logo
ಕನ್ನಡ ಸುದ್ದಿ  /  ಮನರಂಜನೆ  /  ಚಿತ್ರಮಂದಿರದೊಳಗೆ ಬಂದು ಪಬ್ಜಿ ಆಡುವ ಕಾಲೇಜು ಹುಡುಗರ ಕುರಿತು ಎಚ್ಚರವಿರಲಿ; ಸಂತೋಷ್‌ ಕುಮಾರ್‌ ಎಲ್‌ಎಂ ಬರಹ

ಚಿತ್ರಮಂದಿರದೊಳಗೆ ಬಂದು ಪಬ್ಜಿ ಆಡುವ ಕಾಲೇಜು ಹುಡುಗರ ಕುರಿತು ಎಚ್ಚರವಿರಲಿ; ಸಂತೋಷ್‌ ಕುಮಾರ್‌ ಎಲ್‌ಎಂ ಬರಹ

Praveen Chandra B HT Kannada

Dec 12, 2024 03:33 PM IST

google News

ಚಿತ್ರಮಂದಿರದೊಳಗೆ ಸಿನಿಮಾ ನೋಡದೆ ಪಬ್ಜಿ ರೀತಿಯ ಮೊಬೈಲ್‌ ಗೇಮ್‌ಗಳಲ್ಲಿ ನಿರತರಾಗಿರುವ ಕಾಲೇಜು ಹುಡುಗರು

    • ಚಿತ್ರತಂಡದವರು ನೀಡುವ ಉಚಿತ ಸಿನಿಮಾ ಟಿಕೆಟ್‌ ಪಡೆದು ಚಿತ್ರಮಂದಿರದೊಳಗೆ ಬರುವ ಕಾಲೇಜು ಹುಡುಗರು ಸಿನಿಮಾ ನೋಡದೆ ಪಬ್ಜಿ ಆಟದಲ್ಲಿ ಕಳೆದುಹೋಗುತ್ತಿದ್ದಾರೆ. ಇದರ ಬದಲು ಪ್ರಾಮಾಣಿಕವಾಗಿ ವಿಮರ್ಶೆ ಮಾಡುವವರಿಗೆ ಟಿಕೆಟ್‌ ನೀಡಬಹುದು ಎಂದು ಸಂತೋಷ್‌ ಕುಮಾರ್‌ ಎಲ್‌ಎಂ ಅಭಿಪ್ರಾಯಪಟ್ಟಿದ್ದಾರೆ.
ಚಿತ್ರಮಂದಿರದೊಳಗೆ ಸಿನಿಮಾ ನೋಡದೆ ಪಬ್ಜಿ ರೀತಿಯ ಮೊಬೈಲ್‌ ಗೇಮ್‌ಗಳಲ್ಲಿ ನಿರತರಾಗಿರುವ ಕಾಲೇಜು ಹುಡುಗರು
ಚಿತ್ರಮಂದಿರದೊಳಗೆ ಸಿನಿಮಾ ನೋಡದೆ ಪಬ್ಜಿ ರೀತಿಯ ಮೊಬೈಲ್‌ ಗೇಮ್‌ಗಳಲ್ಲಿ ನಿರತರಾಗಿರುವ ಕಾಲೇಜು ಹುಡುಗರು

ಫೇಸ್‌ಬುಕ್‌ನಲ್ಲಿ ಕನ್ನಡ ಸಿನಿಮಾ ಮತ್ತು ಚಿತ್ರರಂಗಗಳ ಕುರಿತು ಸಂತೋಷ್‌ ಕುಮಾರ್‌ ಎಲ್‌ಎಂ ಬರೆದ ಲೇಖನವೊಂದು ಗಮನ ಸೆಳೆಯುತ್ತದೆ. ಚಿತ್ರತಂಡದವರು ನೀಡುವ ಉಚಿತ ಸಿನಿಮಾ ಟಿಕೆಟ್‌ ಪಡೆದು ಚಿತ್ರಮಂದಿರದೊಳಗೆ ಬರುವ ಕಾಲೇಜು ಹುಡುಗರು ಸಿನಿಮಾ ನೋಡದೆ ಪಬ್ಜಿ ಆಟದಲ್ಲಿ ಕಳೆದುಹೋಗುತ್ತಿದ್ದಾರೆ. ಇದರ ಬದಲು ಪ್ರಾಮಾಣಿಕವಾಗಿ ವಿಮರ್ಶೆ ಮಾಡುವವರಿಗೆ ಟಿಕೆಟ್‌ ನೀಡಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಚಿತ್ರಮಂದಿರದೊಳಗೆ ಬಂದು ಪಬ್ಜಿ ಆಡುವ ಕಾಲೇಜು ಹುಡುಗರು

"ಇದು ಥಿಯೇಟರ್ ಒಂದರಲ್ಲಿ ನಾನು ಕಣ್ಣಾರೆ ಕಂಡ ದೃಶ್ಯ. ಬಹುಶಃ ಬರಿ ಪೋಸ್ಟ್ ಹಾಕಿದರೆ ನಂಬಲಾರರು ಅನ್ನುವ ಕಾರಣದಿಂದ ಈ ಫೋಟೋವನ್ನು ಬೇಸರದಿಂದಲೇ ಹಂಚಿಕೊಂಡಿದ್ದೇನೆ.

ಸುಮಾರು 20 ಹುಡುಗರಿರಬಹುದು. ವಯಸ್ಸು ನೋಡಿದರೆ ಯಾವುದೋ ಕಾಲೇಜಿನಲ್ಲಿ ಓದುತ್ತಿರಬಹುದು ಅನ್ನಿಸಿತು. ಕಾಲೇಜಿನ ಯೂನಿಫಾರ್ಮ್ ಮತ್ತು ಎಲ್ಲರ ಬೆನ್ನಿಗೂ ಕಾಲೇಜು ಬ್ಯಾಗ್‌ಗಳಿದ್ದವು. ಸಿನಿಮಾ ಶುರುವಾಗಲು ಇನ್ನೆರಡು ನಿಮಿಷ ಇದೆ ಎನ್ನುವಾಗ ದಡದಡ ಅಂತ ಓಡಿ ಬಂದು ಕುಳಿತರು. ಕ್ಲಾಸ್ ಬಂಕ್ ಮಾಡಿ ಸಿನಿಮಾ ನೋಡಲು ಬಂದಿದ್ದಾರೆ ಅನ್ನುವುದು ಮೇಲ್ನೋಟಕ್ಕೆ ತಿಳಿಯುತ್ತಿತ್ತು. ಇದೆಲ್ಲಾ ನಾನು ಕಾಲೇಜಿನಲ್ಲಿ ಓದುವಾಗ ಮಾಡಿಬಿಟ್ಟಿರುವುದು ತಾನೆ ಅಂತ ಸುಮ್ಮನಾದೆ.

ಆದರೆ ಕೆಲವೇ ನಿಮಿಷಗಳಲ್ಲಿ ಗೊತ್ತಾದದ್ದು, ಅವರಾರೂ ಸಿನಿಮಾ ನೋಡಲು ದುಡ್ಡು ಕೊಟ್ಟು ಬಂದವರಲ್ಲ ಅಂತ. ಅವರಿಗೆ ಸಿನಿಮಾ ನೋಡುವುದೂ ಬೇಕಿರಲಿಲ್ಲ. ಯಾರದೋ‌ ಒತ್ತಾಯಕ್ಕೆ ಬಂದಿದ್ದರು ಅಂತ ನೋಡಿದರೇ ತಿಳಿಯುತ್ತಿತ್ತು. ಏಕೆಂದರೆ ಸಿನಿಮಾದ ಟೈಟಲ್ ಕಾರ್ಡ್ಸ್ ಬರುವ ಮುಂಚೆಯೇ ಜೇಬುಗಳಿಂದ ಮೊಬೈಲ್ ತೆಗೆದು ಅದ್ಯಾವುದೋ PUBG ಥರದ ಗೇಮ್ ಆಡಲು ಶುರುವಿಟ್ಟುಕೊಂಡರು. ಅಚ್ಚರಿ ಎಂದರೆ ಒಬ್ಬರನ್ನೂ ಬಿಡದೆ ಇಡೀ ಸಾಲಿನಲ್ಲಿ ಕುಳಿತಿದ್ದ ಎಲ್ಲರೂ ಅದೊಂದೇ ಗೇಮ್ ಆಡುತ್ತಿದ್ದಾರೆ!

ಹಿಂದಿನ ಸಾಲಿನಲ್ಲಿ ಕುಳಿತಿದ್ದ ನನಗೆ ಅವರು ಗೇಮ್ ಆಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಆಗಲೇ ಈ ಫೋಟೋ ತೆಗೆದುಕೊಂಡದ್ದು. ಅದರ ನಡುವೆಯೂ ಆಗಾಗ್ಗೆ ಹೀರೋ ಡೈಲಾಗ್ ಹೊಡೆಯುವಾಗ ನಗುವುದು. ಹೀರೋಯಿನ್ ಬಂದಾಗ "ಕೆಕ್ಕೆಕ್ಕೆಕ್ಕೆ" ಅಂತ‌ ನಗುವುದು ನಡೆದೇ ಇತ್ತು.

ಮಧ್ಯಂತರದಲ್ಲಿ ಟಾಯ್ಲೆಟ್ಟಿನಲ್ಲಿ ಅದೇ ಗುಂಪಿನ ಒಬ್ಬ ಹುಡುಗ ಮತ್ತೊಬ್ಬ ಹುಡುಗನ ಜೊತೆ ಸಿನಿಮಾದ ಬಗ್ಗೆ ಕೀಟಲೆಯ ಮಾತಾಡುತ್ತಿದ್ದ.

ಬೇಸರದ ವಿಷಯವೆಂದರೆ ಇವರು ಯಾರೂ ಸಿನಿಮಾ ನೋಡಲು ಬಂದವರಲ್ಲ. ಯಾರೋ ಟಿಕೆಟ್ ಕೊಟ್ಟು ಸಿನಿಮಾ ನೋಡಿ ಅಂತ ಟಿಕೆಟ್ ಕೊಡಿಸಿದ್ದರಿಂದ ಬಂದು ಟೈಮ್‌ಪಾಸ್ ಮಾಡುತ್ತಿದ್ದವರು. ಮಧ್ಯಂತರದ ನಂತರ ಅವರ್ಯಾರೂ ಉಳಿದರ್ಧ ಸಿನಿಮಾಗೆ ಮರಳಲೇ ಇಲ್ಲ!!

ಸಿನಿಮಾ ತಂಡಗಳು ಇಂಥವರಿಗೆಲ್ಲ ಟಿಕೆಟ್ ಕೊಡುವುದರ ಬದಲು ಒಂದಷ್ಟು reviewerಗಳಿಗಾದರೂ ಪ್ರದರ್ಶನ ಏರ್ಪಡಿಸಿ ತಮ್ಮ ಸಿನಿಮಾದ ಬಗ್ಗೆ ನೇರಾನೇರ ಪಾಸಿಟಿವ್/ನೆಗೆಟಿವ್ ಅಭಿಪ್ರಾಯವನ್ನು ಪ್ರಾಮಾಣಿಕವಾಗಿ ಬರೆಯುವಂತೆ ಹೇಳಿದರೆ ಅದು ಬಹುದೊಡ್ಡ ಒಳ್ಳೆಯ ಕೆಲಸ. ಇಂಥವರಿಗೆಲ್ಲ ಕೊಟ್ಟರೆ ಸಿನಿಮಾ ಮಂದಿರದ ವಾತಾವರಣವನ್ನೇ ಹಾಳು ಮಾಡುತ್ತಾರೆ. ಈ ರೀತಿಯ ಒಂದಷ್ಟು ಸೀಟು ಭರ್ತಿ ಮಾಡಿ ಸಾಧಿಸಿದ್ದಾದರೂ ಏನನ್ನು?

ಆ ಸಿನಿಮಾ ಯಾವುದು, ಹೇಗಿತ್ತು ಅನ್ನುವ ವಿಷಯಗಳನ್ನು ಚರ್ಚಿಸುವುದು ಇಲ್ಲಿ ಅನವಶ್ಯಕ. ಆದರೆ ಇಂಥ ವಿಷಯಗಳ ಬಗ್ಗೆ ಚಿತ್ರತಂಡಗಳು ಎಚ್ಚರಿಕೆಯಿಂದಿರಬೇಕು ಎನ್ನುವದಷ್ಟೇ ನನ್ನ ಅನಿಸಿಕೆ" ಎಂದು ಸಂತೋಷ್‌ ಕುಮಾರ್‌ ಎಲ್‌ಎಂ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ಚಿತ್ರಮಂದಿರದಲ್ಲಿ ಮೊಬೈಲ್‌ ಬಳಸುವುದು ಕೆಟ್ಟ ಅಭ್ಯಾಸ

ಈ ಬರಹಕ್ಕೆ ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ. ವೀರೇಂದ್ರ ಎಲ್ಲೂರು ಎಂಬ ಫೇಸ್‌ಬುಕ್‌ ಬಳಕೆದಾರರು "ಯಾವುದೇ ಸಿನಿಮಾ ಆಗಿರಲಿ, ಜನರ ಅಭಿಪ್ರಾಯ ಭಿನ್ನವಾಗಿರುತ್ತದೆ. ಆದರೆ, ಚಿತ್ರಮಂದಿರಗಳಲ್ಲಿ ಮೊಬೈಲ್‌ ಫೋನ್‌ ಬಳಸುವುದು ಅತ್ಯಂತ ಕೆಟ್ಟ ಅಭ್ಯಾಸ. ಮೊಬೈಲ್‌ ಸ್ಕ್ರೀನ್‌ನ ಬೆಳಕು ಹಿಂಭಾಗದಲ್ಲಿ ಕುಳಿತವರಿಗೆ ಡಿಸ್ಟರ್ಬ್‌ ಮಾಡುತ್ತದೆ. ಈ ಮೂಲಕ ಸಿನಿಮಾ ನೋಡುವವರ ಮೂಡ್‌ ಹಾಳಾಗುತ್ತದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

"ಇದೆ ರೀತಿ ಇತ್ತೀಚಿಗೆ ಯಶಸ್ವಿ ಚಿತ್ರ ಎಂದು ಬೀಗಿದ ಚಿತ್ರತಂಡದ ಒಬ್ಬರು ನನಗೆ 100 ಟಿಕೆಟ್ ಕೊಡ್ತೀನಿ ಉಚಿತವಾಗಿ, ನಿಮ್ಮ ಸ್ನೇಹಿತರಿಗೆ ಹಾಗೂ ನಿಮ್ಮ ಕುಟುಂಬದವರಿಗೆ ಕೊಡಿ ಎಂದು ಕರೆ ಮಾಡಿದ್ದರು ಅದು ಒಂದು ದೊಡ್ಡ ಮಾಲ್ ನಲ್ಲಿ ಫಿಲಂ ಇತ್ತು" ಎಂದು ರಘು ತುಮಕೂರು ಕಾಮೆಂಟ್‌ ಮಾಡಿದ್ದಾರೆ. "ಜನರ ಕಣ್ಣಿಗೆ ಮಣ್ಣೆರಚುವ ತಂತ್ರ! ತಮ್ಮ ಚಿತ್ರ ಮಂದಿರ ತುಂಬಿ ಪ್ರದರ್ಶನ ನಡೆಯುತ್ತಿದೆ ಎಂಬಂತೆ ಬಿಂಬಿಸೋದು. ಹಿಡನ್ ಅಜೆಂಡಾ ಬೇರೆಯೇ ಇರುತ್ತದೆ" ಎಂದು ರಮೇಶ್‌ ಗೌಡ ಕಾಮೆಂಟ್‌ ಮಾಡಿದ್ದಾರೆ. "ಪೋಷಕರಿಗೆ ತಿಳಿಯದಂತೆ ಆನ್‍ಲೈನ್ ಗೇಮ್‍ಗಳನ್ನು ಆಡಲು ಇದೇ ಸುರಕ್ಷಿತ ಸ್ಥಳವೆಂದು ಬಂದವರಿರಬಹುದು" "ನಿಜ ಸರ್ ಪ್ರಾಮಾಣಿಕ ವಿಮರ್ಶೆ ಮಾಡುವಂಥ ತಿಳುವಳಿಕೆಯುಳ್ಳವರಿಗೆ ಟಿಕೆಟ್ ಕೊಡಬೇಕಿತ್ತು.." ಎಂದೆಲ್ಲ ಈ ಲೇಖನಕ್ಕೆ ಜನರು ಪ್ರತಿಕ್ರಿಯೆ ನೀಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ