Martin Twitter Review: ಮಾರ್ಟಿನ್ ಸಿನಿಮಾ ನೋಡಿದ ಪ್ರೇಕ್ಷಕ ಏನಂದ? ಸೋಷಿಯಲ್ ಮೀಡಿಯಾದಲ್ಲಿ ಧ್ರುವ ಸರ್ಜಾ ಹವಾ
Oct 11, 2024 10:16 AM IST
ಮಾರ್ಟಿನ್ ಸಿನಿಮಾ ಟ್ವಿಟ್ಟರ್ ವಿಮರ್ಶೆ
- ಎ.ಪಿ. ಅರ್ಜುನ್ ನಿರ್ದೇಶನದ ಮಾರ್ಟಿನ್ ಸಿನಿಮಾ ಇಂದು (ಅಕ್ಟೋಬರ್ 11) ಬಿಡುಗಡೆ ಆಗಿದೆ. ಬಹು ನಿರೀಕ್ಷೆಯೊಂದಿಗೆ ರಿಲೀಸ್ ಆಗಿರುವ ಈ ಸಿನಿಮಾಕ್ಕೆ ಪ್ರೇಕ್ಷಕನಿಂದಲೂ ಬಹುಪರಾಕ್ ಸಿಗುತ್ತಿದೆ. ಹಾಗಾದರೆ, ಸಿನಿಮಾ ನೋಡಿದ ಪ್ರೇಕ್ಷಕ ಏನಂದ? ಇಲ್ಲಿದೆ ನೋಡಿ ಟ್ವಿಟ್ಟರ್ ವಿಮರ್ಶೆ.
Martin Movie Twitter Review: ಧ್ರುವ ಸರ್ಜಾ ನಾಯಕನಾಗಿ ಅಬ್ಬರಿಸಿರುವ ಮಾರ್ಟಿನ್ ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗಿದೆ. ಅದರಲ್ಲೂ ಕರ್ನಾಟಕದಲ್ಲಿ ಈ ಸಿನಿಮಾ ರಿಲೀಸ್ ಆದ ಬೆನ್ನಲ್ಲೇ ಅಭಿಮಾನಿಗಳು ಹಬ್ಬದಾಚರಣೆ ಮಾಡುತ್ತಿದ್ದಾರೆ. 3000ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿರುವ ಮಾರ್ಟಿನ್‌ಗೆ ಎಲ್ಲೆಡೆಯಿಂದ ಅಭೂತಪೂರ್ವ ರೆಸ್ಪಾನ್ಸ್ ಸಿಗುತ್ತಿದೆ. ಬೆಂಗಳೂರಿನಲ್ಲಿ ಫ್ಯಾನ್ಸ್ ಸಂಭ್ರಮಾಚರಣೆ ಮಾಡುತ್ತಿದ್ದರೆ, ಪಕ್ಕದ ಹೈದರಾಬಾದ್‌ನಲ್ಲಿ ಮಾರ್ಟಿನ್ ಸಿನಿಮಾ ನೋಡಿದ ತೆಲುಗು ಮಂದಿ ಕುಣಿದು ಕುಪ್ಪಳಿಸುತ್ತಿದ್ದಾರೆ. ಇತ್ತ ಸೋಷಿಯಲ್ ಮೀಡಿಯಾದಲ್ಲಿಯೂ ಸಿನಿಮಾ ಬಗ್ಗೆ ಬಿಸಿ ಬಿಸಿ ಚರ್ಚೆ ಶುರುವಾಗಿದೆ.
ಎ.ಪಿ ಅರ್ಜುನ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾವನ್ನು ಉದಯ್ ಕೆ ಮೆಹ್ತಾ ನಿರ್ಮಾಣ ಮಾಡಿದ್ದಾರೆ. ಸರಿ ಸುಮಾರು 100 ಕೋಟಿ ಬಜೆಟ್‌ನಲ್ಲಿ ಈ ಸಿನಿಮಾ ತಯಾರಾಗಿದೆ. ಕನ್ನಡದ ಜತೆಗೆ ಪ್ಯಾನ್ ಇಂಡಿಯಾವನ್ನೂ ದಾಟಿ ಪ್ಯಾನ್ ವರ್ಲ್ಡ್ ಲೆವೆಲ್‌ಗೆ ರಿಲೀಸ್ ಆಗುತ್ತಿದೆ ಮಾರ್ಟಿನ್.
ತಾರಾಗಣದಲ್ಲಿ ಯಾರೆಲ್ಲ ನಟಿಸಿದ್ದಾರೆ?
ಲೆಫ್ಟಿನೆಂಟ್ ಬ್ರಿಗೇಡಿಯರ್ ಅರ್ಜುನ್ ಸಕ್ಸೇನಾ ಪಾತ್ರದಲ್ಲಿ ಧ್ರುವ ಸರ್ಜಾ ಕಾಣಿಸಿಕೊಂಡರೆ, ಪ್ರೀತಿ ಪಾತ್ರದಲ್ಲಿ ವೈಭವಿ ಶಾಂಡಿಲ್ಯ ಧ್ರುವಗೆ ಜೋಡಿಯಾಗಿದ್ದಾರೆ. ಇನ್ನುಳಿದಂತೆ ಅನ್ವೇಶಿ ಜೈನ್, ಸುಕೃತಾ ವಾಗ್ಲೆ, ಚಿಕ್ಕಣ್ಣ, ಸಾಧು ಕೋಕಿಲ, ಮಾಳವಿಕಾ ಅವಿನಾಶ್, ಅಚ್ಯುತ್ ಕುಮಾರ್, ನಿಕಿತಿನ್ ಧೀರ್, ನವಾಬ್ ಶಾ, ರೋಹಿತ್ ಪಾಠಕ್, ನಾಥನ್ ಜೋನ್ಸ್, ರುಬಿಯಲ್ ಮೊಸ್ಕ್ವೆರಾ ಸೇರಿ ಇನ್ನೂ ಹಲವರು ಪಾತ್ರವರ್ಗದಲ್ಲಿದ್ದಾರೆ.
ತಾಂತ್ರಿಕ ವರ್ಗ ಹೇಗಿದೆ?
ಮಾರ್ಟಿನ್ ಚಿತ್ರಕ್ಕೆ ಅರ್ಜುನ್ ಸರ್ಜಾ ಕಥೆ ಬರೆದಿದ್ದಾರೆ. ಚಿತ್ರಕ್ಕೆ ಸತ್ಯ ಹೆಗಡೆ ಅವರ ಛಾಯಾಗ್ರಹಣ ಮತ್ತು ಕೆ.ಎಂ.ಪ್ರಕಾಶ್ ಮತ್ತು ಮಹೇಶ್ ಎಸ್.ರೆಡ್ಡಿ ಅವರ ಸಂಕಲನವಿದೆ. ರವಿ ಬಸ್ರೂರ್ ಸಂಗೀತ ನೀಡಿದ್ದಾರೆ. ವಾಸವಿ ಎಂಟರ್‌ಪ್ರೈಸಸ್ ಮತ್ತು ಉದಯ್ ಕೆ. ಮೆಹ್ತಾ ಪ್ರೊಡಕ್ಷನ್ಸ್‌ನ ಬ್ಯಾನರ್‌ಗಳ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ.
ಬೆಂಗಳೂರಲ್ಲಿಯೇ 600 ಪ್ಲಸ್ ಶೋಗಳು
ಬೆಂಗಳೂರೊಂದರಲ್ಲಿಯೇ ಮಾರ್ಟಿನ್ ಸಿನಿಮಾಕ್ಕೆ ದೊಡ್ಡ ಮಟ್ಟದ ಕ್ರೇಜ್ ಸೃಷ್ಟಿಯಾಗಿದೆ. ಅಡ್ವಾನ್ಸ್ ಬುಕಿಂಗ್‌ನಲ್ಲಿ ಈ ಸಿನಿಮಾ 500 ಪ್ಲಸ್ ಶೋಗಳನ್ನು ಗಿಟ್ಟಿಸಿಕೊಂಡಿದೆ. ಮಧ್ಯರಾತ್ರಿ 1:15ರಿಂದಲೇ ಶೋಗಳು ಆರಂಭವಾಗಿದ್ದು, ಮುಂಗಡ ಟಿಕೆಟ್‌ಗಳೂ ಬಿಕರಿಯಾಗಿವೆ. ಈ ಮೂಲಕ ಧ್ರುವ ಸರ್ಜಾ ಅವರ ಮಾರ್ಟಿನ್ ಸಿನಿಮಾ ಮೊದಲ ಸಲ ಇಷ್ಟು ದೊಡ್ಡ ಮಟ್ಟದಲ್ಲಿ ರಿಲೀಸ್ ಆಗಲಿದೆ. ಪಕ್ಕದ ಹೈದರಾಬಾದ್‌ನಲ್ಲಿ 150 ಶೋಗಳು ಮಾರ್ಟಿನ್‌ಗೆ ಸಿಕ್ಕಿವೆ. ಚೆನ್ನೈ, ಮುಂಬೈನಲ್ಲಿಯೂ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.
ಕನ್ನಡ ಮೂವಿ ಕ್ಲಬ್ ಟ್ವಿಟ್ ಹೀಗಿದೆ..
#MartinTheMovieReview: ಕಠಿಣ ಪರಿಶ್ರಮಕ್ಕಾಗಿ ತಂಡವನ್ನು ಶ್ಲಾಘಿಸಿ
- ಸಾಹಸ ದೃಶ್ಯಗಳು ಉತ್ತಮವಾಗಿವೆ
- ಕಥೆ ಚೆನ್ನಾಗಿದೆ ಮತ್ತು ಉತ್ತಮವಾಗಿ ನಿರ್ವಹಿಸಲಾಗಿದೆ
- ಸಾಹಸ ದೃಶ್ಯಕ್ಕೆ ಬಿಜಿಎಂ ಸೂಪರ್
- #ಧ್ರುವಸರ್ಜಾ ಕನ್ನಡದ ಶಕ್ತಿ ತೋರಿಸಿದ್ದಾರೆ
- ಕೆಲವು ಹೈ ಮೂಮೆಂಟ್ ದೃಶ್ಯಗಳಿವೆ
- ಕೆಲವು ದೃಶ್ಯಗಳು ಅತಿ ಎನಿಸಿವೆ