Kangaroo Review: ಕ್ರೈಂ ಥ್ರಿಲ್ಲರ್‌ನಲ್ಲಿ ಮೇಳೈಸಿದ ಹಾರರ್ ಅನುಭವ! ಕಾಂಗರೂ ಚಿತ್ರದಲ್ಲಿ ಕಾಡಲಿದೆ ಕರುಳು ಬಳ್ಳಿಯ ಕಥೆ
May 05, 2024 12:28 PM IST
Kangaroo Review: ಕ್ರೈಂ ಥ್ರಿಲ್ಲರ್‌ನಲ್ಲಿ ಮೇಳೈಸಿದ ಹಾರರ್ ಅನುಭವ! ‘ಕಾಂಗರೂ’ ಚಿತ್ರದಲ್ಲಿ ಕಾಡಲಿದೆ ಕರುಳು ಬಳ್ಳಿಯ ಕಥೆ
- ಕಾಂಗರೂವೊಂದು ಹೊಟ್ಟೆಯ ಚೀಲದಲ್ಲಿ ತನ್ನ ಮರಿಯನ್ನು ಹೇಗೆ ಜತನದಿಂದ ಕಾಪಾಡಿಕೊಳ್ಳುತ್ತದೆಯೋ, ಇಲ್ಲಿಯೂ ಅದೇ ಮಗುವನ್ನು ಕಾಪಾಡಿಕೊಳ್ಳುವ ಕಥೆ ಇದೆ. ಭ್ರೂಣ ಹತ್ಯೆಯನ್ನೇ ಪ್ರಧಾನ ಕಥೆಯ ತಿರುಳನ್ನಾಗಿಸಿಕೊಂಡು ಅದರ ಸೂರಿನಡಿ, ಕಾಂಗರೂ ಕಥೆ ಹೆಣೆದಿದ್ದಾರೆ ನಿರ್ದೇಶಕ ಕಿಶೋರ್.
Kangaroo Review: ಕನ್ನಡ ಸಿನಿಮಾ ಪ್ರೇಕ್ಷಕನನ್ನು ಸೀಟಿನ ತುದಿಗೆ ತಂದು ಕೂರಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡಿದೆ ಕಾಂಗರೂ ಸಿನಿಮಾ. ತನ್ನೊಡಲ ಕರುಳು ಬಳ್ಳಿಯ ಕಥೆಯೇ ಹೀಗಾದರೆ ಹೇಗೆ? ಎಂಬ ಭಾವವನ್ನು ನೋಡುಗನ ಎದೆಗಿಳಿಸುವ ಕೈಂಕರ್ಯವನ್ನು ನಿರ್ದೇಶಕ ಕಿಶೋರ್ ಮೇಗಳಮನೆ ಅಚ್ಚುಕಟ್ಟಾಗಿಯೇ ನಿಭಾಯಿಸಿದ್ದಾರೆ. ಕ್ರೈಂ ಥ್ರಿಲ್ಲರ್ ಜತೆಗೆ ಭಾವನಾತ್ಮಕ ಎಳೆಯನ್ನೂ ಕಾಂಗರೂ ಸಿನಿಮಾದಲ್ಲಿ ಬೆರೆಸಿದ್ದಾರವರು. ಇವೆರಡರ ಹಳಿಯ ಮೇಲೆ ತನಿಖೆ, ಅಪರಾಧ ಕೃತ್ಯ, ಹುಡುಕಾಟದ ಎಳೆ ಬಿಚ್ಚಿಕೊಳ್ಳುತ್ತ ಸಾಗುತ್ತದೆ. ಹೀಗಿದೆ ಕಾಂಗರೂ ಸಿನಿಮಾ ವಿಮರ್ಶೆ
ಅಷ್ಟಕ್ಕೂ ಈ ಕಾಂಗರೂಗೂ ಸಿನಿಮಾಕ್ಕೂ ಏನು ಸಂಬಂಧ? ಈ ಪ್ರಶ್ನೆ ನಿಮಗೂ ಮೂಡಬಹುದು. ಅದಕ್ಕೆ ಉತ್ತರವನ್ನು ಕಿರಿದಾಗಿ ವಿವರಿಸುವುದಾದರೆ, ಕಾಂಗರೂ ತನ್ನ ಹೊಟ್ಟೆಯ ಚೀಲದಲ್ಲಿ ಮರಿಯನ್ನು ಹೇಗೆ ಜತನದಿಂದ ಕಾಪಾಡಿಕೊಳ್ಳುತ್ತದೆಯೋ, ಇಲ್ಲಿಯೂ ಅದೇ ಮಗುವನ್ನು ಕಾಪಾಡಿಕೊಳ್ಳುವ ಕಥೆ ಇದೆ. ಭ್ರೂಣ ಹತ್ಯೆಯನ್ನೇ ಪ್ರಧಾನ ಕಥೆಯ ತಿರುಳನ್ನಾಗಿಸಿಕೊಂಡು ಅದರ ಸೂರಿನಡಿ, ಕಾಂಗರೂ ಕಥೆ ಹೆಣೆದಿದ್ದಾರೆ ನಿರ್ದೇಶಕ ಕಿಶೋರ್. ಭ್ರೂಣ ಹತ್ಯೆ ಮಹಾಪಾಪ ಎಂಬುದನ್ನು ಕ್ರೈಂ ಥ್ರಿಲ್ಲರ್ ಕೋನದಲ್ಲಿ ಹೇಳುವ ಪ್ರಯತ್ನ ಅವರಿಂದಾಗಿದೆ.
ಹೇಗೆ ಸಾಗುತ್ತೆ ಕಾಂಗರೂ ಕಥೆ?
ನಟ ಆದಿತ್ಯ ಇಲ್ಲಿ ಪೃಥ್ವಿ ಎಂಬ ಪೊಲೀಸ್ ಇನ್‌ಸ್ಪೆಕ್ಟರ್ ಪಾತ್ರ ನಿಭಾಯಿಸಿದ್ದಾರೆ. ಆತನ ಪತ್ನಿ ಮೇಘನಾ (ರಂಜನಿ ರಾಘವನ್) ಮನೋವೈದ್ಯೆ. ಹೀಗೆ ಸಾಗುವ ಕಥೆಯಲ್ಲಿ ಚಿಕ್ಕಮಗಳೂರಿನ ಹೋಮ್‌ಸ್ಟೇಯೊಂದರಲ್ಲಿ ಆತ್ಮಹತ್ಯೆಯೊಂದು ಸಂಭವಿಸುತ್ತದೆ. ಅಲ್ಲಿಂದ ಕಥೆಯ ಓಟ ಹೆಚ್ಚಾಗುತ್ತದೆ. ಹೋಮ್ ಸ್ಟೇಯಲ್ಲಿರುವವರಿಗೆ ದೆವ್ವದ ಕಾಟವೂ ಎದುರಾಗುತ್ತದೆ. ಆ ದೆವ್ವದ ದರ್ಶನವಾದವರು ಕೆಲವೇ ದಿನಗಳಲ್ಲಿಯೇ ಕಣ್ಮರೆಯಾಗುತ್ತಾರೆ. ಈ ವಿಚಿತ್ರ ಪ್ರಕರಣದ ತನಿಖಾಧಿಕಾರಿಯಾಗಿ ಪೃಥ್ವಿ ನೇಮಕಗೊಳ್ಳುತ್ತಾರೆ. ಈ ಪ್ರಕರಣವನ್ನು ಇನ್‌ಸ್ಪೆಕ್ಟರ್ ಪೃಥ್ವಿ ಬೇಧಿಸುತ್ತಾನಾ ಎಂಬುದೇ ಸಿನಿಮಾದ ಕಥೆ.
ಕ್ರೈಂ ಥ್ರಿಲ್ಲರ್‌ನಲ್ಲಿ ಮೇಳೈಸಿದ ಹಾರರ್ ಅನುಭವ!
ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ ಖಾಯಿಲೆಯನ್ನೂ ಮುಟ್ಟಿರುವ ನಿರ್ದೇಶಕರು, ಅದರಿಂದ ಎದುರಾಗಬಹುದಾದ ಸಮಸ್ಯೆಗಳನ್ನು ಪರದೆ ಮೇಲೆ ತಂದಿದ್ದಾರೆ. ಹೇಳಹೊರಟಿರುವ ಕಥೆ ಏನು? ಅದನ್ನು ಹೇಗೆ ದಾಟಿಸಬೇಕು ಎಂಬುದರ ಅರಿವು ನಿರ್ದೇಶಕರಿಗೆ ಚೆನ್ನಾಗಿ ತಿಳಿದಂತಿದೆ. ಆ ಸ್ಪಷ್ಟತೆ ಇದ್ದಿದ್ದಕ್ಕೆ ನೋಡುಗನಿಗೆ ಎಲ್ಲಿಯೂ ಬೋರ್ ಆಗದಂತೆ ಕಥೆಯನ್ನು ನಿರೂಪಿಸಿದ್ದಾರೆ. ಕ್ರೈಂ ಥ್ರಿಲ್ಲರ್ ಜತೆಗೆ ಹಾರರ್ ಅಂಶಗಳೂ ಕಥೆಯಲ್ಲಿ ಬೆರೆತಿರುವುದರಿಂದ ಭಯವೂ ಇಲ್ಲಿ ಮೇಳೈಸಿದೆ! ಕ್ಲೈಮ್ಯಾಕ್ಸ್ ವೇಳೆಗೆ ಕಾಡುವ ಭಾವುಕತೆ, ನೀರವ ಮೌನ ಕಥೆಯ ತೂಕ ಹೆಚ್ಚಿಸಿದೆ. ಹಿನ್ನೆಲೆ ಸಂಗೀತವೂ ಪೂರಕ ಎನಿಸಿದೆ.
ಹೇಗಿತ್ತು ಪಾತ್ರಧಾರಿಗಳ ನಟನೆ
ಪೊಲೀಸ್ ಪಾತ್ರದಲ್ಲಿ ನಟ ಆದಿತ್ಯ ಎಂದಿನ ತಮ್ಮ ಗತ್ತನ್ನು ಪ್ರದರ್ಶಿಸಿದ್ದಾರೆ. ಪಾತ್ರಕ್ಕೆ ಬೇಕಿರುವ ದೈಹಿಕ ಭಾಷೆಯೂ ಅವರಿಗೆ ಒಪ್ಪಿದೆ. ಮನೋವೈದ್ಯೆಯಾಗಿ ನಟಿಸಿರುವ ರಂಜನಿ ರಾಘವನ್ ಸಿಕ್ಕ ಪಾತ್ರದಲ್ಲಿ ಜೀವಿಸಿ, ಪೂರ್ಣಾಂಕ ಗಿಟ್ಟಿಸಿಕೊಳ್ಳುತ್ತಾರೆ. ಕರಿಸುಬ್ಬು, ಅಶ್ವಿನ್ ಹಾಸನ್ ತಮ್ಮ ನಟನಾ ಚಾತುರ್ಯವನ್ನು ಇಲ್ಲಿಯೂ ಮುಂದುವರಿಸಿದ್ದಾರೆ. ಚಿತ್ರದ ಇನ್ನೊಂದು ಪ್ಲಸ್ ಎಂದರೆ ಅದು ಸಂಗೀತ. ಕ್ರೈಂ ಥ್ರಿಲ್ಲರ್‌ಗೆ ಬೇಕಿರುವ ಆ ಸೊಗಡನ್ನು ಒದಗಿಸಿಕೊಟ್ಟವರು ಸಾಧುಕೋಕಿಲ. ಛಾಯಾಗ್ರಹಣದಲ್ಲೂ ಹೊಸತನವಿದೆ. ಒಟ್ಟಾರೆಯಾಗಿ ಅಬ್ಬರ ಸಂಭಾಷಣೆಗಳಿರದೇ, ಅತಿರಂಜಿತ ಹೊಡೆದಾಟಗಳಿಲ್ಲದೆ, ಸೂಕ್ಷ್ಮ ಸಂವೇಧಿ ಕಥೆಯೊಂದಿಗೆ ಸಿನಿಮಾವನ್ನು ನೋಡುಗನ ಎದೆಗಿಳಿಸಿರುವುದು ನಿರ್ದೇಶಕರ ಹೆಚ್ಚುಗಾರಿಕೆ. ಒಂದಷ್ಟು ಲಾಜಿಕ್ ಬದಿಗಿರಿಸಿ ಸಿನಿಮಾ ವೀಕ್ಷಿಸಿದರೆ, ಕಾಂಗರೂ ನಿಮಗೂ ಒಂದೊಳ್ಳೆ ರೋಚಕ ಅನುಭವ ನೀಡುವುದರಲ್ಲಿ ಸಂಶಯವಿಲ್ಲ.
ಚಿತ್ರ: ಕಾಂಗರೂ
ನಿರ್ಮಾಣ: ಆರೋಹ ಪ್ರೊಡಕ್ಷನ್ಸ್
ನಿರ್ದೇಶನ: ಕಿಶೋರ್ ಮೇಗಳಮನೆ
ತಾರಾಗಣ: ಆದಿತ್ಯ, ರಂಜನಿ ರಾಘವನ್, ಕರಿ ಸುಬ್ಬು, ಅಶ್ವಿನ್ ಹಾಸನ್, ನಾಗೇಂದ್ರ ಅರಸ್, ಶಿವಮಣಿ ಮುಂತಾದವರು