು ನಂತರ ಆ ಜಾಗದಲ್ಲಿ ಮದ್ಯದ ಬಾಟಲಿಗಳು ಬಂದವು. ಹೆಸರು ಹೇಳಿದರೆ ಕಾಂಟ್ರವರ್ಸಿ ಆಗುತ್ತದೆ ಅಂಥವರ ಜೊತೆ ಸೇರಿ ಗುರುಪ್ರಸಾದ್‌ ಹಾಳಾದ. ನಾನು ಚಿತ್ರೀಕರಣಕ್ಕೆ ಮಧ್ಯಾಹ್ನ 2 ಗಂಟೆಗೆ ಬಂದ್ರೆ, ಅವನು 4 ಗಂಟೆಗೆ ಬರುತ್ತಿದ್ದ. ಕತ್ತಲು ಆಗ್ತಿದ್ದಂತೆ, ಏನು ಶೂಟ್‌ ಮಾಡೋದು ಅಂತ ಅವನಿಗೇ ತಿಳಿಯುತ್ತಿರಲಿಲ್ಲ. ಕುಡಿತಕ್ಕೆ ದಾಸನಾಗಿದ್ದ ರಂಗನಾಯಕದಂಥ ಕೆಟ್ಟ ಸಿನಿಮಾ ಮಾಡಿ ಜನರು ನನ್ನನ್ನು ಬೈಯ್ಯುವಂತ ಮಾಡಿ ಹೋದ ಎಂದು ಹೇಳಿದ್ದರು.‌

ಸತ್ತ ವ್ಯಕ್ತಿಯ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ ಎಂದಿದ್ದ ಜನರು

ಜಗ್ಗೇಶ್‌ ಮಾತಿಗೆ ಹಲವರು ಬೇಸರ ವ್ಯಕ್ತಪಡಿಸಿದ್ದರು. ಏನೇ ವಿಚಾರ ಇರಲಿ ಸತ್ತ ವ್ಯಕ್ತಿಗಳ ಬಗ್ಗೆ ನಕರಾತ್ಮಕವಾಗಿ ಮಾತನಾಡಬಾರದು. ಕೇಳಿಸಿಕೊಳ್ಳಲು ಆ ವ್ಯಕ್ತಿಯೇ ಇಲ್ಲವೆಂದ ಮೇಲೆ ನೀವು ಮಾತನಾಡಿ ಏನು ಪ್ರಯೋಜನ ಎಂದು ಕೆಲವರು ಬುದ್ದಿ ಹೇಳಿದರೆ ಇನ್ನೂ ಕೆಲವರು ಜಗ್ಗೇಶ್‌ ಅವರನ್ನು ಟ್ರೋಲ್‌ ಮಾಡಿದ್ದರು. ಮಾಜಿ ಬಿಗ್‌ಬಾಸ್‌ ಸ್ಪರ್ಧಿ ಲಾಯರ್‌ ಜಗದೀಶ್‌ ಕೂಡಾ ಜಗ್ಗೇಶ್‌ ಬಗ್ಗೆ ಬೇಸರ ವ್ಯಕ್ತಪಡಿಸಿ ಏಕ ವಚನದಲ್ಲೇ ಜಗ್ಗೇಶ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ರಾಘವೇಂದ್ರ ಸ್ವಾಮಿಗಳ ಭಕ್ತನಾಗಿ, ನಿನಗೆ ಲೈಫ್‌ ಕೊಟ್ಟ ನಿರ್ದೇಶಕನ ಬಗ್ಗೆ ಈ ರೀತಿ ಮಾತನಾಡಲು ಹೇಗೆ ಮನಸ್ಸು ಬಂತು? ಮಠ ಸಿನಿಮಾದಲ್ಲಿ ಅವರು ನಿನಗೆ ಅವಕಾಶ ಕೊಡದೆ ಇದ್ದಿದ್ದರೆ ಜಗ್ಗೇಶ್‌ ಯಾರು ಎಂಬುದನ್ನೇ ಜನರು ಮರೆತುಬಿಡುತ್ತಿದ್ದರು ಎಂದು ಕ್ಲಾಸ್‌ ತೆಗೆದುಕೊಂಡಿದ್ದರು.

ಆನೆಯಾಗಲು ಯೋಗ ಬೇಕು ಎಂದ ಜಗ್ಗೇಶ್

ತಮ್ಮನ್ನು ಟ್ರೋಲ್‌ ಮಾಡಿದವರಿಗೆ ಜಗ್ಗೇಶ್‌ ಪ್ರತಿಕ್ರಿಯಿಸಿದ್ದಾರೆ. "ಆನೆ ನಡೆಯೋವಾಗ ಶ್ವಾನಗಳು ಉಸಿರು ಹೋಗುವಂತೆ ಅರಚುತ್ತದೆ. ಅದಕ್ಕೆ ಸೈಂಟಿಫಿಕ್‌ ಕಾರಣ "ಭಯ" ಎರಡನೆಯದು ಏನು ನಾವು ನೆಲದಷ್ಟೆ ಹೀಗಿದ್ದೇವೆ ಆನೆ ಮಾತ್ರ ಮುಗಿಲೆತ್ತರ ಬೆಳೆದಿದೆ ಎಂಬ ಸಂಕಟ. ತಾತ್ಪರ್ಯ: ನಿನ್ನ ಕೆಲಸ ನೀನು ಗಾಂಭೀರ್ಯದಿಂದ ಮಾಡುತ್ತಿರು. ಶ್ವಾನವು ಅವುಗಳ ಕೆಲಸ ಮಾಡದೆ ಬೇರೆ ವಿಧಿಯಿಲ್ಲಾ ಬೊಗಳುತ್ತದೆ. ಆನೆಯಾಗಲು ಯೋಗ ಬೇಕು" ಎಂದು ಜಗ್ಗೇಶ್‌ ಟ್ವೀಟ್‌ ಮಾಡಿದ್ದಾರೆ.

ಆದರೂ ಸತ್ತವರ ಬಗ್ಗೆ ಕೆಟ್ಟದಾಗಿ ಮಾತಾಡೋದು ತಪ್ಪಲ್ಲವೇ ಅಣ್ಣ? ಹಾಗಾದರೆ ಈಗ ನೀವು ಆನೆ ಎಂದು ಹೇಳುತ್ತಿದ್ದೀರಾ ಎಂದು ಜಗ್ಗೇಶ್‌ ಟ್ವೀಟ್‌ಗೆ ನೆಟಿಜನ್ಸ್‌ ಮತ್ತೆ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.

ನಟ ಜಗ್ಗೆಶ್‌ ಟ್ವೀಟ್
ನಟ ಜಗ್ಗೆಶ್‌ ಟ್ವೀಟ್ (PC: Jagesh Shivalingappa)
Whats_app_banner