‘ದರ್ಶನ್‌ಗಾಗಿ ನಾವು ಕಲಾವಿದರ ಸಂಘದಲ್ಲಿ ಸುಬ್ರಮಣ್ಯ ಸರ್ಪ ಶಾಂತಿ ಹೋಮ ಹಾಕಿಸ್ತಿಲ್ಲ’; ಅಸಲಿ ವಿಚಾರ ತಿಳಿಸಿದ ರಾಕ್‌ಲೈನ್ ವೆಂಕಟೇಶ್
Aug 11, 2024 05:34 PM IST
‘ದರ್ಶನ್‌ಗಾಗಿ ನಾವು ಕಲಾವಿದರ ಸಂಘದಲ್ಲಿ ಸುಬ್ರಮಣ್ಯ ಸರ್ಪ ಶಾಂತಿ ಹೋಮ ಹಾಕಿಸ್ತಿಲ್ಲ’; ಅಸಲಿ ವಿಚಾರ ತಿಳಿಸಿದ ರಾಕ್‌ಲೈನ್ ವೆಂಕಟೇಶ್
- ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಭವ್ಯ ಕಟ್ಟಡದಲ್ಲಿ ಆಗಸ್ಟ್ 14ರಂದು ಒಟ್ಟು ಮೂರು ಬಗೆಯ ಹೋಮ ಹವನ ನಡೆಸಲು ತೀರ್ಮಾನಿಸಲಾಗಿದೆ ಎಂದು ರಾಕ್‌ಲೈನ್ ವೆಂಕಟೇಶ್ ಮಾಹಿತಿ ನೀಡಿದ್ದಾರೆ.
Sandalwood news: ಇತ್ತೀಚಿನ ಕೆಲ ದಿನಗಳಿಂದ ಕನ್ನಡ ಚಿತ್ರೋದ್ಯಮ ಹಲವು ಸಮಸ್ಯೆಗಳ ಸುಳಿಗೆ ಸಿಲುಕಿದೆ. ಈ ನಿಟ್ಟಿನಲ್ಲಿ ಈ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶಕ್ಕೆ ಮತ್ತು ಚಿತ್ರೋದ್ಯಮದ ಏಳಿಗೆಗಾಗಿ ದೇವರ ಮೊರೆ ಹೋಗಿದೆ ಚಂದನವನದ ಕಲಾವಿದರ ಸಂಘ. ಅಂದರೆ, ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಕಟ್ಟಡದಲ್ಲಿ ಸುಬ್ರಮಣ್ಯ ಸರ್ಪ ಶಾಂತಿ ಹೋಮ ನಡೆಸಲು ತೀರ್ಮಾನಿಸಲಾಗಿದೆ.
ಕೋವಿಡ್ ಬಳಿಕ ಪೂಜೆ ನಡಿಯಬೇಕಿತ್ತು..
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಿರ್ಮಾಪಕರ ಸಂಘದ ಕಾರ್ಯದರ್ಶಿಯಾಗಿರುವ ರಾಕ್‌ಲೈನ್ ವೆಂಕಟೇಶ್, ಕೋವಿಡ್ ನಂತರ ಸಿನಿಮಾರಂಗ ಸಾಕಷ್ಟು ಸಮಸ್ಯೆಗಳನ್ನು ನೋಡಿದೆ. ಕೋವಿಡ್ ಮುಗಿದ ಬಳಿಕವೇ ಹೋಮ ಮಾಡಿಸಬೇಕು ಎಂಬ ಪ್ಲಾನ್ ಇತ್ತು. ಆದರೆ, ಅದು ಮುಂದೂಡುತ್ತಲೇ ಹೋಯಿತು. ಕೋವಿಡ್ ಬಳಿಕ ಸಾಕಷ್ಟು ಸಾವು ನೋವುಗಳು ಸಂಭವಿಸಿದವು. ಇದೀಗ ಅದಕ್ಕೆಲ್ಲ ಸಮಯ ಬಂದಿದೆ. ಇದೇ ಆಗಸ್ಟ್ 14ರಂದು ಚಿತ್ರರಂಗದ ಏಳಿಗೆ ಮತ್ತು ಉಳಿವಿಗಾಗಿ ಹೋಮ ಮತ್ತು ಪೂಜೆ ನಡೆಯಲಿದೆ. ಈ ವಿಶೇಷ ಕಾರ್ಯಕ್ಕೆ ಚಿತ್ರರಂಗದ ಎಲ್ಲರನ್ನೂ ಆಹ್ವಾನಿಸಿದ್ದೇವೆ" ಎಂದಿದ್ದಾರೆ ರಾಕ್‌ಲೈನ್.
ಇದು ದರ್ಶನ್‌ಗಾಗಿ ಪೂಜೆ ಅಲ್ಲ!
ಇನ್ನು ಹೀಗೆ ಹೋಮ ಹಾಕಿಸುವ ವಿಷಯ ಪ್ರಸ್ತಾಪ ಆಗುತ್ತಿದ್ದಂತೆ, ಇದು ದರ್ಶನ್ ಅವರಿಗಾಗಿ ನಡೆಸುತ್ತಿರುವ ಹೋಮವೇ ಎಂಬ ಪ್ರಶ್ನೆಯೂ ಎದುರಾಯ್ತು. ಇದಕ್ಕೂ ಉತ್ತರಿಸಿದ ರಾಕ್‌ಲೈನ್, "ಇಲ್ಲ ಇದು ಕೇವಲ ಚಿತ್ರರಂಗ, ಚಿತ್ರೋದ್ಯಮದ ಬೆಳವಣಿಗೆಗಾಗಿ ನಾವು ಆಯೋಜಿಸಿರುವ ಪೂಜೆ. ಇದನ್ನು ನಾವು ದರ್ಶನ್‌ಗಾಗಿ ಮಾಡಿಸುತ್ತಿಲ್ಲ. ಒಂದು ವೇಳೆ ಹಾಗೇನಾದ್ರೂ ಪ್ಲಾನ್ ಇದ್ದಿದ್ದರೆ, ನಾನು ಅದನ್ನು ವೈಯಕ್ತಿಕವಾಗಿ ಮಾಡುತ್ತಿದ್ದೆ. ಅವರ ಮನೆಯಲ್ಲೋ ನಮ್ಮ ಮನೆಯಲ್ಲೂ ಹೋಮ ಹಾಕಿಸುತ್ತಿದ್ದೆ. ಇದು ಸಂಘದಿಂದ ಸಂಘದಲ್ಲಿ ನಡೆಯುವ ಪೂಜೆ. ಚಿತ್ರರಂಗದ ಒಳಿತಿಗಾಗಿ ನಡೆಸುತ್ತಿರುವ ಹೋಮ" ಎಂದು ಸ್ಪಷ್ಟನೆ ನೀಡಿದರು.
ಯಾವಾಗ ಪೂಜೆ, ಏನೆಲ್ಲ ಇರಲಿದೆ..
ಅಂದಹಾಗೆ, ಆಗಸ್ಟ್ 14ರಂದು ಬೆಳಗ್ಗೆ 8ಗಂಟೆಯಿಂದ ಪೂಜಾ ಕಾರ್ಯಕ್ರಮಗಳು ಆರಂಭವಾಗಲಿವೆ. ಒಟ್ಟು ಮೂರು ರೀತಿಯಲ್ಲಿ ಹೋಮಗಳು ನಡೆಯಲಿವೆ. ಮೊದಲಿಗೆ ಗಣಪತಿ ಹೋಮ ನಡೆಯಲಿದೆ. ಅದಾದ ಬಳಿಕ ಮೃತ್ಯುಂಜಯ ಹೋಮ ಬಳಿಕ ಸರ್ಪ ಶಾಂತಿ ಹೋಮವೂ ನಡೆಯಲಿದೆ. ಈ ಹೋಮ ಕಾರ್ಯಕ್ರಮಕ್ಕೆ ಎಲ್ಲ ಕಲಾವಿದರಿಗೂ ಆಹ್ವಾನ ನೀಡಲಾಗಿದೆ. ಪೂಜೆ ಬಳಿಕ ಊಟದ ವ್ಯವಸ್ಥೆಯೂ ಇರಲಿದೆ ಎಂದು ರಾಕ್‌ಲೈನ್ ತಿಳಿಸಿದರು. ರಾಕ್‌ಲೈನ್ ವೆಂಕಟೇಶ್ ಜತೆಗೆ ಹಿರಿಯ ನಟ ದೊಡ್ಡಣ್ಣ ಸಹ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.