ದರ್ಶನ್ ಗ್ರಹಗತಿಯೇ ಸರಿಯಿಲ್ಲ, ಅಪಾಯಗಳೇ ಹೆಚ್ಚಾಗುತ್ತಿವೆ; ರಾಮಲಿಂಗೇಶ್ವರನಿಗೆ ವಿಶೇಷ ಪೂಜೆ ಬಳಿಕ ಅರ್ಚಕರ ಮಾತು
ಕೊಲೆ ಪ್ರಕರಣದಲ್ಲಿ ದರ್ಶನ್ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ, ಬಾವ ಮಂಜುನಾಥ್ ಕಾರವಾರದಲ್ಲಿ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ.
Renuka Swamy Murder Case Latest Updates: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ಕೊನೇ ಹಂತಕ್ಕೆ ಬಂದಿದೆ. ಕಳೆದ ನಾಲ್ಕು ದಿನಗಳಿಂದ ಕಾಮಾಕ್ಷಿ ಪಾಳ್ಯ ಠಾಣೆ ಪೊಲೀಸರು ಬಗೆಬಗೆ ಕೋನಗಳಲ್ಲಿ ತನಿಖೆಯನ್ನು ಮುಂದುವರಿಸಿದ್ದಾರೆ. ಸಾಕಷ್ಟು ಸಾಕ್ಷ್ಯಗಳನ್ನೂ ಸಂಗ್ರಹಿಸಿದ್ದಾರೆ. ಈ ನಡುವೆ ಅವರ ಅಭಿಮಾನಿ ವಲಯದಲ್ಲಿ ನಟನ ಬಂಧನಕ್ಕೆ ತೀವ್ರ ಆಕ್ರೋಶ ವ್ಯಕ್ತವಾದರೆ, ಕುಟುಂಬದವರು ದೇವರ ಮೊರೆ ಹೋಗಿದ್ದಾರೆ. ದರ್ಶನ್ ಅವರ ಅಕ್ಕ ದಿವ್ಯಾ ಮತ್ತವರ ಪತಿ ಮಂಜುನಾಥ್ ಕಾರವಾರದಲ್ಲಿ ದರ್ಶನ್ ಆದಷ್ಟು ಬೇಗ ಈ ಸಮಸ್ಯೆಯಿಂದ ಆಚೆ ಬರಲಿ ಎಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಕಾರವಾರದ ರಾಮಲಿಂಗೇಶ್ವರ ದೇವಸ್ಥಾನಕ್ಕೆ ಇಂದು ಬೆಳಗ್ಗಹೆ ತೆರಳಿದ ಮಂಜುನಾಥ್, ದರ್ಶನ್‌ಗೆ ಎದುರಾದ ಸಮಸ್ಯೆಗಳು, ಶತ್ರುಪೀಡೆ, ಶನಿಪೀಡೆ, ದುಷ್ಟಶಕ್ತಿಗಳ ನಿವಾರಣೆಗಾಗಿ ವಿಶೇಷ ಅರ್ಚನೆ ಮತ್ತು ಅಭಿಷೇಕ ಮಾಡಿಸಿದ್ದಾರೆ. ಈ ವಿಶೇಷ ಪೂಜೆ ನೆರವೇರಿಸಿದ ಅರ್ಚಕರು ಪೂಜೆ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ್ದಾರೆ.
ಗ್ರಹಗತಿ ಸರಿಯಾಗಿಲ್ಲ..
ನಟ ದರ್ಶನ್ ಅವರ ಗೃಹಗತಿ ಸರಿಯಾಗಿಲ್ಲ. ಯಾವುದೇ ಸಮಸ್ಯೆ ಎದುರಾಗಬಾರದು ಎಂದು ದರ್ಶನ್ ಅವರ ಭಾವ ರಾಮಲಿಂಗೇಶ್ವರನ ಸನ್ನಿಧಾನದಲ್ಲಿ ವಿಶೇಷ ಅರ್ಚನೆ ಮತ್ತು ಅಭಿಷೇಕ ಮಾಡಿಸಿದ್ದಾರೆ. ದುಷ್ಟ ಶಕ್ತಿಗಳು ಮತ್ತು ದೃಷ್ಟಿಗಳು ನಿವಾರಣೆ ಆಗಬೇಕು. ಮನುಷ್ಯನಿಗೆ ಶನಿಪೀಡೆ ಬರುತ್ತೆ. ದಶಾಭುಕ್ತಿ ಲೆಕ್ಕಾಚಾರ ಮಾಡಿದಾಗ, ಅಂತಹ ದೋಷಗಳು ಕಂಡುಬಂದರೆ ಅವು ನಿವಾರಣೆ ಆಗಬೇಕು ಎಂದು ಹೇಳಿ ಶಿವನಿಗೆ ವಿಶೇಷ ಅರ್ಚನೆ, ಅಭಿಷೇಕ ಮಾಡಿಸಲಾಗುತ್ತದೆ.
ಜಾತಕದ ಬಗ್ಗೆ ನಾವು ಮಾತನಾಡಲ್ಲ..
ಅದೇ ರೀತಿ ಇಂದು ದರ್ಶನ್ ಅವರ ಬಾವನವರು ಅವರ ಹೆಸರಿನಲ್ಲಿ ಪೂಜೆ ಮಾಡಿಸಿದ್ದಾರೆ. ದರ್ಶನ್ ಅವರಿಗೆ ಗ್ರಹಗತಿ ಚೆನ್ನಾಗಿ ಬರಲಿ, ಶ್ರೇಯಸ್ಸು ಅವರಿಗೆ ಸಿಗಲಿ ಅಂತ ಅರ್ಚನೆ ಮಾಡಿಸಿದ್ದಾರೆ. ಇಲ್ಲಿ ನಡೆಸಿದ ಪೂಜೆಯ ಬಗ್ಗೆ ಹೇಳಬಹುದೇ ಹೊರತು, ದರ್ಶನ್ ಅವರ ಜಾತಕ ಹೇಗಿದೆ ಎಂಬುದನ್ನು ನಾವು ಎಲ್ಲಿಯೂ ಹೇಳುವುದಿಲ್ಲ. ಯಾರು ಬರುತ್ತಾರೋ ಅವರ ಹೆಸರಿನಲ್ಲಿ ಪೂಜೆ ಮಾಡುತ್ತೇವೆ. ಆಶೀರ್ವಾದ ಮಾಡುವುದಷ್ಟೇ ನಮ್ಮ ಕೆಲಸ” ಎಂದು ರಾಮಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಶ್ರೀಪಾದ್ ಭಟ್ ಹೇಳಿದ್ದಾರೆ.
ದರ್ಶನ್ ಬಾವ ಮಂಜುನಾಥ್ ಪ್ರತಿಕ್ರಿಯೆ
ಕಾರವಾರದ ರಾಮಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ದರ್ಶನ್ ಬಾವ ಮಂಜುನಾಥ್, "ದರ್ಶನ್ ತಾನು ದುಡಿದಿದ್ದರಲ್ಲಿ ಶೇ75 ಭಾಗವನ್ನು ಸಮಾಜ ಸೇವೆಗೆ ಮುಡಿಪಾಗಿಡುತ್ತಾರೆ. ಅದಕ್ಕಾಗಿಯೇ ವಿನಿಯೋಗಿಸುತ್ತಾರೆ. ಆ ಒಂದು ಕಾರಣಕ್ಕೆ ಅವರಿಗೆ ಅಷ್ಟೊಂದು ಅಭಿಮಾನಿಗಳಿದ್ದಾರೆ. ಆದರೆ, ಇದೀಗ ನಡೆದ ಘಟನೆ ನಿಜಕ್ಕೂ ಬೇಸರ ತರಿಸಿದೆ. ದರ್ಶನ್‌ಗೆ ಕೋಪ ಜಾಸ್ತಿ. ಅವರು ಸುಮ್ಮನಿದ್ದರೂ, ಇನ್ನು ಕೆಲವರು ಅವರನ್ನು ಸುಮ್ಮನೆ ಕೂರಲು ಬಿಡಲ್ಲ. ಈ ಘಟನೆಯಲ್ಲಿ ಪವಿತ್ರಾ ಗೌಡ ಅವರೇ ಕಾರಣ ಅಂತ ನಾನು ಹೇಳಲ್ಲ" ಎಂದಿದ್ದಾರೆ ಮಂಜುನಾಥ.