Bhairathi Ranagal: ಭೈರತಿ ರಣಗಲ್ ಚಿತ್ರದ ಸಕ್ಸಸ್ ಮೀಟ್‌ನಲ್ಲಿ ಮಫ್ತಿ 2 ಬಗ್ಗೆ ಸುಳಿವು ನೀಡಿದ ಶಿವರಾಜ್‌ಕುಮಾರ್, ಶೀಘ್ರದಲ್ಲಿ ಘೋಷಣೆ
Nov 21, 2024 03:24 PM IST
ಮಫ್ತಿ 2 ಬಗ್ಗೆ ಸುಳಿವು ನೀಡಿದ ಶಿವರಾಜ್‌ಕುಮಾರ್, ಶೀಘ್ರದಲ್ಲಿ ಘೋಷಣೆ
- Bhairathi Ranagal: ಇತ್ತೀಚೆಗಷ್ಟೇ ಬಿಡುಗಡೆ ಆಗಿರುವ ಶಿವರಾಜ್‌ಕುಮಾರ್ ನಟನೆಯ ಭೈರತಿ ರಣಗಲ್ ಚಿತ್ರಕ್ಕೆ ರಾಜ್ಯಾದ್ಯಂತ ಪಾಸಿಟಿವ್ ರೆಸ್ಪಾನ್ಸ್ ಸಿಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿನಿಮಾ ಗೆದ್ದ ಖುಷಿಯಲ್ಲಿ ಇಡೀ ತಂಡ ಒಂದೆಡೆ ಸೇರಿತ್ತು. ಇದೇ ವೇಳೆ ಮಫ್ತಿ 2 ಸಿನಿಮಾದ ಬಗ್ಗೆಯೂ ಶಿವಣ್ಣ ಮಾಹಿತಿ ನೀಡಿದರು.
Bhairathi Ranagal Success Meet: ಕಳೆದ ವಾರವಷ್ಟೇ (ನ. 15) ಭೈರತಿ ರಣಗಲ್ ಸಿನಿಮಾ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಈ ನಡುವೆ ಪ್ರೇಕ್ಷಕರಿಂದಲೂ ಮೆಚ್ಚುಗೆ ಪಡೆದು, ಕಲೆಕ್ಷನ್ ವಿಚಾರದಲ್ಲಿಯೂ ಮುಂದಡಿ ಇರಿಸಿದೆ ಈ ಸಿನಿಮಾ. ಈಗ ಇದೇ ಚಿತ್ರ ಪ್ರೇಕ್ಷಕರಿಂದ ಪಾಸಿಟಿವ್ ಪ್ರತಿಕ್ರಿಯೆ ಪಡೆದ ಬೆನ್ನಲ್ಲೇ, ಇಡೀ ಚಿತ್ರತಂಡ ಮಾಧ್ಯಮದ ಮುಂದೆ ಬಂದಿತ್ತು. ಸಿನಿಮಾವನ್ನು ಒಪ್ಪಿ ಅಪ್ಪಿದ್ದಕ್ಕೆ ಎಲ್ಲರಿಗೂ ಧನ್ಯವಾದ ಹೇಳಿತು. ಇಲ್ಲಿದೆ ಭೈರತಿ ರಣಗಲ್ ಸಿನಿಮಾದ ಸಕ್ಸಸ್ ಮೀಟ್‌ನಲ್ಲಿ ಏನೆಲ್ಲ ಆಯ್ತು ಎಂಬ ಮಾಹಿತಿ.
ಗೀತಾ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಗೀತಾ ಶಿವರಾಜಕುಮಾರ್ ನಿರ್ಮಿಸಿರುವ, ನರ್ತನ್ ನಿರ್ದೇಶನದ ಸಿನಿಮಾ ಭೈರತಿ ರಣಗಲ್, ಚಿತ್ರ ನವೆಂಬರ್ 15ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿತ್ತು. ಮಫ್ತಿ ಚಿತ್ರದ ಪ್ರೀಕ್ವೆಲ್ ಆಗಿರುವ ಈ ಚಿತ್ರವನ್ನು ಚಿತ್ರರಸಿಕರು ಮೆಚ್ಚಿಕೊಂಡಿದ್ದಾರೆ. ಕುಟುಂಬ ಸಮೇತ ಬಂದು ಸಿನಿಮಾವನ್ನು ನೋಡುತ್ತಿದ್ದಾರೆ. ಕನ್ನಡ ಚಿತ್ರಗಳಿಗೆ ಜನರು ಬರುತ್ತಿಲ್ಲ ಎಂಬ ಮಾತನ್ನು ಭೈರತಿ ರಣಗಲ್ ಚಿತ್ರ ದೂರ ಮಾಡಿದೆ. ಈ ನಡುವೆ ಚಿತ್ರದ ನಾಯಕ ಶಿವರಾಜ್‌ಕುಮಾರ್ ಒಂದಷ್ಟು ಮಾತನಾಡಿದ್ದಾರೆ.
ಶಿವಣ್ಣ ಹೇಳಿದ್ದೇನು?
ಮಫ್ತಿ ಚಿತ್ರದಲ್ಲಿ ನನ್ನ ಭೈರತಿ ರಣಗಲ್ ಪಾತ್ರವನ್ನು ನೀವು ಇಷ್ಟಪಟ್ಟಿದ್ದಿರಿ. ಆದರೆ ಭೈರತಿ ರಣಗಲ್ ಚಿತ್ರದ ರಣಗಲ್ ಪಾತ್ರವನ್ನು ನೀವು ಹೃದಯಕ್ಕೆ ತೆಗೆದುಕೊಂಡಿದ್ದೀರ. ನಿಮಗೆ ತುಂಬು ಹೃದಯದ ಧನ್ಯವಾದ ಎಂದು ಅಭಿಮಾನಿಗಳಿಗೆ ವಿಶೇಷ ಧನ್ಯವಾದ ತಿಳಿಸಿ ಮಾತನಾಡಿದ ಶಿವರಾಜಕುಮಾರ್, "ನಮ್ಮ ಸಂಸ್ಥೆಯಿಂದ ನಿರ್ಮಾಣವಾದ ಎರಡನೇ ಚಿತ್ರವಿದು. ಒಳ್ಳೆಯ ಚಿತ್ರಗಳನ್ನು ನೀಡಿದಾಗ ಜನರು ಚಿತ್ರಮಂದಿರಕ್ಕೆ ಬರುತ್ತಾರೆ ಎಂಬುದಕ್ಕೆ ಈ ಚಿತ್ರ ಉದಾಹರಣೆ. ಈ ಯಶಸ್ಸು ನನ್ನೊಬ್ಬನದಲ್ಲ. ಇಡೀ ತಂಡದು. ಮುಂದೆ ಮಫ್ತಿ 2 ಮಾಡಬೇಕೆಂಬುದು ಅಭಿಮಾನಿಗಳ ಆಸೆ. ಖಂಡಿತ ಮಾಡುತ್ತೇನೆ. ಆದರೆ ಶೀರ್ಷಿಕೆ ಮಫ್ತಿ 2 ಅಂತ ಇರುವುದಿಲ್ಲ. ಸದ್ಯದಲ್ಲೇ ಆ ಚಿತ್ರದ ಶೀರ್ಷಿಕೆಯನ್ನು ತಿಳಿಸುತ್ತೇನೆ ಎಂದರು.
"ಅಪ್ಪಾಜಿ ಅವರು ಹೇಳಿದ ಹಾಗೆ ಈ ಯಶಸ್ಸಿಗೆ ಮುಖ್ಯ ಕಾರಣ ಅಭಿಮಾನಿ ದೇವರುಗಳು. ಅವರಿಗೆ ಮೊದಲು ಧನ್ಯವಾದ ತಿಳಿಸುತ್ತೇನೆ" ಎಂದು ಮಾತು ಆರಂಭಿಸಿದ ನಿರ್ಮಾಪಕಿ ಗೀತಾ ಶಿವರಾಜಕುಮಾರ್, ನರ್ತನ್ ಅವರು ಬಂದು ಈ ಚಿತ್ರದ ಕಥೆ ಹೇಳಿದಾಗ, ನಾನು ಅವರು ಮಫ್ತಿಯ ಸೀಕ್ವೆಲ್ ಹೇಳಬಹುದು ಅಂದುಕೊಂಡೆ. ಅವರು ಪ್ರೀಕ್ವೆಲ್ ಹೇಳಿದರು. ಈ ಚಿತ್ರದ ಯಶಸ್ಸಿನ ಕ್ರೆಡಿಟ್ ನಿರ್ದೇಶಕರಿಗೆ ಹೋಗಬೇಕು. ಚಿತ್ರ ಉತ್ತಮವಾಗಿ ಮೂಡಿಬರಲು ಕಾರಣರಾದ ಇಡೀ ತಂಡಕ್ಕೆ ಧನ್ಯವಾದ. ನಮ್ಮ ಸಂಸ್ಥೆಯಿಂದ ಮುಂದೆ ಕೂಡ ಉತ್ತಮ ಚಿತ್ರಗಳನ್ನು ನಿರ್ಮಿಸುವುದಾಗಿ ಹೇಳಿದರು.
ನಿರ್ದೇಶಕ ನರ್ತನ್ ಮಾತು
"ಈ ಚಿತ್ರ ಆಗಲು ಮುಖ್ಯ ಕಾರಣ ಶಿವಣ್ಣ ಅವರ ಅಭಿಮಾನಿಗಳು. ಅವರು ಮಫ್ತಿ ಚಿತ್ರದ ಯಶಸ್ಸಿನ ನಂತರ, ರಣಗಲ್ ಚಿತ್ರ ಮಾಡಿ ಎಂದು ಹೇಳಿದ್ದರು. ಈ ಚಿತ್ರ ಆಗಲು ಅವರೆ ಮುಖ್ಯ ಕಾರಣ ಎನ್ನಬಹುದು. ಆನಂತರ ನನ್ನನ್ನು ಕರೆದು ಈ ಚಿತ್ರದ ಕಥೆ ಕೇಳಿ ಮೆಚ್ಚಿಕೊಂಡು ಭೈರತಿ ರಣಗಲ್ ಚಿತ್ರ ಮಾಡಲು ಅಡ್ವಾನ್ಸ್ ನೀಡಿದ್ದು ಗೀತಾ ಶಿವರಾಜಕುಮಾರ್ ಅವರು. ಅವರಿಗೆ ಹಾಗೂ ರಣಗಲ್ ಪಾತ್ರಕ್ಕೆ ಜೀವ ತುಂಬಿದ ಶಿವರಾಜಕುಮಾರ್ ಅವರಿಗೆ ಮತ್ತು ಸಹಕಾರ ನೀಡಿದ ನನ್ನ ಇಡೀ ತಂಡಕ್ಕೆ ನನ್ನ ತುಂಬು ಹೃದಯದ ಧನ್ಯವಾದ ಎಂದರು ನಿರ್ದೇಶಕ ನರ್ತನ್.
ಕನ್ನಡ ಚಿತ್ರಗಳು ಓಡುತ್ತಿಲ್ಲ ಎಂಬುದು ಸುಳ್ಳು. ಉತ್ತಮ ಚಿತ್ರಗಳನ್ನು ಬಂದರೆ ಜನ ಖಂಡಿತವಾಗಿ ಜನ ನೋಡುತ್ತಾರೆ. ಅದಕ್ಕೆ ಈ ಚಿತ್ರವೇ ಉದಾಹರಣೆ. ಬಿಡುಗಡೆಯಾದ ದಿನದಿಂದ ಎಲ್ಲಾ ಚಿತ್ರಮಂದಿರಗಳಲ್ಲೂ "ಭೈರತಿ ರಣಗಲ್" ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಎರಡನೇ ವಾರದಲ್ಲಿ ಶೋಗಳ ಸಂಖ್ಯೆ ಹೆಚ್ಚಳವಾಗಲಿದೆ. ವಿತರಕರ ಮುಖದಲ್ಲಿ ಸಂತೋಷ ಕಂಡರೆ ಆ ಸಿನಿಮಾ ಗೆದ್ದ ಹಾಗೆ ಎಂದರು ವಿತರಕ ಜಗದೀಶ್.
ಚಿತ್ರಮಂದಿರದ ಮಾಲೀಕರು ನಿರಾಳ
ಚಿತ್ರದಲ್ಲಿ ನಟಿಸಿರುವ ಅವಿನಾಶ್, ಬಾಬು ಹಿರಣ್ಣಯ್ಯ, ಗೋಪಾಲಕೃಷ್ಣ ದೇಶಪಾಂಡೆ, ಮಧು ಗುರುಸ್ವಾಮಿ, ಡ್ಯಾನ್ಸಿಂಗ್ ರೋಸ್ ಶಬೀರ್, ಪ್ರತಾಪ್ ಮುಂತಾದ ಕಲಾವಿದರು, ಛಾಯಾಗ್ರಾಹಕ ನವೀನ್ ಕುಮಾರ್, ಸಂಕಲನಕಾರ ಅಕ್ಷಯ್ ಮುಂತಾದ ತಂತ್ರಜ್ಞರು ಚಿತ್ರದ ಯಶಸ್ಸನ್ನು ತಮ್ಮ ಮಾತುಗಳ ಮೂಲಕ ಹಂಚಿಕೊಂಡರು. ವೀರೇಶ ಚಿತ್ರಮಂದಿರದ ಕುಶಾಲ್, ನರ್ತಕಿ ಚಿತ್ರಮಂದಿರದ ವೆಂಕಟೇಶ್ ಹಾಗೂ ಮೈಸೂರಿನ ಗಾಯತ್ರಿ ಚಿತ್ರಮಂದಿರದ ಜಯರಾಂ ಅವರು "ಭೈರತಿ ರಣಗಲ್" ಚಿತ್ರಕ್ಕೆ ಚಿತ್ರಮಂದಿರಕ್ಕೆ ಹರಿದು ಬರುತ್ತಿರುವ ಜನಸಾಗರ ಕಂಡು ಸಂತೋಷವಾಗಿದೆ ಎಂದರು.