ದರ್ಶನ್ ವಿವಾದಗಳಿಂದ ಬೇಸತ್ತ ಕುಟುಂಬ, ಅಮ್ಮನ ಜತೆ ಜಗಳವಾಡಿ ಮೈಸೂರು ಮನೆಗೆ ಹೆಜ್ಜೆಯಿಡದ ನಟ; ಅಣ್ಣನ ಬಗ್ಗೆ ದಿನಕರ್ ಹೇಳಿದ್ದೇನು?
Jun 16, 2024 01:20 PM IST
ದರ್ಶನ್ ವಿವಾದಗಳಿಂದ ಬೇಸತ್ತ ಕುಟುಂಬ, ಜಗಳವಾಡಿ ಆಡಿಬೆಳೆದ ಮೈಸೂರು ಮನೆಗೆ ಹೆಜ್ಜೆಯಿಡದ ನಟ; ಅಣ್ಣನ ಬಗ್ಗೆ ದಿನಕರ್ ಹೇಳಿದ್ದಿಷ್ಟು
- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಬಂಧನವಾಗಿರುವ ನಟ ದರ್ಶನ್ ಅವರ ಬಗ್ಗೆ ಸಹೋದರ ದಿನಕರ್ ತೂಗುದೀಪ ಪ್ರತಿಕ್ರಿಯೆ ನೀಡಿದ್ದಾರೆ.
Dinakar Thoogudeepa Reaction: ಅಶ್ಲೀಲ ಸಂದೇಶ ಕಳುಹಿಸಿದ ಒಂದೇ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಸಿಕೊಂಡು ದರ್ಶನ್ ಅಂಡ್ ಗ್ಯಾಂಗ್ ಹತ್ಯೆ ಮಾಡಿದ ಆರೋಪ ಹೊತ್ತಿದ್ದಾರೆ. ಈ ಸಂಬಂಧ ಆರೋಪಿಗಳನ್ನು ಕಸ್ಟಡಿಗೆ ಪಡೆದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. ಹಲವು ಕೋನಗಳಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಸಾಕ್ಷ್ಯಾಧಾರಗಳೂ ಲಭಿಸಿದ್ದು, ಇನ್ನೇನು ಶೀಘ್ರದಲ್ಲಿ ಚಾರ್ಜ್ ಶೀಟ್ ಸಿದ್ಧಪಡಿಸಿ ಕೋರ್ಟ್‌ಗೆ ನೀಡಲಿದ್ದಾರೆ.
ದರ್ಶನ್ ಆಪ್ತೆ ಪವಿತ್ರಾ ಗೌಡ ಅವರಿಗೆ ಬೇರೆ ಬೇರೆ ಇನ್‌ಸ್ಟಾಗ್ರಾಂ ಖಾತೆಗಳಿಂದ ಚಿತ್ರದುರ್ಗದ ರೇಣುಕಾಸ್ವಾಮಿ ಅಶ್ಲೀಲ ಮತ್ತು ಕೆಟ್ಟ ಪದಗಳ ಸಂದೇಶ ಕಳುಹಿಸುತ್ತಿದ್ದ. ಈ ವಿಚಾರವನ್ನು ಮನೆ ಕೆಲಸದ ಹುಡುಗನ ಗಮನಕ್ಕೆ ತಂದಿದ್ದರು ಪವಿತ್ರಾ ಗೌಡ. ದರ್ಶನ್‌ಗೆ ಯಾವುದೇ ಕಾರಣಕ್ಕೂ ಹೇಳಬೇಡ ಎಂದೂ ಮನವಿ ಮಾಡಿದ್ದರು. ಆದರೆ, ಮನೆಕೆಲಸದಾತ ಈ ವಿಚಾರವನ್ನು ದರ್ಶನ್ ಕಿವಿಗೆ ಮುಟ್ಟಿಸಿದ್ದ. ಅಲ್ಲಿಂದ ದರ್ಶನ್ ಅಂಡ್ ಗ್ಯಾಂಗ್, ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಸಿ, ಚಿತ್ರಹಿಂಸೆ ನೀಡಿ ಹತ್ಯೆ ಮಾಡಿತ್ತು.
ಈ ಬಗ್ಗೆ ನನಗೆ ಏನನ್ನೂ ಕೇಳಬೇಡಿ
ಈ ಸುದ್ದಿ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ದರ್ಶನ್ ಅಭಿಮಾನಿ ವಲಯದಲ್ಲೂ ನೀರವ ಮೌನ ಆವರಿಸಿತ್ತು. ಕುಟುಂಬಸ್ಥರೂ ಶಾಕ್‌ಗೆ ಒಳಗಾಗಿದ್ದರು. ಈ ಪ್ರಕರಣದ ಬಗ್ಗೆ ಕುಟುಂಬದವರು ಈ ವರೆಗೂ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಅಣ್ಣ ದರ್ಶನ್ ಬಗ್ಗೆ ಸಹೋದರ ದಿನಕರ್ ತೂಗುದೀಪ ಮೊದಲ ಸಲ ಮಾತನಾಡಿದ್ದಾರೆ. ಮಾಧ್ಯಮದ ಜತೆಗೆ ಮಾತನಾಡಿದ ದಿನಕರ್, ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನನ್ನನ್ನು ಏನೂ ಕೇಳಬೇಡಿ ಎಂದಿದ್ದಾರೆ.
ಘಟನೆ ಬಗ್ಗೆ ದಿನಕರ್ ತೂಗುದೀಪ ಏನಂದ್ರು?
ಈ ಘಟನೆ ಬಗ್ಗೆ ನಾನು ಮಾತನಾಡುವುದೇ ಇಲ್ಲ. ಈ ಪ್ರಕರಣದ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದು ಹೆಚ್ಚು ಮಾತನಾಡದೆ, ಹಿಂಜರಿದಿದ್ದಾರೆ. ಅಂದಹಾಗೆ, ನಟ ದರ್ಶನ್ ಮತ್ತು ಅವರ ತಾಯಿ ಮೀನಾ ತೂಗುದೀಪ ಅವರ ನಡುವೆ ಒಂದಷ್ಟು ವಿಚಾರಕ್ಕೆ ಜಗಳಗಳಾಗಿವೆ. ಪವಿತ್ರಾ ಗೌಡ ಅವರ ಜತೆಗಿನ ಸಂಬಂಧದ ವಿಚಾರಕ್ಕೂ ಅಮ್ಮನ ಜತೆಗೆ ಮಾತಿಗೆ ಮಾತು ಬೆಳೆದಿವೆ ಎಂದೂ ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಿರಿಯ ಮಗ ದಿನಕರ್ ಅವರ ಮನೆಯಲ್ಲಿಯೇ ಮೀನಾ ತೂಗುದೀಪ ಉಳಿದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹುಟ್ಟಿ ಬೆಳೆದ ಮನೆಗೆ ಕಾಲಿಡದ ದರ್ಶನ್
ನಟ ದರ್ಶನ್ ಅವರ ಫಾರ್ಮ್ ಹೌಸ್ ಮೈಸೂರಿನ ಹೊರವಲಯದಲ್ಲಿದೆ. ಶೂಟಿಂಗ್ ಹೊರತುಪಡಿಸಿದರೆ, ಇನ್ನುಳಿದ ಬಹುಪಾಲು ಸಮಯವನ್ನು ಫಾರ್ಮ್‌ಹೌಸ್‌ನಲ್ಲಿಯೇ ಕಳೆಯುವ ದರ್ಶನ್, ಅದೇ ಮೈಸೂರಿನಲ್ಲಿನ ಹುಟ್ಟಿ ಬೆಳೆದ ಮನೆಗೆ ಇತ್ತೀಚಿನ ಕೆಲ ದಿನಗಳಿಂದ ಹೋಗಿಯೇ ಇಲ್ಲ ಎಂದೂ ಹೇಳಲಾಗುತ್ತಿದೆ. ನಟ ದರ್ಶನ್ ವಿವಾದಗಳಿಂದಲೂ ಇಡೀ ಕುಟುಂಬ ಮಾನಸಿಕವಾಗಿಯೂ ಜರ್ಜರಿತವಾಗಿದೆ. ಈ ನಡುವೆ ಇದೀಗ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ವಿಚಾರದಲ್ಲಿ ಪ್ರಮುಖ ಆರೋಪಿಯಾಗಿ ಬಂಧನವಾಗಿದ್ದಾರೆ ದರ್ಶನ್.
ಕೇಸ್‌ನಿಂದ ತಪ್ಪಿಸಿಕೊಳ್ಳಲು 30 ಲಕ್ಷ
ಇನ್ನು ಈ ಕೇಸ್‌ನಿಂದ ತಮ್ಮನ್ನು ಪಾರು ಮಾಡುವಂತೆ, ನಟ ದರ್ಶನ್ ಈ ಕೃತ್ಯದಲ್ಲಿ ಭಾಗಿಯಾದ ಕೆಲವರಿಗೆ 30 ಲಕ್ಷ ರೂಪಾಯಿಯ ಆಮೀಷವೊಡ್ಡಿದ್ದರು. ಜತೆಗೆ ನಗದನ್ನೂ ನೀಡಿದ್ದರು. ಹಾಗೇ ಹಣ ಪಡೆದು, ಮೃತ ದೇಹವನ್ನು ರಾಜಕಾಲುವೆಗೆ ಎಸೆದಿದ್ದರು. ಅಷ್ಟರಲ್ಲಾಗಲೇ ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಕುಟುಂಬದವರಿಂದ ಅಪಹರಣ ಪ್ರಕರಣ ದಾಖಲಾಗಿತ್ತು. ಇತ್ತ ಬೆಂಗಳೂರಿನಲ್ಲಿ ರಾಜಕಾಲುವೆ ಬಳಿ ಅಪರಿಚಿತ ಶವವೂ ಪೊಲೀಸರ ಕಣ್ಣಿಗೆ ಬಿದ್ದಿತ್ತು. ಎರಡನ್ನೂ ತಾಳೆ ಹಾಕಿದಾಗ, ಇದರ ಹಿಂದಿನ ಆರೋಪಿಗಳನ್ನು ಒಂದೇ ದಿನದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು.