logo
ಕನ್ನಡ ಸುದ್ದಿ  /  ಮನರಂಜನೆ  /  ಅಚ್ಯುತ್‌ ಅವರಲ್ಲಿ ಅಪ್ಪನ್ನ ಕಂಡೆ, ಅವ್ರ ಪಕ್ಕ ನಿಂತ್ರೆ ತಂದೆ ಜತೆ ನಿಂತ ಫೀಲ್‌ ಆಗ್ತಿತ್ತು; ನಯನತಾರಾ

ಅಚ್ಯುತ್‌ ಅವರಲ್ಲಿ ಅಪ್ಪನ್ನ ಕಂಡೆ, ಅವ್ರ ಪಕ್ಕ ನಿಂತ್ರೆ ತಂದೆ ಜತೆ ನಿಂತ ಫೀಲ್‌ ಆಗ್ತಿತ್ತು; ನಯನತಾರಾ

Praveen Chandra B HT Kannada

Jan 09, 2024 03:33 PM IST

google News

ನಯನತಾರಾ ನಟನೆಯ ಅನ್ನಪೂರಣಿ ಸಿನಿಮಾದಲ್ಲಿ ಅಚ್ಯುತ್‌ ಕುಮಾರ್‌

    • ಅಚ್ಯುತ್‌ ಕುಮಾರ್‌ ಕನ್ನಡದ ಪ್ರತಿಭಾನ್ವಿತ ನಟ. ಕನ್ನಡದಲ್ಲಿ ನೂರಾರು ಸಿನಿಮಾಗಳಲ್ಲಿ ಮಿಂಚಿರುವ ಅಚ್ಯುತ್‌ ಕುಮಾರ್‌ ಕುರಿತು ಅನ್ನಪೂರಣಿ ನಟಿ ನಯನತಾರಾ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸೆಟ್‌ನಲ್ಲಿ ಅವರು ಹೇಗಿದ್ದರು? ಕ್ಯಾಮೆರಾ ಮುಂದೆ ಹೇಗಿರುತ್ತಿದ್ದರು ಇತ್ಯಾದಿ ವಿವರ ನೀಡಿದ್ದಾರೆ.
ನಯನತಾರಾ ನಟನೆಯ ಅನ್ನಪೂರಣಿ ಸಿನಿಮಾದಲ್ಲಿ ಅಚ್ಯುತ್‌ ಕುಮಾರ್‌
ನಯನತಾರಾ ನಟನೆಯ ಅನ್ನಪೂರಣಿ ಸಿನಿಮಾದಲ್ಲಿ ಅಚ್ಯುತ್‌ ಕುಮಾರ್‌

ಬೆಂಗಳೂರು: ಅಚ್ಯುತ್‌ ಕುಮಾರ್‌ ಕನ್ನಡದಲ್ಲಿ ನೂರಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಮುಖ್ಯಪಾತ್ರಗಳಲ್ಲಿ, ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಕೆಜಿಎಫ್‌, ಕಾಂತಾರ, ಸಿದ್ಲಿಂಗು, ಲೂಸಿಯಾ ಸೇರಿದಂತೆ ಹಲವು ಚಿತ್ರಗಳಲ್ಲಿ ಇವರು ನಟಿಸಿದ್ದಾರೆ. ಕನ್ನಡದಲ್ಲಿ ನೂರಾರು ಸಿನಿಮಾಗಳಲ್ಲಿ ನಟಿಸಿರುವ ಇವರು ತಮಿಳಿನಲ್ಲೂ ಹತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು ಮತ್ತು ಮಲಯಾಳಂನಲ್ಲೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾಗಿರುವ ನಯನತಾರ ಮುಖ್ಯಪಾತ್ರದಲ್ಲಿ ನಟಿಸಿರುವ ಅನ್ನಪೂರಣಿ ಸಿನಿಮಾದಲ್ಲಿ ಅಚ್ಯುತ್‌ ಕುಮಾರ್‌ ತಂದೆಯ ಪಾತ್ರದಲ್ಲಿ ನಟಿಸಿದ್ದರು. ಇವರ ನಟನೆಯ ಕುರಿತು ಖ್ಯಾತ ನಟಿ ನಯನತಾರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದರು. ಈ ಕುರಿತಾದ ರೀಲ್ಸ್‌ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ತಂದೆಯೇ ಪಕ್ಕದಲ್ಲಿ ನಿಂತಂತೆ ಭಾಸವಾಗುತ್ತಿತ್ತು...

"ಸಿನಿಮಾ ಥಿಯೇಟರ್‌ನಲ್ಲಿ ತುಂಬಾ ಸೀರಿಯಸ್‌ ಆಗಿರುತ್ತಿದ್ದರು. ನಮಸ್ಕಾರ ಸರ್‌ ಎಂದರೆ ತಲೆ ಬಗ್ಗಿಸಿ ಸಂಜ್ಞೆಯಲ್ಲಿಯೇ ನಮಸ್ಕರಿಸುತ್ತಿದ್ದರು. ಊಟ ಆಯ್ತಾ ಎಂದರೆ ಅದಕ್ಕೂ ಬಾಯಿ ಬಿಡದೆ ಮುಖದಲ್ಲಿಯೇ ಆಯ್ತು ಎನ್ನುತ್ತಿದ್ದರು. ಅವರಿಗೆ ತಮಿಳು ಬರುತ್ತಿರಲಿಲ್ಲ. ಸೀರಿಯಸ್‌ ಆಗಿರುತ್ತಿದ್ದರು. ಆದರೆ, ತುಂಬಾ ಸ್ವೀಟ್‌ ವ್ಯಕ್ತಿ.ಸಿನಿಮಾದ ಪಾತ್ರದ ವಿಷಯಕ್ಕೆ ಬಂದರೆ ತುಂಬಾ ಅದ್ಭುತ ನಟ. ಕ್ಯಾಮೆರಾದ ಮುಂದೆ ಬಂದಾಗ ಅವರು ಅದ್ಭುತವಾಗಿ ನಟಿಸುತ್ತಿದ್ದರು. ಅವರು ಸಿನಿಮಾದಲ್ಲಿ ಡೈಲಾಗ್‌ ಹೇಳುತ್ತಿರುವ ರೀತಿ, ನಟನೆ ಮಾಡುವ ರೀತಿ ತುಂಬಾ ಚೆನ್ನಾಗಿರುತ್ತಿತ್ತು. ನನಗೆ ಸಿನಿಮಾದಲ್ಲಿ ಅವರು ತಂದೆಯಾಗಿದ್ದರು. ಅವರು ಪಕ್ಕದಲ್ಲಿದ್ದರೆ ನಿಜವಾದ ತಂದೆಯ ಪಕ್ಕದಲ್ಲಿಯೇ ನಿಂತ ಅನುಭವ ಆಗುತ್ತಿತ್ತು" ಎಂದು ನಯನತಾರ ಅವರು ಅಚ್ಯುತ್‌ ಕುಮಾರ್‌ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಅಚ್ಯುತ್‌ ಕುಮಾರ್‌ ಬಗ್ಗೆ

ಕನ್ನಡ ನಟ ಅಚ್ಯುತ್‌ ಕುಮಾರ್‌ ಅವರು ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಜನಿಸಿದ್ದರು. ನೀನಾಸಂನಲ್ಲಿ ರಂಗ ತರಬೇತಿ ಪಡೆದ ಇವರು ಗಿರೀಶ್‌ ಕಾಸರವಲ್ಲಿಯವರ ಗೃಹಭಂಗ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುವ ಅವಕಾಶ ಪಡೆದರು. ಇದಾದ ಬಳಿಕ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದರು. 2007ರಲ್ಲಿ ಇವರು ಮೊಗ್ಗಿನ ಮನಸ್ಸು ಸಿನಿಮಾದಲ್ಲಿ ನಾಯಕಿಯ ತಂದೆಯ ಪಾತ್ರದಲ್ಲಿ ನಟಿಸುವ ಅವಕಾಶ ಪಡೆದರು. ಬಳಿಕ ಅವರು ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಾಂತಾರ ಸಿನಿಮಾದಲ್ಲಿ ತಂದೆಯ ಪಾತ್ರದಲ್ಲಿ ನಟಿಸಿ ಪ್ಯಾನ್‌ ಇಂಡಿಯಾ ನಟರಾಗಿ ಎಲ್ಲರ ಗಮನ ಸೆಳೆದರು.

ಬಿಡುಗಡೆಗೆ ಮುನ್ನವೇ ಅನ್ನಪೂರಣಿ ಸಿನಿಮಾವು ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು. ಸಿನಿಮಾದ ಫಸ್ಟ್‌ ಲುಕ್‌ ಟೀಸರ್‌ ಮತ್ತು ಟ್ರೈಲರ್‌ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿತ್ತು. ಅಪ್ಪಟ್ಟ ಸಸ್ಯಹಾರಿ ಕುಟುಂಬದಲ್ಲಿ, ಧರ್ಮ, ಆಚಾರ ವಿಚಾರಗಳ ಕುರಿತು ಸಾಕಷ್ಟು ನಂಬಿಕೆ ಇರುವ, ಮಾಂಸಹಾರದಿಂದ ಮೈಲುದ್ದ ದೂರ ಇರುವ ಕುಟುಂಬದ ಯುವತಿಯು ಮಾಂಸಹಾರ ಅಡುಗೆ ಮಾಡುವಂತಹ, ಜನಪ್ರಿಯ ಶೆಫ್‌ ಆಗುವ ಕನಸು ಹೊಂದಿರುವಂತಹ ಕಥಾಹಂದರವನ್ನು ಈ ಸಿನಿಮಾ ಹೊಂದಿತ್ತು.

ಡಿಸೆಂಬರ್‌ 1ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಅನ್ನಪೂರಣಿ ನಿರೀಕ್ಷೆಯಷ್ಟು ಗಳಿಕೆ ಮಾಡಿರಲಿಲ್ಲ. ಆದರೆ, ಈ ಸಿನಿಮಾ ಇತ್ತೀಚೆಗೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿತ್ತು. ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾವನ್ನು ಸಾಕಷ್ಟು ಜನರು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಸಿನಿಮಾದಲ್ಲಿರುವ ಕೆಲವೊಂದು ವಿಷಯಗಳು ವಿವಾದಕ್ಕೂ ಕಾರಣವಾಗಿತ್ತು.

ಈ ಸಿನಿಮಾ ತಂಡದ ವಿರುದ್ಧ ಶಿವ ಸೇನೆಯ ಮಾಜಿ ಮುಖಂಡ ರಮೇಶ್‌ ಸೋಲಂಕಿ ಅವರು ಮುಂಬೈ ಪೊಲೀಸರಿಗೆ ದೂರು ನೀಡಿದ್ದರು. " ಸಿನಿಮಾದಲ್ಲಿ ರಾಮನ ಕುರಿತು ಕೆಟ್ಟದ್ದಾಗಿ ಬಿಂಬಿಸಲಾಗಿದೆ. ಜತೆಗೆ, ಹಿಂದೂ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗುವ ಅಂಶಗಳನ್ನು ಹೊಂದಿದೆ ಎಂದು ಆರೋಪಿಸಿದ್ದಾರೆ. "ಹಿಂದು ಆರ್ಚಕನ ಮಗಳು ಬಿರಿಯಾನಿ ಸಿದ್ಧಪಡಿಸುವ ಮೊದಲು ನಮಾಜ್‌ ಮಾಡುತ್ತಾಳೆ. ಸಿನಿಮಾ ಲವ್‌ ಜಿಹಾದ್‌ಗೆ ಉತ್ತೇಜನ ನೀಡಿದೆ. ಸಿನಿಮಾ ನಟ ಫರ್ಹಾನ್‌ ಭಗವಂತ ರಾಮನೂ ಮಾಂಸ ತಿನ್ನುತ್ತಿದ್ದ ಎಂದು ಹೇಳಿ ನಟಿಗೆ ಮಾಂಸಾಹಾರ ತಿನ್ನಲು ಉತ್ತೇಜಿಸುವ ದೃಶ್ಯವಿದೆ" ಎಂದು ಅವರು ದೂರು ನೀಡಿದ್ದರು. ಈ ಕುರಿತ ಪೂರ್ತಿ ವರದಿ ಇಲ್ಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ